ಶಿವ’ನ ಸಂಗಡ ‘ಆಪ್ತ’ಮಾತು;- ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ…

ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಮನಸಿನ ಜಾಗರಣೆಯೂ ಮುಖ್ಯ ಎಂಬುದನ್ನು ಹೇಳುತ್ತಾ…ಈ ಲೇಖನ ಓದಿರೆಂಬ ಮನವಿ

 

ಶಿವ’ನ ಸಂಗಡ ‘ಆಪ್ತ’ಮಾತು

ಪ್ರಿಯ ಗೆಳೆಯ ‘ಶಿವ’ ನಿನ್ನೊಂದಿಗೆ ಮನಬಿಚ್ಚಿ ಮಾತಾಡ ಬೇಕು ಎಂದು ಬಹಳ ದಿನದಿಂದ ಅಂದುಕೊಂಡಿದ್ದೆ. ಆದರೆ, ನಿನಗೂ ಕೆಲಸ, ನನಗೂ ಒತ್ತಡ. ನಿನಗೆ ಇಡೀ ಲೋಕವನ್ನೇ ಕಾಯುವ ಕೆಲಸವಾದರೆ, ನನಗೆ ನನ್ನನ್ನೇ ಕಾಪಾಡಿಕೊಳ್ಳುವ ಮತ್ತು ಮನೆಯವರನ್ನೆಲ್ಲಾ ಕಾಪಾಡುವ ಹೊಣೆ. ಹಾಗಾಗಿ, ನನ್ನ ಕೆಲಸ ನನಗಾದರೆ, ನಿನ್ನ ಕೆಲಸ ನಿನಗೆ. ನಮ್ಮ ನಮ್ಮ ಕಾಯಕಗಳ ನಡುವೆ ನಾವು ಮನಬಿಚ್ಚಿ ಮಾತಾಡಲು ಆಗಿಲ್ಲ. ನೀನು ಅದೇಕೋ ದೇವರು ಎಂದು ಹೇಳಲು ನನಗಿಷ್ಟವಿಲ್ಲ. ಇವತ್ತು ಶಿವರಾತ್ರಿ. ನೀನೂ ಬಿಡುವು ಮಾಡಿಕೊಂಡಿದ್ದೀಯಾ, ನಾನೂ ಕೂಡ ಬಿಡುವು ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಹಾಗಾಗಿ, ನಮ್ಮ ನಮ್ಮ ಕಷ್ಟಸುಖಗಳ ಬಗ್ಗೆ ಒಂದಿಷ್ಟು ಮಾತಾಡೋಣ.
ಅದಕ್ಕೂ ಮೊದಲು ನೀನು ನನಗೇಕೆ ಇಷ್ಟವಾದೆ? ನಿನ್ನ ಗೆಳೆತನವನ್ನು ನಾನೇಕೆ ಬಯಸಿದೆ? ಎಂದು ಹೇಳಿಬಿಡುತ್ತೇನೆ. ನಾನು ಹೇಳುವುದು ಖಂಡಿತಾ ಮುಖ ಸ್ತುತಿಯಲ್ಲ. ನಿನ್ನ ಸರಳತೆ, ಆಡಂಬರವಿಲ್ಲದ ಬದುಕು, ಒಡವೆಗಳಿಲ್ಲದ ಮೈ, ಅರಮನೆ ಯಿಲ್ಲದ ವಾಸ, ಇವೆಲ್ಲವೂ ನನಗೆ ತುಂಬಾ ಇಷ್ಟ. ನೀನು ಶ್ರಮ ಸಂಸ್ಕøತಿಯ ಸಂಕೇತ. ನಿನ್ನ ವಾಹನ ನಂದಿ. ಅದು ನಮ್ಮ ಗ್ರಾಮೀಣ ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಬಸವ. ಈ ಶ್ರಮಸಂಸ್ಕøತಿಯಲ್ಲಿ ಎಲ್ಲಾ ವರ್ಗದ ಜನರು ಇದ್ದಾರೆ. ಹಾಗಾಗಿ, ನೀನು ಸರ್ವಮಯ. ನಿನ್ನ ಬಗ್ಗೆ ಪ್ರೀತಿ ಹೆಚ್ಚಾಗಲು ಇದೂ ಒಂದು ಕಾರಣ.
ನಿನ್ನ ವಾಸಸ್ಥಾನ ಸ್ಮಶಾನ. ವಿಷ್ಣುವನ್ನು ನೋಡು, ಆತ ಅರಮನೆಯಲ್ಲಿ ಹೇಗೆ ಆಡಂಬರದಿಂದ ಮಲಗುತ್ತಾನೆ. ಅವನ ಮೈಮೇಲಿನ ಒಡವೆಗಳನ್ನು ನೋಡಿದರೆ ಕಿತ್ತುಕೊಂಡು ಬಿಡಬೇಕೆನಿಸುತ್ತದೆ. ಅದರಲ್ಲೂ ಈಗ ಬಂಗಾರದ ರೇಟು ಅವನ ಹತ್ತಿರಕ್ಕೇ ಹೋಗಿದೆ. ಅಲ್ಲದೇ, ಆತ ತನ್ನ ಹೆಂಡತಿಯನ್ನು ಸೇವಕಿಯಂತೆ ನೋಡಿಕೊಂಡು, ಕಾಲು ಒತ್ತಿಸಿಕೊಳ್ಳು ತ್ತಲೋ, ತಲೆ ಒತ್ತಿಸಿಕೊಳ್ಳುತ್ತಲೋ ಇರುತ್ತಾನೆ. ಆದರೆ ನಿನಗೆ ಇಬ್ಬರು ಹೆಂಡಿರು ಇದ್ದರೂ ಇಬ್ಬರಿಗೂ ಸರಿಯಾದ ಸ್ಥಾನಕೊಟ್ಟಿದ್ದೀಯ. ಗಂಗೆಯನ್ನು ತಲೆಯಲ್ಲಿ ಧರಿಸಿದ್ದೀಯಾ. ಪಾರ್ವತಿಯನ್ನು ತೊಡೆಯಮೇಲೆ ಕೂರಿಸಿಕೊಂಡಿ ದ್ದೀಯಾ. ನನಗಂತೂ ನೀನು ಅವರಿಂದ ಸೇವೆಮಾಡಿಸಿಕೊಂಡೆ ಎಂದು ಅನಿಸುವುದಿಲ್ಲ. ನಿನ್ನ ಅರ್ಧನಾರೀಶ್ವರ ಕಲ್ಪನೆಯೇ ಮಹಿಳೆಯರಿಗೆ ಸ್ಥಾನಮಾನ ಕೊಡುವಂತಿದೆ. ಹೀಗಾಗಿ, ನನಗೆ ಬಹಳ ಇಷ್ಟ. ಈ ದೇಶದಲ್ಲಿ ಎಷ್ಟೊಂದು ಜನರಿಗೆ ಅರಮನೆಯಿಲ್ಲ. ಹೋಗಲಿ, ಮನೆಯೂ ಇಲ್ಲ. ಅದೆಷ್ಟೋ ಜನ ನಿನ್ನಂತೆ ಸ್ಮಶಾನದಲ್ಲಿ ವಾಸಿಸುತ್ತಿದ್ದಾರೆ. ಅವರೆಲ್ಲರ ಪ್ರತೀಕವಾಗಿ ನೀನು ಸ್ಮಶಾನವಾಸಿ ಯಾಗಿರುವುದು ನಿನ್ನ ಬಗ್ಗೆ ನನಗೆ ಹೆಮ್ಮೆ ಮೂಡಿಸುತ್ತದೆ.
ಓ ನೀಲಕಂಠನೇ, ವಿಷವನ್ನೇ ನುಂಗಿ ಗಂಟಲಲ್ಲಿಟ್ಟುಕೊಂಡು ಲೋಕವನ್ನು ಕಾಪಾಡಿದ ಕರುಣಾಕರ ನೀನು. ಜಗತ್ತೇ ಲಯವಾಗಬಹು ದೆಂದುಕೊಂಡು ವಿಷವನ್ನು ಕುಡಿದೆಯಲ್ಲಾ, ಇಂತಹ ಜನರು ಎಲ್ಲಿ ಸಿಗುತ್ತಾರೆ ಹೇಳು? ಆದರೆ, ಈಗಿನ ಜನಪ್ರತಿನಿಧಿಗಳು ವಿಷ ಕುಡಿದೂ ಬದುಕುತ್ತಿದ್ದಾರೆ. ಇದೇ ನಿನಗೂ ಅವರಿಗೂ ಇರುವ ವ್ಯತ್ಯಾಸ. ಶಿವನೇ ನೀನು ನಮ್ಮ ನಡುವಿನ ರೂಪಕ ಮಾತ್ರ. ನೀನು ಮಾಂಸಹಾರಿಯಾಗುವುದು ನನಗೆ ತುಂಬಾ ಇಷ್ಟ. ಏಕೆಂದರೆ, ನಿನ್ನ ಹೆಸರು ಹೇಳಿಕೊಂಡು ನಿನ್ನ ಭಕ್ತರಾಗಿ ನಿನ್ನನ್ನೇ ಪೂಜಿಸುವ ಶೇ.75ರಷ್ಟು ಜನ ಇವತ್ತು ಮಾಂಸವನ್ನು ಪ್ರೀತಿಯಿಂದ ತಿನ್ನುತ್ತಾರೆ. ಅಷ್ಟೇಕೇ, ನನ್ನ ಮತ್ತೊಬ್ಬ ಗೆಳೆಯ ಬೇಡರ ಕಣ್ಣಪ್ಪ ಕೊಟ್ಟ ಮಾಂಸದ ಎಡೆಯನ್ನು ನೀನು ಪ್ರೀತಿಯಿಂದ ತಿನ್ನಲಿಲ್ಲವೇ? ಕೆಲವರು ಬೇಕಂತಲೇ ನಿನ್ನನ್ನು ಸಸ್ಯಹಾರಿಯನ್ನಾಗಿ ಮಾಡಿದ್ದಾರೆ. ಅದು ನನಗಿಷ್ಟವಿಲ್ಲ. ನೀನು ಶೂದ್ರರ ಸಂಕೇತ. ಹಾಗಾಗಿ ನನಗಿಷ್ಟ.
ಶಂಕರನೇ, ಇವತ್ತು ಶಿವರಾತ್ರಿ. ಬಹಳಷ್ಟು ಜನ ಉಪವಾಸವಿದ್ದು, ನಿನ್ನನ್ನು ಪೂಜಿಸುತ್ತಾರೆ. ಆದರೆ, ಅವರೆಲ್ಲಾ ಇವತ್ತೊಂದು ದಿನ ಮಾತ್ರ ಉಪವಾಸಮಾಡುತ್ತಾರೆ. ಆದರೆ, ಭಾರತದ ಈ ನೆಲದಲ್ಲಿ ಪ್ರತೀದಿನ ಉಪವಾಸವಿರುವ ಅದೆಷ್ಟೋ ಜನರಿದ್ದಾರೆ. ಬಹುಶಃ ಅದು ನಿನ್ನ ಹಣೆಗಣ್ಣಿಗೂ ಕಾಣದಿರಬಹುದೇನೋ. ಅಲ್ಲದೇ, ಉಪವಾಸದ ಕಲ್ಪನೆಯೇ ಈಗ ಬೇರೆಯಾಗಿದೆ ಎಂದು ನಿನಗನ್ನಿಸುತ್ತಿಲ್ಲವೇ? ನಿನ್ನ ಹೆಸರಲ್ಲಿ ಉಪವಾಸದ ಬದಲು ಅದಕ್ಕಿಂತ ಹೆಚ್ಚಾಗಿ ತಿನ್ನುವ ಜನ ನಾವು. ಹಾಗಾಗಿ, ಉಪವಾಸಕ್ಕೆ ಅರ್ಥ ಬರಬೇಕಾದರೆ ಈ ದೇಶದ ಎಲ್ಲರೂ ಊಟಮಾಡಬೇಕು.
ಓ ಗಜಚರ್ಮಾಂಬರ ಧಾರನೇ, ನೀನು ತೊಟ್ಟಿರುವ ಈ ಚರ್ಮದ ಬಟ್ಟೆಯೂ ನನಗಿಷ್ಟ. ಈ ದೇಶದಲ್ಲಿ ಉಳ್ಳವರು ಬೇಕಾದಷ್ಟು ಬಟ್ಟೆ ತೊಡುತ್ತಾರೆ. ಒಬ್ಬ ಚಲನಚಿತ್ರ ನಟಿ ಮದುವೆಯ ಸಂದರ್ಭದಲ್ಲಿ ಉಟ್ಟುಕೊಳ್ಳುವ ಸೀರೆಯ ಬೆಲೆ ಕೋಟಿಯಿರುತ್ತದೆ. ನಿನ್ನ ಪಾರ್ವತಿಗೆ ಎಂದಾದರೂ ಕೋಟಿ ರೂ.ಗಳ ಸೀರೆಯನ್ನು ತಂದುಕೊಟ್ಟಿರುವೆಯಾ? ನಿನಗೇ ಬಟ್ಟೆಯಿಲ್ಲ, ಇನ್ನೂ ಬೇರೆಯವರ ಪಾಡೇನು? ಹಾಗಾಗಿ, ಬೇರೆಯವರಿಗೆ ಬಟ್ಟೆಯಿಲ್ಲದ್ದನ್ನು ಕಂಡು ನೀನು ಗಜಚರ್ಮಾಂಬರಧರನಾಗಿದ್ದು ನನಗೆ ತುಂಬಾ ಇಷ್ಟ.
ಈಶ್ವರ ನಿನ್ನ ಕೊರಳಲ್ಲಿ ಯಾವಾಗಲೂ ನಾಗರಹಾವಿರುತ್ತೆ. ಹಾಗಾಗಿ, ಕೆಲವೊಮ್ಮೆ ಭಯವಾಗುತ್ತೆ. ಆ ನಾಗರಹಾವೋ ನಿನ್ನ ಕೊರಳಲ್ಲಿದ್ದಾಗ ಮಾತ್ರ ದರ್ಪದಿಂದಿರುತ್ತದೆ. ನನ್ನ ಮುಟ್ಟುವವರು ಯಾರೂ ಇಲ್ಲ ಎಂದು ಅಹಂಕಾರದಿಂದ ವರ್ತಿಸುತ್ತದೆ. ಆದರೆ, ಆ ಹಾವು ನಿನ್ನ ಕೊರಳಿನಿಂದ ಹೊರಬರಲಿ, ನಮ್ಮ ಜನ ಅದನ್ನು ಬಿಟ್ಟಾರೆಯೇ. ಈ ದೇಶದಲ್ಲಿ ನಾಗರಹಾವಿನಂತಹ ಜನ ಪ್ರಭುತ್ವದ ಕೊರಳಲ್ಲಿ ಸೇರಿಕೊಂಡು ಹೆಡೆಎತ್ತಿ ಶ್ರೀಸಾಮಾನ್ಯನನ್ನು ಹೆದರಿಸುತ್ತಲೇ ಇದ್ದಾರೆ.
ಈಶ್ವರ, ಬೇರೆ ದೇವರುಗಳನ್ನು ನಾನು ನೋಡಿದ್ದೇನೆ. ಆದರೆ, ಅವರ್ಯಾರೂ ನನ್ನ ಗೆಳೆಯರಾಗಿಲ್ಲ. ಏಕೆಂದರೆ, ನಾನೋ ಬಡವ, ಆ ದೇವರುಗಳೋ ಪೀತಾಂಬರಗಳನ್ನು, ವಜ್ರಾಭರಣಗಳನ್ನು ಹಾಕಿಕೊಂಡು ಮೆರೆಯುತ್ತಿರುವವರು. ಅವರೆಲ್ಲಾ ನಮ್ಮನ್ನು ಮಾತಾಡಿಸುತ್ತಾರೆಯೇ? ಗೆಳೆತನ ಬಯಸುತ್ತಾರೆಯೇ? ಆದರೆ, ನೀನೋ ನಮ್ಮಂತೆ ಸಾಮಾನ್ಯ. ಹಾಗಾಗಿ, ನೀನು ನನಗೆ ಗೆಳೆಯನಾದೆ. ಗೆಳೆಯನಾಗುವ ಎಲ್ಲಾ ಅರ್ಹತೆಗಳು ನಿನಗಿವೆ. ನಾನು ಏಕವಚನದಲ್ಲಿ ನಿನ್ನ ಮಾತನಾಡಿಸಿದೆ ಎಂಬ ಮನಸ್ಸು ಬೇಡ. ನಮ್ಮಿಬ್ಬರ ನಡುವೆ ಏಕವಚನವಿದ್ದರೆ ಅದು ಆತ್ಮೀಯತೆಯನ್ನು ಸೂಚಿಸುತ್ತದೆ. ನಮ್ಮ ಜಾನಪದರೇ ಹಾಗೆ. ದೇವರುಗಳನ್ನೆಲ್ಲಾ ಆತ್ಮೀಯರಂತೆ ಮಾತಾಡಿಸುತ್ತಾರೆ. ಅದೇ ಗುಣವೇ ನನಗೂ ಬಂದಿದೆ. ಹಾಗಾಗಿ ಬೇಜಾರುಪಟ್ಟುಕೊಳ್ಳಬೇಡ.
ನಿನ್ನ ಪೂಜೆ ಎಷ್ಟು ಸುಲಭ ನೋಡು. ಹೋಮ, ಹವನ ಮಾಡಬೇಕಾಗಿಲ್ಲ. ತುಪ್ಪವನ್ನು ಸುರಿಯಬೇಕಾಗಿಲ್ಲ. ಪುರೋಹಿತರೆಲ್ಲಾ ಸೇರಿ ಒಗ್ಗಟ್ಟಾಗಿ ತಾರಕದಲ್ಲಿ ಮಂತ್ರಹೇಳಬೇಕಾಗಿಲ್ಲ. ತುಂಬೆ ಹೂವೊಂದು ಸಾಕು ನಿನ್ನ ಪೂಜಿಸಲು. ನಿಜಕ್ಕೂ ನೀನು ಪುರೋಹಿತಶಾಹಿಗಳ ವಿರೋಧಿ. ಹೋಮ, ಹವನ ಖಂಡಿತಾ ನಿನಗಿಷ್ಟವಾಗುವುದಿಲ್ಲ. ಲಕ್ಷಾಂತರ ದೀಪಗಳನ್ನೂ ಹಚ್ಚಬೇಕೆಂದೇನೂ ಇಲ್ಲ. ಹಾಗಾಗಿ ನೀನು ನನಗಿಷ್ಟವಾಗುತ್ತೀಯಾ.
ನಿನ್ನ ಮಕ್ಕಳೋ ವಿಚಿತ್ರ. ಒಬ್ಬನಿಗೆ ಆರು ಮುಖ, ಮತ್ತೊಬ್ಬನಿಗೆ ಗಜಮುಖ. ನಿನ್ನ ಪರಿವಾರವೇ ಭೂತಗಣಗಳು. ಇದೆಲ್ಲಾ ನಮ್ಮ ಬದುಕಿನಲ್ಲಿರುವ ವಿರೋಧಭಾಸಗಳೇ ಎಂದುಕೊಳ್ಳುತ್ತೇನೆ. ಗಣಪತಿಯೋ ಬಹಳ ಬುದ್ದಿವಂತ. ಇನ್ನೂ ಪಾರ್ವತಕ್ಕನೋ ಇಡೀ ಜಗತ್ತೇ ಮೆಚ್ಚುವಂತಹ ಗುಣವಂತೆ. ಗಿರಿಜೆ, ಸಂಪನ್ನೇ. ಇತ್ತ ಗಂಗೆಯೋ ಇನ್ನೂ ಶೋಭಿತೆ. ನಿನ್ನ ಜಡೆಯಲ್ಲಿ ಆಶ್ರಯಪಡೆದವಳು. ಅದು ಏಕೋ ಗೊತ್ತಿಲ್ಲ, ಪಾರ್ವತಕ್ಕನಿಗಿಂತ ‘ಗಂಗಕ್ಕ’ ನನಗಿಷ್ಟವಾಗುತ್ತಾಳೆ. ಒಟ್ಟಾರೆ ನಿನ್ನ ಸಂಸಾರ ನಿಜಕ್ಕೂ ದೊಡ್ಡದುಕಣಯ್ಯ. ನಿನ್ನ ನೋಡಿ ನಾವೆಲ್ಲರೂ ಪಾಠ ಕಲಿಯಬೇಕು.
ಇವತ್ತು ಶಿವರಾತ್ರಿ. ನಿನ್ನ ಹೆಸರಲ್ಲಿ ನಮ್ಮ ಜನ ಜಾಗರಣೆ ಮಾಡುತ್ತಾರೆ. ಕೆಲವರು ಬಿಡಿ, ಭಜನೆಮಾಡುತ್ತಲೋ, ಸಿನಿಮಾಗಳನ್ನು ನೋಡುತ್ತಲೋ, ಕ್ರೀಡೆಗಳನ್ನು ಹಮ್ಮಿಕೊಂಡೋ ಜಾಗರಣೆ ಮಾಡುತ್ತಾರೆ. ಆದರೆ, ಇನ್ನು ಕೆಲವರಿದ್ದಾರೆ. ಇಸ್ಪೀಟ್ ಆಡುತ್ತಾ, ಕಂಡಕಂಡ ಕೇರಿಗಳನ್ನು ತಿರುಗುತ್ತಾ, ನಿನ್ನ ನೋಡಲು ಬರುತ್ತಾ, ಯುವತಿಯರಿಗೆ ಕಿರುಕುಳ ನೀಡುತ್ತಾ, ತೆಂಗಿನಮರ ಹತ್ತಿ ಎಳನೀರು ಕದಿಯುತ್ತಾ ಇಡೀ ರಾತ್ರಿ ಕಳೆಯುತ್ತಾರೆ. ನೀನು ಮಾತ್ರ ನನ್ನ ಹೆಸರಲ್ಲಿ ಮಾಡುವುದುತಾನೇ ಎಂದುಕೊಂಡು ಸುಮ್ಮನಿರುತ್ತೀಯಾ. ಇದು ನನಗಿಷ್ಟವಾಗುವುದಿಲ್ಲ.
ಸರಿ ಗೆಳೆಯಾ, ನೀನು ಏಕಿಷ್ಟವಾದೆ ಎಂದು ಕೆಲವು ಮಾತುಗಳಲ್ಲಿ ಹೇಳಿದೆಯಷ್ಟೇ. ಹೇಳುತ್ತಾ ಹೋದರೆ ನಿನ್ನೊಂದಿಗೆ ತುಂಬಾ ಮಾತಾಡಬೇಕೆನಿಸುತ್ತದೆ. ಆದರೆ, ಹೇಳಬೇಕಾದುದನ್ನೇ ಮರೆತುಬಿಡುವ ಅಪಾಯವಿದೆ. ಹಾಗಾಗಿ ಹೇಳಿಬಿಡುತ್ತೇನೆ ಕೇಳು, ನಿನಗೆ ಮೂರನೇ ಕಣ್ಣೊಂದಿದೆ. ಅದು ಹಣೆಗಣ್ಣು. ಅದುಬಿಟ್ಟರೆ ಜಗತ್ತಿನ ಅಪಾಯಗಳೆಲ್ಲಾ ಸುಟ್ಟುಹೋಗುತ್ತವೆ. ಈಗ ನೀನು ನಿನ್ನ ಹಣೆಗಣ್ಣನ್ನು ತೆರೆಯುವ ಕಾಲ ಹತ್ತಿರಬಂದಿದೆ. ಸುಮ್ಮನೇ ನೋಡು, ನಿನ್ನ ಜಗತ್ತಿನಲ್ಲಿ ಏನೆಲ್ಲಾ ಆಗುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿನ್ನ ರುದ್ರನರ್ತನಕ್ಕಿಂತಲೂ ಜೋರಾಗಿದೆ. ಅಸಹ್ಯವಾಗಿದೆ. ಜೊತೆಗೆ, ಕನ್ನಡದ ಸಂಕಟಗಳು ಹೆಚ್ಚಾಗುತ್ತಿವೆ. ತಾರತಮ್ಯಗಳು, ಭಾಷೆಗೆ ಬಂದಿರುವ ದುರ್ಗತಿ, ಇಂದಿನ ಶಿಕ್ಷಣ ಪದ್ಧತಿ ಇವೆಲ್ಲವೂ ನಿನ್ನ ಹಣೆಗಣ್ಣಿನ ನೋಟದಿಂದ ಬದಲಾಗಬೇಕಾಗಿದೆ. ಡಿನೋಟಿಫೈ ಹೆಸರಿನಲ್ಲಿ ಭೂಮಿಯನ್ನೇ ನುಂಗುವವರಿಗೆ ಪಾಠ ಕಲಿಸಬೇಕಾಗಿದೆ. ಭ್ರಷ್ಟರೆಲ್ಲಾ ನಿನ್ನ ಮೂರನೇ ಕಣ್ಣಿನ ನೋಟಕ್ಕೆ ಸುಟ್ಟುಹೋಗಬೇಕಾಗಿದೆ. ಮೌಢ್ಯ ಬೆಳೆಸುವವರೆಲ್ಲಾ ಮೂಲೆಸೇರಬೇಕಾಗಿದೆ. ಕೋಮುವಾದ, ಜಾತಿವಾದಗಳನ್ನು ಸಮಾಜದಲ್ಲಿ ಬೆಳೆಸುವವರನ್ನು ನಿನ್ನ ಹಣೆಗಣ್ಣಿನ ಕಿರಣಗಳು ಸುಡಬೇಕಾಗಿದೆ. ಹಗರಣಗಳನ್ನು ಮಾಡುವವರನ್ನೆಲ್ಲಾ ನಿನ್ನ ತ್ರಿಶೂಲದಿಂದ ತಿವಿಯಬೇಕಾಗಿದೆ. ಬಡಬಡಿಸುವ ಪ್ರಭುತ್ವದ ಜೊತೆ ಸೇರಿಕೊಂಡು ರಾಜಕೀಯ ಮಾಡುವ ಸಾಹಿತಿಗಳನ್ನು ನಿನ್ನ ಡಮರುಗದಿಂದ ಶಬ್ದಮಾಡಿ ಎಚ್ಚರಿಸಬೇಕಾಗಿದೆ. ನಿನ್ನ ಕಪಾಲದಿಂದ (ಭಿಕ್ಷಾಪಾತ್ರೆ) ಹಸಿವಿನ ಜನಕ್ಕೆ ಊಟಹಾಕಬೇಕಾಗಿದೆ. ಹಾಗೆಯೇ, ಬಡವರು, ಅಸಹಾಯಕರು, ಶೂದ್ರರು, ದಲಿತರು ನಿನ್ನ ಹಣೆಗಣ್ಣಿನಲ್ಲಿ ‘ಪ್ರಕಾಶಮಾನ’ವಾಗಿ ಕಾಣಿಸಬೇಕಾಗಿದೆ. ನಿನಗೂ ಮಂಕುಬೂದಿ ಎರಚಿಸುವವರ ವಿರುದ್ಧ ನೀನು ಎಚ್ಚರಿಕೆಯಿಂದಿರಬೇಕಾಗಿದೆ.
ಗೆಳೆಯಾ, ನಿನ್ನ ರೂಪವೇ ವೈರುಧ್ಯಗಳಿಗೆ ಸಾಕ್ಷಿಯಾಗಿವೆ. ನಿನ್ನ ಹೆಸರಿನಲ್ಲಿ ಸರ್ಕಾರ ಗಂಗಾಜಲವನ್ನು ಮುಜರಾಯಿ ದೇವಸ್ಥಾನಗಳ ಮೂಲಕ ತೀರ್ಥವೆಂದು ಹಂಚುವುದು ನನಗಿಷ್ಟವಿಲ್ಲ. ಏಕೆಂದರೆ, ಗಂಗಾನದಿ ನೀರು ಇವತ್ತು ಪವಿತ್ರವಾಗಿ ಉಳಿದಿಲ್ಲ. ನೀನು ಆಕೆಯನ್ನು ಜಡೆಯಲ್ಲಿ ಕಟ್ಟಿಕೊಂಡ ಮೇಲೆ ಅದು ಕಲುಷಿತದತ್ತ ಸಾಗಿದೆ. ಹಾಗಾಗಿ, ನಿನ್ನ ಮುಡಿಯಲ್ಲಿರುವ ಗಂಗೆಯನ್ನು ಕೆಲದಿನಗಳ ಕಾಲ ಹರಿಯಲು ಬಿಡು. ನೀನು ಸಮಾನತೆಯ ಸಂಕೇತ. ನೀನು ಮಂಗಳ. ಸಾಮಾಜಿಕ ಸಾಮರಸ್ಯದ ಮೂಲಕ ನಿನ್ನ ಪೂಜೆಯಾಗಬೇಕು. ನೀನು ಬದುಕನ್ನು ಪ್ರತಿನಿಧಿಸುತ್ತೀಯಾ, ಮನುಷ್ಯನನ್ನು ಪ್ರತಿನಿಧಿಸುತ್ತೀಯಾ. ನಿಜಕ್ಕೂ ಇವತ್ತಿನ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ರಾಜಕೀಯ ವಿಕೃತಗಳಿಗೆ ನಿನ್ನ ರುದ್ರನರ್ತನವಾಗಬೇಕು. ಆಗಮಾತ್ರ ಶಿವರಾತ್ರಿ ಆಚರಣೆಗೆ ಅರ್ಥಸಿಗಲು ಸಾಧ್ಯ. ಇವತ್ತು ಇಷ್ಟುಹೊತ್ತು ಆತ್ಮೀಯತೆಯಿಂದ ನನ್ನ ಮಾತು ಕೇಳಿದ್ದಕ್ಕೆ ಧನ್ಯವಾದಗಳು. ಮತ್ತೆ ಭೇಟಿಯಾಗೋಣ. ನಿನ್ನಿಂದ ಜಗತ್ತು ಮಂಗಳಕರವಾಗಲಿ. ನೀನು ಸತ್ಯ, ಸುಂದರ.