*KAS ಪರೀಕ್ಷೆ ಅಕ್ರಮ-24 ಗಂಟೆಯಲ್ಲಿ ತನಿಖಾ ವರದಿ ಕೊಟ್ಟ KPSC;* *’ಅಕ್ರಮ ನಡೆದಿಲ್ಲ, ತನಿಖಾ ಸಮಿತಿ ಅಗತ್ಯವಿಲ್ಲ’*

*KAS ಪರೀಕ್ಷೆ ಅಕ್ರಮ-24 ಗಂಟೆಯಲ್ಲಿ ತನಿಖಾ ವರದಿ ಕೊಟ್ಟ KPSC;*

*’ಅಕ್ರಮ ನಡೆದಿಲ್ಲ, ತನಿಖಾ ಸಮಿತಿ ಅಗತ್ಯವಿಲ್ಲ’*

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು ತುರ್ತು ವರದಿ ಕೇಳಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನೀಡಿದ್ದ 24 ಗಂಟೆಗಳ ಗಡುವಿನೊಳಗೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ವಿವರವಾದ ಸ್ಪಷ್ಟನಾ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಈ ವರದಿಯಲ್ಲಿ ಕೆಪಿಎಸ್‌ಸಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸುವ ಮೂಲಕ ‘ಕ್ಲೀನ್ ಚಿಟ್’ ನೀಡಿಕೊಂಡಿದೆ.

*ವರದಿಯಲ್ಲಿ ಕೆಪಿಎಸ್‌ಸಿ ನೀಡಿದ ಸ್ಪಷ್ಟನೆಗಳೇನು?*

ಕೆಪಿಎಸ್‌ಸಿ ಕಾರ್ಯದರ್ಶಿ ಸಲ್ಲಿಸಿರುವ ವರದಿಯಲ್ಲಿ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಸಮರ್ಥನೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದ ‘ಒಂದೇ ಕೊಠಡಿಯಲ್ಲಿ 15 ಅಭ್ಯರ್ಥಿಗಳು ಪಾಸಾಗಿದ್ದಾರೆ’ ಎಂಬ ಆರೋಪಕ್ಕೆ ವರದಿಯಲ್ಲಿ ಅಂಕಿಅಂಶಗಳ ಸಮೇತ ಉತ್ತರ ನೀಡಲಾಗಿದೆ. ‘ಒಂದೇ ಕೊಠಡಿಯಲ್ಲಿ 15 ಅಭ್ಯರ್ಥಿಗಳು ಉತ್ತೀರ್ಣರಾಗಿಲ್ಲ, ಬದಲಿಗೆ ಗರಿಷ್ಠ 11 ಅಭ್ಯರ್ಥಿಗಳು ಮಾತ್ರ ಪಾಸಾಗಿದ್ದಾರೆ. ಇದು ಕಾಕತಾಳೀಯವೇ ಹೊರತು ಅಕ್ರಮವಲ್ಲ’ ಎಂದು ವಾದಿಸಲಾಗಿದೆ.

ಸಿಸಿಟಿವಿ (CCTV) ಪರಿಶೀಲನೆಯಲ್ಲಿ ಅಕ್ರಮ ಪತ್ತೆಯಾಗಿಲ್ಲ!

ಅನುಮಾನಾಸ್ಪದವಾಗಿ ಕಂಡುಬಂದ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಯೋಗವು ಈಗಾಗಲೇ ಆಂತರಿಕವಾಗಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ‘ಸಿಸಿಟಿವಿ ದೃಶ್ಯಗಳ ಮರುಪರಿಶೀಲನೆಯಲ್ಲಿ ಯಾವುದೇ ರೀತಿಯ ನಕಲು ಅಥವಾ ಅಕ್ರಮ ಚಟುವಟಿಕೆಗಳು ನಡೆದಿಲ್ಲ ಎಂಬುದು ಖಚಿತವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಇತ್ತು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.