Political dairy- ಹೇಗೆ ಗೆಲ್ತಾರೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್? ಸೋಲ್ತಾರಾ ಬಿ.ವೈ.ರಾಘವೇಂದ್ರ?

ಹೇಗೆ ಗೆಲ್ತಾರೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್? ಸೋಲ್ತಾರಾ ಬಿ.ವೈ.ರಾಘವೇಂದ್ರ?

ಕಾಂಗ್ರೆಸ್ ಪಕ್ಷ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆಯೇ ಕೆಲ ಟ್ರೋಲಿಗರು ತುಪ್ಪ,ಬೆಣ್ಣೆ ಸವಿದಂತೆ ಸಂಭ್ರಮಿಸಿ *ರಾಘಣ್ಣನಿಗೆ ಮೂರು ಲಕ್ಷ ಲೀಡ್, ಐದು ಲಕ್ಷದ ಅಂತರದಲ್ಲಿ ಗೆಲ್ತಾರೆ…* ಎಂದೆಲ್ಲ ಟೋಲ್ ಮಾಡಿದರು. ಅಂಥದ್ದೊಂದು ಭ್ರಮೆ ಅವರದು.

ಶಿವಮೊಗ್ಗದಲ್ಲಿ ಮೋದಿ ಹವಾ ಇದ್ದಿದ್ದರೆ ಶಿವಮೊಗ್ಗದ ವಿಧಾನಸಭಾ ಚುನಾವಣೆಯಲ್ಲಿಯೇ ಅದು ಸಾಬೀತಾಗಬೇಕಿತ್ತು. ಹಾಗಾಗದೇ, ಕಾಂಗ್ರೆಸ್ ಕಮಲವನ್ನು ಕೆಸರಿಗೇ ನೂಕಿ ಗೆಲುವಿನ ಗ್ಯಾರಂಟಿ ನಗೆ ಬೀರಿದ್ದು ಇತಿಹಾಸ. ಈಗ ಲೋಕಸಭಾ ಚುನಾವಣೆಯ ಸಂದರ್ಭ.

ಕಳೆದೊಮ್ಮೆ ಜೆಡಿಎಸ್ ನಿಂದ ಸ್ಪರ್ಧಿಸಿ ಗಮನ ಸೆಳೆದಿದ್ದ ಗೀತಾ ಶಿವರಾಜ್ ಕುಮಾರ್ ರವರಿಗೆ ಈಗ ದೊಡ್ಡ ಪಕ್ಷ ಮತ್ತು ದೊಡ್ಡ ವೇದಿಕೆ ಸಿಕ್ಕಿದೆ. ಜೆಡಿಎಸ್ ನ ಸೀಮಿತ ಕಾರ್ಯಕರ್ತರನ್ನೇ ಇಟ್ಟುಕೊಂಡು ಭರ್ಜರಿ ಫೈಟನ್ನೇ ಕೊಟ್ಟಿದ್ದ ಗೀತಾರವರು ಇದೀಗ ಕಾಂಗ್ರೆಸ್ ನ ಅಭ್ಯರ್ಥಿ.

ಮಧು ಬಂಗಾರಪ್ಪ ಬೇರೊಂದು ಲೆಕ್ಕಾಚಾರದಲ್ಲಿಯೇ ಅಕ್ಕ ಗೀತಾರವರನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ. ಕಳೆದ ಬಾರಿ ತಾವೊಬ್ಬರೇ ಹೋರಾಡಿ, ಎಂ.ಶ್ರೀಕಾಂತ್ ರವರ ಚುನಾವಣಾ ಕಲೆಯನ್ನು ಉಪಯೋಗಿಸಿಕೊಂಡು ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೀತಾರವರ ಪಾಲಿಗೆ ಭರವಸೆಯ ಮತಗಳನ್ನು ಕೊಡಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಹಳೆಯ ಸೇಡನ್ನು ತೀರಿಸಿಕೊಳ್ಳುವ ಉಪಾಯದಲ್ಲಿದ್ದಾರೆ. ಗೀತಾರವರನ್ನು ಗೆಲ್ಲಿಸಿಯೇ ಗೆಲ್ಲಿಸುತ್ತೇನೆಂದು ಪಣ ತೊಟ್ಟಿರುವ ಮಧು ಬಂಗಾರಪ್ಪರವರ ಈ ಭೀಷ್ಮ ಪ್ರತಿಜ್ಞೆಯ ಹಿಂದೆ ಬೇರೆಯದೇ ಚುನಾವಣಾ ಲೆಕ್ಕಾಚಾರಗಳಿವೆ.

ಜೆಡಿಎಸ್ ಬಿಜೆಪಿಯ ಚುಂಗು ಹಿಡಿದು ಹೋಗಿರುವುದರಿಂದ ಮುಸ್ಲೀಮರು, ಕ್ರಿಶ್ಚಿಯನ್ನರು ಕಾಂಗ್ರೆಸ್ ಬಿಟ್ಟು ಅಲುಗಾಡುವವರಲ್ಲ.

ಈಡಿಗರ ಮತಗಳು ಸಂಪೂರ್ಣವಾಗಿ ಗೀತಾರವರ ಪರ ವಾಲಿಬಿಟ್ಟರೆ ಕಾಂಗ್ರೆಸ್ ಗೆಲ್ಲುವುದು ಕಷ್ಟವೇನಲ್ಲ. ಪಂಚ ಗ್ಯಾರಂಟಿಗಳು, ಶಿವರಾಜ್ ಕುಮಾರ್ ರವರ ಅಭಿಮಾನಿಗಳು ಕೂಡ ಈ ಚುನಾವಣೆಯಲ್ಲಿ ಕಾಯಿನ್ ಗಳಾಗಿ ಬಳಕೆಯಾಗಲಿವೆ.

ಅಂತೆಯೇ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಕಾರಣದಿಂದ ಬಿಜೆಪಿಯ ದೊಡ್ಡ ಆಸ್ತಿಯೂ ಆಗಿರುವ ಕೆ.ಎಸ್.ಈಶ್ವರಪ್ಪ ಕುಟುಂಬಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಸ್ವತಃ ಕೆ.ಎಸ್.ಈಶ್ವರಪ್ಪರವರೇ ಬಂಡಾಯಕ್ಕಿಳಿದರೆ ಅಥವಾ ಅವರೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅದರ ದೊಡ್ಡ ಲಾಭ ದಕ್ಕುವುದು ಕಾಂಗ್ರೆಸ್ಸಿಗೇ.

ಇಲ್ಲಿ ಮತ್ತೂ ಒಂದು ಲೆಕ್ಕಾಚಾರ ಕೆಲಸ ಮಾಡುತ್ತಿದೆ; ಕೆ.ಎಸ್.ಈಶ್ವರಪ್ಪ ಕುರುಬ ಸಮಾಜದ ಪ್ರಮುಖ ಮುಖಂಡರೂ ಆಗಿರುವುದರಿಂದ, ಲಿಂಗಾಯತ ಸಮುದಾಯದ ಬಿಎಸ್ ವೈ ಕುಟುಂಬ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಗೆ ಹಾವೇರಿ ಲೋಕಾ ಟಿಕೆಟ್ ವಂಚಿಸುವುದು ಖಚಿತವಾಗುತ್ತಿದ್ದಂತೆಯೇ ಕುರುಬ ಜನಾಂಗದ ಮತಗಳು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವುದು ಖಂಡಿತ. ಈ ಕುರುಬ ಸಮುದಾಯದ ಮತಗಳು ತಮ್ಮ ಮತ್ತೋರ್ವ ಮುಖಂಡ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೋಳಿಗೆಗೆ ಬೀಳುವುದು ನಿಸ್ಸಂಶಯ. ಇಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್ ಸೇತುವೆ ಕಟ್ಟುವುದಷ್ಟೇ ಬಾಕಿ ಉಳಿಯಲಿದೆ.

ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗುವ ಬದಲು ತಮ್ಮ ವಂಶಕ್ಕೆ ರಾಜಕಾರಣದಿಂದ ದೂರವಿರಿಸುತ್ತಿರುವ ಬಿಎಸ್ ವೈ ಕುಟುಂಬಕ್ಕೆ ಬೇರೆಯದೇ ರೀತಿ ಬುದ್ದಿ ಕಲಿಸಬಹುದಾದ ಸಾಧ್ಯತೆಗಳೂ ದಟ್ಟವಾಗಿವೆ.

ರೈಲು- ವಿಮಾನ- ಓವರ್ ಬ್ರಿಡ್ಜ್ ಗಳಲ್ಲೇ ಕಳೆದು ಹೋಗಿರುವ ಬಿ.ವೈ.ರಾಘವೇಂದ್ರರಿಗೆ ಈಗ ಸುತ್ತಲೂ ಖೆಡ್ಡಾಗಳಿವೆ. ಬಿಜೆಪಿಯೊಳಗೇ ಇದ್ದು ಕೆ.ಎಸ್.ಈಶ್ವರಪ್ಪ ಕೂಡ ಖೆಡ್ಡಾ ತೋಡುತ್ತಿರುವುದರಿಂದ ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ತನ್ನದೇ ಕುತೂಹಲ ಕಾಯ್ದುಕೊಂಡಿದೆ.

– *ಶಿ.ಜು.ಪಾಶ*

8050112067