ಪಂಚ ಗ್ಯಾರಂಟಿಗಳ ಮೂಲಕವೇ ಅಭ್ಯರ್ಥಿ ಗೀತಾರನ್ನು ಗೆಲ್ಲಿಸುತ್ತೇವೆ ಎಂದರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ

ಪಂಚ ಗ್ಯಾರಂಟಿಗಳ ಮೂಲಕವೇ ಅಭ್ಯರ್ಥಿ ಗೀತಾರನ್ನು ಗೆಲ್ಲಿಸುತ್ತೇವೆ ಎಂದರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ
ಶಿವಮೊಗ್ಗ,
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗಿದ್ದು ಈ ಯೋಜನೆಯಲ್ಲಿ ಸೇರ್ಪಡೆಯಾಗದೆ ಬಾಕಿ ಉಳಿದ  ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಹಾಗೂ ಯೋಜನೆಗಳಿಂದ ಜನರು ಹೊರಗುಳಿಯದಂತೆ ಎಲ್ಲಾ ಹಂತಗಳಲ್ಲಿ ಮುತುವರ್ಜಿವಯಿಸಿ ಸಕ್ರಿಯವಾಗಿ ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಕ್ತಿಯೋಜನೆಯಡಿ ಜಿಲ್ಲೆಯಲ್ಲಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದು, ಜೂನ್ ೨೦೨೩ರಿಂದ ಮಾರ್ಚ್ ೨೦೨೪ರವರೆಗೆ ಶಿವಮೊಗ್ಗ,ಭದ್ರಾವತಿ, ಸಾಗರ ಹಾಗೂ ಶಿಕಾರಿಪುರ ತಾಲ್ಲೂಕಿನಿಂದ ೧,೮೨,೪೨,೯೯೬ ಮಹಿಳೆಯರು ಪ್ರಯಾಣ ಮಾಡಿದ್ದು, ಸರ್ಕಾರ ಕೆ.ಎಸ್.ಆರ್.ಟಿ.ಸಿ. ಶಿವಮೊಗ್ಗ ಡಿಪೋಗೆ ೬೨,೨೫,೮೭,೦೯೦ ರೂ. ಪಾವತಿಸಿದೆ ಎಂದರು.
ಗೃಹಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಪ್ರತಿ ಮನೆಗೆ ಪ್ರತಿ ತಿಂಗಳು ೨೦೦ ಯೂನಿಟ್ ಒಳಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ೪,೬೩,೮೧೩ ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿದ್ದು, ಸುಮಾರು ೪೬ ಕೋಟಿ ರೂ. ಜನರಿಗೆ ಲಾಭವಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ೩,೫೬,೦೬೮ ಜನರು ಅರ್ಹರಾಗಿದ್ದು, ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಅಕ್ಕಿಯ ಹಣದಲ್ಲಿ ೫ ಕೆ.ಜಿ. ಅಕ್ಕಿಯ ಬಾಬ್ತು ನಗದು ರೂಪದಲ್ಲಿ ಪಾವತಿ ಮಾಡಲಾಗಿದ್ದು, ಒಟ್ಟು ೨೦,೨೧,೨೩,೨೦೦ ರೂ. ಪಾವತಿ ಮಾಡಲಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ೨೦೦೦ ರೂ. ಉಚಿತ ಸಹಾಯದ ಯೋಜನೆಯಲ್ಲಿ ೩,೮೩,೩೫೮ ಮಹಿಳೆಯರು ನೊಂದಣಿಯಾಗಿದ್ದು, ಪ್ರತಿ ತಿಂಗಳು ೭೬ ಕೋಟಿ ರೂ. ನೊಂದಣಿ ಮಾಡಿಸಿಕೊಂಡ ಮಹಿಳೆಯರಿಗೆ ಪಾವತಿಸಲಾಗುತ್ತಿದೆ ಎಂದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೫೧೩೯ ಯುವಕರು ನೊಂದಣಿ ಮಾಡಿಸಿದ್ದು, ಪದವೀಧರರಿಗೆ ೩೦೦೦ ರೂ. ಹಾಗೂ ಡಿಪ್ಲೋಮೋ ಪದವಿಧರರಿಗೆ ೧೫೦೦ ರೂ. ಪ್ರತಿ ತಿಂಗಳು ಪಾವತಿಯಾಗುತ್ತಿದೆ.  ಪ್ರತಿ ತಿಂಗಳು ೧,೨೨,೦೮,೫೦೦ ರೂ. ಪಾವತಿಸಲಾಗುತ್ತಿದೆ ಎಂದರು
ಈ ಐದು ಗ್ಯಾರಂಟಿಗಳಿಂದ ಪ್ರತಿ ಅರ್ಹ ಕುಟುಂಬವು ಕನಿಷ್ಠ ೫೦೦೦ ರೂ. ನೆರವು ಪಡೆಯುತ್ತಿದೆ. ಈ ಬಗ್ಗೆ ನಿಗಾ ಘಟಕಗಳಿಗೆ ಗಮನಹರಿಸಲು ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಚನೆ ಮಾಡಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪ್ರಾಧಿಕಾರಕ್ಕೆ ಜಿಲ್ಲೆಯ ೭ ತಾಲ್ಲೂಕುಗಳಿಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದೆ.  ಉಸ್ತುವಾರಿಗಳಾಗಿ ನೇಮಕಗೊಂಡಿರುವವರು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಗೊಳಿಸಲು ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎಂ.ಮಧು, ಇಕ್ಕೇರಿ ರಮೇಶ್, ಆರ್.ಶಿವಣ್ಣ, ಯು. ಶಿವಾನಂದ, ಅರ್ಚನಾ ನಿರಂಜನ, ರಾಹುಲ್, ವಸಂತ ಕುಮಾರ್, ಮೊಹಮ್ಮದ್ ಇಕ್ಬಾಲ್ ನೇತಾಜಿ ಇದ್ದರು.