ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ

ಶಿವಮೊಗ್ಗ: ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಿಶಕ್ತಿ ವಂದನಾ ಅಧಿನಿಯಮ ಜಾರಿ ಆಗಬಾರದು ಎಂಬ ಉದ್ದೇಶವನ್ನೇ ಇಟ್ಟುಕೊಂಡು ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದರೂ ಕೂಡ ವಿಶೇಷ ಅಧಿವೇಶನ ಕರೆದು ಮಸೂದೆ ಸೋಲುವಂತೆ ಮಾಡಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ರಾಜಕೀಯ ಗೂಬೆ ಕೂರಿಸಿ ಈಗ ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ರಾಜಕೀಯ ಗಿಮಿಕ್ ಅಲ್ಲದೇ ಮತ್ತೇನೂ ಅಲ್ಲ ಎಂದು ತಿಳಿಸಿದ್ದಾರೆ.

2023ರಲ್ಲಿಯೇ ಈಗಾಗಲೇ ಮಸೂದೆ ಅಂಗೀಕಾರ ಪಡೆದು ರಾಷ್ಟ್ರಪತಿಗಳ ಅಂಕಿತ ಪಡೆದಿದ್ದರೂ ಕೂಡ ಅದನ್ನು ಗೆಜೆಟ್ ನೋಟಿಫಿಕೇಷನ್ ಮಾಡದೇ ಈಗ ಮತ್ತೊಮ್ಮೆ ಅದನ್ನು ಮಂಡಿಸುವ ಅವಶ್ಯಕತೆ ಇರಲಿಲ್ಲ. ಈಗಾಗಲೇ ಅಂಗೀಕಾರವಾಗಿರುವ ಮಸೂದೆಯನ್ನೇ ಜಾರಿಗೊಳಿಸಲಿ. ಇದರ ಜೊತೆಗೆ ಕ್ಷೇತ್ರ ಮರು ವಿಂಗಡಣೆಯ ಪ್ರಶ್ನೆ ಏಕೆ? ಈಗಿರುವ ಲೋಕಸಭೆಯ 543 ಸ್ಥಾನಗಳಿಗೆ ಶೇ. 33ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲು ಇವರಿಗೇನು ತೊಂದರೆ? ಆದರೆ ಅದನ್ನು ಬಿಟ್ಟು ಪಂಚ ರಾಜ್ಯ ಚುನಾವಣೆಯ ಈ ಸಂದರ್ಭದಲ್ಲಿಯೇ ಈ ಮೀಸಲಾತಿ ಮಂಡಿಸುವ ಮೊಂಡುತನ ಒಂದು ರೀತಿಯ ರಾಜಕೀಯ ಷಡ್ಯಂತ್ರ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಮಹಿಳೆಯರ ಬಗ್ಗೆ ಯಾವ ಗೌರವವೂ ಇಲ್ಲ. 1950ರಲ್ಲಿಯೇ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಂಡಿಸಿದ ಹಿಂದೂ ಕೋಡ್ ಬಿಲ್ ಅನ್ನು ತೀವ್ರವಾಗಿ ವಿರೋಧಿಸಿದವರು ಇದೇ ಬಿಜೆಪಿಯ ಸೈದ್ಧಾಂತಿಕ ಮೂಲವಾದ ಆರ್.ಎಸ್.ಎಸ್. ಮತ್ತು ಹಿಂದೂ ಮಹಾಸಭಾ ಎಂದು ನಮ್ಮ ಸಂಸದ ಬಿ.ವೈ. ರಾಘವೇಂದ್ರ ಮರೆಯಬಾರದು. ಅವರಿಗೆ ಇತಿಹಾಸ ಗೊತ್ತಿಲ್ಲ. ಗೊತ್ತಿದ್ದರೂ ಒಪ್ಪಿಕೊಳ್ಳುವ ಔದಾರ್ಯವಿಲ್ಲ. ಅವರಿಗೆ ಈ ಮಸೂದೆ ಸೋಲುತ್ತದೆ ಎಂದು ಗೊತ್ತಿದ್ದೇ ಅದಕ್ಕೂ ಮುಂಚೆ ಬಿಜೆಪಿ ಕಚೇರಿಯಲ್ಲಿ ಮಹಿಳೆಯರಿಂದ ಆರತಿ ಎತ್ತಿಸಿಕೊಂಡು ಹೋಗಿದ್ದು ಅವರ ಅತಿರೇಕದ ಜಾಣತನ ಎಂದು ಟೀಕಿಸಿದ್ದಾರೆ.

ಬಿಜೆಪಿಯವರ ನಾಟಕ ಸಾಕು, ಅವರಿಗೆ ಮಹಿಳೆಯರ ಮೇಲೆ ಯಾವ ಗೌರವವೂ ಇಲ್ಲ. ಮಹಿಳೆಯರು ರಾಜಕಾರಣಕ್ಕೆ ಬರುವುದು ಇಷ್ಟವೂ ಇಲ್ಲ. ಒಂದು ಪಕ್ಷ ಮಹಿಳಾ ಸಮಾನತೆಯ ಬಗ್ಗೆ ಅವರಿಗೆ ಗೌರವ ಇದ್ದಿದ್ದರೆ ಅವರ ಬಹುಮತದ ಆಡಳಿತದ ಕಾಲವೊಂದಿತ್ತು. ಆಗ ಯಾವ ಮಸೂದೆಯಾದರೂ ಕೂಡ ಅವರು ಪಾಸ್ ಮಾಡಬಹುದಿತ್ತು. ಆದರೆ ಏಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಸದರು ಈಗಿರುವ ಲೋಕಸಭಾ ಸ್ಥಾನಗಳಿಗೇ ಶೇ. 33ರಷ್ಟು ಮೀಸಲಾತಿ ನೀಡಲು ಪ್ರಯತ್ನಿಸಲಿ, ಚುನಾವಣೆ ಗೆಲ್ಲೋಕೆ, ರಾಜಕೀಯ ಗಿಮಿಕ್ ಗೆ ವಿರೋಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಈ ರೀತಿಯ ತಂತ್ರಗಳನ್ನು ಹೂಡಬಾರದು. ಇದು ರಾಜಕೀಯ ಕುತಂತ್ರವಲ್ಲದೇ ಮತ್ತೇನೂ ಅಲ್ಲ ಎಂದು ವೈ.ಹೆಚ್. ನಾಗರಾಜ್ ತಿಳಿಸಿದ್ದಾರೆ.