ಕೆಪಿಸಿಸಿ ಗದ್ದುಗೆಗೆ ಬಂದ ಮೊದಲ ಪ್ರಖರ ಚಿಂತಕ
—————————————————————–
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪರ್ವವೊಂದು ಆರಂಭವಾಗಲಿದೆ. ಇಂದಿರಾ ಗಾಂಧಿ ಕಾಲದಿಂದಲೂ ಪ್ರಶ್ನಾತೀತ ಮತ್ತು ಅಚಲ ನಿಷ್ಠೆಯಿಂದ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಬಿ.ಕೆ.ಹರಿಪ್ರಸಾದ್ ಈಗ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಅವರಿಗೆ ಈಗ ಎಪ್ಪತ್ತೊಂದು ವರ್ಷ. ಮುಂದೆ ಮುಖ್ಯಮಂತ್ರಿಯಾಗಬಹುದೆಂಬ ಆಸೆ, ನಿರೀಕ್ಷೆಗಳಿರುವುದು ಸಾಧ್ಯವೇ ಇಲ್ಲದಂಥ ವಾತಾವರಣದಲ್ಲಿ ಜವಾಬ್ದಾರಿಗೆ ಗೌರವದಿಂದ ಒಪ್ಪಿಕೊಂಡಿದ್ದಾರೆ.ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಹರಿಪ್ರಸಾದ್ ವ್ಯಕ್ತಿತ್ವಕ್ಕೆ ತಕ್ಕಂತೆ ಸಂಕಲ್ಪ ಸಮಾವೇಶ ಎಂದು ಅರ್ಥಪೂರ್ಣವಾಗಿ ಕರೆಯಲಾಗಿದೆ. ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯಾವುದೋ ನಿಗಮವೊಂದರ ಅಧ್ಯಕ್ಷರಾಗಿದ್ದು ಬಿಟ್ಟರೆ ಹರಿಪ್ರಸಾದ್ ಯಾವತ್ತೂ ಅಧಿಕಾರ ರಾಜಕಾರಣದಲ್ಲಿ ಇರಲೇ ಇಲ್ಲ. ಹಿಂದುಳಿದ ಬಿಲ್ಲವ ಜಾತಿಗೆ ಸೇರಿದ ಹರಿಪ್ರಸಾದ್ ದಕ್ಷಿಣ ಕನ್ನಡ ಮೂಲದವರಾದರೂ ಅವರ ಕರ್ಮಭೂಮಿ ಬೆಂಗಳೂರು. ಬೆಂಗಳೂರಿನಲ್ಲೇ ಓದಿ, ಬೆಳೆದು ಕಾಂಗ್ರೆಸ್ ಪಕ್ಷದತ್ತ ಆಕರ್ಷಿತರಾಗಿ ವಿದ್ಯಾರ್ಥಿಯಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಬಂದವರು ಅವರು. ಎಂಬತ್ತರ ದಶಕದ ಆರಂಭದಲ್ಲಿ ಗುಂಡೂರಾವ್ ಅಧಿಕಾರಾವಧಿಯಲ್ಲಿ ಎಫ್.ಎಂ.ಖಾನ್ ಪ್ರಭಾವ ಇದ್ದ ಸರ್ಕಾರ ಒಂದು ಕಡೆಯಾದರೆ ಇನ್ನೊಂದೆಡೆ ಪಕ್ಷದಲ್ಲಿ ಕೆ.ಜೆ.ಜಾರ್ಜ್ ಮತ್ತು ಬಿ.ಕೆ.ಹರಿಪ್ರಸಾದ್ ಜೋಡಿ ಎಂದರೆ ಯುವ ಕಾಂಗ್ರೆಸ್ ನ ಬಲ ಎನ್ನುವಂತಿತ್ತು. ಕಾಂಗ್ರೆಸ್ ಸೇವಾದಳ ತುಂಬ ಶಕ್ತಿಶಾಲಿಯಾಗಿದ್ದ ದಿನಗಳಲ್ಲಿ ಹರಿಪ್ರಸಾದ್ ಸಂಘಟನೆಯ ಚಾತುರ್ಯ ಹೆಚ್ಚು ಪ್ರಖರವಾಗಿ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ ಪಕ್ಷದ ತತ್ವಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದ ಹರಿಪ್ರಸಾದ್ ಸಹಜವಾಗಿಯೇ ಬೆರಳೆಣಿಕೆಯಷ್ಟು ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ಸರಳ ಮದುವೆಯನ್ನೂ ಆಗಿ ಅವರ ಚಿಂತನೆ ಏನೆಂಬುದನ್ನು ತೋರಿದ್ದರು.
ಕರ್ನಾಟಕದ ಬಹುತೇಕ ಕಡೆ ಒಕ್ಕಲಿಗ, ಲಿಂಗಾಯತ ಜಾತಿ ಬಲದ ಕ್ಷೇತ್ರಗಳು, ಬ್ರಾಹ್ಮಣರು ಮಾತ್ರ ಗೆಲ್ಲುವ ಅವಕಾಶ ಇರುವ ಒಂದೆರಡು ಕ್ಷೇತ್ರಗಳು,ಮುಸ್ಲಿಮರಷ್ಟೇ ಗೆಲ್ಲಬಹುದಾದಂಥ ಕ್ಷೇತ್ರಗಳು,ಪರಿಶಿಷ್ಠರ ಮೀಸಲು ಕ್ಷೇತ್ರಗಳು. ಜಾತಿ ಬಲ ಇಲ್ಲದ ಹರಿಪ್ರಸಾದ್ ಬೆಂಗಳೂರಿನಲ್ಲೊಂದು ಕ್ಷೇತ್ರ ಗುರುತಿಸಿಕೊಂಡು ಚುನಾವಣಾ ರಾಜಕೀಯದ ಪ್ರಯತ್ನದಲ್ಲಿದ್ದಾಗಲೇ ರಾಜ್ಯಸಭಾ ಸದಸ್ಯರಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರ ಮಟ್ಟದಲ್ಲಿ ಸಕ್ರಿಯರಾಗುವಂತಾಯಿತು. ವಿವಿಧ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ಯಶಸ್ವಿಯಾದ ಹರಿಪ್ರಸಾದ್ ಕರ್ನಾಟಕದಲ್ಲೊಂದು ಕ್ಷೇತ್ರವನ್ನು ಗುರುತಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು. ರಾಜ್ಯಸಭಾ ಸದಸ್ಯರಾಗಿ ಹರಿಪ್ರಸಾದ್ ತಮ್ಮ ಪಕ್ಷದ ಹಿರಿಯ ಮುಖಂಡರು,ಕಮ್ಯುನಿಸ್ಟರು, ಸಮಾಜವಾದಿಗಳು ಸೇರಿದಂತೆ ಜನಪರ ನಾಯಕರು ಮತ್ತು ಚಿಂತಕರ ಒಡನಾಟದಲ್ಲಿ ವೈಚಾರಿಕವಾಗಿ ಗಟ್ಟಿಯಾಗುತ್ತಾ ಹೋದರು. ವಿವಿಧ ಜಾತಿ,ಧರ್ಮಗಳ ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಇತರೆಲ್ಲ ಪಕ್ಷಗಳಿಗಿಂತ ಹೆಚ್ಚು ಜೀವಪರ, ಸಮನ್ವಯ,ಸಾಮರಸ್ಯ ಬಯಸುವಂಥದ್ದಾಗಿದೆ ಎಂಬುದನ್ನು ಅರಿತುಕೊಂಡರು. ಈ ಅವಧಿಯಲ್ಲೇ ಅವರು ಮಹಾತ್ಮಗಾಂಧಿ, ಅಂಬೇಡ್ಕರ್ ಸೇರಿದಂತೆ ವಿವಿಧ ಭಾರತೀಯ ಜನಪರ ಚಿಂತಕರ ಬದುಕನ್ನು ಅಧ್ಯಯನ ಮಾಡುವುದಕ್ಕೆ ಬಿಡುವಿನ ಸಮಯವನ್ನು ಮೀಸಲಿಟ್ಟರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಿಷ್ಠ ಮತ್ತು ಸಂವಿಧಾನಬದ್ಧ ಜವಾಬ್ದಾರಿಯುತ ಪ್ರಜೆಯಾಗಿ ಹೇಗೆ ಮುನ್ನಡೆಯಬಹುದೆಂಬುದನ್ನು ತೋರಿಸಿಕೊಡತೊಡಗಿದರು. ಹರಿಪ್ರಸಾದ್ ಅವರ ಬಗ್ಗೆ ಮುಖ್ಯವಾಗಿ ಕೇಳಿ ಬರುವ ಟೀಕೆ ಎಂದರೆ ವಿಧಾನಸಭೆ ಅಥವಾ ಲೋಕಸಭಾಚುನಾವಣೆಯಲ್ಲಿ ಒಂದೇ ಒಂದು ಸಲ ಗೆಲ್ಲಲಾಗದವರು ಎಂಬುದು. ಜಾತಿಬಲವೇ ಮುಖ್ಯವಾಗಿರುವ ವರ್ತಮಾನದಲ್ಲಿ ಹರಿಪ್ರಸಾದ್ ದಕ್ಷಿಣಕನ್ನಡದಲ್ಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರೆ ಅವರಿಗೆ ಬೇಕಾದಷ್ಟು ಕ್ಷೇತ್ರಗಳಿದ್ದವು. ಇಂದಿರಾಗಾಂಧಿ, ರಾಜೀವ್‌ಗಾಂಧಿ, ಸೋನಿಯಾಗಾಂಧಿ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದ್ದ ದಿನಗಳಲ್ಲಿ ಚುನಾವಣಾ ರಾಜಕೀಯದ ಉದ್ದೇಶ ಹೊಂದಿದ್ದರೆ ಆಗಲೇ ದಕ್ಷಿಣ ಕನ್ನಡದಿಂದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರೂ ಹೈಕಮಾಂಡ್ ಬೇಡ ಎನ್ನುತ್ತಿರಲಿಲ್ಲ. ಆದರೆ ಬೆಂಗಳೂರಿನವರೇ ಆಗಿರುವ ಹರಿಪ್ರಸಾದ್ ಅಂಥ ಪ್ರಯತ್ನ ನಡೆಸಿರಲಿಲ್ಲ. ಬೆಂಗಳೂರಿನಲ್ಲೇ ಇದ್ದು ಒಂದು ಕ್ಷೇತ್ರದಲ್ಲಿ ಸಕ್ರಿಯರಾಗಿ ಗುರುತಿಸಿಕೊಳ್ಳುವುದಕ್ಕೆ ಮುನ್ನವೇ ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿ, ರಾಜ್ಯಸಭಾ ಸದಸ್ಯರಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದರು. ವಿಚಿತ್ರ ಎಂದರೆ ಕಾಂಗ್ರೆಸ್ ಪಕ್ಷ ಅಥವಾ ಅದರ ನೇತೃತ್ವದ ಒಕ್ಕೂಟ ಸರ್ಕಾರ ಇದ್ದಾಗಲೆಲ್ಲ ಒಮ್ಮೆಯೂ ಅವರು ಮಂತ್ರಿಯಾಗಿರಲಿಲ್ಲ. ಅವರು ಬಯಸಿದ್ದರೆ ಅದೇನೂ ಕಷ್ಟವಾಗುತ್ತಿರಲಿಲ್ಲ. ಇಂದಿರಾಗಾಂಧಿ ಕುಟುಂಬದೊಂದಿಗೆ ನಿರಂತರ ಸಂಪರ್ಕ, ಕುಟುಂಬ ನಿಷ್ಠೆ, ಪಕ್ಷ ನಿಷ್ಠೆ, ತತ್ವನಿಷ್ಠೆಯಿಂದಾಗಿ ಅವರು ಒಕ್ಕೂಟ ಸರ್ಕಾರದಲ್ಲಿ ಯಾವತ್ತೋ ಮಂತ್ರಿಯಾಗಿ ಇತರರಂತೆ ಮೆರೆಯಬಹುದಿತ್ತು. ಆದರೆ ಪಕ್ಷ ವಹಿಸಿ ಜವಾಬ್ದಾರಿಯನ್ನು ಯಶಸ್ಚಿಯಾಗಿ ನಿರ್ವಹಿಸಿ ಅಧಿಕಾರ ರಾಜಕಾರಣದ ಮೋಹಕ್ಕೆ ಅಂಟಿಕೊಳ್ಳದೇ ಮುನ್ನಡೆಯುತ್ತಿರುವ ಅತ್ಯಪರೂಪದ ಉದಾಹರಣೆ ಹರಿಪ್ರಸಾದ್. ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ರಾಜ್ಯಸಭಾ ಸದಸ್ಯತ್ಚ ಬಿಟ್ಟುಕೊಟ್ಟ ಹರಿಪ್ರಸಾದ್ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ನಿಟ್ಟಿನಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಹೈಕಮಾಂಡ್ ಕರೆ ತಂದಿತು. ಅವರನ್ನು ಮೆಚ್ಚಿಕೊಳ್ಳಲು ಇಷ್ಟೆಲ್ಲ ಉದಾಹರಣೆಗಳಿರುವಾಗ ಅವರನ್ನು ಟೀಕಿಸುವವರು ಕೇವಲ ಅಸಹನೆ ಇರುವವರು ಎಂಬುದು ಅರಿವಾಗುತ್ತದೆ. ಅವರು ಸಂವಿಧಾನಬದ್ಧರಾಗಿದ್ದಾರೆ, ಕಾಂಗ್ರೆಸ್ ಪಕ್ಷನಿಷ್ಠರಾಗಿದ್ದಾರೆ, ತತ್ವನಿಷ್ಠರಾಗಿದ್ದಾರೆ. ಹೀಗಿದ್ದೂ ಪಕ್ಷದೊಳಗೂ ಇರುವ ಅಸಹನಿಗಳಿಗೆ ಅವರು ಅಪಥ್ಯ. ಆರೆಸ್ಸೆಸ್, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಕಟು ಟೀಕಾಕಾರರಾಗಿರುವ ಅವರು ಪಕ್ಷವಿರೋಧಿಗಳಿಗೂ ಶತ್ರುವಿನಂತೆ ಭಾವಿಸುತ್ತಾರೆ. ಬಾರತದ ರಾಜಕಾರಣದಲ್ಲಿ ಪ್ರಖರ ಚಿಂತಕರಾಗಿ ರೂಪುಗೊಂಡ ಕೆಲವೇ ಕೆಲವು ನಾಯಕರಲ್ಲಿ ಹರಿಪ್ರಸಾದ್ ಒಬ್ಬರು. ಅವರ ವಿಚಾರಗಳು ದಾಖಲೆಸಹಿತ ಬಿತ್ತರಗೊಳ್ಳುವ ಸಮಾಜಮುಖಿಯಾಗಿರುತ್ತದೆಯೇ ಹೊರತು ಜನವಿರೋಧಿಯಾಗಿಲ್ಲ.
ರಾಜ್ಯ ಕಾಂಗ್ರೆಸ್ ನಲ್ಲಿ ದೇವರಾಜ ಅರಸು, ಕೆ.ಎಚ್.ರಂಗನಾಥ್, ವೀರೇಂದ್ರ ಪಾಟೀಲ್, ಕೆ.ಎಚ್.ಪಾಟೀಲ್ ಅವರಂಥ ಘಟಾನುಘಟಿಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇತಿಹಾಸ ಇದೆ. ಕೆಲವರು ಒಂದಕ್ಕಿಂತ ಹೆಚ್ಚು ಸಲ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರಿದ್ದಾರೆ. ಇಂಥವರಲ್ಲಿ ಎಲ್ಲರೂ ಅಧಿಕಾರ ರಾಜಕಾರಣದಲ್ಲಿದ್ದವರೇ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಎರಡು ಸಲ ಮುಖ್ಯಮಂತ್ರಿಯಾಗಿದ್ದರೇ ಹೊರತು ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿರಲಿಲ್ಲ.ಗುಂಡೂರಾವ್ , ವೀರಪ್ಪ ಮೊಯ್ಲಿ ಕೂಡ ಕೆಪಿಸಿಸಿ ಅಧ್ಯಕ್ಷರಾಗಿದ್ದು ನೆನಪಿಲ್ಲ. ಆರ್.ವಿ ದೇಶಪಾಂಡೆ ಮತ್ತು ದಿನೇಶ್‌ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಸಂಪೂರ್ಣ ವಿಫಲರಾಗಿದ್ದರೆ ಡಾ.ಜಿ.ಪರಮೇಶ್ವರ್ ದೀರ್ಘಾವಧಿಯ ಕೆಪಿಸಿಸಿ ಅಧ್ಯಕ್ಷರೆಂಬ ಹೆಗ್ಗಳಿಕೆ ಇದ್ದರೂ ಅವರು ವಿಶೇಷ ಛಾಪನ್ನೇನೂ ಮೂಡಿಸಿರಲಿಲ್ಲ. 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆಂಬ ಅಲೆ ಇತ್ತೇ ಹೊರತು ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ತಮ್ಮ ಕ್ಷೇತ್ರದಿಂದ ಗೆದ್ದಿದ್ದರೂ ಮುಖ್ಯಮಂತ್ರಿಯಾಗುವುದು ಸಾಧ್ಯವಿರಲಿಲ್ಲ.ಸಿದ್ದರಾಮಯ್ಯ ಎರಡನೇ ಸಲ ಮುಖ್ಯಮಂತ್ರಿಯಾದಾಗ ಆವರೆಗೆ ವಿಧಾನಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಹರಿಪ್ರಸಾದ್ ಅವರನ್ನು ಪ್ರಮುಖ ಖಾತೆಯೊಂದಿಗೆ ಮಂತ್ರಿಮಾಡಬಹುದಿತ್ತು. ಆಗಲೂ ಹರಿಪ್ರಸಾದ್ ವಂಚಿತರಾದರು. ಅವರನ್ನು ಮಂತ್ರಿ ಮಾಡದೇ ಇರಲು ಸಿದ್ದರಾಮಯ್ಯ ಅವರಿಗೆ ಅಸಹನೆ ಬಿಟ್ಟು ಬೇರೆ ಯಾವ ಕಾರಣಗಳೂ ಇರಲಿಲ್ಲ. ಹಿಂದುಳಿದವರನಾಯಕ ಎಂದು ಬಿಂಬಿಸಿಕೊಂಡ ಸಿದ್ದರಾಮಯ್ಯ ಹಿಂದುಳಿದ ಜಾತಿಗೇ ಸೇರಿದ ಹರಿಪ್ರಸಾದ್ ಅವರನ್ನು ಕಡೆಗಣಿಸಿದರು. ವರ್ತಮಾನದ ರಾಜಕಾರಣದಲ್ಲಿ ಅಧಿಕಾರ ದೊರೆಯದೇ ಪಕ್ಷ ತೊರೆದು ಬೇರೆ ಪಕ್ಷಸೇರಿ ಅಧಿಕಾರ ಪಡೆದವರಿದ್ದಾರೆ. ಆದರೆ ಹರಿಪ್ರಸಾದ್ ಒಮ್ಮೆಯೂ ಇಂಥ ವಂಚನೆಗಳ ನಂತರವೂ ವಿಚಲಿತರಾಗಲಿಲ್ಲ. ಅಷ್ಟೇ ಅಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಪ್ರಯತ್ನ ಮುಂದುವರಿಸಿದನಡುವೆಯೇ ಸಿದ್ದರಾಮಯ್ಯ ಹಿಂದುಳಿದ ಜಾತಿಗೆ ಸೇರಿದ ನಾಯಕ ಎಂಬ ಒಂದೇ ಕಾರಣದಿಂದ ಅವರ ಬೆಂಬಲಕ್ಕೆ ನಿಂತರು. ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸುವ ತಮ್ಮ ಆರಂಭದ ದಿನಗಳ ಕ್ರಿಯಾಶೀಲತೆಯಂದಿಗೆ ಮುನ್ನಡೆಯುತ್ತಿದ್ದಾರೆ. ದೇವರಾಜ ಅರಸು ಕಾಲಘಟ್ಟದಲ್ಲಿ ಹಿಂದುಳಿದ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸುವುದೇ ಮುಖ್ಯವಾಗಿದ್ದರೆ ಈಗ ಕೋಮುವಾದದ ಕೊಳಕು ರಾಜಕಾರಣ ನಡೆಸುತ್ತಿರುವ ಬಿಜೆಪಿ, ಮೋದಿ ಎಂಬ ಮಹಾನಾಯಕ ಎಂಬ ಭ್ರಮೆ ಬಿತ್ತನೆ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕಾದ ಸವಾಲನ್ನು ಹರಿಪ್ರಸಾದ್ ಎದುರಿಸಬೇಕಿದೆ. ಇನ್ನೆರಡು ವರ್ಷಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆ ಹೊತ್ತಿಗೆ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಟ್ಟದಲ್ಲಿ ಮತ್ತೆ ಹಳಿಗೆ ತರಬೇಕಿದೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸ್ವೇಚ್ಛೆಗೆ ಸಂಪೂರ್ಣ ಕಡಿವಾಣ ಹಾಕುವುದು ಹರಿಪ್ರಸಾದ್ ಅವರಿಗೆ ಸಾಧ್ಯವಾಗದೇ ಇರಬಹುದು, ನಿಯಂತ್ರಿಸುವುದರಲ್ಲಿ ಅನುಮಾನವಂತೂ ಇಲ್ಲ.ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅನುಭವ ಇರುವ ಅಚಲ ಪಕ್ಷ ನಿಷ್ಠ ಮತ್ತು ಪ್ರಖರ ಚಿಂತಕರೊಬ್ಬರು ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುವ ಜಾಣ್ಮೆಅವರಿಗಿದೆ.ರಾಜ್ಯದಲ್ಲಿ ಬಿಜೆಪಿ ದುರ್ನಾತ ಕೊನೆಗೊಂಡು ಜಾತ್ಯತೀತ ಪರಿಮಳ ಪಸರಿಸುವ ರಾಜಕಾರಣಕ್ಕೆ ಹರಿಪ್ರಸಾದ್ ಮುನ್ನುಡಿ ಬರೆಯಲೆಂದು ಆಶಿಸುತ್ತೇನೆ. ಅವರಿಗೆ ಒಳಿತಾಗಲಿ.
-ಟಿ.ಕೆ.ತ್ಯಾಗರಾಜ್