ಶಿವಮೊಗ್ಗ ಕ್ರೀಡಾ ಸಂಕೀರ್ಣದ ಈಜುಕೊಳ ವಿಚಾರ;ದೂರು ದಾಖಲು ಗುತ್ತಿಗೆ ನೌಕರರ ಮೇಲೆ ಹಲ್ಲೆ ಕ್ರಮಕ್ಕೆ ಮುಂದಾದ ಯುವಜನಾಧಿಕಾರಿ ರೇಖ್ಯಾನಾಯ್ಕ
ಶಿವಮೊಗ್ಗ ಕ್ರೀಡಾ ಸಂಕೀರ್ಣದ ಈಜುಕೊಳ ವಿಚಾರ;ದೂರು ದಾಖಲು
ಗುತ್ತಿಗೆ ನೌಕರರ ಮೇಲೆ ಹಲ್ಲೆ
ಕ್ರಮಕ್ಕೆ ಮುಂದಾದ ಯುವಜನಾಧಿಕಾರಿ ರೇಖ್ಯಾನಾಯ್ಕ

ಶಿವಮೊಗ್ಗ
ಸದ್ದು ಗದ್ದಲವಿಲ್ಲದೆ ಸೊಗಸಾಗಿ ನಡೆಯುತ್ತಿದ್ದ ಶಿವಮೊಗ್ಗ ಗೋಪಾಳದಲ್ಲಿರುವ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಕ್ರೀಡಾ ಸಂಕೀರ್ಣದಲ್ಲಿನ ಈಜುಕೊಳ ಹಾಗೂ ಅಲ್ಲಿನ ಕಲಿಕೆ ವಿಚಾರದ ಬಗ್ಗೆ ಹಲವರು ಇಲ್ಲಸಲ್ಲದ ಆರೋಪ ವ್ಯಕ್ತಪಡಿಸಿ, ಸದಸ್ಯತ್ವ ಪಡೆಯದಿದ್ದರೂ ತಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಒತ್ತಡ ಹೇರುವ ಜೊತೆಗೆ ಕ್ರೀಡಾಸಂಕೀರ್ಣದ ಈಜುಕೊಳದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ ಇಬ್ಬರೂ ಗುತ್ತಿಗೆ ನೌಕರರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಈಗ ಹೊಸ ತಿರುವು ಪಡೆದಿದೆ.
ನಿನ್ನೆ ಸಂಜೆ ಕ್ರೀಡಾ ಸಂಕೀರ್ಣದಲ್ಲಿ ಹಲವರು ನಾವು ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಅವರು ಎಂದು ಸರ್ಕಾರದ ಕ್ರೀಡಾ ಸಂಕೀರ್ಣ ನಮ್ಮದೇ ಎಂಬಂತೆ ವರ್ತಿಸುತ್ತಾ ಸದಸ್ಯತ್ವ ಶುಲ್ಕ ಕೇಳಿದ ಇಬ್ಬರು ಗುತ್ತಿಗೆ ನೌಕರರಾದ ಶಿವು ಹಾಗೂ ಸಚಿನ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಯುವಜನಾಧಿಕಾರಿ ರೇಖ್ಯಾ ನಾಯ್ಕ್ ರ ವಿರುದ್ಧ ಅಸಂಬದ್ಧವಾಗಿ ಮಾನಹಾನಿಯಾಗುವಂತೆ ಮಾತನಾಡಿದ್ದಾರೆ ಎಂಬುದು ಗಂಭೀರ ಆರೋಪ.
ಈ ಸಂಬಂಧ ಈಗ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಸಚಿನ್ ಹಾಗೂ ಶಿವು ಎಂಬುವರು ಹಲ್ಲೆ ನಡೆಸಿದ ಹಾಗೂ ಜೀವ ಭಯ ಉಂಟು ಮಾಡಿದ ಘಟನೆ ವಿರುದ್ಧ ದೂರು ನೀಡಿದ್ದಾರೆ.
ನಿನ್ನೆ ಸಂಜೆಯ ಘಟನೆ ಒಂದು ಹಂತಕ್ಕೆ ಬಂದು ದೂರಿನಲ್ಲಿ ಮುಕ್ತಾಯವಾಗುತ್ತದೆ ಎಂಬ ಹೊತ್ತಿನಲ್ಲಿ ಇಂದು ಬೆಳಗ್ಗೆಯೂ ಸಹ ಅದೇ ತಂಡ ಕ್ರೀಡಾ ಸಂಕೀರ್ಣದಲ್ಲಿ ಬಂದು ಗಲಾಟೆ ಮಾಡಿದೆ. ಈ ಸಮಯದಲ್ಲಿ ಸಕಾಲಕ್ಕೆ ಅಲ್ಲಿಗೆ ಆಗಮಿಸಿದ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ನಿರ್ದೇಶಕ ರೇಖ್ಯಾ ನಾಯ್ಕ್ ಅವರು ಈ ವರ್ತನೆಯನ್ನು ನೇರವಾಗಿ ಖಂಡಿಸಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ತಮ್ಮ ಮಕ್ಕಳ ಕಲಿಕೆಗೆ ನಾವು ಅಡ್ಡಿಪಡಿಸುವುದಿಲ್ಲ. ನಿಯಮದಂತೆ ನಿಗದಿತ ಶುಲ್ಕವನ್ನು ಪಾವತಿಸಿ ಸದಸ್ಯತ್ವವನ್ನು ಪಡೆಯಲು ನಾವು ಹೇಳುತ್ತಿದ್ದೇವೆ. ಕೇಳುವ ತಾಳ್ಮೆ ನಿಮಗಿಲ್ಲ ಎಂದರೆ ನಾವು ಹೇಗೆ ತಾನೇ ಈಜುಕಲಿಕೆಗೆ ಅವಕಾಶ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ಆದರೆ ಹಠಬಿಡದಂತೆ ಅಸಂಬದ್ಧವಾಗಿ ಮಾತನಾಡಿದ ಹಲವರನ್ನು ಹೊರಕಳಿಸುವಲ್ಲಿ ಯೋಜನಾಧಿಕಾರಿ ಯಶಸ್ವಿಯಾಗಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಹಾಗೂ ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಶಿವಮೊಗ್ಗದ ಈಜುಕೊಳದಲ್ಲಿ ರೂಪಿಸಿದ್ದ ಸರ್ಕಾರದ ಕ್ರೀಡಾ ಸಂಕೀರ್ಣದಲ್ಲಿ ಕೆಲವರು ಇಂತಹ ಕಿರಿಕಿರಿ ಮಾಡುವ ಮೂಲಕ ಅಲ್ಲಿನ ಮಕ್ಕಳಿಗೆ ಹಾಗೂ ಪೋಷಕರಿಗೆ ಬಹಳಷ್ಟು ಬೇಸರವನ್ನು ಹುಟ್ಟುಹಾಕಿದ್ದಾರೆ.
ಯಾವುದೋ ನಾಲ್ಕೈದು ಜನ ಇಡೀ ವ್ಯವಸ್ಥೆಯನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು, ಅನಧಿಕೃತವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಿಚಾರಣೆ ನಡೆಯಬೇಕಿದೆ.
ಕಳೆದ ಎರಡು ತಿಂಗಳ ಹಿಂದೆ ಕ್ರೀಡಾ ಸಂಕೀರ್ಣದಲ್ಲಿ ಈಜು ತರಬೇತಿ ನೀಡುತ್ತಿದ್ದ ಸಂಗಮೇಶ ಹಾಗೂ ರಮೇಶ್ ಎಂಬುವರ ವಿರುದ್ಧ ಅತಿಯಾದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ಹಲವು ಪ್ರಕರಣ ಅವರ ಮೇಲೆ ದಾಖಲಾದ ಹಿನ್ನೆಲೆಯಲ್ಲಿ ಅವರನ್ನು ಯುವಜನಾಧಿಕಾರಿ ಸೂಚನೆಯಂತೆ ಗುತ್ತಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುವ ಎಂಪ್ಲಾಯ್ಮೆಂಟ್ ಬ್ಯೂರೋ ಕೆಲಸದಿಂದ ತೆಗೆದುಹಾಕಿತ್ತು. ಅಂದಿನಿಂದ ಇಂತಹ ರಗಳೆಯನ್ನು ಹಲವರು ಪದೇಪದೇ ಮಾಡುತ್ತಾ ಶಾಂತವಾಗಿದ್ದ ಕ್ರೀಡಾ ಸಂಕೀರ್ಣದಲ್ಲಿ ಅಶಾಂತಿಯ ಬೀಜ ಬಿತ್ತುತ್ತಿದ್ದಾರೆ ಎಂಬುದು ಬಹಳಷ್ಟುಈಜು ಪಟುಗಳು ಹಾಗೂ ಅವರ ಪೋಷಕರ ಅಭಿಪ್ರಾಯ.
ಈಗ ಬೇಸಿಗೆ ಶಿಬಿರದ ಪ್ರಯುಕ್ತ ನೂರಾರು ಮಕ್ಕಳು ಅತ್ಯಂತ ಉತ್ತಮ ತರಬೇತುದಾರದಿಂದ ಈಜು ಕಲಿಯುತ್ತಿದ್ದು ಅವರ ಕಲಿಕೆಗೆ ಕೆಲವರ ಈ ವರ್ತನೆ ತೊಂದರೆ ನೀಡುತ್ತಿದೆ. ಈಗಾಗಲೇ ಯುವಜನಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.


