*ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ ವಿದ್ಯಾರ್ಥಿಗಳ ಭವಿಷ್ಯದ ಮೇಲೆಸಗುವ ನೇರ ದಾಳಿ* *ಕರಡು ನಿಯಮಗಳ ವಿರುದ್ಧ ರಾಜ್ಯವ್ಯಾಪಿ ಹೋರಾಟ – ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ*
*ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ ವಿದ್ಯಾರ್ಥಿಗಳ ಭವಿಷ್ಯದ ಮೇಲೆಸಗುವ ನೇರ ದಾಳಿ*
*ಕರಡು ನಿಯಮಗಳ ವಿರುದ್ಧ ರಾಜ್ಯವ್ಯಾಪಿ ಹೋರಾಟ – ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ*
9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪಿಯು ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ಕರಡು ನಿಯಮಗಳು-2026 ಅನ್ನು ಕರ್ನಾಟಕ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 10,000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ (ರಿ.), ಬೆಂಗಳೂರು ಹಾಗೂ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಪ್ರಾಂಶುಪಾಲರ ಸಂಘಗಳು, ತೀವ್ರವಾಗಿ ಖಂಡಿಸಿವೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೀಶ್,
ಈ ಕರಡು ತಿದ್ದುಪಡಿಯು ಶೈಕ್ಷಣಿಕ ಹಿತದೃಷ್ಟಿಯಿಂದಲೂ ಸಮರ್ಥನೀಯವಲ್ಲ, ಆಡಳಿತಾತ್ಮಕವಾಗಿಯೂ ಏಕಪಕ್ಷೀಯವಾಗಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ಹಾಗೂ ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು-2023 (NCFSE-2023) ಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಸರ್ಕಾರವು ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಪೋಷಕರು, ವಿಶ್ವವಿದ್ಯಾಲಯಗಳು, ಶಿಕ್ಷಣ ತಜ್ಞರು ಹಾಗೂ ಇತರ ಹಿತಾಸಕ್ತ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ, ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯವಾಗಿ ಪ್ರಕಟಿಸಿರುವುದು ಅಸಹನೀಯ ಮತ್ತು ಯಾವುದೇ ಪ್ರಜಾಸತ್ತಾತ್ಮಕ ಸರಕಾರಕ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿವೆ.
ಈ ಕರಡು ಪ್ರಸ್ತಾವನೆ ಯಾವುದೇ ಗಂಭೀರ ಶೈಕ್ಷಣಿಕ ಸುಧಾರಣೆಯನ್ನು ಒಳಗೊಂಡಿರುವುದಿಲ್ಲ; ಬದಲಿಗೆ ಕರ್ನಾಟಕದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯದ ಪ್ರಪಾತಕ್ಕೆ ತಳ್ಳುವ ಅಧಿಕಾರಿಶಾಹಿಗಳ ಆಡಳಿತಾತ್ಮಕ ಪ್ರಯೋಗದ ಹುನ್ನಾರವಾಗಿದೆ.
ಪಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ವಿಶೇಷವಾಗಿ ನೇಮಕಗೊಂಡಿರುವ ಪದವಿಪೂರ್ವ ಉಪನ್ಯಾಸಕರು ಗೆಜೆಟೆಡ್ ಗ್ರೂಪ್-ಬಿ ಶೈಕ್ಷಣಿಕ ವೃಂದದವರಾಗಿದ್ದಾರೆ. ಅವರನ್ನು 9 ಮತ್ತು 10ನೇ ತರಗತಿಗಳ ಭೋಧನೆಗಳಿಗೆ ತೊಡಗಿಸುವುದು ಶೈಕ್ಷಣಿಕ ವಿಶೇಷತೆಯನ್ನು ಕುಗ್ಗಿಸುವುದಲ್ಲದೆ ವೃಂದದ ಸ್ವರೂಪ, ಸೇವಾ ಘನತೆ, ಸಾರ್ವಜನಿಕ ಮನ್ನಣೆ ಮತ್ತು ಪದವಿಪೂರ್ವ ಶಿಕ್ಷಣದ ಸ್ವತಂತ್ರ ಅಸ್ತಿತ್ವವನ್ನೇ ಹಾಳು ಮಾಡುವ ಕ್ರಮವಾಗಿದೆ.
*ವಿದ್ಯಾರ್ಥಿಗಳ ಹಿತಾಸಕ್ತಿಯ ಮೇಲಿನ ನೇರ ದಾಳಿ*
ಇದು ಕೇವಲ ಉಪನ್ಯಾಸಕ ವೃಂದದ ಸೇವಾ ಸಮಸ್ಯೆಯಲ್ಲ. ವ್ಯತಿರಿಕ್ತವಾಗಿ ಕರ್ನಾಟಕದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಅಂದಃಕಾರದ ಕೂಪಕ್ಕೆ ತಳ್ಳುವ ಅತ್ಯಂತ ಗಂಭೀರ ವಿಷಯವಾಗಿದೆ.
ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಪ್ರದೇಶಗಳ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ-ಬುಡಕಟ್ಟು ಪಂಗಡಗಳ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಾಗೂ ಮೊದಲ ತಲೆಮಾರಿನ ಲಕ್ಷಾಂತರ ಕಲಿಕಾರ್ಥಿಗಳ ಶಿಕ್ಷಣದ ಮೇಲೆ ಈ ನಿರ್ಧಾರ ಗಂಭೀರ ಮತ್ತು ಸರಿಪಡಿಸಲಾಗದ ಪರಿಣಾಮ ಬೀರುತ್ತದೆ.
ಈ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವೃತ್ತಿ ಮಾರ್ಗದರ್ಶನ, ಶೈಕ್ಷಣಿಕ ಸಲಹೆ, ವಿಷಯ ಪರಿಣತಿ ಮತ್ತು ಮಾರ್ಗದರ್ಶನಕ್ಕಾಗಿ ಸಂಪೂರ್ಣವಾಗಿ ಪಿಯು ಉಪನ್ಯಾಸಕರನ್ನೇ ಅವಲಂಬಿಸಿದ್ದಾರೆ. ಪಿಯು ಕಾಲೇಜುಗಳು NEET, JEE, CET, CUCET, NDA, CLAT, ৩০৯ ತಯಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಉಪನ್ಯಾಸಕರನ್ನು ತಮ್ಮ ಮೂಲ ಕರ್ತವ್ಯಗಳಿಂದ ಬೇರೆಡೆಗೆ ಸ್ಥಾನಪಲ್ಲಟಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ದೊರೆಯುವ ಶೈಕ್ಷಣಿಕ ಬೆಂಬಲ, ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುಂಠಿತಗೊಂಡು ಅವರುಗಳ ಉನ್ನತ ವ್ಯಾಸಂಗದ ಭವಿಷ್ಯವನ್ನು ಅಪಾಯಕಾರಿಲ ಆಗಿಸಿ ಪ್ರಪಾತಕ್ಕೆ ನೂಕುವುದು.
ಕರಡು ಪ್ರಸ್ತಾವನೆಗೆ ಸರ್ಕಾರದಿಂದ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ
ಪಿಯು ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳಿಗೆ ನಿಯೋಜಿಸಿದರೆ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಪರಿಣಾಮಕಾರಿಯಾದ ಅಧಿಕೃತ ಶೈಕ್ಷಣಿಕ ಮೌಲ್ಯಮಾಪನ, ಅಗತ್ಯ ಅಧ್ಯಯನ ಕಲಿಕಾ ಫಲಿತಾಂಶ ವಿಶ್ಲೇಷಣೆ, ಕಾರ್ಯಭಾರ ಅಧ್ಯಯನ ಅಥವಾ ತಜ್ಞರ ಅಭಿಪ್ರಾಯಗಳಂಥಹ ಅವಶ್ಯ ಪರಿಕರಗಳನ್ನು ಸರ್ಕಾರ ಹೊಂದಿರುವ ಕುರಿತು ಇದುವರೆಗೆ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಇಂಥಹ ಯಾವುದೇ ಪ್ರಕ್ರಿಯೆಗಳು ಜರುಗಿರುವುದಿಲ್ಲ.
ವೈಜ್ಞಾನಿಕ ಅಧ್ಯಯನ, ಶೈಕ್ಷಣಿಕ ಆಧಾರ ಹಾಗೂ ಹಿತಾಸಕ್ತ ಪಕ್ಷಗಳ ಸಮಾಲೋಚನೆ ಇಲ್ಲದೆ ಈ ಕರಡು ಮುಂದಿಡಲಾಗಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ಆಡಳಿತಾತ್ಮಕ ಪ್ರಯೋಗವೇ ಹೊರತು ಸುಧಾರಣೆ ಅಲ್ಲವೇ?
*ಪ್ರೌಢಶಿಕ್ಷಣದಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಸರ್ಕಾರ
> ತಕ್ಷಣವೇ ಶಿಕ್ಷಕರ ನೇರ ನೇಮಕಾತಿ ನಡೆಸಬೇಕು;
> ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು:
> ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬೇಕು;
> ಸಂಬಂಧಿತ ವೃಂದದಲ್ಲೇ ಸಮರ್ಪಕ ಸಿಬ್ಬಂದಿ ನಿಯೋಜನೆ ಮಾಡಬೇಕು;
> ವೈಜ್ಞಾನಿಕ ಹಾಗೂ ಸಾಗರ ಮಾನವ ಸಂಪನ್ಮೂಲ ಯೋಜನೆ ರೂಪಿಸಬೇಕು.
ಒಂದು ವೃಂದದ ಕೊರತೆಯನ್ನು ಮತ್ತೊಂದು ವಿಶೇಷ ವೃಂದವನ್ನು ದುರ್ಬಲಗೊಳಿಸುವ ಮೂಲಕ ಪರಿಹರಿಸಲು ಸಾಧ್ಯವಿಲ್ಲ.
ಸಂಘದ ನಿಲುವು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿದೆ
ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದೆ. ಶಿಕ್ಷಣದಲ್ಲಿ ಭಾಗೀದಾರಿಕೆ, ಶಿಕ್ಷಕರ ವೃತ್ತಿಪರತೆ, ವಿಷಯ ಪರಿಣತಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿದ್ಯಾರ್ಥಿ ಕೇಂದ್ರಿತ ಶೈಕ್ಷಣಿಕ ಆಡಳಿತವನ್ನು ಈ ನೀತಿಗಳು ಪ್ರತಿಪಾದಿಸುತ್ತವೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ಶಿಕ್ಷಣ ಸುಧಾರಣೆ ಪಾರದರ್ಶಕತೆ, ಪರಸ್ಪರ ಹಿತಾಸಕ್ತ ಪಕ್ಷಗಳೊಂದಿಗಿನ ಸಮಾಲೋಚನೆ ಮತ್ತು ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ಮಾತ್ರ ಜಾರಿಯಾಗಬೇಕು.
*ರಾಜ್ಯ ಕಾರ್ಯಕಾರಿಣಿಯಿಂದ ರಾಜ್ಯವ್ಯಾಪಿ ಹೋರಾಟ ಘೋಷಣೆ*
2026ರ ಜೂನ್ 21ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ (ರಿ.) ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ 34 ಶೈಕ್ಷಣಿಕ ಜಿಲ್ಲೆಗಳ ಅಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ಕರಡು ತಿದ್ದುಪಡಿ ನಿಯಮಗಳಿಗೆ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಜೊತೆ ಜೊತೆಯಲ್ಲೇ, ಗೌರವಾನ್ವಿತ ಮುಖ್ಯ ಮಂತ್ರಿಗಳು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳು ಕಾರ್ಯಗತ ಆಗದಿದ್ದಲ್ಲಿ ರಾಜ್ಯವ್ಯಾಪಿ ಪ್ರಜಾಸತ್ತಾತ್ಮಕ ಹೋರಾಟ
ಆರಂಭಿಕವಾಗಿ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ರಾಜ್ಯಮಟ್ಟದ ಧರಣಿ ನಡೆಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
*ಸಾರ್ವಜನಿಕರಲ್ಲಿ ಮನವಿ:*
ಕರ್ನಾಟಕದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ, ಸ್ವಾಯತ್ತತೆ ಮತ್ತು ಶೈಕ್ಷಣಿಕ ಮಾನದಂಡಗಳನ್ನು ರಕ್ಷಿಸುವ ಈ ಹೋರಾಟಕ್ಕೆ ವಿದ್ಯಾರ್ಥಿಗಳು, ಯುವಜನತೆ, ಪೋಷಕರು, ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು ಹಾಗೂ ನಾಗರಿಕೆ ಸಮಾಜದ ಎಲ್ಲಾ ವರ್ಗಗಳು ಬೆಂಬಲ ನೀಡುವಂತೆ ಸಂಘ ಮನವಿ ಮಾಡಿದೆ.
ಸಂಘದ ಪ್ರಮುಖ ಬೇಡಿಕೆಗಳು
> ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ಕರಡು ನಿಯಮಗಳು-2026 ಅನ್ನು ತಕ್ಷಣ ಹಿಂಪಡೆಯಬೇಕು.
> ಪದವಿಪೂರ್ವ ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ಮತ್ತು ಗೌರವವನ್ನು ರಕ್ಷಿಸಬೇಕು.
> ಪದವಿಪೂರ್ವ ಶಿಕ್ಷಣದಲ್ಲಿನ ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿಷಯ ಪರಿಣತಿಯನ್ನು ಕಾಪಾಡಬೇಕು.
> ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಬೇಕು.
> ಸರ್ಕಾರ, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ತ್ರಿಪಕ್ಷೀಯ ಸಮಾಲೋಚನೆ ನಡೆಸಬೇಕು.
ಸರಕಾರದ ಆದ್ಯ ಗಮನಕ್ಕೆ
ಹಿತಾಸಕ್ತ ಪಕ್ಷಗಳೊಂದಿಗೆ ಸೂಕ್ತ ಮತ್ತು ನ್ಯಾಯೋಚಿತ ಸಮಾಲೋಚನೆ ನಡೆಸದೆ ಈ ತಿದ್ದುಪಡಿಯನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸರ್ಕಾರ ಮುಂದಾದರೆ, ಅದನ್ನು ಸಾರ್ವಜನಿಕ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿ ಮೇಲಿನ ದಾಳಿಯೆಂದು ಪರಿಗಣಿಸಲಾಗುವುದು, ಕರ್ನಾಟಕದ ಶಿಕ್ಷಕ ಸಮುದಾಯ ಈ ಪ್ರಸ್ತಾಪಿತ ತಿದ್ದುಪಡಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲಿದ್ದು, ರಾಜ್ಯಾದ್ಯಂತ ಬಲಿಷ್ಠ ಹಾಗೂ ಸಂಘಟಿತ ಪ್ರಜಾಸತ್ತಾತ್ಮಕ ಹೋರಾಟವನ್ನು ನಡೆಸಲಿದೆ.


