ಸಂಗೀತ ರವಿರಾಜ್ ಅಂಕಣ; ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ

         ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ

ಜಗಕ್ಕೆಲ್ಲಾ  ಚಾಕೋಲೇಟ್  ಹಂಚುವ  ಕೊಕ್ಕೋ ಬೆಳೆಗಾರರು  ನಾವು ಎಂಬುದಾಗಿ  ಹೆಮ್ಮೆಯಿಂದ ಹೇಳುವಂತಹ  ಭಾವ ನಮ್ಮಲ್ಲಿ   ಜೀವನಪೂರ್ತಿ ಇರುವಂತಹ  ಖುಷಿ.  ಅಂತಹ  ಕೊಕ್ಕೋ ಬೆಳೆಗೆ ಈಗ
ಏಕ್ ದಂ ಸುಖದ ಬೆಲೆ   ಬಂದಿದ್ದರಿಂದ  ನಮ್ಮ ಶ್ರಮ ಇನ್ನು  ಸಾರ್ಥಕಗೊಂಡಿದೆ. ಈಗೆಲ್ಲು  ಹೋದರು            ‘ಕೊಕ್ಕೋಕ್ಕೆ ನೂರ ಐವತ್ತು  ದಾಟಿಟು ಗಡ
ಗೊತ್ತುಟ ‘ ಎಂಬುದೇ ಎಲ್ಲರ ಬಾಯಲ್ಲಿ ಬರುವ ಮಾತಾಗಿದೆ. ಕೃಷಿಕರಾದ  ನಮಗೆ  ಇದನ್ನು ಕೇಳುವಾಗ ಒಮ್ಮೆ  ಕಿವಿ ನೆಟ್ಟಗಾಗುವುದು ಖಚಿತ. ಆಚೀಚೆ  ತೋಟ ದಾಟಿ ಹೋಗುವಾಗ  ಅಥವಾ    ಗಾಡಿಯಲ್ಲಿ   ಹೋಗುವಾಗಲೆಲ್ಲಾ  ಮನೆಯವರೆಲ್ಲ ಕೊಕ್ಕೋ ಮರದ ಬುಡದಲ್ಲೇ ಇರಬಹುದಾ  ಅಂತ ನೋಡುವುದೇ ಕೆಲಸವಾಗಿದೆ.  ನಾವು ತೋಟಕ್ಕೆ ಬಿದಿರಿನ ಉದ್ದದ  ಗಳೆ   ಹಿಡಿದುಕೊಂಡು ಹೋಗುವಾಗ ದಾರಿಯಲ್ಲಿ  ಸಿಕ್ಕುವವರೆಲ್ಲ “ಕೊಕ್ಕೋಕ್ಕೆ    ರೇಟ್ ಜಾಸ್ತಿ ಗಡ ” ಅಂತ ಹೇಳಿ ನಮಗೆ ಇನ್ನು ಹುರುಪು ಬರುವಂತೆ ಮಾಡುತ್ತಾರೆ. ನಮಗಂತೂ ಕೊಕ್ಕೋ ಕೊಯ್ಯುವುದು ಜೀವನದ ಒಂದು ಭಾಗವೇ ಆಗಿ ಹೋಗಿದೆ.  ನನಗಂತೂ ಕೊಕ್ಕೋ ಕೊಯ್ಯುವ  ಸ್ವಲ್ಪ ಅಭ್ಯಾಸ  ಮದುವೆಗಿಂತ ಮೊದಲೇ ಇತ್ತು. ತಂದೆ ನನ್ನನ್ನು ಕೊಕ್ಕೋ ಹೆಕ್ಕೋದಿಕೆ   ಬಾ ಅಂತ ಕರೆದುಕೊಂಡು ಹೋಗಿ ಹಾಗೆ ನಿಧಾನಕ್ಕೆ ಕೊಯ್ಯಲು ಅಭ್ಯಾಸ ಆಗಿತ್ತು . ನಾವು ಶಿಕ್ಷಕರ
ಕ್ವಾಟರ್ಸ್ ನಲ್ಲಿ  ಇದ್ದವರು ರಜೆ ಇರುವಾಗಲೆಲ್ಲ ಬಂದು ತೋಟದಲ್ಲಿ ಕೊಕ್ಕೋ ಕೊಯ್ಯುತ್ತಿದ್ದೆವು. ಈಗ ಕೃಷಿಕರಾದ ನಮಗೆ ಕೊಕ್ಕೋ ಕಾಯಕ ನಿರಂತರ.
ಈ ಕೊಕ್ಕೋ ಹಣ್ಣಿನ ವಿಶೇಷವೆಂದರೆ , ತೋಟದಲ್ಲಿ ನೂರಾರು ಕೊಕ್ಕೋ ಮರಗಳು ಇದ್ದರೂ ಅಷ್ಟು ಮರಗಳಲ್ಲಿ ಒಂದೇ ರೀತಿಯ ಕೊಕ್ಕೋ ಆಗುವುದಿಲ್ಲ . ಆಕಾರ , ಗಾತ್ರ, ಬಣ್ಣ , ರುಚಿ, ಅಲ್ಲದೆ ಸಿಪ್ಪೆ , ಬೀನ್ಸ್ ಅಂತಾನೂ ಹೇಳುವ ಬೀಜ , ಬೀಜದ ಸಂಖ್ಯೆ, ತಿರುಳು ಹೀಗೆ  ಒಂದು ಕೊಕ್ಕೋದಿಂದ ಇನ್ನೊಂದಕ್ಕೆ ಸಂಪೂರ್ಣ ವ್ಯತ್ಯಾಸ ಇದೆ. ಅಲ್ಲಲ್ಲಿ ಕೆಲವು ಮರಗಳು ಹೋಲಿಕೆ ಇರುತ್ತವೆ ಅಷ್ಟೆ.  ಈ ವಿಶೇಷತೆ ಬರಲು ಕಾರಣವು  ಇದೆ.  ಕೊಕ್ಕೋ ಬೆಳೆಯ ಬಗ್ಗೆ ಬರುವ ಲೇಖನಗಳನ್ನು ಓದುವಾಗ ತಿಳಿದ ವಿಚಾರವೆಂದರೆ , ಒಂದೇ ರೀತಿಯ
ಗಿಡಗಳಾದರೆ  , ಅದರ ಹಣ್ಣು, ಗಾತ್ರ, ಬಣ್ಣ,  ರುಚಿ ಇವೆಲ್ಲ ಒಂದೇ ರೀತಿ ಇದ್ದರೆ ಅಲ್ಲಿ ಪರಾಗಸ್ಪರ್ಶ ಕಡಿಮೆ ಆಗುತ್ತದೆ. ಇದರಿಂದ  ಕೊಕ್ಕೋ ಫಸಲು ಕಡಿಮೆ ಇರುತ್ತದೆ.  ಕೊಕ್ಕೋ ಬೆಳೆಯ ಪ್ರಾರಂಭದ ಸಂಶೋಧನೆಯಲ್ಲಿ ಈ ವಿಚಾರವನ್ನು ತಿಳಿದುಕೊಂಡು ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಮಿಶ್ರ ಕೊಕ್ಕೋ ಗಿಡಗಳ ತಳಿಗಳು ಮೊದಲಿಂದಲೇ ಪ್ರಾರಂಭವಾಗಿದೆ . ಪ್ರಕೃತಿಯ ಇಂತಹ ವೈಶಿಷ್ಟ್ಯಗಳಿಗೆ ಲೆಕ್ಕವೇ ಇಲ್ಲ.
ಈಗ ವಿಷಯವೆಂದರೆ,  ಕೊಕ್ಕೋಕ್ಕೆ ಸದ್ಯ
ಕೆ.ಜಿ ಗೆ  ನೂರ  ಐವತ್ತು  ದಾಟಿರುವುದು    ಕೃಷಿಕರಾದ  ನಮಗೆಲ್ಲ ಒಂದು ಕನಸಿನಂತೆಯು, ಪವಾಡದಂತೆಯು ಜೊತೆಗೆ ಅತ್ಯಂತ ಖುಷಿಯ ವಿಷಯವಾಗಿ ಪರಿಣಮಿಸಿದೆ. ಇದರೊಂದಿಗೆ ಮಂಗಗಳಿಗು ನಮಗೂ ಭಾರಿ  ಜುಗಲ್ಬಂಧಿ  ಪ್ರಾರಂಭವಾಗಿದೆ. ಹೇಳಿ ಕೇಳಿ ಮಂಗಗಳಿಗು ಕಾಡಿನ ಬದಿ ತೋಟಗಳಿಗು  ಭಾರಿ ನಂಟು. ನಾವೊಂದು ದಿನ ಮನೆಯಲ್ಲಿ ಇಲ್ಲದಿದ್ದರೆ ಸಾಕು ತೋಟವಿಡಿ ಬಂದು , ಸಿಕ್ಕಿದ ಕೊಕ್ಕೋವನ್ನೆಲ್ಲ ಜಗಿದು ತಿಂದು ನೆಲಸಮ ಮಾಡಿ ಹೋಗಿರುತ್ತದೆ. ಅದನ್ನು  ನೋಡಿದ  ಯಾವುದೇ ಕೃಷಿಕನಿಗೆ  ತಲೆಬಿಸಿಯಾಗುವುದಂತು ಗ್ಯಾರಂಟಿ. ಈ ಪಾಟಿ ಬೆಲೆ ಏರಿರುವಾಗ ಮಂಗಗಳು ಹೀಗೆ ಮಾಡಿದರೆ ಹೇಗಾಗಬಹುದು?  ಸುಮಾರು ಇಪ್ಪತ್ತೆಂಟು ಮೂವತ್ತು ವರ್ಷದ ಹಿಂದೆ ನಾನು ತಂದೆಯೊಂದಿಗೆ ಕೊಕ್ಕೋ ಕೊಯ್ಯುವಾಗ ಕೆ.ಜಿ. ಗೆ ಹತ್ತು ರೂಪಾಯಿ ಇಲ್ಲವೇ ಹನ್ನೆರಡು ರೂಪಾಯಿ ಇದ್ದ ನೆನಪು.  ಅದೇ ಬೆಲೆ ಹಂತ ಹಂತವಾಗಿ
ಏರಿಕೊಂಡು ಬಂದಿದ್ದರೆ ಈಗ ಕೆ. ಜಿ. ಗೆ ಎಷ್ಟೋ ಆಗುತಿತ್ತು.  ಆದರೆ ಕೊಕ್ಕೋಕ್ಕೆ  ಮತ್ತೆ ಭಾರಿ ಬೆಲೆ ಅಂತ ಬಂದೆ ಇರಲಿಲ್ಲ.  ಸ್ವಲ್ಪ  ಸ್ವಲ್ಪವೇ ಏರಿಕೊಂಡು ಹೋಗುತ್ತಿತ್ತು ಅಷ್ಟೆ.  ಜಾಸ್ತಿ  ದರ  ಏರದೆ , ಅರವತ್ತರಿಂದ ಎಪ್ಪತ್ತುವರೆಗೆ ಏರಿತ್ತು  ಅಷ್ಟೆ.  ಹಾಗಾಗಿ  ಈಗ ಒಂದೇ ಉಸಿರಿಗೆ ದಿನ ದಿನ ಬೆಲೆ ಏರಿ ಕೃಷಿಕರ ಮೊಗದಲ್ಲಿ ನಗು ಭರಿಸಿದೆ. ಹಾಗಾಗಿ ಯಾರಿಗೂ ಬೇಡದ ಕೊಕ್ಕೋಕ್ಕೆ ಈಗ ಭಾರಿ ಬೇಡಿಕೆ ಬಂದಿದೆ. ಇನ್ನೊಂದು ವಿಷಯವಿದೆ, ಯಾರಿಗೂ ಬೇಡದ ಅಂದರೆ , ಈ ಕ್ಕೊಕ್ಕೊ ಬೆಳೆಯನ್ನು ಯಾವ ಕೃಷಿಕನು ಭಾರಿ ಸಲಹಿ ಏನು  ಕೃಷಿ ಮಾಡೋದಿಲ್ಲ.  ಅದೊಂದು ಮಿಶ್ರ ಬೆಳೆ ಆಗಿ ಉಪಕೃಷಿಯಾಗಿ  ಇದೆ. ಮಳೆಗಾಲದ ಸುರುವಿನಿಂದ ಶುರು ಆಗಿ ಒಂದಾರು ತಿಂಗಳು ತುಂಬಾ ಹಿಡಿಯುತ್ತದೆ. ಇನ್ನಾರು ತಿಂಗಳು ಅಲ್ಲಲ್ಲಿ ಒಂದೊಂದು ಸಿಗುತ್ತ ಇರುತ್ತದೆ. ಅಂತು ಕೊಕ್ಕೋ ವರ್ಷ ಪೂರ್ತಿ ಇರುತ್ತದೆ. ಅದನ್ನು ಭಾರಿ ಸಲಹುದಿಲ್ಲ ಎಂದರೆ ಅದಕ್ಕೆಂದೇ ಯಾರು ಗೊಬ್ಬರ ಹಾಕೋದಿಲ್ಲ. ಅಡಿಕೆ ತೋಟದ  ನಡುವೆ ಇರಲಿ ಅಂತ   ಪಾಪದ ಈ ಗಿಡವನ್ನು ನೆಟ್ಟು   ಬಿಡುತ್ತಾರೆ  ಹೊರತು ಅದನ್ನೇ ಮುಖ್ಯ ಕೃಷಿ ಬೆಳೆಯಾಗಿ ಬೆಳೆದವರು ಭಾರಿ ಕಡಿಮೆ ಅಥವಾ   ಬೆಳೆಯುವುದು ಇಲ್ಲ.  ಹೆಚ್ಚಿನವರು  ಇದರಿಂದ ಏನು ಲಾಭ ಅಂತ   ಮರ ಕಡಿದು ಹಾಕಿದವರು ಇದ್ದಾರೆ.   ಕೇವಲ  ಕೊಕ್ಕೋ ತೋಟ ಮಾಡಿರುವ ಕೃಷಿಯನ್ನು ನಾನೆಲ್ಲೂ ಇಲ್ಲಿವರೆಗೆ ನೋಡಿಲ್ಲ. ಆದರೆ ಈಗ ನಿಜ ಹೇಳಬೇಕೆಂದರೆ ಹೀಗೆ ಪಕ್ಕಕ್ಕಿಟ್ಟ ಕೊಕ್ಕೋದಿಂದಲೇ ಉಪಯೋಗ ಜಾಸ್ತಿ ಆಗಿದೆ.
ಸಂಪಾಜೆ ಗಡಿ ದಾಟಿದ ಮೇಲೆ ಯಾರ ತೋಟದಲ್ಲಿಯು ಕೊಕ್ಕೋ ಕಾಣಲು ಸಿಗುವುದಿಲ್ಲ. ಕೊಡಗು ಕಡೆಯ ವಾತಾವರಣಕ್ಕೆ  ಕೊಕ್ಕೋವನ್ನು ಯಾರು ಕೃಷಿ ಮಾಡೋದಿಲ್ಲ. ಇದಕ್ಕೆ ತುಂಬಾ ಬಿಸಿಲು ಮತ್ತು ತುಂಬಾ ನೀರು ಎರಡು ಬೇಕು.  ಅಲ್ಲಿ ಕೊಕ್ಕೋ ಎಂದರೆ ಮಕ್ಕಳಿಗೆಲ್ಲ ಆದು ತಿನ್ನಲು ಮಾತ್ರ ಇರುವ ಹಣ್ಣು ಎನ್ನುವ ಲೆಕ್ಕಾಚಾರ. ತಿನ್ನಲು ಇದು ಭಾರಿ ರುಚಿ. ನನ್ನ ಅವ್ವನಿಗಂತು ಕೊಕ್ಕೋ ಹಣ್ಣು ತಿನ್ನುವುದೆಂದರೆ ಭಾರಿ ಇಷ್ಟ. ಜೊತೆಗೆ ಅದರ ಬೀಜಗಳೆಲ್ಲ ಅಂಟಿರುವ  ದಾರವಾದ   ಗೂಂಜಿಯು ಬಲು ರುಚಿ. ನಾವು ಕೊಕ್ಕೋ ಒಡಿಯುವಾಗ ಅವರೊಟ್ಟಿಗೆ ಸೇರಿ ಕೊಕ್ಕೋ ತಿನ್ನಲು  ಪ್ರಾರಂಭ ಮಾಡಿದೆವು.  ಈ ಅಭ್ಯಾಸವನ್ನು ನಾನು ಮದುವೆ  ಆದ ಮೇಲೆಯೂ ಇಲ್ಲಿ ಶುರು ಮಾಡಿದಾಗ ಫಜೀತಿ ಆಗಿತ್ತು. ಯಾಕೆಂದರೆ ಇಲ್ಲಿ ಯಾರೂ ಕೊಕ್ಕೋ ಹಣ್ಣು  ತಿನ್ನುವವರು  ಇರಲಿಲ್ಲ . ಕೊಕ್ಕೋ ಒಡಿಯುವಾಗ ಬಾಯಿಗೆ ಹಾಕಿದ ಕೂಡಲೇ ಸುತ್ತ ಮುತ್ತ ಕೂತವರೆಲ್ಲ ನನ್ನನೆ ನೋಡಿದಂತೆ ಭಾಸವಾಗುತ್ತಿತ್ತು. ಮತ್ತೆ ಆಸೆ ಆದಾಗ ಯಾರಿಗೂ ಕಾಣದಂತೆ ಬಾಯಿಗೆ ಹಾಕಿಕೊಳ್ಳುತ್ತಿದ್ದೆ  . ಒಮ್ಮೊಮ್ಮೆ ಕೊಕ್ಕೋ ಕೊಯ್ಯುವಾಗ ತೆಳ್ಳಗೆ ಸಿಪ್ಪೆ ಇರುವಂತಹವು ಬೀಳುವಾಗ ಒಡೆದು ಬಿಡುತ್ತದೆ. ಆಗಲೂ ತೋಟದಲ್ಲಿ ತಿನ್ನುವ ಅಭ್ಯಾಸ ನನಗೆ ಮಾತ್ರ ಅಲ್ಲ ಎಲ್ಲ ಕೊಕ್ಕೋ ಕೊಯ್ಯುವವರಿಗೆ ಇರಬಹುದು! ಕೊಕ್ಕೋ ಒಡೆದರೆ ಅದನ್ನು ಚೀಲಕ್ಕೆ ಹಾಕೋ ಮೊದಲು ಅಡಿಕೆ ಹಾಳೆ ಹರಿದು , ಸೇರಿಸಿ ಗಟ್ಟಿ  ಕಟ್ಟಿ  ಮನೆಗೆ ತರುತ್ತೇವೆ. ಕೊಕ್ಕೋ   ಸಣ್ಣ  ತೂತು ಆದರೂ ಕೊಕ್ಕೋ ಬೀಜ ಹಾಳಾಗಿ ಬಿಡುತ್ತದೆ.
ಕೋಕ್ಕೋವನ್ನು ತಿನ್ನಲು ಬರುವ ಮಂಗ ಮತ್ತು ಅಳಿಲು ನಮ್ಮ ಕೃಷಿಕರ  ಪ್ರೀತಿಯ  ಶತ್ರು ಪ್ರಾಣಿಗಳು . ಅಳಿಲು, ಕೊಕ್ಕೋವನ್ನು ಮನುಷ್ಯರು ತಿನ್ನುವಂತೆ  ಚೀಪುತ್ತಾ ಸಪಾಟು ಆದ ನಂತರ ಕೆಲವು ಬೀಜಗಳನ್ನು ಉಗುಳಿ ಹೋಗಿಬಿಡುತ್ತದೆ, ಕೆಲವನ್ನು ತಿನ್ನುತ್ತದೆ.  ಆದರೆ ಮಂಗಗಳ ಉಪದ್ರವದಲ್ಲಿ ಸಹಿಸಲು ಸಾಧ್ಯವಿಲ್ಲ. ರಾಶಿ ಹಿಂಡು ಒಮ್ಮೆಗೆ  ಬಂದು , ಹಣ್ಣು ಸಿಗದಿದ್ದರೆ   ಕಾಯಿ ಕೊಕ್ಕೊವನ್ನು ತಿಂದು  ತೋಟವೆಲ್ಲ ಹರಡಿ ಬಿಟ್ಟಂತೆ ಮಾಡುತ್ತವೆ.  ಹೋಗುವಾಗ ಕೈಯಲ್ಲಿ , ಬಾಯಲ್ಲಿ  ಕೊಕ್ಕೋ, ಎಳನೀರು ಹೀಗೆ ಏನಾದರೂ ತೋಟದಿಂದ ಹಿಡಿದುಕೊಂಡೇ ಹೋಗುತ್ತವೆ.  ಅದಕ್ಕೀಗ ಬೆಳೆದ ಕಾಯಿ ಕೊಕ್ಕೋವನ್ನು ಹಣ್ಣಾಗಲಿ ಅಂತ ಕೊಯ್ದು ತರುವ ಉಪಾಯ ಮಾಡಿದರೂ ,  ತೋಟಕ್ಕೆ ಹೋದಾಗ ಮಾತ್ರ ಮಂಗಗಳು ತಿಂದ  ಕೊಕ್ಕೋ ಹಣ್ಣು ಕಾಣಸಿಗುತ್ತವೆ. ನನ್ನ ಕಣ್ಣಿಗೆ ಕಾಣದ್ದು ಇವುಗಳಿಗೆ ಹೇಗೆ ಕಂಡಿತಪ್ಪ ಅಂತ ಆಶ್ಚರ್ಯವೂ ಆಗುತ್ತದೆ. ಎಷ್ಟಾದರೂ ಪ್ರಾಣಿಗಳು ತುಂಬಾ ಚುರುಕು ಅಂತ ಹೇಳುವುದು ನಿಜ.  ಹೀಗೆ ಮಂಗಗಳ ಕಥೆ ಹೇಳಿದರೆ ಅದೊಂದು ಕಾದಂಬರಿಯೆ ಆಗಿ ಬಿಡುತ್ತದೆ. ನನ್ನ ನೋಡಿದರಂತು ಯಾವ ಕೋತಿಗು ಹೆದರಿಕೆ ಇಲ್ಲ ಅನಿಸಿ ಬಿಟ್ಟಿದೆ. ನಾನೆಷ್ಟು ಬೊಬ್ಬೆ ಹೊಡೆದರು ನನ್ನನ್ನೇ ಕೆಕ್ಕರಿಸಿಕೊಂಡು ನೋಡಿ ಕುಳಿತಲ್ಲೇ ಕುಳಿತುಕೊಂಡು ಇರುತ್ತದೆ.  ಮಂಗದ ಬೆಡಿ ತಂದರು   ನಾಲ್ಕು  ದಿನ   ಹೊಡಿಸುವಾಗ  ಓಡಿ ಹೋಗುತ್ತದೆ. ಐದನೇ ದಿನ ಅದರ ಸದ್ದಿಗೆ ಯಾವ ಹೆದರಿಕೆ ಇಲ್ಲದಂತೆ ಇರುತ್ತವೆ. ಒಂದೊಂದೇ ಒಂಟಿ ಮಂಗ ಬಂದರಂತೂ ಗೊತ್ತೇ ಆಗುವುದಿಲ್ಲ.  ಒಂದೇ ಬಂದು ಅದರಷ್ಟಕ್ಕೆ ಕೊಕ್ಕೋ ತಿಂದು , ಇಲ್ಲವೇ ಅಡಿಕೆ ಸಿಪ್ಪೆ ರಸ  ಹೀರುತ್ತಾ ಕುಳಿತಿರುತ್ತದೆ. ಒಟ್ಟಿಗೆ ಬಂದಾಗ ಅದನ್ನು ತೋಟದಿಂದ ಓಡಿಸುವುದೆ ಹರಸಾಹಸ ನಮಗೆ.  ನಾಯಿಯನ್ನು ಬಿಟ್ಟರು, ಕೋವಿ ತೋರಿಸಿದರು, ಬೊಬ್ಬೆ ಹೊಡೆದರು ಸಿಕ್ಕಿದಷ್ಟು ತಿಂದು ಕೈಯಲ್ಲಿ ಹಿಡಿದೇ ಹೋಗುತ್ತದೆ. ಅದಕ್ಕೆ ನಾವು ಆಗಾಗ್ಗೆ ಮಂಗಗಳನ್ನು ಓಡಿಸುವ ಉಪಾಯವನ್ನು ಬದಲಾಯಿಸುತ್ತಾ ಇರುತ್ತೇವೆ. ಇದು ನಮಗೆ ಸ್ವಲ್ಪ ಮಟ್ಟಿಗೆ ಉಪಯೋಗಕ್ಕೆ ಬರುತ್ತದೆ.  ನಾವು ಯಾವಾಗಲೂ ತೋಟದಿಂದ ಮದ್ಯಾಹ್ನ ಮನೆಗೆ ಬರುವಾಗ ಅದೇ ಹೊತ್ತಿಗೆ  ಮಂಗಗಳು ತೋಟಕ್ಕೆ ಬಂದು ಬಿಡುತ್ತ ವೆ. ಅದು ಕಾಕತಾಳೀಯವೋ ಅಥವ ಮಂಗಗಳು ಲೆಕ್ಕಾಚಾರ ಹಾಕಿ ಬರುವುದೋ ಏನೋ ಗೊತ್ತಿಲ್ಲ.  ಹೆಚ್ಚಿನ ಸಲ ಹೀಗೇನೆ ಆಗುತ್ತದೆ. ಅದೇ  ಹೊತ್ತಿಗೆ ನಾವು ಹೋಗಿ ಜೋರಾಗಿ ಶಬ್ದ ಮಾಡಿ ಬಂದರೆ ಓಡುತ್ತವೆ . ಇನ್ನು ಮನೆಯ ಎದುರು  ಎಲ್ಲೋ ಒಂದು ಕಡೆ  ಕ್ಯಾಟರ್ ಬಿಲ್ಲು ಸದಾ  ಯುದ್ಧಕ್ಕೆ  ಸಿದ್ಧವಾಗಿರುತ್ತದೆ. ಕಲ್ಲುಗಳನ್ನು ಆಯ್ದು ಇಟ್ಟು ಬಿಟ್ಟಿರುತ್ತೇವೆ.  ಮಂಗಗಳು ಬಂದದ್ದು ಗೊತ್ತಾದ ತಕ್ಷಣ ಈ ಬಿಲ್ಲು ಹಿಡಿದುಕೊಂಡು ಹೋಗಿ ಬಿಡುತ್ತೇವೆ. ಮಕ್ಕಳು ಸಹ ಈ ಕೆಲಸವನ್ನು ಮಾಡುತ್ತಾರೆ. ಆದರೆ ನಾವೆಷ್ಟು ಉಪಾಯ ಮಾಡಿದರು ಮಂಗಗಳು ನಮ್ಮಿಂದ ಹುಷಾರು ಎಂಬುದಂತು ನಾ ಕಂಡುಕೊಂಡ ಸತ್ಯ . ಈಗಂತು ಕೊಕ್ಕೋಕ್ಕೆ ಬೆಲೆ ಏರಿದ ಮೇಲೆ ನಾವು ಮೇಲೋ ,    ಮಂಗಗಳು ಮೇಲೋ  ಅಂತ ನೋಡುವುದೇ ಕೆಲಸವಾಗಿದೆ. ಮೊನ್ನೆ ಒಂದು ಮನೆಗೆ ಹೋದಾಗ ಕೊಕ್ಕೋ ಮರದಲ್ಲಿ ದೊಡ್ಡ ಕನ್ನಡಿಯೊಂದನ್ನು ಇಟ್ಟಿದ್ದರು.  ಸೂರ್ಯನ ಬೆಳಕು ಅದರ ಮೇಲೆ ಬಿದ್ದು ಪ್ರತಿಫಲಿಸುವಾಗ ಮಂಗಗಳು ಓಡುತ್ತವೆ ಎನ್ನುವ ಉಪಾಯ.  ಒಂದು ಕಡೆ ಮಂಗಗಳನ್ನು ಹಿಡಿಯಲು ಬೋನು ಸಿದ್ಧವಾಗಿದೆ, ಮಂಗಳನ್ನು ಹಿಡಿದು ಬೇರೆ ಕಾಡಿಗೆ ಬಿಟ್ಟು ಬರುವ ಕಾರ್ಯವು ಆಗಿದೆ. ಹೀಗೆ ಮಂಗಗಳನ್ನು ಓಡಿಸುವ ಹಲವಾರು ಉಪಾಯಗಳು ಕೃಷಿಕರಲ್ಲಿ ಇದೆ.
ಕೊಕ್ಕೋ ಎಲ್ಲ ಕೊಯ್ದು ತಂದು ರಾಶಿ ಹಾಕಿದ ಮೇಲೆ ಒಂದು ದಿನ ಅದನ್ನು ಒಡೆಯುವ ಕೆಲಸ. ರಾತ್ರಿಯೇ ಪುಂಡಿ ಮಾಡಿಟ್ಟು ಬೆಳಗಿನ ಒಳಗಿನ ಕೆಲಸವನ್ನೆಲ್ಲಾ ತರಾತುರಿಯಲ್ಲಿ ಮುಗಿಸಿ ಕೊಕ್ಕೋ ಬಿಡಿಸಲು ಕೂತೆವೆಂದರೆ ಮುಗಿದ ಮೇಲೆ  ಎದ್ದೇಳುವುದು.  ಕುಳಿತುಕೊಂಡು ಇದು ಸುಲಭದ ಕೆಲಸ ಅಂದುಕೊಳ್ಳಬೇಡಿ. ಬೀಜ ಬಿಡಿಸುತ್ತ ಉಗುರು ನೋವು  ಪ್ರಾರಂಭವಾಗಿ ಇದು ಅತಿಯಾಗುತ್ತದೆ.
ಕೈ ಉಗುರು ಸ್ವಲ್ಪ ಸವೆದು ಅದರೊಳಗೆ ಕೊಕ್ಕೋದ ಅಂಶ  ಹೋದ ಮೇಲೆ ನೋವು ಜಾಸ್ತಿಯಾಗುತ್ತದೆ. ಚಿಕ್ಕ ಗಾಯವೇನಾದರು ಇದ್ದರೆ ಕೊಕ್ಕೋ ದ ಹುಳಿಗೆ ಉರಿಯಾಗಿ ಬಿಡುತ್ತದೆ.  ಈ ಕಾರಣಕ್ಕೆ ಈಗೆಲ್ಲಾ  ಕೆಲವರು ಕೈಗೆ ಏನಾದರೂ ಹಾಕಿಕೊಂಡು ತೆಗೆಯಲು ಪ್ರಾರಂಭ ಮಾಡಿದ್ದಾರೆ. ಕೋಕ್ಕೋವನ್ನು ಯಾರಾದರೊಬ್ಬರು  ಒಡೆದು ಕೊಟ್ಟರೆ ತೆಗೆಯಲು ಸುಲಭ.  ಇಲ್ಲವೆಂದರೆ ನಾವೇ ಒಡೆದು, ನಾವೇ ಬಿಡಿಸುವುದು ಕಷ್ಟವಾಗುತ್ತದೆ. ಮಕ್ಕಳು , ನಾವು ಜಾಸ್ತಿ ಬೀಜ ತೆಗೆಯುತ್ತೇವೆ  ,ಅಂತ ಹೇಳಿ ತೆಗೆಯಲು ಕೂತರೆ ನಮಗಿನ್ನೂ ಖುಷಿ.  ಎಲ್ಲ ಒಡೆದ ಮೇಲೆ ಕೊಯ್ದು ತಂದಷ್ಟೆ ಇರುವ  ಅದರ ಸಿಪ್ಪೆಯನ್ನು ಹೊತ್ತು ಚಾಳೆ ಬುಡಕ್ಕೆ, ದನಕ್ಕೆ ಅಂತ ಎತ್ತಿಟ್ಟು ಆಗುವಾಗ ಕೆಲಸ ಮುಗಿದ ನಿರಾಳತೆ. ವಾರಕ್ಕೆ ಒಂದೇ ದಿನ ಕೊಕ್ಕೋ ಖರೀದಿ ಎನ್ನುವ ನಿಯಮ ಈಗ ಸಡಿಲವಾಗಿದೆ.  ಇಲ್ಲವೆಂದರೆ  ಎಷ್ಟೋ ವರ್ಷದಿಂದ  ಬುಧವಾರ  ಮಾತ್ರ   ಖರೀದಿ   ದಿನ   ಎನ್ನುವ ನಿಯಮ ಜಾರಿಯಲ್ಲಿತ್ತು.  ಕೊಕ್ಕೋ ಸೀಸನ್ ಇರುವಾಗ ರಾತ್ರಿಯೆ  ಒಡೆದು ಇಡುವ  ಕೆಲಸ ಮಾಡಿಬಿಡುತ್ತೇವೆ . ಇಲ್ಲವೆಂದರೆ ಬೆಳಗ್ಗೆ ಬೇಗ ಎದ್ದು ಒಡೆಯಲು ಪ್ರಾರಂಭ ಮಾಡಬೇಕು. ಕೊಕ್ಕೋವನ್ನು ಒಡೆದು ಹಾಕಿಟ್ಟರೆ   ಅದರಿಂದಲೇ ನೀರು ಬಂದು ಹುಳಿ ನೀರು ಉಕ್ಕಿ ಬರುತ್ತದೆ. ಕೊಕ್ಕೋ ತೆಗೆದುಕೊಳ್ಳುವ ಅಂಗಡಿ ಎದುರೆಲ್ಲ ಈ ಹುಳಿನೀರ ವಾಸನೆ ತಪ್ಪಿದ್ದಲ್ಲ . ಮಳೆಗಾಲವಂತು ಕೊಕ್ಕೋ ಬಿಡಿಸುವುದು ಭಾರಿ ಕಷ್ಟ . ಮಳೆಗೆ ಕೊಕ್ಕೋ ಸಿಪ್ಪೆ ಕಪ್ಪಾಗಿ, ಒಳಗಿನ ಬೀನ್ಸ್  ಒಂದಕ್ಕೊಂದು ಗಟ್ಟಿ ಅಂಟಿಕೊಂಡಿರುತ್ತದೆ.
ಕೊಕ್ಕೋ ಬೀನ್ಸ್ ಅನ್ನು ಒಣಗಿಸಿಯು  ಕೊಡುವ ಕೃಷಿಕರಿದಾರೆ. ನಾವು ಹಸಿಯಾಗಿ ಕೊಟ್ಟ ಕೊಕ್ಕೋ ಬೀಜದ ನಂತರದ ಕೆಲಸ ಒಣಗಿಸುವುದೆ ಆಗಿದೆ. ಒಣಗಿಸಿ ಕೊಟ್ಟರೆ ಕೃಷಿಕರಿಗೆ ಲಾಭ ಇದೆ. ಆದರೆ ಮಾರುಕಟ್ಟೆ ಸೌಲಭ್ಯ ಕಡಿಮೆ . ದೂರದೂರಿಗೆ ತೆಗೆದುಕೊಂಡು ಹೋಗಬೇಕು ಮತ್ತು ಒಣಗಿಸುವ ಕೆಲಸವು ಜಾಸ್ತಿಯಾಗುವುದರಿಂದ   ನಾವೆಲ್ಲ ಹತ್ತಿರದಲ್ಲಿಯೇ ಹಸಿ ಬೀಜವನ್ನು ಕೊಟ್ಟು ಬಿಡುತ್ತೇವೆ. ಕೊಕ್ಕೋ ಬೀಜದ ಒಳಗೆ ಭಾರಿ ಚಂದದ ನೇರಳೆ ಬಣ್ಣದ  ತಿರುಳು ಇದೆ.ಇದುವೇ ಕೊಕ್ಕೋದಲ್ಲಿ
ಪ್ರಧಾನವಾಗಿ  ಉಪಯೋಗಕ್ಕೆ ಬರುವ ಅಂಶ. ಇದು ಒಗರು ರುಚಿಯಾಗಿ  , ಸ್ವಲ್ಪ ಕಹಿಯಾಗಿರುತ್ತದೆ.  ಕೊಕ್ಕೊದಲ್ಲಿ ಮುಖ್ಯವಾಗಿ ಚಾಕೋಲೇಟ್ ಉತ್ಪಾದನೆ ಮಾಡುತ್ತಾರೆ. ಮತ್ತೆ ನಂತರದಲ್ಲಿ ಇನ್ನೂ  ಹಲವಾರು ಉತ್ಪನ್ನಗಳು ಇವೆ . ಕೊಕ್ಕೋ ನಿಬ್ಸ್ , ಕೊಕ್ಕೋ ಪೌಡರ್, ಬೆಣ್ಣೆ, ಮದ್ಯ, ತಿಂಡಿಗಳ ಹೊರ ವಿನ್ಯಾಸ,  ಕೊಕ್ಕೋ ಕ್ರೀಮ್,   ಹಲವಾರು  ಪಾನೀಯಗಳು, ಸುಗಂಧ ದ್ರವ್ಯ ಇತ್ಯಾದಿ ಬಳಕೆಗೆ ಮುಖ್ಯವಾಗಿ ಬಳಸಿಕೊಳ್ಳುತ್ತೇವೆ. ಕ್ಯಾಂಪ್ಕೋ, ಕ್ಯಾಡ್ಬರಿ  ಸೇರಿದಂತೆ ದೇಶದ ಎಂಟು ದೊಡ್ಡ ಕಂಪೆನಿಗಳು ಕೊಕ್ಕೋ ಬೀಜವನ್ನು ಖರೀದಿ ಮಾಡುತ್ತಾರೆ. ಕೊಕ್ಕೋ ಉತ್ಪನ್ನಕ್ಕೆ ಬೇಡಿಕೆ ಬಂದ ಹಾಗೆ ಕ್ಯಾಂಪ್ಕೋ ದವರು ಎಲ್ಲ ಗ್ರಾಮೀಣ ಪ್ರದೇಶದಲ್ಲಿಯೂ ಕೊಕ್ಕೋ ಖರೀದಿ ಕೇಂದ್ರ ಪ್ರಾರಂಭ ಮಾಡಿದರು. ಇದು ನಮ್ಮಂತಹ ಕೃಷಿಕರಿಗೆ ಭಾರಿ ಉಪಯೋಗಕ್ಕೆ ಬಂದಿದೆ ಮತ್ತು ಬರುತ್ತಲೂ ಇದೆ.
ಕೊಕ್ಕೋ ಪದ ” ಥಿಯೋಬ್ರೋಮ ಕೋಕೋ” ಎಂಬ ಪದದಿಂದ ಉತ್ಪತ್ತಿ ಆಗಿದೆ. ನಾವು ಹೇಳುವಂತಹ ಕೊಕ್ಕೋ ಇದರ ಟ್ಯಾಕ್ಸಾನಮಿಕ್ ಹೆಸರು. ಈ ಬೆಳೆಯ ಮೂಲ ದಕ್ಷಿಣ ಅಮೆರಿಕದ ಅಮೆಜಾನ್ ಪ್ರದೇಶ . ಇಲ್ಲಿ ಪ್ರಾರಂಭದಲ್ಲಿ ಕೊಕ್ಕೋ ಬೀನ್ಸ್ ಅನ್ನು ಒಣಗಿಸಿ ಅದನ್ನು ಅರೆದು ಕಪ್ಪಾದ  ಅಂದರೆ ಕಡು ನೇರಳೆ ಬಣ್ಣದ ಪಾನೀಯ ಮಾಡಿ ಕುಡಿಯುತ್ತಿದ್ದರು. ಇದು ದೇಹಕ್ಕೆ ತುಂಬಾ ಶಕ್ತಿವರ್ಧಕ
ಎನ್ನುವ ವಿಚಾರ ಅವರಿಗೆ ತಿಳಿದಿತ್ತು.  ಕ್ರಮೇಣ ಅದಕ್ಕೆ ಹಾಲು , ಸಕ್ಕರೆ , ಸೇರಿಸಿ ಕುಡಿ ಯಲು ಪ್ರಾರಂಭ ಮಾಡಿದರು. ನಂತರದಲ್ಲಿ ಶುರುವಿಗೆ ಚಾಕೋಲೇಟ್ ಮಾಡಿ ಯಶಸ್ಸು ಸಾಧಿಸಿದ ನಂತರ ಹಂತ ಹಂತವಾಗಿ ಬೇರೆ ಉತ್ಪನ್ನಗಳನ್ನು ಕಂಡು ಹಿಡಿಯಲು ಪ್ರಾರಂಭ ಮಾಡಿದರು.  ಕೊಕ್ಕೋವನ್ನು ಭಾರತ  ಹೊರತುಪಡಿಸಿ  ಮಲೇಶಿಯಾ, ಘಾನ, ಕ್ಯಾಮರಾನ್ , ಇಂಡೋನೇಷಿಯಾ, ಮುಂತಾದ ದೇಶಗಳಲ್ಲಿ ಮುಖ್ಯವಾಗಿ ಬೆಳೆಯುತ್ತಾರೆ. ನಮ್ಮ ದೇಶದಲ್ಲಿ ಪಶ್ಚಿಮ ಘಟ್ಟದಲ್ಲಿ ಮೊದಲು ಇದನ್ನು ಬೆಳೆಯಲಾಗಿತ್ತು. ಸಂಶೋಧನೆಯ ನಂತರ ಅಡಿಕೆ ಮತ್ತು  ತೆಂಗು ತೋಟಗಳಲ್ಲಿ ಮಿಶ್ರ  ಬೆಳೆ  ಆಗಿ ಸ್ಥಾನ ಪಡೆದುಕೊಂಡಿತು. ಹಾಗಾಗಿ   ಇದೆರಡನ್ನು  ಬೆಳೆಸುವ ನಮ್ಮೂರಲ್ಲಿ  ಕೊಕ್ಕೋಕ್ಕೆ  ಮಿಶ್ರ ಬೆಳೆ  ಆಗಿ ಮುಖ್ಯ ಸ್ಥಾನ ಸಿಕ್ಕಿದೆ. ಒಂದೊಳ್ಳೆಯ ಕೃಷಿ  ಪ್ರಕಾರ ಆಗಿರುವ ಕೊಕ್ಕೋ ಬೆಳೆಯಿಂದ ರೈತರಿಗೆ , ಅದರಲ್ಲಿಯೂ ಸಣ್ಣ ರೈತರಿಗೆ ಭಾರಿ ಅನುಕೂಲವೇ ಆಗ್ತಾ ಇದೆ.  ಮನೆಗೆ ತೀರಾ ಹತ್ತಿರದಲ್ಲಿಯೇ ಇದನ್ನು ಬೆಳೆಸಿಕೊಂಡು ಉತ್ತಮ ಫಸಲು ತೆಗೆದುಕೊಳ್ಳುತ್ತಾರೆ.  ಇದರ ಬೇರೆ ಬೇರೆ ತರಹದ ಬಣ್ಣಗಳು , ಅದರೊಟ್ಟಿಗೆ ಮರದ ಕಾಂಡದಲ್ಲಿ , ಕೊಂಬೆಯಲ್ಲಿ ಜೊಂಗೆ ಆಗಿ
ಹಿಡಿವಂತಹ ಅಂದ , ಬೇರೆ ಯಾವ ವಾಣಿಜ್ಯ ಬೆಳೆಯಲ್ಲಿಯು ಕಾಣಿಸುವುದು ಕಡಿಮೆ. ಕೊಕ್ಕೋ ಕೊಯ್ದು ರಾಶಿ ಹಾಕಿದ ಹಾಕಿದ ಮೇಲೆ ಹಸಿರು,  ಹಳದಿ, ಕೆಂಪು, ಕಂದು ಹೀಗೆ ಬಣ್ಣದ ರಾಶಿ ನೋಡುವುದೇ ಕಣ್ಣಿಗೆ ಅಂದ.  ಹೀಗೆ ಎಲ್ಲವೂ ಅಂದವೆಂದು ಬಣ್ಣಿಸುವಾಗ ಕೊಯ್ಯುವುದು ಸುಲಭವೆಂದು ಭಾವಿಸಬೇಡಿ.  ಇದು ತುಂಬಾ ಶ್ರಮ ಬೇಡುವ ಕೆಲಸ. ಕೊಯ್ಯುವ ಬಿದಿರಿನ ವಾಟೆ ಗಳೆಯನ್ನು  ಕೈಯೆತ್ತಿ  ಮೇಲೆ   ಹಿಡಿದುಕೊಂಡು,  ಮೇಲೆ ನೋಡಿಕೊಂಡೆ ಕತ್ತು ಸುಸ್ತು ಬಂದು ಬಿಡುತ್ತದೆ. ಕೊಯ್ದ ಮೇಲೆ ಚೀಲದಲ್ಲಿ ತುಂಬಿಸಿ ಹೊರಲು ಕೂಡ ಭಾರಿ ತೂಕ.  ದಪ್ಪ ಸಿಪ್ಪೆಗಳನ್ನು ಹೊಂದಿರುವ ಕೊಕ್ಕೋವೆ ಭಾರ ಹೊರತು ಅದರ
ಬೀನ್ಸ್ ಒಂದು ಕೆ .  ಜಿ  ಆಗಲು  ಮೂವತ್ತರಿಂದ ನಲ್ವತ್ತು ಹಣ್ಣುಗಳು ಬೇಕು. ಕೊಕ್ಕೋ ಮರದಲ್ಲಿ ಕೆಂಪಿರುವೆ, ಬೇರೆ ರೀತಿಯ ಇರುವೆ ಇದ್ದರೆ ಕೊಯ್ಯುವಾಗ ಆದು ತಲೆಗೆ ಬಿದ್ದು  ಕಚ್ಚಿ ಬಿಡುತ್ತವೆ. ದೊಡ್ಡ ಮಾರಗಳಾದರೆ ಏಣಿ ಬೇಕಾಗುತ್ತದೆ. ಮರ ಹತ್ತಿಯು ಕೊಯ್ದು ಬಿಡುವ ಹೆಂಗಳೆಯರು ನಮ್ಮ ನಡುವೆ ಇದ್ದಾರೆ.
ಈ ಎಲ್ಲಾ ಉಪದ್ರವವನ್ನು  ಸಹಿಸಿಕೊಂಡು ಕೃಷಿಕರು ಇದನ್ನು ಪ್ರೀತಿಯಿಂದ ಮಾಡುತ್ತಾರೆ. ಬೇರೆಲ್ಲ ಊರಿನ ಆಹಾರ ಬೆಳೆ ಬೆಳೆಸುವ ಕೃಷಿಕರಿಂದ,  ಈ ವಾಣಿಜ್ಯ ಬೆಳೆ ಬೆಳೆಸುವ  ನಮ್ಮಂತಹ ಕೃಷಿಕರು ಎಲ್ಲ ರೀತಿಯಲ್ಲೂ ಸುಧಾರಣೆ ಕಾಣುತ್ತ ಇದ್ದಾರೆ. ಇದು ಒಂದು ವಾಣಿಜ್ಯ  ಬೆಳೆಯಾಗಿಯೂ , ತಿನ್ನುವ  ಹನ್ನಾಗಿಯು  ಹಲವಾರು ಉತ್ಪನ್ನಗಳಿಗೆ ಕಾರಣ ಆಗಿಯು  ಒಂದು  ವಿಭಿನ್ನ ಕೃಷಿಯಾಗಿ ಕೊಕ್ಕೋ ಗುರುತಿಸಿಕೊಂಡಿದೆ.  ತಿಳಿದೋ ತಿಳಿಯದೆಯೋ ಲೋಕಕ್ಕೆ ಸಿಹಿ ಹಂಚುವ  ನಾವು ಕೊಕ್ಕೋ ಕೆಲಸವನ್ನು  ಶ್ರಮವಹಿಸಿ  ಮಾಡುತ್ತೇವೆ. ನಾವಿರುವರೆಗೆ, ಈ ಜಗತ್ತು ಇದುವರೆಗೆ  ಈ  ಕೊಕ್ಕೋ ಬೆಳೆ ನಮ್ಮೊಂದಿಗೆ ಹೀಗೆ ಇರುತ್ತದೆ.
ಸಂಗೀತ ರವಿರಾಜ್
ಚೆಂಬು