*ರಾಜ್ಯದಲ್ಲಿ 15.12 ಲಕ್ಷ BPL ಕಾರ್ಡ್ ಗಳಿಗೆ ಶಾಕ್* *5,632 ಕಾರ್ಡ್‌ಗಳು ಶಾಶ್ವತವಾಗಿ ರದ್ದು*

*ರಾಜ್ಯದಲ್ಲಿ 15.12 ಲಕ್ಷ BPL ಕಾರ್ಡ್ ಗಳಿಗೆ ಶಾಕ್*

*5,632 ಕಾರ್ಡ್‌ಗಳು ಶಾಶ್ವತವಾಗಿ ರದ್ದು*

ರಾಜ್ಯದಲ್ಲಿ ಅನರ್ಹ BPL ಕಾರ್ಡ್‌ದಾರರ ವಿರುದ್ಧ ಸರ್ಕಾರ ಸಮರ ಸಾರಿದೆ. ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಆಘಾತ ನೀಡಲಾಗಿದ್ದು, 5,632 ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು BPLನಿಂದ APLಗೆ ಪರಿವರ್ತಿಸಲಾಗಿದೆ.

23 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ತಾತ್ಕಾಲಿಕವಾಗಿ ರದ್ದುಗೊಂಡಿರೋದು ಫಲಾನುಭವಿಗಳ ನಿದ್ದೆಗೆಡಿಸಿದೆ.

*ಕಳೆದ 5 ತಿಂಗಳ ಕಾರ್ಯಾಚರಣೆ ಹೇಗಿದೆ?*

ಬಿಪಿಎಲ್​​ನಿಂದ ಎಪಿಎಲ್​​ಗೆ ಪರಿವರ್ತನೆಗೊಂಡ ಕಾರ್ಡ್​​ಗಳು – 4.09 ಲಕ್ಷ (14,68,540 ಭಾದಿತರು).

ರದ್ದಾಗಿರುವ ಬಿಪಿಎಲ್ ಕಾರ್ಡ್​​ಗಳು – 5,632 (9,826 ಭಾದಿತರು).

ತಾತ್ಕಾಲಿಕವಾಗಿ ಅಮಾನತ್ತಾದ BPL ಕಾರ್ಡ್​​ಗಳು- 23,068 (34,617 ಭಾದಿತರು)

ಮತ್ತೊಂದೆಡೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬದಲಾಗಿ ಅವು ಅನರ್ಹರ ಪಾಲಾಗುತ್ತಿದೆ ಎಂದು ಜನ ಸಾಮಾನ್ಯರಿಂದಲೂ ಆಕ್ರೋಶ ಕೇಳಿಬಂದಿದೆ. ಕಾರು, ಬಂಗಲೆ, ಜಮೀನು ಇರುವ ಮಂದಿಯೇ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ರದ್ದು ಮಾಡುವ ಕಾರ್ಯ ತೀವ್ರಗೊಳಿಸಬೇಕು. ಕಡು ಬಡವರು, ದುಡಿದು ತಿನ್ನುವ ಮಂದಿಗೆ ಬಿಪಿಎಲ್ ಕಾರ್ಡ್ ಸಿಗಬೇಕು. ಕಾರ್ಯಾಚರಣೆ ಹೆಸರಲ್ಲಿ ಬಡವರ ಕಾರ್ಡ್ ಕಿತ್ತುಕೊಳ್ಳದೆ, ಶ್ರೀಮಂತರಿಗೆ ಬಿಸಿ ಮುಟ್ಟಿಸಬೇಕು ಎಂದು ಆಹಾರ ಇಲಾಖೆಯನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಈ ಹಿಂದೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದ್ದ ಕಾರಣ ಬಿಪಿಎಲ್​​ ಕಾರ್ಡ್​​ ಹೊಂದಿರುವ ಅನೇಕ ಫಲಾನುಭವಿಗಳು ನಿಟ್ಟುಸಿರು ಬಿಟ್ಟಿದ್ದರು. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್​​ದಾರರ ಆದಾಯವನ್ನು 1.20ಲಕ್ಷ ರೂ.ಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ದೊರೆಯುತ್ತದೆ. ಇದರ ಆಧಾರದಲ್ಲಿ ಅವರ ಆದಾಯವೂ ವರ್ಷಕ್ಕೆ 1.80 ಲಕ್ಷ ರೂ. ಗಿಂತ ಅಧಿಕವಾಗುತ್ತಿದೆ.

ಹೀಗಾಗಿ ಈ ಬಗ್ಗೆ ಪರಿಷ್ಕರಣೆ ಕುರಿತು ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದ್ದ ಹಿನ್ನೆಲೆ ಮಿತಿಗಿಂತ ಅಧಿಕ ಆದಾಯ ಹೊಂದಿದ್ದು, ಬಿಪಿಎಲ್​​ ಕಾರ್ಡ್​​ ಪಡೆದುಕೊಂಡಿದ್ದವರಲ್ಲಿ ಹೊಸ ಆಶಾಭಾವನೆ ಮೂಡಿತ್ತು. ಆದರೆ ಸರ್ಕಾರದ ಈಗಿನ ನಿರ್ಧಾರ ಅಕ್ರಮವಾಗಿ ಬಿಬಿಎಲ್​​ ಕಾರ್ಡ್​​ ಹೊಂದಿರುವವರಿಗೆ ಉಳಿಗಾಲವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.