ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಲಿ; ಆರ್. ಮೋಹನ್*

*ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಲಿ; ಆರ್. ಮೋಹನ್*

ಶಿವಮೊಗ್ಗ: ಹಿರಿಯ, ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ದ ಮಾತನಾಡುವಾಗ ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ವಹಿಸಬೇಕು. ದೊಡ್ಡವರನ್ನು ಟೀಕಿಸಿದ ಮಾತ್ರಕ್ಕೆ ತಾನು ದೊಡ್ಡವನಾಗುತ್ತೇನೆ ಎಂಬ ಭ್ರಮೆ ಬಿಡಬೇಕು. ಇಲ್ಲದಿದ್ದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಕಿಡಿ ಕಾರಿದ್ದಾರೆ.

ಸತತ ಮೂರು ಚುನಾವಣೆಗಳಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್ ಸೋಲಿನ ಸರದಾರರೆಂದೇ ಕುಖ್ಯಾತರಾಗಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿನ್ನೂ ಅಂಬೆಗಾಲಿಡುತ್ತಿದ್ದಾರೆ. ಡಿಕೆಶಿ ಅವರ ಬಗ್ಗೆ ಮಾತನಾಡಲು ರಾಜಕೀಯ ಅನುಭವ ಇರಬೇಕು. ನನಗೂ ಮಾತನಾಡಲು ಬರುತ್ತದೆ ಎಂದು ಹಿರಿಯರ ಬಗ್ಗೆ ಎಲ್ಲಿ ಬೇಕೋ ಅಲ್ಲಿ, ಹೇಗೆ ಬೇಕೋ ಹಾಗೆ ಬಾಯಿ ಚಪಲಕ್ಕೆ ಮಾತನಾಡುವುದಲ್ಲ. ಅದಕ್ಕೂ ಯೋಗ್ಯತೆ ಇರಬೇಕು.

ಕಳೆದ 45 ವರ್ಷದಿಂದ ರಾಜ್ಯದಲ್ಲಿರುವ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಮಾಡುವ ಮುನ್ನ ನೀವು ಹಾಲಿಯಾಗಿ. 1988ರಿಂದ ಡಿ.ಕೆ. ಶಿವಕುಮಾರ್ ಅವರು ರಾಜಕೀಯದಲ್ಲಿದ್ದಾರೆ ಜಿಪಂ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರಲ್ಲಿನ ರಾಜಕೀಯ ಅನುಭವಕ್ಕೆ ಗೌರವ ಕೊಡಬೇಕು. ನಿಖಿಲ್ ಕುಮಾರಸ್ವಾಮಿಯವರಿಗೆ ರಾಜಕೀಯದಲ್ಲಿ ಅನುಭವ ಕಡಿಮೆ. ಕುಮಾರಸ್ವಾಮಿ ಹೆಸರೇ ಅವರಿಗೆ ಬಲ. ಮಾಜಿ ಮುಖ್ಯಮಂತ್ರಿ ಮಗ ಹಾಗೂ ಮಾಜಿ ಪ್ರಧಾನಿಯ ಮೊಮ್ಮಗ ಎಂಬುದನ್ನು ಬಿಟ್ಟರೆ ನಿಮ್ಮ ಸಾಧನೆ ಏನು ಎಂಬುದನ್ನು ತಿಳಿಸಿ. ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ನಿಮ್ಮ ಸಾಮರ್ಥ್ಯ ಸಾಬೀತು ಪಡಿಸಿ.

ನನ್ನಂತಹ ಸಾಮಾನ್ಯ ಕಾರ್ಯಕರ್ತರನ್ನು ಸಹ ಎಂಎಲ್‌ಎ ಮಾಡುವ ಶಕ್ತಿ, ಸಾಮರ್ಥ್ಯ ಡಿಕೆಶಿ ಅವರಿಗಿದೆ. ಅವರ ಸದೃಢ ನಾಯಕತ್ವ, ಕಾರ್ಯ ವೈಖರಿಯ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ.

ಗೃಹಲಕ್ಷಿö್ಮ ಯೋಜನೆ ಲಕ್ಷಾಂತರ ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗಿದೆ. ಹಣ ಪಾವತಿಯಲ್ಲಿ ವಿಳಂಬವಾಗುತ್ತಿರಬಹುದೇ ಹೊರತು ಕೊಟ್ಟ ಮಾತಿನಂತೆ ಹಣ ನೀಡುವುದು ನಿಂತಿಲ್ಲ. ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಸಚಿವರಾದ ನಂತರ ಉಕ್ಕು ಮತ್ತು ಕಬ್ಬಿಣದ ಬೆಲೆ ಶೇ. 20ರಷ್ಟು ಹೆಚ್ಚಳವಾಗಿದೆ. ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನರಾರಂಭಿಸುವುದಾಗಿ ಹೇಳುತ್ತಾ ಕಲರ್, ಕಲರ್ ಕಾಗೆ ಹಾರಿಸುತ್ತಿದ್ದಾರೆ.

ತಂದೆ- ಮಗನಿಗೆ ಡಿಕೆಶಿ ದುಸ್ವಪ್ನವಾಗಿದ್ದಾರೆ. ಆದ್ದರಿಂದಲೇ ಮನ ಬಂದಂತೆ ಮಾತನಾಡುತ್ತಿದ್ದಾರೆ. ಇವರು ಇನ್ನಾದರೂ ತಮ್ಮ ನಡೆ- ನುಡಿ ಬದಲಿಸಿಕೊಳ್ಳಲಿ ಎಂದು ಆರ್. ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.