ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ

ಹುಟ್ಟು ಹಬ್ಬದ ಸಂಭ್ರಮ;

ತಂದೆಗೆ ತಕ್ಕ ಮಗ
ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ

ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕಾರಣದ ಇತಿಹಾಸದಲ್ಲಿ ಯಶಸ್ಸು ಕಂಡವರು ಕೆಲವೇ ಕೆಲವರು ಮಾತ್ರ. ಅನೇಕರು ತಮ್ಮ ತಂದೆಯ ವರ್ಚಸ್ಸು, ಯಶಸ್ಸು ಜನಪ್ರಿಯತೆ ಮೂಲಕ ಸಿಕ್ಕ ಅವಕಾಶಗಳಿಂದಲೂ ಜನಮನ್ನಣೆ ಕಳೆದುಕೊಂಡು ಜನರಿಂದ ದೂರವಾಗಿದ್ದು ಇದೆ. ಇಂತಹವರ ನಡುವೆ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ನವರ ಪುತ್ರ ಮಧು ಬಂಗಾರಪ್ಪ, ತಂದೆಯ ಆದರ್ಶದಲ್ಲಿ ಜನಪರ ಆಡಳಿತದ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ತಂದೆಗೆ ತಕ್ಕ ಮಗ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದಾರೆ. ಶಾಲಾ ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪನವರು ಕಳೆದ ಈ ಎರಡೂವರೆ ವರ್ಷದಲ್ಲಿ ಜಾರಿಗೆ ತಂದ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿದರೆ, ಮಧು ಬಂಗಾರಪ್ಪ ಒಬ್ಬ ಯಶಸ್ವಿ ಸಚಿವ, ರಾಜಕಾರಣಿ ಎನ್ನುವ ಮಾತಿನಲ್ಲಿ ಅತಿಶಯವೇ ಇಲ್ಲ.
……………………………
ಹೈಲೆಟ್ಸ್‌
– ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆ ಕೊಟ್ಟು, ಮೂಲ ಸೌಕರ್ಯ ಕಲ್ಪಿಸಿದ್ದು
– ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳಾದ ಮೂರು ಪರೀಕ್ಷಾ ಪದ್ಧತಿ’,
– ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ ಕಾಸ್ಟಿಂಗ್‌ ಅಳವಡಿಕೆ
– ಎಸ್‌ ಎಸ್‌ ಎಲ್‌ ಸಿ ಮತ್ತು ದ್ವೀತಿಯ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ. ೩೫ ರಿಂದ ಶೇ. ೩೩ಕ್ಕೆ ಇಳಿಸಿದ್ದು
– ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಗುಣಮಟ್ಟದ ಶಿಕ್ಷಣ ನೀಡಲು ಕೆಪಿಎಸ್‌ ಶಾಲೆಗಳ ಆರಂಭ
– ಶಿಕ್ಷಕರ ಕೊರತೆ ನೀಗಿಸಲು ೩೫ ಸಾವಿರ ಶಿಕ್ಷಕರ ನೇಮಕಾರಿಗೆ ಚಾಲನೆ
…………..
ʼ ಬಂಗಾರಪ್ಪ ಅವರ ಮಗ ಎನ್ನುವ ಕಾರಣಕ್ಕೆ ನಾನು ಅವರಂತೆಯೇ ಜನ ನಾಯಕ ನಾಗುವುದು ಅಸಾಧ್ಯ, ಅದು ಅವರಿಗಷ್ಟೆ ಸಾಧ್ಯ. ಯಾಕೆಂದರೆ ಬಂಗಾರಪ್ಪಾಜಿ ಅವರಿಗೆ ಸರಿಸಾಟಿ ಯಾರು ಇಲ್ಲ, ಆದರೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾನು ಹೆಜ್ಜೆ ಹಾಕುತ್ತಾ, ನಿಮ್ಮ ನೋವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎನ್ನುವ ಮಾತನ್ನು ವಾಗ್ದಾನ ಮಾಡಬಲ್ಲೆ…ʼ
೨೦೨೪ರ ವಿಧಾನಸಭಾ ಚುನಾವಣೆಯ ಸಂದರ್ಭ. ಸೊರಬ ವಿಧಾನ ಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಅಲ್ಲಿನ ಜನರಿಗೆ ಹೀಗೆ ವಾಗ್ದಾನ ಮಾಡಿದ್ದರು. ಜನ ಅವರ ಮಾತು ನಂಬಿದರು, ಮತ ಕೊಟ್ಟು ಗೆಲ್ಲಿಸಿದರು. ಕ್ಷೇತ್ರದ ಜನರಿಗೆ ಅವತ್ತು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರ ಮೂಲಕ ಶಿಕ್ಷಣ ಖಾತೆಯಲ್ಲಿ ಕ್ರಾಂತಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿರುವುದು ಮಧು ಬಂಗಾರಪ್ಪ ಅವರ ರಾಜಕೀಯ ಬದುಕಿನ ಈ ಹೊತ್ತಿನ ವಿಶೇಷ. ಹಾಗಂತ ಇದು ಅವರಿಗೆ ಸಾಧ್ಯವಾಗಿದ್ದು ಬಂಗಾರಪ್ಪನವರ ಪುತ್ರ ಎನ್ನುವ ಕಾರಣಕ್ಕಲ್ಲ, ಅದು ಸಾಧ್ಯವಾಗಿದ್ದು ಬಂಗಾರಪ್ಪನವರ ಆದರ್ಶ. ಕಾಂಗ್ರೆಸ್‌ ಪಕ್ಷ ಕೊಟ್ಟ ಅವಕಾಶ.

ಹೌದು ನಿಜ, ಕರ್ನಾಟಕ ರಾಜ್ಯ ಕಂಡ ವರ್ಣ ರಂಜಿತ ರಾಜಕಾರಣಿ ಎಂದೇ ಹೆಸರಾಗಿದ್ದ ಬಂಗಾರಪ್ಪ ಎನ್ನುವುದು ಬರೀ ಹೆಸರಷ್ಟೇ ಅಲ್ಲ, ಅದೊಂದು ಜನಸೇವೆಯ ಆಗಾಧ ಶಕ್ತಿ. ಸಾರೇಕೊಪ್ಪ ಬಂಗಾರಪ್ಪ ಅವರ ಸುದೀರ್ಘ 44 ವರ್ಷಗಳ ರಾಜಕೀಯ ಜೀವನವನ್ನು ಎಳೆ ಎಳೆಯಾಗಿ ಬಿಚ್ಚಿಡಲು ಹೋದರೆ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವುದಕ್ಕೆ ಪುಟಗಳೇ ಸಾಲದು, ಅಷ್ಟೊಂದು ವೈಶಿಷ್ಟ್ಯಪೂರ್ಣ ರಾಜಕಾರಣಿ ಬಂಗಾರಪ್ಪ.ʼ ಹಸಿದವರಿಗೆ ಅನ್ನ, ನೊಂದವರಿಗೆ ಸಾಂತ್ವನ, ಸೂರಿಲ್ಲದವರಿಗೆ ಸೂರು, ಅಸಹಾಯಕರಿಗೆ ಆಸರೆ, ಬೇಡಿ ಬಂದವರಿಗೆ ದಾನ, ಸಂಕಷ್ಟಗಳಿಗೆ ಪರಿಹಾರʼ ಎನ್ನುವ ತತ್ವದಡಿ ರಾಜಕಾರಣ ಮಾಡಿದವರು ಬಂಗಾರಪ್ಪ. ಹಾಗಾಗಿ ಅವರು ಜಾತಿ, ಮತಗಳನ್ನು ಮೀರಿದ ಜನನಾಯಕ ಎನಿಸಿಕೊಂಡಿದ್ದರು. ಅದೇ ಕಾರಣಕ್ಕೆ ಜನಮನಗೆದ್ದರು, ಅಧಿಕಾರ ಕಳೆದುಕೊಂಡರು ಎನ್ನುವುದು ರಾಜ್ಯ ರಾಜಕೀಯದ ಇತಿಹಾಸ.

ತಂದೆ ಬಂಗಾರಪ್ಪ ಅವರ ಆದರ್ಶಗಳನ್ನೆ ಮೈಗೂಡಿಸಿಕೊಂಡು ರಾಜಕೀಯಕ್ಕೆ ಬಂದ ಮಧು ಬಂಗಾರಪ್ಪ ಅವರು, ತಮ್ಮ ತಂದೆಯಂತೆಯೇ ಆಗಬೇಕೆನ್ನುವುದಕ್ಕಿಂತ ಅವರ ಆದರ್ಶಗಳನ್ನೇ ಮೈಗೂಡಿಸಿಕೊಂಡು ಜನ ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಸೊರಬದ ಜನರಿಗೆ ಅವರು ಶಾಸಕರು, ಅದರಾಚೆ ಜಿಲ್ಲೆಗೆ, ರಾಜ್ಯಕ್ಕವರು ಶಿಕ್ಷಣ ಸಚಿವರು. ಎರಡನ್ನು ಸಮತೂಕದಲ್ಲಿ ನಿಭಾಯಿಸಿಕೊಂಡೆ ಸೊರಬ ಕ್ಷೇತ್ರದ ಜನರ ಮನಗೆದ್ದಿರುವ ಅವರು, ತಂದೆ ಬಂಗಾರಪ್ಪನವರ ಹಾಗೆಯೇ ಸೊರಬದಲ್ಲಿ ಅಭಿವೃದ್ದಿಯ ಹರಿಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾಸಕ ಮತ್ತು ಸಚಿವ ಸ್ಥಾನದ ಎರಡು ಜವಾಬ್ದಾರಿ ಹೊತ್ತುಕೊಂಡ ಈ ಎರಡೂವರೆ ವರ್ಷದ ಅವಧಿಯಲ್ಲಿ ಸೊರಬ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿನ ಅನೇಕ ಮಹತ್ತರ ಅಭಿವೃದ್ದಿ ಯೋಜನೆಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಪಂಚ ಗ್ಯಾರೆಂಟಿ ಯೋಜನೆಗಳ ಮೂಲಕ ಇವತ್ತು ಲಕ್ಷಾಂತರ ಕುಟುಂಬಗಳಲ್ಲಿ ನೆಮ್ಮದಿ ಬದುಕು ಕಾಣುವುದಕ್ಕೆ ಅವರ ಪಾತ್ರವೂ ಪ್ರಮುಖ.

ಅಪ್ಪ ದೊಡ್ಡ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಪ್ರಭಾವಿ ಅಂತೆನ್ನುವ ಕಾರಣಕ್ಕೆ ಎಲ್ಲ ಹುದ್ದೆಗಳು ತಮಗೇ ಬೇಕು ಎನ್ನುವ ಅಧಿಕಾರದ ದಾಹದ ರಾಜಕಾರಣ ಒಂದೆಡೆಯಾದರೆ, ತಾನು ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪ ಮಗ ಎನ್ನುವ ಯಾವುದೇ ಹಮ್ಮು, ಬಿಮ್ಮು ಇಲ್ಲದೆ ಜನರ ಆಶೀರ್ವಾದಿಂದಲೇ ರಾಜಕಾರಣ ಮಾಡುತ್ತಿರುವ ಮಧು ಬಂಗಾರಪ್ಪ, ತನ್ನ ತಂದೆಯವರ ಜನಪರ, ಅಭಿವೃದ್ದಿಪರ ರಾಜಕಾರಣದ ತತ್ವದಲ್ಲಿಯೇ ಧೃಡ ಹೆಜ್ಜೆಗಳನ್ನು ಮೂಡಿಸುತ್ತಿರುವುದು ಇತರೆ ಮಾಜಿ ಸಿಎಂ ಮಕ್ಕಳಿಗೂ ಮಾದರಿ. ಅಧಿಕಾರ ಇದ್ದಾಗ, ರಾಜಕಾರಣಿಗಳು ತಮ್ಮ ಕ್ಷೇತ್ರಗಳಿಗೆ ಹಣ ತರುವುದು ಮಾತ್ರವಲ್ಲ, ಅವುಗಳ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಎಷ್ಠರ ಮಟ್ಟಿಗೆ ಜನಪರ ಕಾಳಜಿ ತೋರುತ್ತಾರೆನ್ನುವುದು ಬಹುಮುಖ್ಯ. ಈ ವಿಚಾರದಲ್ಲಿ ಸಚಿವ ಮಧು ಬಂಗಾರಪ್ಪ ಅವರದ್ದು ಅತ್ಯಂತ ಜನಪರವಾದ ನೀತಿ, ನಿಲುವು. ಸರ್ಕಾರದ ಒಂದು ಪೈಸೆಯೂ ಕೂಡ ದುರುಪಯೋಗ ಆಗಬಾರದೆನ್ನುವ ಸಿದ್ದಾಂತ. ಅದೇ ಕಾರಣಕ್ಕೆ ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಅವರದ್ದು ಮಹತ್ತರ ಮೈಲುಗಲ್ಲು.
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು, ಸೊರಬ ಶಾಸಕ ಎಸ್.‌ ಮಧು ಬಂಗಾರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಶಿಕ್ಷಣ ಖಾತೆಯನ್ನು ವಹಿಸಿದ್ದಾಗ, ಅವರ ಬಗೆಗೆ ಮೆಚ್ಚುಗೆಗಿಂತ ಟೀಕೆಗಳೇ ಹೆಚ್ಚಾಗಿ ಕೇಳಿ ಬಂದಿದ್ದವು. ರಾಜಕಾರಣದಲ್ಲಿ ಈಗಷ್ಟೇ ಪಾಠ ಕಲಿಯುತ್ತಿರುವ ಮಧು ಬಂಗಾರಪ್ಪ ಶಿಕ್ಷಣ ಇಲಾಖೆಯಂತಹ ಬಹುದೊಡ್ಡ ಖಾತೆಯನ್ನು ನಿಭಾಯಿಸುತ್ತಾರೆನ್ನುವ ಪ್ರಶ್ನೆಯೂ ಹಲವರಲ್ಲಿತ್ತು. ಆದರೆ ಅವ್ಯಾವು ಟೀಕೆ ಟಿಪ್ಪಣಿಗಳಿಗೆ ಆಗ ತಲೆಕೆಡಿಸಿಕೊಳ್ಳದೆ, ಬೇಸರಿಸದೆ, ಜಗ್ಗದೆ, ಕುಗ್ಗದೆ ಒಂದು ರೀತಿ ಅವುಗಳನ್ನೆ ಸವಾಲಾಗಿ ಸ್ವೀಕರಿಸಿದ್ದ ಮಧು ಬಂಗಾರಪ್ಪನವರು, ಇವತ್ತು ಶಾಲಾ ಶಿಕ್ಷಣ ಇಲಾಖೆಯಲ್ಲಿ ಅನುಷ್ಠಾನಕ್ಕೆ ತಂದ ಕ್ರಾಂತಿಕಾರಕ ಬದಲಾವಣೆಗಳು ಇತರೆ ರಾಜ್ಯಗಳಿಗೂ ಮಾದರಿ ಆಗಿವೆ. ಅದೇ ಕಾರಣಕ್ಕೆ ʼಶಿಕ್ಷಣದ ಬಂಗಾರʼ ಎನ್ನುವ ಬಿರುದಿಗೂ ಪಾತ್ರರಾಗಿದ್ದಾರೆನ್ನುವುದು ಗಮನಾರ್ಹ ಸಂಗತಿ.
ಶಿಕ್ಷಣ ಖಾತೆ ಮಧು ಬಂಗಾರಪ್ಪನವರಿಗೆ ಸಿಕ್ಕಿದ್ದೇ ಒಂದು ಸೌಭಾಗ್ಯ. ಕಾಕತಾಳೀಯ, ಅದೃಷ್ಟದ ಸಂಕೇತ. ತಂದೆ ಬಂಗಾರಪ್ಪಾಜಿಯವರ ಕನಸು ಸಾಕಾರಗೊಳಿಸಲು ಸಿಕ್ಕ ಅವಕಾಶ. ಹೌದು, ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪ ಅವರು ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಶಿಕ್ಷಣ ಮಾತ್ರ ಬಡವರ ಬದುಕನ್ನು ಬದಬಾಯಿಸುವ ಮಂತ್ರ ಎಂದು ನಂಬಿದ್ದರು. ಅದಕ್ಕಾಗಿಯೇ ʼಅಕ್ಷರ ತುಂಗಾʼ ಎನ್ನುವ ಯೋಜನೆಗೆ ಜಾರಿಗೆ ತಂದಿದ್ದರು. ಅಕ್ಷರ ಕಲಿಯದ ಜನರು ಕೂಡ ಅಕ್ಷರ ಕಲಿಯಲ್ಲಿ ಎನ್ನುವುದು ಆ ಯೋಜನೆಯ ಉದ್ದೇಶವಾಗಿತ್ತು. ಅಷ್ಟು ಮಾತ್ರವಲ್ಲದೆ, ಮಕ್ಕಳು ಅಪ್ಪ ಅಮ್ಮನೊಂದಿಗೆ ಕೂಲಿ ನಾಲಿಗೆ ಹೋಗದೇ ʼಸಾಲಿಗುಡಿʼಗೆ ಬರಲಿ ಎಂದು ಶಾಲೆಯಲ್ಲಿ ಮಗುವಿನ ಹಾಜರಿ ಆಧರಿಸಿ, ದಿನಕ್ಕೊಂದು ರೂಪಾಯಿ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದಿದ್ದರು. ಮುಂದೆ ಬದಲಾದ ಸರ್ಕಾರಗಳ ಕಾಲಘಟ್ಟದಲ್ಲಿ ಈ ಎಲ್ಲಾ ಯೋಜನೆಗಳು ನಿಂತು ಹೋಗಿ, ಬಡವರ ಬಂಧು ಬಂಗಾರಪ್ಪನವರ ಆಶಯಗಳಿಗೆ ದಕ್ಕೆ ಆದಂತಾಗಿತ್ತು. ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ತಂದೆಯವರ ಆದರ್ಶಯುತ ಯೋಜನೆಗಳಿಗೆ ಮರು ಜೀವ ಸಲುವಾಗಿ ಸಿಕ್ಕ ಅವಕಾಶವಾಗಿತ್ತು ಶಿಕ್ಷಣ ಖಾತೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲೂ ಯಶಸ್ಚಿಯಾಗಿದ್ದಾರೆ ಮಧು ಬಂಗಾರಪ್ಪ.

ಕಳೆದ ಈ ಎರಡೂವರೆ ವರ್ಷಗಳಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗಿದ್ದೇ ಇದಕ್ಕೆ ಸಾಕ್ಷಿ. ಫಲಿತಾಂಶ ಗುಣಮಟ್ಟ ಸುಧಾರಣೆಗೆ ಜಾರಿಗೆ ಮೂರು ಹಂತದ ಪರೀಕ್ಷಾ ಪದ್ದತಿ, ಕಲಿಕೆಯಲ್ಲಿ ಜಾರಿಗೆ ಬಂದ ಕಟ್ಟುನಿಟ್ಟಿನ ಪದ್ದತಿಗಳು, ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳಾದ ಮೂರು ಪರೀಕ್ಷಾ ಪದ್ಧತಿ’, ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ ಕಾಸ್ಟಿಂಗ್‌ ಅಳವಡಿಕೆ ಹಾಗೂ ಎಸ್‌ ಎಸ್‌ ಎಲ್‌ ಸಿ ಮತ್ತು ದ್ವೀತಿಯ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ. ೩೫ ರಿಂದ ಶೇ. ೩೩ಕ್ಕೆ ಇಳಿಸಿರುವುದು ಇಳಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ. ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಅರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಕೆಪಿಎಸ್‌ ಶಾಲೆಗಳನ್ನು ಆರಂಭಿಸಿರುವುದು ರಾಜ್ಯದ ಶಿಕ್ಷಣ ಇಲಾಖೆ ಇತಿಹಾಸದಲ್ಲಿಯೇ ಮಹತ್ತರ ಮೈಲಗಲ್ಲು. ಅದರ ಹೆಗ್ಗಳಿಕೆ ಸಚಿವ ಮಧು ಬಂಗಾರಪ್ಪ ಅವರದ್ದು.

ಬಾಕ್ಸ್‌
ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಪಾತ್ರವೂ ಮಹತ್ವದ್ದು. ಹೀಗಾಗಿ ಮಧು ಬಂಗಾರಪ್ಪ ಅವರು ಇಲಾಖೆಯ ಚುಕ್ಕಾಣಿ ಹಿಡಿದ ಎರಡೇ ವರ್ಷಗಳಲ್ಲಿ ೩5 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೂ ಕ್ರಮ ವಹಿಸಿದ್ದಾರೆ. ಇಲಾಖೆಯ ದೈನಂದಿನ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಲಕ್ಷಕ ಸಮೂಹವನ್ನು ಉತ್ತರದಾಯಿತ್ತಗೊಳಿಸಿ ಅವರನ್ನೂ ಪ್ರೇರಿಪಿಸಲು ನಿರಂತರ ತರಬೇತಿ ಕಾರ್ಯಕ್ರಮ, ಡಿಜಿಟಲ್‌ ತಂತ್ರಜ್ಞಾನದ ಅಳವಡಿಕೆ, ದಶಕಗಳಿಂದ ಉಳಿದಿದ್ದ ಅವರ ಸಮಸ್ಯೆಗಳ ಪರಿಹಾರಕ್ಕೂ ಒತ್ತು ನೀಡಿರುವುದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈವರೆಗಿನ ಕಾರ್ಯವೈಖರಿಯ ವಿಶೇಷ. ಮೊಟ್ಟ ಮೊದಲ ಬಾರಿಗೆ ಸಚಿವರಾಗಿಯೂ ಶಾಲಾ ಶಿಕ್ಷಣ ಇಲಾಖೆಯಂತಹ ಬಹುದೊಡ್ಡ ಖಾತೆಯಲ್ಲಿ ಇಷ್ಠೆಲ್ಲ ಕ್ರಾಂತಿಕಾರಕ ಬದಲಾವಣೆ ತರುವುದಕ್ಕೆ ತಮಗೆ ಹೇಗೆ ಸಾಧ್ಯವಾಯಿತು ಎನ್ನುವ ಮಾತಿಗೆ ಸಚಿವ ಮಧು ಬಂಗಾರಪ್ಪ ನೀಡುವ ಉತ್ತರ ವೇನು ಗೊತ್ತಾʼ:?, ಬಂಗಾರಪ್ಪಾಜಿಯವರ ಆದರ್ಶ, ಅವರ ಜನಪರ ಕಾಳಜಿಯ ಸ್ಪೂರ್ತಿ.