ರಾಹುಲ್-ಸಿಎಂ ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ? ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಬ್ಲಾಕ್: ಕಾಂಗ್ರೆಸ್ ಗಂಭೀರ ಆರೋಪ!
ರಾಹುಲ್-ಸಿಎಂ ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ? ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಬ್ಲಾಕ್: ಕಾಂಗ್ರೆಸ್ ಗಂಭೀರ ಆರೋಪ!
ನವದೆಹಲಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸ್ನೇಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಹೊಸ ವಿವಾದವೊಂದು ಭುಗಿಲೆದ್ದಿದೆ. ಈ ಇಬ್ಬರು ನಾಯಕರ ಜನಪ್ರಿಯ ರೀಲ್ಸ್ ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಬ್ಲಾಕ್ ಮಾಡಿದ್ದು, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.
ಏನಿದು ವಿವಾದ?
ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದ ಕ್ಷಣಗಳನ್ನು ರಾಹುಲ್ ಗಾಂಧಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ದಾಖಲೆ ಮಟ್ಟದ ವೀಕ್ಷಣೆಗಳನ್ನು ಗಳಿಸಿತ್ತು.
ಆದರೆ, ಇದ್ದಕ್ಕಿದ್ದಂತೆ ಈ ರೀಲ್ಸ್ ಮತ್ತು ಫೋಟೋಗಳು ಬಳಕೆದಾರರಿಗೆ ಕಾಣಿಸದಂತೆ “ಬ್ಲಾಕ್” ಆಗಿವೆ. ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ (MeitY) ಕಠಿಣ ನಿಯಮಗಳನ್ನು ಮುಂದಿಟ್ಟುಕೊಂಡು ಇನ್‌ಸ್ಟಾಗ್ರಾಮ್ ಈ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ದಾಖಲೆ ಬರೆದಿದ್ದ ವೈರಲ್ ವಿಡಿಯೋ:
ಕಾಂಗ್ರೆಸ್ ನಾಯಕ ಶ್ರೀವತ್ಸ ಈ ಬಗ್ಗೆ ಎಕ್ಸ್ (X) ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ರಾಹುಲ್ ಗಾಂಧಿ ಮತ್ತು ಸಿಎಂ ವಿಜಯ್ ಅವರ ಭೇಟಿಯ ವಿಡಿಯೋ ಕೇವಲ ಒಂದು ಗಂಟೆಯಲ್ಲಿ 12 ಮಿಲಿಯನ್ ವೀಕ್ಷಣೆ ಪಡೆದಿತ್ತು. ಮತ್ತೊಂದು ಪೋಸ್ಟ್ ಸುಮಾರು 46 ಮಿಲಿಯನ್ ಜನರನ್ನು ತಲುಪಿತ್ತು. ಈ ಜೋಡಿಯ ಜನಪ್ರಿಯತೆಯನ್ನು ಕಂಡು ಕೇಂದ್ರ ಸರ್ಕಾರ ಹೆದರಿದೆ, ಅದಕ್ಕಾಗಿಯೇ ಪೋಸ್ಟ್‌ಗಳನ್ನು ಬ್ಲಾಕ್ ಮಾಡಿಸಲಾಗಿದೆ,” ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಸ್ಪಷ್ಟನೆ ಏನು?
ಕಾಂಗ್ರೆಸ್‌ನ ಈ ಆರೋಪಗಳನ್ನು ಕೇಂದ್ರ ಸರ್ಕಾರದ ಮೂಲಗಳು ಬಲವಾಗಿ ನಿರಾಕರಿಸಿವೆ. “ಯಾವುದೇ ಪೋಸ್ಟ್ ಬ್ಲಾಕ್ ಮಾಡುವಂತೆ ಸರ್ಕಾರ ಸೂಚನೆ ನೀಡಿಲ್ಲ. ಇದು ತಾಂತ್ರಿಕ ಕಾರಣ ಅಥವಾ ಇನ್‌ಸ್ಟಾಗ್ರಾಮ್‌ನ ಆಂತರಿಕ ನಿಯಮಗಳ (ಹಕ್ಕುಸ್ವಾಮ್ಯ ಅಥವಾ ಕಮ್ಯುನಿಟಿ ಗೈಡ್‌ಲೈನ್ಸ್) ಕಾರಣದಿಂದ ಆಗಿರಬಹುದು,” ಎಂದು ಸ್ಪಷ್ಟಪಡಿಸಿವೆ.
ಸಾರ್ವಜನಿಕ ವಲಯದಲ್ಲಿ ಚರ್ಚೆ:
ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ದ್ವೇಷಕ್ಕಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆಯೇ ಅಥವಾ ಇದು ಕೇವಲ ತಾಂತ್ರಿಕ ದೋಷವೇ ಎಂಬ ಪ್ರಶ್ನೆ ಈಗ ಮೂಡಿದೆ. ಸದ್ಯಕ್ಕೆ ವಿಜಯ್ ಮತ್ತು ರಾಹುಲ್ ಗಾಂಧಿ ಅವರ ಈ ‘ಕ್ರೇಜ್’ ಮಾತ್ರ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿರುವುದಂತೂ ಸುಳ್ಳಲ್ಲ.


