ಮುಖ್ಯಮಂತ್ರಿಗಳನ್ನು ಗೂಂಡಾ ಎಂದ ಶಾಸಕ ವಿಜಯೇಂದ್ರ ಹೇಳಿಕೆಗೆ ವೈ. ಹೆಚ್. ನಾಗರಾಜ್ ಖಂಡನೆ
ಮುಖ್ಯಮಂತ್ರಿಗಳನ್ನು ಗೂಂಡಾ ಎಂದ ಶಾಸಕ ವಿಜಯೇಂದ್ರ ಹೇಳಿಕೆಗೆ ವೈ. ಹೆಚ್. ನಾಗರಾಜ್ ಖಂಡನೆ
ಶಿವಮೊಗ್ಗ : ಶಿಕಾರಿಪುರ ಶಾಸಕ ಬಿ. ವೈ. ವಿಜಯೇಂದ್ರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ. ಹೆಚ್. ನಾಗರಾಜ್ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳನ್ನು ಗೂಂಡಾ ಎಂದು ಕರೆಯುವ ಮಟ್ಟಕ್ಕೆ ಈ ಹೊಸ ಶಾಸಕ ಹೋಗಿರುವುದು ವಿವೇಕ ಮರೆತಂತೆ ಆಗಿದೆ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಶಿಕಾರಿಪುರ ಭಾಗದ ಅನೇಕ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಸಾವಿರಾರು ರೈತರ ಬಗರ್ ಹುಕುಂ ಅರ್ಜಿಗಳು ವರ್ಷಗಳಿಂದ ಬಾಕಿ ಉಳಿದಿವೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವುದಾಗಲಿ, ಪರಿಹಾರಕ್ಕೆ ಪ್ರಯತ್ನಿಸುವುದಾಗಲಿ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮದೇ ಪಕ್ಷದ ಸಂಸದರ ಮೂಲಕ ಕೇಂದ್ರದಿಂದ ಅನುದಾನ ತಂದು ಶಿಕಾರಿಪುರಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅನುದಾನ ತರಬಹುದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಅನೇಕ ಬಿಜೆಪಿ ಶಾಸಕರು ಅನುದಾನ ತಂದು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ, ಆದರೆ ಶಿಕಾರಿಪುರದಲ್ಲಿ ಇವರ ಸಾಧನೆ ಮಾತ್ರ ಸೊನ್ನೆ.
ಇದೆಲ್ಲವನ್ನೂ ಮರೆತು ದಿನಾ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು, ರಾಜ್ಯದ ಮುಖ್ಯಮಂತ್ರಿಗಳನ್ನು ಬಯ್ಯುವುದು ಇವರ ದಿನನಿತ್ಯದ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದೇ ಮತ್ತು ಮುಖ್ಯಮಂತ್ರಿಗಳಿಗೆ ಬಯ್ಯುವುದೇ ರಾಜಕಾರಣ ಅಲ್ಲ. ರಾಜಕಾರಣ ಎಂದರೆ ಜನರ ಕಷ್ಟಕ್ಕೆ ಸ್ಪಂದಿಸುವುದು ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುವುದು. ಆಕಸ್ಮಿಕವಾಗಿ ಶಾಸಕರಾದ ಬಿ. ವೈ. ವಿಜಯೇಂದ್ರ ಅವರು ಇನ್ನೂ ಕಲಿಯುವುದು ಬಹಳಷ್ಟಿದೆ.
ಶಿಕಾರಿಪುರದಲ್ಲಿ ಭಾರತ್ ಜೋಡೋ ಯಾತ್ರೆ ದೊಡ್ಡ ಯಶಸ್ಸು ಕಂಡಿದೆ. ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರು ನಿರಂತರವಾಗಿ ಶಿಕಾರಿಪುರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಯಶಸ್ಸು ಕಾಣುತ್ತಿರುವುದು ಇವರಲ್ಲಿ ಭಯವನ್ನು ಹುಟ್ಟಿಸಿದೆ. ಆ ಹತಾಶೆಯಿಂದಲೇ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಆಡುವ ಮಾತುಗಳೇ ಮುಂದೆ ಅವರಿಗೆ ತಿರುಗುಬಾಣವಾಗಲಿದೆ ಎಂದು ವೈ ಹೆಚ್ ನಾಗರಾಜ್ ಎಚ್ಚರಿಸಿದ್ದಾರೆ.


