*ರಾಜ್ಯದ ತುಂಬಾ ಖೋಟಾ ನೋಟಿನ ಬೃಹತ್ ಜಾಲ!* *ಶಿವಮೊಗ್ಗದಲ್ಲೂ ಓಡಾಡುತ್ತಿವೆಯೇ ನಕಲಿ ನೋಟುಗಳು?*
*ರಾಜ್ಯದ ತುಂಬಾ ಖೋಟಾ ನೋಟಿನ ಬೃಹತ್ ಜಾಲ!*
*ಶಿವಮೊಗ್ಗದಲ್ಲೂ ಓಡಾಡುತ್ತಿವೆಯೇ ನಕಲಿ ನೋಟುಗಳು?*
ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಸಿಗರೇಟ್ ಖರೀದಿಸಲು ನೀಡಿದ ಒಂದೇ ಒಂದು 500 ರೂಪಾಯಿ ನಕಲಿ ನೋಟಿನ ಸುಳಿವು ಹಿಡಿದ ಪೊಲೀಸರು, ರಾಜ್ಯವ್ಯಾಪಿ ಹರಡಿದ್ದ ಕಳ್ಳನೋಟು ದಂಧೆಯನ್ನು ಭೇದಿಸಿದ್ದಾರೆ. ಬೆಂಗಳೂರಿನಲ್ಲಿ ಮುದ್ರಣ ಮಾಡಿ, ಮೈಸೂರು ಹಾಗೂ ಇತರೆಡೆ ಮಾರಾಟ ಮತ್ತು ಚಲಾವಣೆ ಮಾಡುತ್ತಿದ್ದ ಆರು ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಸಿನಿಮಾ ಕಥೆ ಹಾಗೂ ಕ್ರೈಂ ವೆಬ್ ಸೀರೀಸ್‌ಗಳನ್ನೂ ಮೀರಿಸುವಂತಹ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟಿನ (Fake Note) ಬೃಹತ್ ಜಾಲವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ಕೇವಲ ಒಂದೇ ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಬೆನ್ನತ್ತಿದ ಖಾಕಿ ಪಡೆ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಟ್‌ವರ್ಕ್ ಹೊಂದಿದ್ದ ಮುದ್ರಣ, ಮಾರಾಟ ಮತ್ತು ಚಲಾವಣೆಯ ಪ್ರತ್ಯೇಕ ವ್ಯವಸ್ಥಿತ ಜಾಲವನ್ನು ಜಾಲಾಡಿ ಆರು ಮಂದಿ ಖತರ್ನಾಕ್ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಹುಳಿಯಾರಿನ ಅಂಗಡಿಯೊಂದರಲ್ಲಿ ಇಬ್ಬರು ಕಿಡಿಗೇಡಿಗಳು ಸಿಗರೇಟ್ ಖರೀದಿಸಿ 500 ರೂಪಾಯಿಯ ನಕಲಿ ನೋಟು ನೀಡಿ ಪರಾರಿಯಾಗಿದ್ದರು. ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಹುಳಿಯೂರು ಮತ್ತು ಚಿಕ್ಕನಾಯಕನಹಳ್ಳಿ ಪೊಲೀಸರು, ಕೇವಲ ಒಂದೇ ಒಂದು ನೋಟಿನ ಸುಳಿವು ಹಿಡಿದು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮುದ್ರಣ, ಮಾರಾಟ ಮತ್ತು ಚಲಾವಣೆಯ ಪ್ರತ್ಯೇಕ ವ್ಯವಸ್ಥಿತ ಜಾಲ ಪತ್ತೆಯಾಗಿದೆ.
ಬಂಧಿತ ಆರು ಮಂದಿಯಲ್ಲಿ ಬೆಂಗಳೂರಿನ ರುದ್ರೇಶ್ ಎಂಬಾತ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರೆ, ಮೈಸೂರಿನ ರವಿ ಅದನ್ನು ಮಾರಾಟ ಮಾಡುವ ಜವಾಬ್ದಾರಿ ಹೊತ್ತಿದ್ದ. ಅನಂತಪುರದ ಕುಬೇರಪ್ಪ ಹಾಗೂ ಹನುಮಂತಪ್ಪ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಂದ ನೋಟು ಖರೀದಿಸುತ್ತಿದ್ದ ವೆಂಕಟೇಶ್ ಮತ್ತು ತಿಲಕ್ ಕುಮಾರ್ ಸಾರ್ವಜನಿಕರ ನಡುವೆ ಚಲಾವಣೆ ಮಾಡುತ್ತಿದ್ದರು ಎಂಬುದು ಕಾರ್ಯಾಚರಣೆ ವೇಳೆ ತಿಳಿದುಬಂದಿದೆ.
ಬಂಧಿತರಿಂದ ಸದ್ಯ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ನೋಟು ಚಲಾವಣೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಇದರ ಹಿಂದೆ ಇರುವ ದೊಡ್ಡ ನೆಟ್‌ವರ್ಕ್ ಮತ್ತು ಇದರ ಸಂಪೂರ್ಣ ಬೇರು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


