ಅಮಿತ್ ಷಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸಾದರು…ಇಫ್ತಿಕರ್ ಅಲಿ ಎಂದರೆ ಸಾಕು…ಕೂಡ್ಲಿಗಿಯಲ್ಲಿ ಸೆಟ್ಲಾದರು ಶ್ರೀರಾಮುಲು…

ಅಮಿತ್ ಷಾ ಪರೀಕ್ಷೆಯಲ್ಲಿ
ವಿಜಯೇಂದ್ರ ಪಾಸಾದರು

  1. ಕಳೆದ ಗುರುವಾರ ಬಿಜೆಪಿ ನಾಯಕರಾದ ಯತ್ನಾಳ್,ರಮೇಶ್ ಜಾರಕಿಹೊಳಿ ಮತ್ತಿತರರು ರಹಸ್ಯ ಸಭೆ ನಡೆಸಿದ್ದಾರೆ.ವಿಧಾನಸಬೆಯ ಮೊಗಸಾಲೆಯಲ್ಲಿರುವ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ನಡೆದ ಈ ಸಭೆ ಆರೆಸ್ಸೆಸ್ ನಾಯಕರು ತಮಗೆ ನೀಡಿದ ಸಂದೇಶದ ಬಗ್ಗೆ ಚರ್ಚಿಸಿದೆ.
    ಅಂದ ಹಾಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರ್ಯುದ್ದದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಸ್ಥಳೀಯ ಆರೆಸ್ಸೆಸ್ ನಾಯಕರಿಗೆ ಒಂದು ಸಂದೇಶ ನೀಡಿದ್ದಾರೆ
    ಇವತ್ತಿನ ಪರಿಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಲು ಸಾಧ್ಯವಿಲ್ಲ.ಹೀಗಾಗಿ ಅವರ ಪದಚ್ಯುತಿಗಾಗಿ ಹೋರಾಡುತ್ತಿರುವವರು ಪಕ್ಷದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗಬೇಕು.ಮತ್ತು ಹೀಗೆ ಹೊಂದಿಕೊಂಡು ಹೋಗುವಂತೆ ನೀವು ಅವರ ಮನವೊಲಿಸಬೇಕು ಎಂಬುದು ಈ ಸಂದೇಶ.
    ಈ ಸಂದೇಶದ ಬೆನ್ನಲ್ಲೇ ವಿಜಯೇಂದ್ರ ವಿರೋಧಿ ಪಡೆಯ ಯತ್ನಾಳ್,ಅರವಿಂದ ಲಿಂಬಾವಳಿ,ರಮೇಶ್ ಜಾರಕಿಹೊಳಿ ಮತ್ತಿತರರ ಜತೆ ಸಭೆ ನಡೆಸಿದ ಆರೆಸ್ಸೆಸ್ ನ ಅಖಿಲ ಬಾರತ ಸಹ ಸರಕಾರ್ಯವಾಹ ಮುಕುಂದ್ ಜೀ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
    ‘ಇವತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲು ವರಿಷ್ಟರು ಒಲವು ತೋರಿಸುತ್ತಿಲ್ಲ.ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಹೊಂದಿಕೊಂಡು ಹೋಗಬೇಕು.ಹಾಗಂತ ನಿಮ್ಮ ಶಕ್ತಿ ಕುಗ್ಗಿಸುವುದು ವರಿಷ್ಟರ ಉದ್ದೇಶವಲ್ಲ.ಹೀಗಾಗಿ ಯತ್ನಾಳ್ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಬೇಕು,ಅರವಿಂದ ಲಿಂಬಾವಳಿಯವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಬೇಕು ಎಂಬುದು ವರಿಷ್ಟರ ಬಯಕೆ ಎಂದಿದ್ದಾರೆ.
    ಇವತ್ತು ಸಂಘ ಪರಿವಾರದ ನಂಬರ್ ತ್ರೀ ಆಗಿರುವ ಮುಕುಂದ್ ಜೀ ಈ ಹಿಂದಿದ್ದ ಜಯದೇವ್ ಅವರಂತೆ ಪವರ್ ಫುಲ್ ಆಗಿದ್ದಾರೆ.
    ದತ್ತಾತ್ರೇಯ ಹೊಸಬಾಳೆ ಅವರ ನಂತರದ ಪೊಸೀಷನ್ನಿನಲ್ಲಿರುವ ಮುಕುಂದ್ ಜೀ ಒಂದು ಮಾತು ಹೇಳಿದರು ಎಂದರೆ ರಾಜ್ಯ ಬಿಜೆಪಿಯ ಯಾವುದೇ ನಾಯಕ ಅದನ್ನು ನಿರ್ಲಕ್ಷಿಸುವುದು ಕಷ್ಟ.
    ಆದರೆ ಹಾಗಂತ ತಮಗೆ ಇಷ್ಟವಾಗದ ಮಾತನ್ನು ಅವರು ಹೇಳಿದರೆ ಒಪ್ಪುವುದು ಹೇಗೆ?ಹಾಗಂತಲೇ ಯತ್ನಾಳ್ ಅಂಡ್ ಗ್ಯಾಂಗು ಪ್ರತಿಕ್ರಿಯಿಸಿ:’ಈ ಕುರಿತು ಎಲ್ಲರ ಜತೆ ಮಾತನಾಡುತ್ತೇವೆ ಸಾರ್’ ಅಂ/ತ ಹೇಳಿ ಮೇಲೆದ್ದು ಬಂದಿದೆ.
    ಇದಾದ ನಂತರ ಮುಂದೇನು ಮಾಡಬೇಕು?ಅಂತ ಯೋಚಿಸಿದ ಈ ಗ್ಯಾಂಗು ಮಾರ್ಚ್ 13 ರ ಗುರುವಾರ ವಿಧಾನಸಭೆಯ ಮೊಗಸಾಲೆಯಲ್ಲಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಕೊಠಡಿಯಲ್ಲಿ ಸಭೆ ಸೇರಿದೆ.
    ಈ ಸಭೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್,ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.
    ಹೀಗೆ ಎಲ್ಲರೂ ಸೇರಿ ಗಂಭೀರ ಚರ್ಚೆ ನಡೆಸುತ್ತಿದ್ದಾಗ,ವಿಧಾನಸಭೆಯ ಕಲಾಪದಲ್ಲಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಯಾಚಿತವಾಗಿ ಅಶೋಕ್ ಅವರ ಕೊಠಡಿಯ ಬಳಿ ಬಂದಿದ್ದಾರೆ.
    ಹೀಗೆ ಬಂದವರ ಕಣ್ಣಿಗೆ ಯತ್ನಾಳ್,ಜಾರಕಿಹೊಳಿ ಅವರಲ್ಲದೆ ಮತ್ತೊಬ್ಬರು ಕಂಡಿದ್ದಾರೆ.ಅವರ ಹೆಸರು-
    ಎನ್.ಆರ್.ಸಂತೋಷ್.
    ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಮನೆಯ ಅಷ್ಟ ದಿಕ್ಪಾಲಕರಲ್ಲಿ ಒಬ್ಬರಾಗಿದ್ದಸಂತೋಷ್ ಈಗ ಯಡಿಯೂರಪ್ಪ ಅವರ ಕ್ಯಾಂಪಿನಲ್ಲಿಲ್ಲ.ಬದಲಿಗೆ ಸಂಘಪರಿವಾರದ ನಾಯಕ ಬಿ.ಎಲ್.ಸಂತೋಷ್ ಅವರ ಕ್ಯಾಂಪಿನಲ್ಲಿದ್ದಾರೆ ಎಂಬುದು ರಹಸ್ಯವೇನಲ್ಲ./
    ಅಂತಹ ಎನ್.ಆರ್.ಸಂತೋಷ್ ಅವರು ಯಾವಾಗ ಯತ್ನಾಳ್,ಜಾರಕಿಹೊಳಿ ಅವರ ಜತೆ ಕಾಣಿಸಿಕೊಂಡರೋ?ಆಗ ಉರಿದು ಬಿದ್ದ ವಿಕಯೇಂದ್ರ ರಪ್ಪನೆ ವಾಪಸ್ಸು ಹೋಗಿದ್ದಾರೆ.
    ಇದಾದ ನಂತರ ಅವತ್ತು ಸಂಜೆಯೇ ನಡೆದ ಯಡಿಯೂರಪ್ಪ ಕ್ಯಾಂಪಿನ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ.
    ವಿಜಯೇಂದ್ರ ಅವರ ವಿರುದ್ಧದ ಹೋರಾಟದಲ್ಲಿ ಯಾರ್ಯಾರು ಪರೋಕ್ಷವಾಗಿ ಪಾಲ್ಗೊಂಡಿದ್ದಾರೆ ಎಂಬ ಕುರಿತು ಚರ್ಚಿಸಿದ ಈ ಕ್ಯಾಂಪು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೂ ಇದರಲ್ಲಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದೆ.
    ಒಂದು ವೇಳೆ ಅಶೋಕ್ ಅವರ ಪಾತ್ರ ಇಲ್ಲದೆ ಹೋಗಿದ್ದರೆ,ವಿಧಾನಸಭೆಯ ಮೊಗಸಾಲೆಯಲ್ಲಿರುವ ಅವರ ಕೊಠಡಿಯಲ್ಲಿ ತಮ್ಮ ವಿರೋಧಿಗಳು ಹೇಗೆ ಸಭೆ ನಡೆಸಲು ಸಾಧ್ಯವಿತ್ತು?ಎಂಬುದು ಅದರ ಯೋಚನೆ.
    ಪರಿಣಾಮ?ರಾಜ್ಯ ಬಿಜೆಪಿಯ ಬಣ ಸಂಘರ್ಷಕ್ಕೆ ಬ್ರೇಕ್ ಹಾಕಲು ವರಿಷ್ಡರು ಏನೇ ಯತ್ನ ನಡೆಸಿದರೂ,ಸಂಘರ್ಷದ ಕಿಡಿ ಮಾತ್ರ ಉಳಿದೇ ಇದೆ.

ಪರೀಕ್ಷೆ ಪಾಸಾದ ವಿಜಯೇಂದ್ರ
———————–
ಈ ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಲು ಸಾಧ್ಯವಿಲ್ಲ ಅಂತ ಬಿಜೆಪಿ ವರಿಷ್ಟರೇಕೆ ಕಟ್ ಥ್ರೂಟ್ ಆಗಿ ಹೇಳುತ್ತಿದ್ದಾರೆ?
ಬಿಜೆಪಿ ಮೂಲಗಳ ಪ್ರಕಾರ,ವಿಜಯೇಂದ್ರ ಅವರನ್ನಿಳಿಸಿ ಅಂತ ಯತ್ನಾಳ್ ಗ್ಯಾಂಗು,ಬೇಡವೇ ಬೇಡ ಅಂತ ಯಡಿಯೂರಪ್ಪ ಗ್ಯಾಂಗು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾಗ ಅಮಿತ್ ಷಾ ಬೇಸತ್ತು ಹೋಗಿದ್ದರು.
ಹೀಗಾಗಿ ಉಭಯ ಬಣಗಳ ಬೇಡಿಕೆಯನ್ನು ಪಕ್ಕಕ್ಕಿರಿಸಿ ತಮ್ಮದೇ ಮೂಲಗಳಿಂದ ಸರ್ವೇ ರಿಪೋರ್ಟು ತರಿಸಿಕೊಳ್ಳಲು ನಿರ್ಧರಿಸಿದ್ದರು.
ಅದರ ಪ್ರಕಾರವೇ ಕರ್ನಾಟಕ ಬಿಜೆಪಿಯಲ್ಲಿ ಯಾರಿಗೆ ಪವರ್ ಹೆಚ್ಚು?ಯಾರು ಅಧ್ಯಕ್ಚರಾಗಿದ್ದರೆ ಪಕ್ಷ ಸಂಘಟನೆಗೆ ಅನುಕೂಲ?ಅಂತ ಅವರು ಸರ್ವೇ ಮಾಡಿಸಿದಾಗ 89 ಪರ್ಸೆಂಟು ಮಂದಿ ವಿಜಯೇಂದ್ರ ಅವರ ಪರವಾಗಿ ನಿಂತಿದ್ದಾರೆ.
ಅಷ್ಟೇ ಅಲ್ಲ.ಇವತ್ತಿನ ಸ್ಥಿತಿಯಲ್ಲಿ ವಿಜಯೇಂದ್ರ ಹೊರತುಪಡಿಸಿ ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆ ಕಷ್ಟ.ಅದೇ ರೀತಿ ಯಡಿಯೂರಪ್ಪ ಬ್ಯಾಕ್ ಗ್ರೌಂಡು ಇರುವ ವಿಜಯೇಂದ್ರ ಅವರಂತೆ ಇಡೀ ರಾಜ್ಯದಲ್ಲಿ ನೇಮು-ಫೇಮು ಇರುವ ಮತ್ತೊಬ್ಬ ನಾಯಕರಿಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಯಾವಾಗ ಸರ್ವೆ ರಿಪೋರ್ಟು ಹೀಗೆ ಹೇಳಿತೋ?ಅಗ ಈ ಸರ್ವೆ ರಿಪೋರ್ಟಿನ ಪ್ರಕಾರವೇ ಮುಂದಿನ ಹೆಜ್ಜೆ ಇಡಲು ಬಿಜೆಪಿ ವರಿಷ್ಟರು ನಿರ್ಧರಿಸಿದ್ದಾರೆ.ಅಲ್ಲಿಗೆ ರಾಜ್ತ ಬಿಜೆಪಿಯಲ್ಲಿ ವಿಜಯೇಂದ್ರ ಯುಗ ಮುಂದುವರಿಯುವುದು ನಿಕ್ಕಿಯಾದಂತಾಗಿದೆ.

ಇಫ್ತಿಕರ್ ಅಲಿ ಎಂದರೆ
ಸಾಕು
———————-
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಗುಂಪುಗಳಾಗಿ ಹರಡಿ ಹೋಗಿರುವ ಹಿರಿಯ ಕಾಂಗ್ರೆಸ್ ನಾಯಕರು, ಇಫ್ತಿಕರ್ ಅಲಿ ಎಂಬ ಹೆಸರು ಕೇಳಿದರೆ ಸಾಕು,ರಪ್ಪಂತ ಒಗ್ಗಟ್ಟು ಪ್ರದರ್ಶಿಸತೊಡಗಿದ್ದಾರೆ./
ಅಂದ ಹಾಗೆ ಹಿರಿಯ ಕಾಂಗ್ರೆಸ್ಸಿಗರ ಈ ಒಗ್ಗಟ್ಟಿಗೆ ಕಾರಣರಾಗಿರುವ ಇಫ್ತಿಕರ್ ಅಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಸಹೋದರ.
ಇವತ್ತು ಪ್ರಭಾವಿಯಾಗಿ ಬೆಳೆದಿರುವ ಯು.ಟಿ.ಇಫ್ತಿಕರ್ ಅಲಿ ಜಿಲ್ಲಾಡಳಿತದ ಮೇಲೆ ಪ್ರಭಾವ ಹೊಂದಿದ್ದಾರೆ.ವರ್ಗಾವಣೆಗಳಿಂದ ಹಿಡಿದು ಪ್ರತಿಯೊಂದು ವಿಷಯಗಳಲ್ಲಿ ಅವರ ಮಾತೇ ನಡೆಯುತ್ತದೆ ಎಂಬುದು ಹಿರಿಯ ಕಾಂಗ್ರೆಸ್ಸಿಗರ ಅನುಮಾನ.
ಹೀಗಾಗಿ ವೈಯಕ್ತಿಕವಾಗಿ ಬೇರೆ ಬೇರೆಯಾದರೂ ಮಾಜಿ ಸಚಿವರಾದ ರಮಾನಾಥ ರೈ,ವಿನಯ ಕುಮಾರ ಸೊರಕೆ,ಮಂಜುನಾಥ ಭಂಡಾರಿ ಸೇರಿದಂತೆ ಹಿರಿಯ ಕಾಂಗ್ರೆಸ್ಸಿಗರು ಇಫ್ತಿಕರ್ ಅಲಿ ಎಂದರೆ ಸಾಕು,ಒಗ್ಗಟ್ಟು ಪ್ರದರ್ಶಿಸತೊಡಗುತ್ತಾರೆ.
ಕುತೂಹಲದ ಸಂಗತಿ ಅಂದರೆ ಯು.ಟಿ.ಇಫ್ತಿಕರ್ ಅಲಿ ಅವರಿಗೆ ಜಿಲ್ಲೆಯ ರಾಜಕಾರಣದಲ್ಲಷ್ಟೇ ಅಲ್ಲ,ವೈಯಕ್ತಿಕವಾಗಿ ಕಾಂಗ್ರೆಸ್,ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಜತೆಗೂ ಲಿಂಕಿದೆ.ಅವರನ್ನು ಇಷ್ಟಪಡುವ ನೆರೆ ರಾಜ್ಯದ ರಾಜ್ಯಪಾಲರೊಬ್ಬರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಆಪ್ತರು.ಹೀಗಾಗಿ ಇಫ್ತಿಕರ್ ಅಲಿಯವರ ವರ್ಚಸ್ಸು ಪಕ್ಷ ಭೇದ ಮರೆತು ದಿನದಿಂದ ದಿನಕ್ಕೆ ಮೇಲೆ ಹೋಗುತ್ತಲೇ ಇದೆ.
ಹೀಗೆ ದಿನ ದಿನಕ್ಕೆ ಪ್ರಭಾವಿಯಾಗುತ್ತಿರುವ ಇಫ್ತಿಕರ್ ಅಲಿ ಮತ್ತು ಒಂದು ಕಾಲದಲ್ಲಿ ತಮಗೆ ಜೂನಿಯರ್ ಆಗಿದ್ದ ಯು.ಟಿ.ಖಾದರ್ ವಿಷಯದಲ್ಲಿ ಬಹುತೇಕ ಹಿರಿಯ ಕಾಂಗ್ರೆಸ್ಸಿಗರಿಗೆ ಸಮಾಧಾನವಿಲ್ಲ.
ಹೀಗಾಗಿ,ತಾವು ಯಾರ ಜತೆ ನಿಲ್ಲಬೇಕು?ಅನ್ನುವುದೇ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರಿಗೆ ಅರ್ಥವಾಗುತ್ತಿಲ್ಲ.
ಪರಿಣಾಮ?ಮುಂಬರುವ ಪಾಲಿಕೆ ಸೇರಿದಂತೆ ಎಲ್ಲ ಹಂತದ ಚುನಾವಣೆಗಳಲ್ಲಿ ಕೈ ಪಾಳಯವನ್ನು ಬಗ್ಗು ಬಡಿಯುವ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ಶುರುವಾಗಿದೆ.

ಕೂಡ್ಲಿಗಿಯಲ್ಲಿ ಸೆಟ್ಲಾದರು
ಶ್ರೀರಾಮುಲು
———————
ಇನ್ನು ಗಾಲಿ ಜನಾರ್ಧನ ರೆಡ್ಡಿ ಜತೆಗಿನ ಮುನಿಸಿನಿಂದ ಸುದ್ದಿಯಾಗಿದ್ದ ಬಿಜೆಪಿ ನಾಯಕ ಬಿ.ಶ್ರೀರಾಮುಲು ಇದ್ದಕ್ಕಿದ್ದಂತೆ ಮೌನಕ್ಕೆ ಜಾರಿ,ಕೂಡ್ಲಿಗಿಯಲ್ಲಿ ಸೆಟ್ಲಾಗಿದ್ದಾರೆ.
ಇದುವರೆಗೆ ತಮಗೆ ಶಕ್ತಿಯಾಗಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕಿಂತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರವೇ ಬೆಸ್ಟು ಅಂತ ಅವರಿಗನ್ನಿಸಿದೆ.
ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಅರವತ್ಮೂರು ಸಾವಿರಕ್ಕೂ ಹೆಚ್ಚು ಮತದಾರರಿದ್ದು,ವೋಟ್ ಪ್ಯಾಟರ್ನ್ ದೃಷ್ಟಿಯಿಂದ ನೋಡಿದರೆ ಇಲ್ಲಿ ಗೆಲ್ಲುವುದು ಸುಲಭ ಎಂಬುದು ಅವರ ಲೆಕ್ಕಾಚಾರ.
ಹಾಗಂತಲೇ ಈಗ ಬೆಂಗಳೂರಿಗೆ ಬರುವುದನ್ನು ಕಡಿಮೆ ಮಾಡಿರುವ ಶ್ರೀ ರಾಮುಲು ಕೂಡ್ಲಿಗಿಯಲ್ಲಿ ಗರಿಷ್ಟ ಸಮಯವನ್ನು ಕಳೆಯುತ್ತಿದ್ದಾರೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಮದುವೆ ಮತ್ತಿತರ ಶುಭ ಕಾರ್ಯಗಳಿಂದ ಹಿಡಿದು,ಸಂಭವಿಸುವ ಸಾವುಗಳ ತನಕ ಪ್ರತಿಯೊಂದರಲ್ಲೂ ಭಾಗವಹಿಸುತ್ತಿರುವ ಶ್ರೀರಾಮುಲು ಮುಂದಿನ ಮೂರು ವರ್ಷಗಳ ಕಾಲ ಕ್ಷೇತ್ರ ಬಿಟ್ಟು ಅಲುಗಾಡದಿರಲು ನಿರ್ಧರಿಸಿದ್ದಾರೆ.
ಅಂದ ಹಾಗೆ ಪುರಾನಾ ದೋಸ್ತ್ ಗಾಲಿ ಜನಾರ್ಧನ ರೆಡ್ಡಿ ಜತೆ ಮುನಿಸಿಕೊಂಡು ಬಿಜೆಪಿಯ ರಾಷ್ಟ್ರೀಯ ನಾಯಕರಿಗೂ ತಲೆ ನೋವು ತಂದಿದ್ದ ಶ್ರೀರಾಮುಲು,ಈಗ ರೆಡ್ಡಿಗಾರು ವಿಷಯದಲ್ಲಿ ಮೌನವಾಗಿರಲು ತೀರ್ಮಾನಿಸಿದ್ದಾರೆ
ಕಾರಣ?ರೆಡ್ಡಿಗಾರು ಜತೆಗಿನ ಮುನಿಸಿಗೆ ತುಪ್ಪ ಸುರಿಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಅದೇ ಜ್ವಾಲಾಮುಖಿಯಾಗುತ್ತದೆ.
ಅಷ್ಟೇ ಅಲ್ಲ,ಇದರ ಪರಿಣಾಮವಾಗಿ ರೆಡ್ಡಿಗಾರು ಕೂಡ್ಲಿಗಿ ಕ್ಷೇತ್ರಕ್ಕೂ ನುಗ್ಗಲು,ತಮ್ಮನ್ನು ಸೋಲಿಸಲು ಪ್ರಯತ್ನ ಮಾಡಬಹುದು ಎಂಬುದು ಶ್ರೀ ರಾಮುಲು ಯೋಚನೆ.
ಸಾಲದೆಂಬಂತೆ ರಾಮುಲು ಅವರ ಆಪ್ತರೇ ಆಗಾಗ ಹಳೇ ದಿನಗಳನ್ನು ಜ್ಞಾಪಿಸಿ:’ನೀವು ಮತ್ತು ರೆಡ್ಡಿಯವರು ಚೆನ್ನಾಗಿದ್ದಾಗ ಒಂದು ಸುವರ್ಣ ಯುಗವೇ ಸೃಷ್ಟಿಯಾಗಿತ್ತು.ಮತ್ತೊಮ್ಮೆ ಅದು ಸೃಷ್ಟಿಯಾಗಬೇಕು ಎಂದರೆ ನೀವಿಬ್ಬರೂ ನಿಮ್ಮ ಮುನಿಸನ್ನು ಮರೆಯಬೇಕು’ ಎನ್ನುತ್ತಿರುವುದೂ ರಾಮುಲು ಕೂಲಾಗಲು ಮತ್ತೊಂದು ಕಾರಣ.

ಲಾಸ್ಟ್ ಸಿಪ್
————
ಗ್ಯಾರಂಟಿ ಯೋಜನೆಗಳ ಬಲೆಯಿಂದ ಬಚಾವಾಗಲು ಕರ್ನಾಟಕ ಸೇರಿದಂತೆ ದೇಶದ ಹಲ ರಾಜ್ಯಗಳು ತತ್ತರಿಸುತ್ತಿವೆ.
ಹಿಮಾಚಲ ಪ್ರದೇಶ,ತೆಲಂಗಾಣ,ಮಹಾರಾಷ್ಟ್ರ ಹೀಗೆ ಹಲವು ರಾಜ್ಯಗಳು ಗ್ಯಾರಂಟಿ ಬಲೆಗೆ ತತ್ತರಿಸುತ್ತಿವೆ.
ಅಂದ ಹಾಗೆ ಈ ಬಲೆಯಿಂದ ಬಿಡಿಸಿಕೊಳ್ಳಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ರಾಜ್ಯ ಸಚಿವ ಸಂಪುಟದ ಮುಂದೆ ಒಂದು ಪ್ರಸ್ತಾಪವಿಟ್ಟಿದ್ದರು.
ಅರ್ಹರಿಗೆ ಮಾತ್ರ ಗ್ಯಾರಂಟಿಗಳ ಲಾಭ ಸಿಗುವಂತಾದರೆ ಮತ್ತು ಅಗತ್ಯಕ್ಕೆ ಅನುಗುಣವಾಗಿದ್ದರೆ ಈಗ ಆಗುತ್ತಿರುವ ಖರ್ಚಿನಲ್ಲಿ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿ ಉಳಿಸಬಹುದು ಎಂಬುದು ಅವರ ಪ್ರಸ್ತಾಪ.
ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಹುಮುಖ್ಯವಾಗಿ ಚರ್ಚೆಯಾಗಬೇಕಾದ ವಿಷಯ ಇದು.
ಇವತ್ತು ಸರ್ಕಾರ ಎದುರಿಸುತ್ತಿರುವ ಸಂಕಷ್ಟ ಎಂದರೆ ಅದು ರಾಜ್ಯ ಎದುರಿಸುತ್ತಿರುವ ಸಂಕಟ ಎಂದೇ ಅರ್ಥ.
ಹೀಗಾಗಿ ಗ್ಯಾರಂಟಿಗಳ ವಿಷಯದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಗ್ಗೂಡಿ ಗ್ಯಾರಂಟಿಗಳ ಬಲೆಯಿಂದ ಸರ್ಕಾರವನ್ನು,ಆ ಮೂಲಕ ರಾಜ್ಯವನ್ನು ಕಾಪಾಡಬೇಕು.

ಆರ್.ಟಿ.ವಿಠ್ಠಲಮೂರ್ತಿ