ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತ
ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತ
ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಅಡ್ಡ ಮತದಾನದ ಕುರಿತು ಹೇಳಿಕೆ ನೀಡುವಾಗ ಕೆಲವು ಸತ್ಯಗಳನ್ನು ಹೇಳಿರುವದು ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊನೆಗೂ ಬಿಜೆಪಿಯ ಮಾಜಿ ಹಿರಿಯ ನಾಯಕರೊಬ್ಬರು, ಸತ್ಯದ ಪರವಾಗಿ ನಿಂತು ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಆಮಿಷ ತೋರಿಸಿ ಅಪರೇಷನ್ ಕಮಲದ ಮೂಲಕ ಹಣ ಹಂಚಿಕೆ ಮಾಡಿದ್ದು ನಿಜ, ಮತ್ತೆ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು ನಿಜ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಈಶ್ವರಪ್ಪ ಅವರ ಈ ಧೈರ್ಯಶಾಲಿ ನಡೆ ಪ್ರಜಾಪ್ರಭುತ್ವದ ಪಾಲಿಗೆ ಆಶಾದಾಯಕ ಬೆಳಕು. “ಈಶ್ವರಪ್ಪನವರ ಮೂರನೇ ಕಣ್ಣು” ಕೊನೆಗೂ ತೆರೆದಿದೆ. ಹಲವು ವರ್ಷಗಳಿಂದ ಬಿಜೆಪಿ ಮುಚ್ಚಿಟ್ಟಿದ್ದ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಹದಿನೇಳು ಶಾಸಕರನ್ನು ಕೊಂಡು, ಜನಾದೇಶವನ್ನು ಧಿಕ್ಕರಿಸಿ ಅಧಿಕಾರ ಹಿಡಿದ ಬಿಜೆಪಿಗೆ ಇಂದು ತನ್ನದೇ ಮಾಜಿ ನಾಯಕರಿಂದ ತಕ್ಕ ಪಾಠ ಕಲಿಯುವ ಕಾಲ ಬಂದಿದೆ.
ಈಶ್ವರಪ್ಪ ಅವರು ಇಂದು ಹೇಳಿರುವುದು ಸ್ವಲ್ಪ ಮಾತ್ರ ಅವರ ಬಳಿ ಇನ್ನೂ ಎಷ್ಟೊಂದು ಗುಟ್ಟುಗಳಿವೆಯೋ, ಬಿಜೆಪಿಯ ಯಾವ್ಯಾವ ಮುಖವಾಡಗಳನ್ನು ಅವರು ಕಳಚಲಿದ್ದಾರೋ ಎಂಬುದನ್ನು ರಾಜ್ಯದ ಜನತೆ ಕಾತರದಿಂದ ನೋಡುತ್ತಿದ್ದಾರೆ. ಅವರು ಇನ್ನಷ್ಟು ಸತ್ಯಗಳನ್ನು ಧೈರ್ಯವಾಗಿ ಹೊರಹಾಕಲಿ ಎಂದು ನಾವು ಆಗ್ರಹಿಸುತ್ತೇವೆ.
ಈಗಲಾದರೂ ಬಿಜೆಪಿ ಮುಖಂಡರಿಗೆ ಕಣ್ಣು ತೆರೆಯಲಿ. ಸತ್ಯ ಹೇಳಿದ ಈಶ್ವರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರಿಗೆ ಸನ್ಮಾನ ಮಾಡಿ, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.
“ಪಕ್ಷವನ್ನು ಶುದ್ಧೀಕರಣ ಮಾಡಬೇಕು” ಎಂಬ ಈಶ್ವರಪ್ಪ ಅವರ ಬಹುದಿನಗಳ ಆಸೆಯನ್ನು ಬಿಜೆಪಿ ಈಡೇರಿಸಲಿ. ಒಬ್ಬ ಮಾಜಿ ಹಿರಿಯ ನಾಯಕನೇ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ಬಿಜೆಪಿ ಅತ್ಮವಿಮರ್ಶೆ ಮಾಡಿ ಕೊಳ್ಳಲಿ.
ಕರ್ನಾಟಕದ ಮತದಾರರು ಮೂರ್ಖರಲ್ಲ. ಹಣ, ಹೆಂಡ, ಜಾತಿ, ಧರ್ಮದ ಹೆಸರಿನಲ್ಲಿ ಚುನಾವಣೆ ಗೆದ್ದು, ನಂತರ “ಆಪರೇಷನ್ ಕಮಲ”ದ ಮೂಲಕ ಸರ್ಕಾರ ಉರುಳಿಸಿದ ಬಿಜೆಪಿಯ ಸಂಸ್ಕೃತಿಯನ್ನು ಜನ ಈಗಾಗಲೇ ತಿರಸ್ಕರಿಸಿದ್ದಾರೆ. ಈಶ್ವರಪ್ಪ ಅವರ ಈ ಹೇಳಿಕೆ ಸತ್ಯಕ್ಕೆ ಅಧಿಕೃತ ಮುದ್ರೆ ಒತ್ತಿದೆ.
ಆದ್ದರಿಂದ, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ನಾಯಕರು
ಈಶ್ವರಪ್ಪ ಅವರ ಆರೋಪಗಳ ಬಗ್ಗೆ ಗಮನ ಹರಿಸಲಿ.
ಈಶ್ವರಪ್ಪ ಅವರು ಮತ್ತಷ್ಟು ಸತ್ಯಗಳನ್ನು ಜನರ ಮಂದೆ ಬಿಚ್ಚಿಡಲಿ ಎಂದು ವೈ ಹೆಚ್ ನಾಗರಾಜ್ ಮನವಿ ಮಾಡಿದ್ದಾರೆ.


