*ಸಂವಿಧಾನದ ಆಶಯಕ್ಕೆ ಧಕ್ಕೆ ಮಾಡಿದ ರಾಜ್ಯಪಾಲ ಗೆಹ್ಲೋಟ್ ಹಠಾವೋ ಆಂದೋಲನ ಮಾಡಿದ ಯುವ ಕಾಂಗ್ರೆಸ್* *ಎನ್.ರಮೇಶ್, ಇಸ್ಮಾಯಿಲ್ ಖಾನ್, ಹೆಚ್.ಸಿ.ಯೋಗೇಶ್ ಏನಂದ್ರು?*

*ಸಂವಿಧಾನದ ಆಶಯಕ್ಕೆ ಧಕ್ಕೆ ಮಾಡಿದ ರಾಜ್ಯಪಾಲ ಗೆಹ್ಲೋಟ್ ಹಠಾವೋ ಆಂದೋಲನ ಮಾಡಿದ ಯುವ ಕಾಂಗ್ರೆಸ್*

*ಎನ್.ರಮೇಶ್, ಇಸ್ಮಾಯಿಲ್ ಖಾನ್, ಹೆಚ್.ಸಿ.ಯೋಗೇಶ್ ಏನಂದ್ರು?*

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಂವಿಧಾನಕ್ಕೆ ಅಪಮಾನವೆಸಗಿದ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಲು ಒತ್ತಾಯಿಸಿದ ಶಿವಮೊಗ್ಗ ಯುವ ಕಾಂಗ್ರೆಸ್ ರಾಜ್ಯಪಾಲ ಹಠಾವೋ-ಕರ್ನಾಟಕ ಬಚಾವೋ ಆಂದೋಲನವನ್ನು ಇಂದು ಹಮ್ಮಿಕೊಂಡಿತ್ತು.

ಭಾರತದ ಸಂವಿಧಾನದಂತೆ ಯಾವುದೇ ರಾಜ್ಯದ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸಚಿವ ಸಂಪುಟ ಸಿದ್ಧಪಡಿಸುವ ಭಾಷಣವನ್ನು ರಾಜ್ಯಪಾಲರು ಮಾಡಬೇಕಾಗುತ್ತದೆ. ಆದರೆ, ನಿನ್ನೆ ದಿನ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‍ರವರು ಸಲ್ಲದ ಕಾರಣ ನೀಡಿ, ತಮ್ಮ ಭಾಷಣವನ್ನು ಮೊಟಕುಗೊಳಿಸಿ ಸಂವಿಧಾನಕ್ಕೆ ಅಪಮಾನವೆಸಗಿದ್ದಾರೆಂದು ನಗರ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ KPCC ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಾರೆಯೇ ಹೊರತು, ಕೇಂದ್ರ ಸರ್ಕಾರದ ಅಡಿಯಲ್ಲಿ ಅಲ್ಲ. ನಿನ್ನೆ ದಿನ ರಾಜ್ಯಪಾಲರು ನಡೆದುಕೊಂಡಿರುವ ರೀತಿ ಅವರು ಕೇಂದ್ರ ಸರ್ಕಾರದ ಬಾಲ ಬಡುಕರೆನ್ನುವುದನ್ನು ಸಾಬೀತು ಪಡಿಸಿದೆ ಎಂದು ಟೀಕಿಸಿದರು.

ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ರೂಢಿ. ಈ ಭಾಷಣದಲ್ಲಿ ಆಕ್ಷೇಪಾರ್ಹ ಸಾಲುಗಳಿವೆ ಎಂದು ಕ್ಷುಲ್ಲಕ ಕಾರಣ ನೀಡಿ, ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಸ್ವತಃ ರಾಜ್ಯಪಾಲರೇ ಮಾಡಿರುವುದು ಇದೇ ಮೊದಲ ಬಾರಿ. ಇಂತಹ ನಡೆ ಸಂವಿಧಾನಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಖಾನ್ ಮಾತನಾಡಿ, ರಾಜ್ಯಪಾಲರು ಭಾಷಣ ಮಾಡುವ ಮೂಲಕ ಸದನದ ಗಾಂಭೀರ್ಯವನ್ನು ಕಾಪಾಡಬೇಕು. ಆದರೆ, ಅವರ ನಡೆಯೇ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ.ಇಂತಹ ರಾಜ್ಯಪಾಲರು ನಮಗೆ ಬೇಡ. ಕೂಡಲೇ ರಾಷ್ಟ್ರಪತಿಗಳು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮತ್ತೋರ್ವ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೇಶ್, ಯುವ ಕಾಂಗ್ರೆಸ್ ವತಿಯಿಂದ ರಾಜ್ಯಪಾಲ ಹಠಾವೋ-ಕರ್ನಾಟಕ ಬಚಾವೋ ಆಂದೋಲನ ನಡೆಸುತ್ತಿದೆ. ಕೂಡಲೇ ಅವರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಯುವ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಮೇಶ್ ಹೆಗ್ಗಡೆ, ಕಾಶಿ ವಿಶ್ವನಾಥ್, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಮಧುಸೂದನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ಶಿವಮೊಗ್ಗ ವಿಧಾನಸಭಾ ಅಧ್ಯಕ್ಷ ಚರಣ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ಬ್ಲಾಕ್ ಅಧ್ಯಕ್ಷರುಗಳಾದ ಗಿರೀಶ್, ಮಮದ್ ಗೌಸ್, ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತರ್, ಮಲಗುಪ್ಪ ಶಿವು, ಆಕಾಶ್, ತೌಫಿಕ್, ಬಾಬು, ನಿಖಿಲ್, ಅನಿಲ್ ಪಾಟೀಲ್, ಅಶೋಕ, ರವಿ, ವಿಷ್ಣು, ಯೋಗೇಶ್, ಲಿಂಗರಾಜು ನೂರಾರು ಕಾರ್ಯಕರ್ತರು ಪಾಲ್ಗೊಂಡು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.