*ಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್* *ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ* *ತಕ್ಷಣದಿಂದಲೇ ಬರ ಅಧ್ಯಯನ ನಡೆಸಲು ಸಚಿವರಿಗೆ ಸೂಚನೆ*
*ಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್*
*ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ*
*ತಕ್ಷಣದಿಂದಲೇ ಬರ ಅಧ್ಯಯನ ನಡೆಸಲು ಸಚಿವರಿಗೆ ಸೂಚನೆ*
*ಬೆಂಗಳೂರು, ಆ. 4:*
“ರಾಜೀನಾಮೆ ಕೊಡುವವರನ್ನು ಯಾರೂ ತಡೆಯೋಕೆ ಆಗುವುದಿಲ್ಲ. ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ. ಇದೆಲ್ಲ ರಾಜಕೀಯದಲ್ಲಿ ನಡೆಯೊದೇ. ಈ ಹಿಂದೆ ನಾನು, ಪರಮೇಶ್ವರ್ ಮಂತ್ರಿ ಸ್ಥಾನ ಸಿಗದಿದ್ದಾಗ ತಾಳ್ಮೆಯಿಂದ ಇರಲಿಲ್ಲವೇ? ರಾಜಕೀಯ ಭವಿಷ್ಯ ಬೇಕು ಎಂದರೆ ಪಕ್ಷ ಮುಖ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಕೆಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರಲ್ಲ ಎಂದು ಕೇಳಿದಾಗ, “ನನಗೆ ಹಾಗೂ ಪರಮೇಶ್ವರ್ ಅವರಿಗೆ ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿಸಿದರು. ಆಗ ನಾನೂ ರಾಜಿನಾಮೆ ಕೊಡಬಹುದಿತ್ತಲ್ಲವೇ? ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ ಅವರಿಗೇ ಮಂತ್ರಿಸ್ಥಾನ ನೀಡಿರಲಿಲ್ಲ. ನಂತರ ಬಂಗಾರಪ್ಪ ಅವರು, ಧರಂಸಿಂಗ್ ಅವರು ಮುಖ್ಯಮಂತ್ರಿಗಳಾಗಲಿಲ್ಲವೇ? ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸ್ಥಾನ ನೀಡಿರಲಿಲ್ಲ” ಎಂದು ಹೇಳಿದರು.
“ಇಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕು. ಎಲ್ಲದಕ್ಕಿಂತ ಪಕ್ಷ ಮುಖ್ಯ. ಎಲ್ಲಾ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಸೇರಿದಂತೆ ಇತರೇ ಹುದ್ದೆಗಳಿಗೆ ರಾಜಿನಾಮೆ ನೀಡಿ ಎಂದು ಸೂಚಿಸುತ್ತೇನೆ. ಎಲ್ಲರಿಗೂ ಮುಂಚಿತವಾಗಿ ಎರಡುವರೆ ವರ್ಷ ಎಂದು ಸೂಚನೆ ನೀಡಿದ್ದೆವು. ಶಾಸಕರು, ಮಂತ್ರಿಗಳಿಗೂ ಇದನ್ನು ತಿಳಿಸಿದ್ದೆವು. ಮೊದಲು ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು. ನಂತರ ಶಾಸಕರನ್ನು ಕರೆದು ಚರ್ಚಿಸಲಾಗುವುದು. ಹೊಸವಿಚಾರ ಇದ್ದರೇ ನಾನೇ ಮಾಧ್ಯಮಗಳನ್ನು ಕರೆದು ಮಾತನಾಡುತ್ತೇನೆ” ಎಂದರು.
*ಬರ ಅಧ್ಯಯನ ನಡೆಸಲು ಸಚಿವರಿಗೆ ಸೂಚನೆ*
“ಎಲ್ಲ ನೂತನ ಸಚಿವರಿಗೆ ಕೂಡಲೇ ತಮಗೆ ಜವಾಬ್ದಾರಿ ನೀಡಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯ ಬಗ್ಗೆ ಅವಲೋಕಿಸ ಬೇಕು ಎಂದು ಹೇಳಿದ್ದೇನೆ. ಜೊತೆಗೆ ಸ್ಥಳ ವೀಕ್ಷಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ” ಎಂದರು.


