*ಧರ್ಮಸ್ಥಳಕ್ಕೆ ಶಾಸಕರನ್ನು ಕರೆದೊಯ್ಯುವ ಬದಲು ರಾಮಮಂದಿರ ನಿಧಿ ದುರ್ಬಳಕೆಯ ಸತ್ಯಾಸತ್ಯತೆ ಬಹಿರಂಗ ಪಡಿಸೋದಕ್ಕೆ ಬಿಜೆಪಿ ಕರೆದೊಯ್ಯಲಿ; ಹೆಚ್.ಸಿ.ಯೋಗೇಶ್* *ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿಯ ದ್ವಂದ್ವ ನಿಲುವು ಖಂಡನೀಯ – ಹೆಚ್.ಸಿ. ಯೋಗೇಶ್*
*ಧರ್ಮಸ್ಥಳಕ್ಕೆ ಶಾಸಕರನ್ನು ಕರೆದೊಯ್ಯುವ ಬದಲು ರಾಮಮಂದಿರ ನಿಧಿ ದುರ್ಬಳಕೆಯ ಸತ್ಯಾಸತ್ಯತೆ ಬಹಿರಂಗ ಪಡಿಸೋದಕ್ಕೆ ಬಿಜೆಪಿ ಕರೆದೊಯ್ಯಲಿ; ಹೆಚ್.ಸಿ.ಯೋಗೇಶ್*
*ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿಯ ದ್ವಂದ್ವ ನಿಲುವು ಖಂಡನೀಯ – ಹೆಚ್.ಸಿ. ಯೋಗೇಶ್*
ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಮೂವರು ವಿದ್ಯಾರ್ಥಿಗಳ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ರಾಜಕೀಯ ಆರೋಪಗಳು ಅತ್ಯಂತ ಖಂಡನೀಯವಾಗಿವೆ ಎಂದು ಕಾಂಗ್ರೆಸ್ ಮುಖಂಡರಾದ ಹೆಚ್.ಸಿ. ಯೋಗೇಶ್ ಅವರು ತಿಳಿಸಿದ್ದಾರೆ.
ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಮೂವರು ವಿದ್ಯಾರ್ಥಿಗಳ ಬಗ್ಗೆ ಇಂದು ಬಿಜೆಪಿ ಶಾಸಕರು ಹಾಗೂ ಸಂಸದರು ಕಣ್ಣೀರು ಹಾಕುತ್ತಿರುವಂತೆ ಮಾತನಾಡುತ್ತಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ನೀಟ್ ಪರೀಕ್ಷೆಗಳ ಒತ್ತಡದಿಂದ ದೇಶಾದ್ಯಂತ 17ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ಇದೇ ಬಿಜೆಪಿ ನಾಯಕರು ಎಲ್ಲಿದ್ದರು? ಎಷ್ಟು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಸಾಂತ್ವನ ಹೇಳಿದರು? ಎಷ್ಟು ಬಾರಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದರು ಎಂಬುದಕ್ಕೆ ಉತ್ತರ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರು ಮಾಗಡಿಯಿಂದ, ಮತ್ತೊಬ್ಬರು ಆರ್.ಟಿ.ನಗರದಿಂದ ಆಗಮಿಸುತ್ತಿದ್ದರು ಹಾಗೂ ಇನ್ನೊಬ್ಬ ಅಭ್ಯರ್ಥಿ ಹಾಲ್ ಟಿಕೆಟ್ ಮರೆತಿದ್ದ ಪ್ರಕರಣವಿದೆ. ಇದನ್ನೇ ಆಧಾರ ಮಾಡಿಕೊಂಡು 20 ದಿನಗಳ ಹಿಂದೆಯೇ ನಿಗದಿಯಾಗಿದ್ದ ಕೆಪಿಸಿಸಿ ಕಾರ್ಯಕ್ರಮದ ಮೇಲೆ ಆರೋಪ ಮಾಡುವುದು ರಾಜಕೀಯ ದಿವಾಳಿತನದ ಪರಮಾವಧಿಯಾಗಿದೆ. ಮಾಗಡಿ ರಸ್ತೆ ಮತ್ತು ಪ್ಯಾಲೆಸ್ ಗ್ರೌಂಡ್ ನಡುವೆ ಯಾವುದೇ ನೇರ ಸಂಬಂಧವಿಲ್ಲದಿದ್ದರೂ ಕಾಂಗ್ರೆಸ್ ಕಾರ್ಯಕ್ರಮವನ್ನು ಕಾರಣವೆಂದು ಹೇಳುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರು ಈಗಾಗಲೇ ತನಿಖಾ ಸಮಿತಿಯನ್ನು ರಚಿಸಿ, ವಿದ್ಯಾರ್ಥಿಗಳ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ತೋರಿಸುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ದೇಶದ ವಿವಿಧ ಪರೀಕ್ಷೆಗಳಲ್ಲಿ 89ಕ್ಕೂ ಹೆಚ್ಚು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಆಗ ಯಾವ ಬಿಜೆಪಿ ಶಾಸಕ ಅಥವಾ ಸಂಸದರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಸಾಧ್ಯವಾಗದ ಕಾರಣ ಮೌನ ವಹಿಸಿದ್ದವರು, ಈಗ ಮಾತ್ರ ನೀಟ್ ಪರೀಕ್ಷೆಯ ಬಗ್ಗೆ ಮಾತನಾಡುತ್ತಿರುವುದು ರಾಜಕೀಯ ನಾಟಕವೇ ಸರಿ.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು, ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದನ್ನು ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿಸುವ ಚಿಂತನೆ ನಡೆಸಿರುವುದು ಆಶ್ಚರ್ಯಕರವಾಗಿದೆ. ಧರ್ಮಸ್ಥಳವು ಕೋಟ್ಯಂತರ ಭಕ್ತರ ನಂಬಿಕೆ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ರಾಜಕೀಯ ಗೊಂದಲಗಳು ಹಾಗೂ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ದೇವರ ಸನ್ನಿಧಿಯನ್ನು ಬಳಸುವುದು ಸರಿಯಲ್ಲ. ಇಂತಹ ವಿಚಾರಗಳನ್ನು ಪಕ್ಷದ ಕಚೇರಿಯಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು.
ದೇವರ ಹೆಸರನ್ನು ರಾಜಕೀಯಕ್ಕೆ ಎಳೆಯುವ ಬದಲು, ರಾಮಮಂದಿರ ನಿರ್ಮಾಣಕ್ಕೆ ದೇಶದ ಜನರಿಂದ ಸಂಗ್ರಹಿಸಲಾದ ನೂರಾರು ಕೋಟಿ ರೂಪಾಯಿ ಹಣದ ಬಳಕೆ ಹಾಗೂ ಅದರ ಕುರಿತು ವ್ಯಕ್ತವಾಗಿರುವ ಅನುಮಾನಗಳ ಬಗ್ಗೆ ತನಿಖೆ ನಡೆಸಲು ಬಿಜೆಪಿ ಮುಂದಾಗಲಿ ಎಂದು ಹೆಚ್.ಸಿ. ಯೋಗೇಶ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿಯೇ ದೇಶದಲ್ಲಿ ಶಾಸಕರ ಖರೀದಿ ರಾಜಕಾರಣಕ್ಕೆ ನಾಂದಿ ಹಾಡಿದ ಪಕ್ಷವಾಗಿದೆ. 2019ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಸಂದರ್ಭವನ್ನು ರಾಜ್ಯದ ಜನತೆ ಮರೆತಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಮೆಚ್ಚಿ, ಕೆಲ ಬಿಜೆಪಿ ಶಾಸಕರು ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಿರುವುದು ಕಾಂಗ್ರೆಸ್ ನಾಯಕತ್ವದ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.
ಧರ್ಮಸ್ಥಳಕ್ಕೆ ಶಾಸಕರನ್ನು ಕರೆದೊಯ್ಯುವ ಬದಲು, ಬಿಜೆಪಿ ತನ್ನದೇ ಶಾಸಕರನ್ನು ರಾಮಮಂದಿರ ನಿಧಿ ಸಂಗ್ರಹ ಹಾಗೂ ಅದರ ಬಳಕೆಯ ಕುರಿತು ಉದ್ಭವಿಸಿರುವ ಪ್ರಶ್ನೆಗಳ ಬಗ್ಗೆ ಸತ್ಯಾಸತ್ಯತೆ ಬಹಿರಂಗಪಡಿಸಲು ಮುಂದಾಗಲಿ. ರಾಜಕೀಯ ಅಸ್ಮಿತೆಯನ್ನು ಮುಚ್ಚಿಹಾಕಲು ದೇವರ ಹೆಸರನ್ನು ಬಳಸುವ ಬದಲು, ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಮತ್ತು ಉತ್ತರ ನೀಡುವುದು ಬಿಜೆಪಿಯ ಜವಾಬ್ದಾರಿಯಾಗಿದೆ ಎಂದು ಹೆಚ್.ಸಿ. ಯೋಗೇಶ್ ಅವರು ತಿಳಿಸಿದ್ದಾರೆ.


