*ನಾಡಿನ ಶಿಕ್ಷಣ ಕ್ಷೇತ್ರದ ‘ಬಂಗಾರದ ಹಾದಿ’ಯ ಹೆಜ್ಜೆ ಗುರುತು..* *ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ‘ಶಿಕ್ಷಣ ಬಂಗಾರ‘ ಶ್ರೇಯ*

*ನಾಡಿನ ಶಿಕ್ಷಣ ಕ್ಷೇತ್ರದ ‘ಬಂಗಾರದ ಹಾದಿ’ಯ ಹೆಜ್ಜೆ ಗುರುತು..*

*ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ‘ಶಿಕ್ಷಣ ಬಂಗಾರ‘ ಶ್ರೇಯ*

ಶಿಕ್ಷಣ ಮಾತ್ರ ಬಡವರ ಬದುಕನ್ನು ಬದಲಾಯಿಸುವ ಮಂತ್ರ ಎಂದು ನಂಬಿದ್ದರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ. ಹೀಗಾಗಿ ಮಕ್ಕಳು ಅಪ್ಪ–ಅಮ್ಮನೊಂದಿಗೆ ಕೂಲಿ–ನಾಲಿಗೆ ಹೋಗದೇ ಸಾಲಿಗುಡಿಗೆ ಬರಲಿ ಎಂಬ ಕಾರಣಕ್ಕೆ ಶಾಲೆಯಲ್ಲಿ ಮಗುವಿನ ಹಾಜರಿ ಆಧರಿಸಿ ದಿನಕ್ಕೊಂದು ರೂಪಾಯಿ ಪ್ರೋತ್ಸಾಹಧನ ಕೊಡುವ ಯೋಜನೆ ಆರಂಭಿಸಿದ್ದರು. ಕಲಿತು ಬರುವ ಮಗು ಗಳಿಕೆಯನ್ನು ಮಾಡಿ ಮನೆಯವರ ತುತ್ತಿಗೆ ತನ್ನ ಪಾಲು ಕೊಡುತ್ತಿತ್ತು. ಈಗ ಬರೋಬ್ಬರಿ ಮೂರು ದಶಕಗಳ ನಂತರ ಅವರ ಪುತ್ರ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಚುಕ್ಕಾಣಿ ಹಿಡಿದಿದ್ದಾರೆ. ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ.

ಶಿಕ್ಷಣ ಮಾತ್ರ ಬಡವರ ಬದುಕಿನ ದೀವಿಗೆ ಎಂಬ ಅಪ್ಪನ ಮಂತ್ರವನ್ನು ಪೊರೆಯುತ್ತಿರುವ ಅವರು ದೇವಸ್ಥಾನದ ಗಂಟೆಯ ಸದ್ದಿಗಿಂತ ಶಾಲೆಯ ಗಂಟೆಯ ಸದ್ದು ಹೆಚ್ಚು ಪರಿಣಾಮಕಾರಿ ಎಂಬುದನ್ನು ಇಲಾಖೆ ಮೂಲಕ ಪ್ರಾಯೋಗಿಕವಾಗಿ ತೋರುತ್ತಿದ್ದಾರೆ. ಜಾಗತಿಕ ಮಟ್ಟದ ಸ್ಪರ್ಧೆ ಹಾಗೂ ಖಾಸಗಿಯವರ ಅಬ್ಬರದ ನಡುವೆ ಕೊಂಚ ಮಂಕಾಗಿದ್ದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಟೊಂಕ ಕಟ್ಟಿರುವ ಅವರು ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ಸರ್ಕಾರಿ ಶಾಲೆಗಳು ಬರೀ ಸರ್ಕಾರದ ಸೊತ್ತಲ್ಲ ಬದಲಿಗೆ ಸಮುದಾಯದ ಸೊತ್ತು ಎಂಬುದನ್ನು ನಿರೂಪಿಸಲು ಜನರ ಸಹಭಾಗಿತ್ವದಲ್ಲಿ ಶಾಲೆಗಳ ಮುನ್ನಡೆಸುವ ಕಾರ್ಯ ಕೈಗೊಂಡಿದ್ದಾರೆ.

ಆ ಹಾದಿಯಲ್ಲಿ ಖಾಸಗಿಯವರಿಗಿಂತ ಭಿನ್ನವಾದ ಹಾಗೂ ಗುಣಮಟ್ಟದ ಶಿಕ್ಷಣವನ್ನು ಕೆಪಿಎಸ್ ಶಾಲೆಗಳ ಆರಂಭದ ಮೂಲಕ ಗ್ರಾಮೀಣರ, ಬಡವರ ಮನೆ ಬಾಗಿಲಿಗೆ ತಂದಿದ್ದಾರೆ. ಕೆಪಿಎಸ್‌ ಶಾಲೆಗಳು ಮಾತ್ರವಲ್ಲದೇ ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳಾದ ‘ಮೂರು ಪರೀಕ್ಷಾ ಪದ್ಧತಿ’, ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ‘ವೆಬ್‌ಕಾಸ್ಟಿಂಗ್’ (Webcasting) ಅಳವಡಿಕೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ. ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ.

ಶಾಲೆಗಳಿಗೆ ಮೂಲ ಸೌಕರ್ಯ ಮಾತ್ರವಲ್ಲ ಅಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಪಾತ್ರವೂ ಮಹತ್ವದ್ದು. ಹೀಗಾಗಿ ಇಲಾಖೆಯ ಚುಕ್ಕಾಣಿ ಹಿಡಿದ ಎರಡೇ ವರ್ಷಗಳಲ್ಲಿ 35 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೂ ಕ್ರಮ ವಹಿಸಿದ್ದಾರೆ. ಇಲಾಖೆಯ ದೈನಂದಿನ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಶಿಕ್ಷಕ ಸಮೂಹವನ್ನು ಉತ್ತರದಾಯಿತ್ವಗೊಳಿಸಿ ಅವರನ್ನೂ ಪ್ರೇರೆಪಿಸಲು ನಿರಂತರ ತರಬೇತಿ ಕಾರ್ಯಕ್ರಮ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ, ದಶಕಗಳಿಂದ ಉಳಿದಿದ್ದ ಅವರ ಸಮಸ್ಯೆಗಳ ಪರಿಹಾರಕ್ಕೂ ಒತ್ತು ನೀಡಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರವನ್ನು ಗಮನಿಸಿ ಸದ್ದಿಲ್ಲದೇ ಇಲಾಖೆಯಲ್ಲಿ ಬದಲಾವಣೆಯ ದಾಪುಗಾಲು ಇಡುತ್ತಿರುವ ಆ ಮೂಲಕ ಲಕ್ಷಾಂತರ ಪೋಷಕರು, ನಾಡಿನ ಶಿಕ್ಷಣ ತಜ್ಞರ ಮೆಚ್ಚುಗೆಗೂ ಪಾತ್ರರಾಗಿರುವ ಸಚಿವ ಮಧು ಬಂಗಾರಪ್ಪ ಅವರ ಹೆಜ್ಜೆಗುರುತುಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಕೂಡ ಸಮಾಜದಿಂದ ನಡೆದಿದೆ.

*ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ‘ಶಿಕ್ಷಣ ಬಂಗಾರ‘ ಶ್ರೇಯ*

ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರ‍ಪ್ಪ ಅವರು ತಂದಿರುವ ಕ್ರಾಂತಿಕಾರ ಬದಲಾವಣೆಗಳು ಹಾಗೂ ಅವುಗಳ ಅನುಷ್ಠಾನದಲ್ಲಿ ಸಚಿವರು ತೋರಿದ ಬದ್ಧತೆಯನ್ನು ಗಮನಿಸಿರುವ ಕರ್ನಾಟಕದ ಪ್ರತಿಷ್ಠಿತ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ (KAMS) ಸಂಘಟನೆ ಬೆಂಗಳೂರಿನಲ್ಲಿ ನಡೆದ ‘ವಿಷನ್ – ಮಿಷನ್’ (VISION – MISSION) ಶಿಕ್ಷಣ ಸಮ್ಮೇಳನದಲ್ಲಿ ‘ಶಿಕ್ಷಣ ಬಂಗಾರ’ – ಶಿಕ್ಷಣ ಇಲಾಖೆಯ ಬಂಗಾರದ ಮನುಷ್ಯ (Shikshana Bangara) ಎಂಬ ಗೌರವಯುತ ಬಿರುದನ್ನು ನೀಡಿ ಸನ್ಮಾನಿಸಿದೆ.

ಈ ವೇಳೆ ಮಾತನಾಡಿದ ಮಧು ಬಂಗಾರಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ (RR) ಪ್ರಕ್ರಿಯೆಯನ್ನು ಈಗಾಗಲೇ ಸರಳಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಭರವಸೆ ನೀಡಿ ಇಲಾಖೆಯನ್ನು ಜನಸ್ನೇಹಿಯಾಗಿಸುವ ಕಾರ್ಯ ಹೀಗೆ ನಿರಂತರವಾಗಿರಲಿದೆ ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್, ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯನಿರತ ಅಧ್ಯಕ್ಷ ಎನ್.ಪಿ. ಸಿಂಗ್ ಮತ್ತು KAMS ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಉಪಸ್ಥಿತರಿದ್ದರು.