ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಡಾ. ಸರ್ಜಿಗೆ ಇಲ್ಲ: ವೈ.ಹೆಚ್. ನಾಗರಾಜ್

ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಡಾ. ಸರ್ಜಿಗೆ ಇಲ್ಲ: ವೈ.ಹೆಚ್. ನಾಗರಾಜ್

ಶಿವಮೊಗ್ಗ: ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿಗೆ ಇಲ್ಲವೇ ಇಲ್ಲ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಸರ್ಜಿ ಎಂಬ ಡಾಕ್ಟರ್ ರಾತ್ರೋರಾತ್ರಿ ಫ್ಲೆಕ್ಸ್ ಗಳ ಮೂಲಕ ಪ್ರಚಾರಕ್ಕೆ ಬಂದಿದ್ದು ಎಲ್ಲರಿಗೂ ತಿಳಿದೇ ಇದೆ. ಪದವೀಧರರ ಕ್ಷೇತ್ರದಿಂದ ಹೇಗೆ ಆಯ್ಕೆಯಾಗಿದ್ದು ಎಂಬುದು ಕೂಡ ಬಹಿರಂಗ ಸತ್ಯ. ರಾಜ್ಯ ಸರ್ಕಾರವನ್ನು ಕಲೆಕ್ಷನ್, ಕರಪ್ಷನ್ಸ್, ಕಮಿಷನ್ ಎಂಬ ಮೂರು ಸಿ ಮೂಲಕ ಪ್ರಾಸಬದ್ಧವಾಗಿ ಟೀಕಿಸುವ ಇವರಿಗೆ ಈ ಮೂರೂ ಸಿ ಗಳು ತಮ್ಮೊಳಗೇ ಇವೆ ಎಂಬುದನ್ನು ಮರೆತುಬಿಟ್ಟಿದ್ದಾರೆ. ಒಂದಿಷ್ಟು ಸಿದ್ಧ ಭಾಷಣವನ್ನು ಕಂಠಪಾಠ ಮಾಡಿಕೊಂಡು ಎಲ್ಲಾ ಕಡೆ ಮಂತ್ರದಂತೆ ಭೋಧಿಸುವ ಇವರಿಗೆ ಮೊದಲು ನಾನು ಏನಾಗಿದ್ದೆ? ಹೇಗೆ ಚುನಾವಣೆಯಲ್ಲಿ ಗೆದ್ದೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಟೀಕಿಸಿದ್ದಾರೆ.

ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತಮ್ಮ ಆಸ್ಪತ್ರೆಗಳ ಕಟ್ಟಡಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಇವರಿಗೆ ಹೀಗೆ ವಿಸ್ತರಿಸಿಕೊಳ್ಳಲು ನಾನು ಹೇಗೆ ಹಣ ಸಂಪಾದಿಸುತ್ತಿದ್ದೇನೆ ಎಂದು ಅವರ ಮನಸ್ಸನ್ನೇ ಕೇಳಿಕೊಳ್ಳಲಿ ಎಂದು ಕುಟುಕಿದ್ದಾರೆ.

ಜಿಲ್ಲೆಯ ಬಿಜೆಪಿ ನಾಯಕರು ಸೇರಿದಂತೆ ರಾಜ್ಯ ಬಿಜೆಪಿ ನಾಯಕರುಗಳೆಲ್ಲ ತಾವು ಬಹಳ ಸಂಭಾವಿತರು, ನಾವು ಭ್ರಷ್ಟಾಚಾರವನ್ನೇ ಮಾಡಿಲ್ಲ. ಕಾಂಗ್ರೆಸ್ ಮಾತ್ರ ಭ್ರಷ್ಟಾಚಾರದಲ್ಲಿದೆ ಎಂದು ಬೊಗಳೆ ಬಿಡುವ ಇವರುಗಳು ತಾವು ಹೇಗೆ ಆಸ್ತಿಗಳನ್ನು ಸಂಪಾದಿಸಿದ್ದೇವೆ. ಈ ಆಸ್ತಿಗಳು ಎಷ್ಟು ತಲೆಮಾರುಗಳ ಕಾಲ ಇರುತ್ತವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.

ಡಾ. ಸರ್ಜಿ ಅವರು ಪದವಿ ಕ್ಷೇತ್ರದಿಂದ ಗೆದ್ದು ಬಂದರೂ ಕೂಡ ಒಮ್ಮೆಯಾದರೂ ಪದವೀಧರರ ಬಗ್ಗೆ ಎಲ್ಲೂ ಧ್ವನಿ ಎತ್ತಿಲ್ಲ. ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ಹೋಗಲಿ ಖಾಸಗಿ ಆಸ್ಪತ್ರೆಗಳ ದುಷ್ಟತನದ ಬಗ್ಗೆ ಎಲ್ಲಿಯೂ ಉಸಿರುಬಿಟ್ಟಿಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತೆ ಇವರು ಎಲ್ಲಾ ಕಡೆ ಪ್ರಾಸಬದ್ಧವಾಗಿ ಮಾತನಾಡಲು ಹೋಗಿ ತ್ರಾಸ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೇ ಎಂದು ವೈ.ಹೆಚ್. ನಾಗರಾಜ್ ವ್ಯಂಗ್ಯವಾಡಿದ್ದಾರೆ.