*ಅವಳಿ ನಗರಗಳ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ* *ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಕ್ರಮ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*
*ಅವಳಿ ನಗರಗಳ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ*
*ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಕ್ರಮ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಪ್ರಮುಖ ಬೀದಿಗಳು, ವರ್ತುಲಗಳನ್ನು ಆಕರ್ಷಕವಾಗಿರುವಂತೆ, ಎಲ್ಲೆಲ್ಲೂ ಹಸಿರು ವಾತಾವರಣ ಕಂಗೊಳಿಸುವಂತೆ, ಸ್ವಚ್ಚ-ಸುಂದರ ನಗರ ನಿರ್ಮಾಣ, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ನಡೆಯುವ ಕ್ರೌರ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸೂಡಾ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಮಾಹಿತಿ ನೀಡಿ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಶಕಗಳ ನಗರದ ಜನದಟ್ಟಣೆ, ಸಂಚಾರ, ಜನಸಂಖ್ಯಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಅಭಿವೃದ್ಧಿ ಹೊಂದಿದ ದೇಶಗಳ ಪ್ರಮುಖ ನಗರಗಳನ್ನು ಮಾದರಿಯಾಗಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಶಿವಮೊಗ್ಗ-ಭದ್ರಾವತಿ ನಗರಗಳನ್ನು ಅಭಿವೃಧ್ಧಿಪಡಿಸಬಹುದಾದ ಸಾಧ್ಯತೆಗಳ ಕುರಿತು ಪರಿಣಿತರಿಂದ ಆಕರ್ಷಕ ವಿನ್ಯಾಸಗಳನ್ನು ತಯಾರಿಸಿ, ಸ್ಥಳೀಯ ಜನರಿಗೆ ಅನುಕೂಲವಾಗಬಹುದಾದ ವಿನ್ಯಾಸಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾನಗರಪಾಲಿಕೆ, ಕೃಷಿ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ನಗರದ ಪ್ರಮುಖ ಇಲಾಖೆಗಳ ಜಿಲ್ಲಾ ಮಟ್ದದ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅವರ ಅಮೂಲ್ಯ ಸಲಹೆ-ಸೂಚನೆ, ಅಭಿಪ್ರಾಯಗಳನ್ನು ಸಂಗ್ರಹಿಸಿರುವುದಾಗಿ ಅವರು ತಿಳಿಸಿದರು.
ನಗರಕ್ಕೆ ಹೊಂದಿಕೊಂಡಿರುವ ಆಯ್ದ ಕೆಲವು ಉದ್ಯಾನವನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸೂಡಾ ವತಿಯಿಂದ ಕಾರ್ಯಯೋಜನೆ ರೂಪಿಸಿ, ಅಭಿವೃಧ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗಿರುವ ಉದ್ಯಾನವನಗಳ ನಿರ್ವಹಣೆಗೆ ಹಲವು ಉದ್ಯಮಿಗಳು, ಸಂಸ್ಥೆಗಳು ಆಸಕ್ತಿ ತೋರಿರುವುದು ಸ್ವಾಗತಾರ್ಹ ಸಂಗತಿ ಎಂದವರು ನುಡಿದರು.
ನಗರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯಕ್ರಮದ ಭಾಗವಾಗಿ ಸೂಡಾದ ವತಿಯಿಂದ ಆರಂಬಿಕವಾಗಿ 1ಕೋಟಿ ರೂ.ಗಳನ್ನು ಅರಣ್ಯ ಇಲಾಖೆಗೆ ನೀಡಲಿದೆ. ಅಲ್ಲದೇ ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಮೂರು ವರ್ಷಗಳ ಅವಧಿಗೆ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಲು ಒಡಂಬಡಿಕೆ ಮಾಡಿಕೊಳ್ಳಲಿದೆ. ಈ ಒಡಂಬಡಿಕೆ ಅನ್ವಯ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟು ಪೋಷಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ ಎಂದರು.
ಅಂತೆಯೇ, ನಗರದೊಳಗಿನ ಹಲವು ಕೆರೆಗಳ ಅಭಿವೃದ್ಧಿಗೆ ಸೂಡಾ ಗಮನಹರಿಸಿದ್ದು, ಹಲವು ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಈ ಕೆರೆಗಳ ಒತ್ತುವರಿ ತೆರವುಗೊಳಿಸಿ, ಗಡಿ ಗುರುತಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದಲ್ಲಿ ರಕ್ಷಣಾ ಬೇಲಿ ನಿರ್ಮಿಸುವುದರೊಂದಿಗೆ ಕೆರೆಗಳ ನವ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಈಗಾಗಲೇ 15ಕೆರೆಗಳನ್ನು ಗುರುತಿಸಲಾಗಿದೆ, ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ವೇಗವಾಗಿ ಬೆಳೆಯುತ್ತಿರುವ ನಗರ ಮತ್ತು ಜನಸಂಖ್ಯೆಗನುಗುಣವಾಗಿ ಪರಿಣಿತರ ಸಲಹೆ-ಸೂಚನೆಯಂತೆ ಸರ್ಕಾರದ ಅನುಮೋದನೆ ಪಡೆದು ಕಾಮಗಾರಿಗಳನ್ನು ಆರಂಭಿಸಲಾಗುವುದು. ಅದರಲ್ಲಿ ವಿಶೇಷವಾಗಿ ನಗರದಲ್ಲಿನ ವರ್ತುಲಗಳು ಜನಸಂದಣಿಯಿಂದ ಕೂಡಿದ್ದು, ಪಾದಚಾರಿಗಳು ಆತಂಕವಿಲ್ಲದೆ ನಡೆಯದಂತಾಗಿದೆ ಅಲ್ಲದೆ ವಾಹನಗಳ ದಟ್ಟಣೆಯಿಂದಾಗಿ ಜನಸಂಚಾರ ತ್ರಾಸದಾಯಕವಾಗಿದೆ. ಇದನ್ನು ನಿಯಂತ್ರಿಸುವಲ್ಲಿ ನಗರದ ಪ್ರಮುಖ ವರ್ತುಲಗಳಲ್ಲಿ ಸ್ಕೈವಾಕ್, ಎಸ್ಕಲೇಟರ್‌ಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ತಂತ್ರಜ್ಞರನ್ನು ಆಹ್ವಾನಿಸಿ, ಅವರ ಸೂಕ್ತ ಸಲಹೆ ಸಹಕಾರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸೂಡಾದಿಂದ 15ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಅಲ್ಲದೇ ನಗರದ ವರ್ತುಲಗಳಲ್ಲಿ ಮಹಾನ್ ಆದರ್ಶವಾದಿಗಳ, ದೇಶೋದ್ದಾರಕರ ಪುತ್ಥಳಿಗಳನ್ನು ನಿರ್ಮಿಸಿ, ಸುತ್ತಲೂ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ವರ್ತುಲಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಇರಬಹುದಾದ ಪರ್ಯಾಯ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಿದ್ದು, ಅದಕ್ಕಾಗಿ 08ಕೋಟಿ ರೂ.ಗಳನ್ನು ಕಾಯ್ದಿರಿಸಿದೆ ಎಂದ ಅವರು, ಅವಳಿ ನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮರ್ಪಕ ನಿರ್ವಹಣೆ ಮತ್ತು ಸ್ವಚ್ಚತೆಗೂ ವಿಶೇಷ ಗಮನಹರಿಸಿದೆ. ಅದಕ್ಕಾಗಿ ಅಗತ್ಯವಿರುವ ಯಂತ್ರೋಪಕರಣಗಳನ್ನು ಸೂಡಾದಿಂದ ಖರೀದಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ. ಅದಕ್ಕಾಗಿ ಪ್ರತ್ಯೇಕವಾಗಿ ಹಣ ವ್ಯಯ ಮಾಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ವರ್ತುಲಗಳಲ್ಲಿ ಅಳವಡಿಸುವ ಎಸ್ಕಲೇಟರ್‌ನಂತಹ ಯಂತ್ರಗಳ ನಿರ್ವಹಣೆ ಮತ್ತು ವಿದ್ಯುತ್ ಸಂಪರ್ಕವನ್ನು ಪಾಲಿಕೆಯಿಂದಲೇ ನಿರ್ವಹಿಸುವ ಹೊಣೆಗಾರಿಕೆ ನೀಡಲಾಗುವುದು ಎಂದರು.
ನಗರದಲ್ಲಿನ ಆಕಸ್ಮಿಕ ಅಪಘಾತಗಳು, ಅಹಿತಕರ ಘಟನೆಗಳು, ಕ್ರೌರ್ಯ ಮುಂತಾದವುಗಳನ್ನು ನಿಯಂತ್ರಿಸುವ ಭಾಗವಾಗಿ ಪ್ರಮುಖ ವರ್ತುಲಗಳು, ಜನನಿಬಿಡ ರಸ್ತೆಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ ಕೊಡುವಂತೆ ಪೊಲೀಸ್ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ. ಕ್ಯಾಮರಾಗಳ ಅಳವಡಿಕೆಗಾಗಿ 5.00ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಜಿ+7 ಮಾದರಿಯಲ್ಲಿ 1200ಮನೆಗಳ ವಸತಿ ಸಮುಚ್ಛಯ ನಿರ್ಮಾಣಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯ ನಂತರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದ ಅವರು, ಗೋಪಿಶೆಟ್ಟಿಕೊಪ್ಪದಲ್ಲಿ 104ಎಕರೆ ಭೂಮಿಯನ್ನು ರೈತರು ಹಸ್ತಾಂತರಿಸಲು ಆಸಕ್ತಿ ತೋರಿದ್ದರು. ಅದರಲ್ಲಿ 32ಎಕರೆ ಜಮೀನಿನ ಮಾಲೀಕರು ಶೇ.50:50ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಒಡಂಬಡಿಕೆ ಮಾಡಿಕೊಟ್ಟಿರುತ್ತಾರೆ. ಕೆಲವೇ ತಿಂಗಳುಗಳಲ್ಲಿ ಸದರಿ ಬಡಾವಣೆ ನಿರ್ಮಾಣ ಕಾರ್ಯವೂ ಆರಂಭಗೊಳ್ಳುವ ಆಶಯ ತಮಗಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ಬಿ.ಆರ್.ಮಂಜುನಾಥ್, ಸದಸ್ಯ ಪ್ರವೀಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


