ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ- ಕಾಂತೇಶ್ ಈಶ್ವರಪ್ಪ ಜಂಟಿ ಪತ್ರಿಕಾಗೋಷ್ಠಿ… ರಾಷ್ಟ ಭಕ್ತ ಬಳಗ: ಅ.27ರಂದು ಆಶ್ರಯ ಮನೆಗಳಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ನವೆಂಬರ್ 4ರಂದು ತೀರ್ಪು: ಪಾಲಿಕೆ ಚುನಾವಣೆ ನಿರೀಕ್ಷೆ ಟಿಕೆಟ್ ಭರವಸೆ ನೀಡಿದರೆ ಬಿಜೆಪಿಗೆ ಮರಳುತ್ತೇನೆ ಎಂದ ಈಶ್ವರಪ್ಪ
ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ- ಕಾಂತೇಶ್ ಈಶ್ವರಪ್ಪ ಜಂಟಿ ಪತ್ರಿಕಾಗೋಷ್ಠಿ…
ರಾಷ್ಟ ಭಕ್ತ ಬಳಗ: ಅ.27ರಂದು ಆಶ್ರಯ ಮನೆಗಳಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ
ನವೆಂಬರ್ 4ರಂದು ತೀರ್ಪು: ಪಾಲಿಕೆ ಚುನಾವಣೆ ನಿರೀಕ್ಷೆ
ಟಿಕೆಟ್ ಭರವಸೆ ನೀಡಿದರೆ ಬಿಜೆಪಿಗೆ ಮರಳುತ್ತೇನೆ ಎಂದ ಈಶ್ವರಪ್ಪ
ಶಿವಮೊಗ್ಗ: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಸ್ಥಗಿತಗೊಂಡಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ಪುನರಾರಂಭಿಸಿ, ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ಶೀಘ್ರ ವಿತರಿಸುವಂತೆ ಆಗ್ರಹಿಸಿ ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ ಅ.27ರಂದು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಷ್ಟ ಭಕ್ತ ಬಳಗದ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ಹಾಗೂ ಕೆ.ಈ.ಕಾಂತೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಗೋವಿಂದಾಪುರದಲ್ಲಿ 3,000 ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1,300 ಆಶ್ರಯ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಯೋಜನೆ ಆರಂಭವಾಗಿ ಒಂಬತ್ತು ವರ್ಷ ಕಳೆದರೂ ಇದುವರೆಗೆ ಕೇವಲ 463 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಕಡು ಬಡವರು ಹಾಗೂ ಕೂಲಿ ಕಾರ್ಮಿಕರಾಗಿರುವ ಫಲಾನುಭವಿಗಳು ಸಾಲ ಮಾಡಿ, ಮನೆಯ ಒಡವೆ ಹಾಗೂ ಮಂಗಳಸೂತ್ರಗಳನ್ನು ಅಡಮಾನವಿಟ್ಟು ತಲಾ ₹80,000 ಪಾವತಿಸಿದ್ದಾರೆ. ಆದರೆ ಇಷ್ಟು ವರ್ಷ ಕಳೆದರೂ ಮನೆ ದೊರೆಯದೆ, ಸಾಲದ ಬಡ್ಡಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಗೋವಿಂದಾಪುರದಲ್ಲಿ ಮನೆಗಳ ನಿರ್ಮಾಣದ ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸರ್ಕಾರದಿಂದ ₹15 ಕೋಟಿ ಬಾಕಿ ಇರುವ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಗುತ್ತಿಗೆದಾರರು ಯಂತ್ರೋಪಕರಣ ಹಾಗೂ ಕಾರ್ಮಿಕರನ್ನು ಸ್ಥಳದಿಂದ ತೆರವುಗೊಳಿಸಿರುವುದರಿಂದ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.
ಗೋಪಿಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಡೆಯಬೇಕಿದ್ದ ಕಾಮಗಾರಿಯೂ ಪ್ರಗತಿ ಕಾಣುತ್ತಿಲ್ಲ. ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಈ ಹಿಂದೆ 2024ರ ಜುಲೈ 18ರಂದು ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ ಮಹಾನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲಾಗಿತ್ತು. ಆಗ ಅಧಿಕಾರಿಗಳು ಒಂದೆರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಯೋಜನೆಗೆ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಕಾಮಗಾರಿ ಪುನರಾರಂಭವಾಗಿಲ್ಲ ಎಂದು ಹೇಳಿದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಅವರು ತಕ್ಷಣ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪುನರಾರಂಭಿಸಿ, ಬಡ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ಬಳಗದ ಈ. ವಿಶ್ವಾಸ್, ಮೋಹನ್ ಜಾಧವ್, ಗೋವಿಂದಪ್ಪ, ನಾಗರಾಜ್, ರಾಜಯ್ಯ, ಶ್ರೀಕಾಂತ್ ಇದ್ದರು.
—————
ನವೆಂಬರ್ 4ರಂದು ತೀರ್ಪು: ಪಾಲಿಕೆ ಚುನಾವಣೆ ನಿರೀಕ್ಷೆ
ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಹಲವು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಪಾಲಿಕೆ ಚುನಾವಣೆಗೆ ಸಂಬಂಧಿಸಿದ ಅರ್ಜಿಯ ಅಂತಿಮ ತೀರ್ಪು ನವೆಂಬರ್ 4ರಂದು ಹೊರಬರಲಿದೆ ಎಂದು ರಾಷ್ಟ್ರ ಭಕ್ತ ಬಳಗದ ಕೆ.ಈ. ಕಾಂತೇಶ್ ಹೇಳಿದರು.
ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆಯಿಂದ ಜನರು ಪರಿತಪಿಸುವಂತಾಗಿದೆ. ಪಾಲಿಕೆಗೆ ಶೀಘ್ರ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಾವು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾಗಿ ಅವರು ತಿಳಿಸಿದರು.
ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟ್ ನವೆಂಬರ್ 4ರಂದು ಅಂತಿಮ ತೀರ್ಪು ನೀಡಲಿದೆ. ತೀರ್ಪು ನ್ಯಾಯದ ಪರವಾಗಿ ಹಾಗೂ ಶಿವಮೊಗ್ಗ ಜನತೆಯ ಆಶಯಕ್ಕೆ ಅನುಗುಣವಾಗಿ ಬರಲಿದೆ ಎಂಬ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರ ಮೌನಕ್ಕೆ ಟೀಕೆ
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸದ ಕುರಿತು ಕಾಂಗ್ರೆಸ್ ನಾಯಕರು ಮೌನ ವಹಿಸಿರುವುದು ವಿಷಾದನೀಯ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದಲೇ ಕಾಂಗ್ರೆಸ್ ಈ ಪರಿಸ್ಥಿತಿಗೆ ತಲುಪಿದೆ. ಬಹುಸಂಖ್ಯಾತ ಹಿಂದೂಗಳು ಜಾಗೃತರಾಗಿದ್ದು, ಇಂತಹ ರಾಜಕಾರಣ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ 182 ಪ್ರಯಾಣಿಕರ ಜೀವ ರಕ್ಷಿಸಲು ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ಮೆರೆದ ಭಾರತೀಯ ಸಂಜಾತ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸ್ಮಿತ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಅವರು, ದಾಳಿಕೋರ ಹಮಾಮ್ ಅಲ್-ಹಮ್ಮಮಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭರವಸೆ ನೀಡಿದರೆ ಬಿಜೆಪಿಗೆ ಮರಳುತ್ತೇನೆ: ಈಶ್ವರಪ್ಪ
ಶಿವಮೊಗ್ಗ: ಬಿಜೆಪಿಗೆ ಮರಳಿ ಸೇರುವ ಕುರಿತು ನಗರದ ಪದಾಧಿಕಾರಿಗಳು ಸೇರಿದಂತೆ 50 ಪ್ರಮುಖರೊಂದಿಗೆ ಮೂರು ಹಂತಗಳಲ್ಲಿ ಚರ್ಚೆ ನಡೆಸಿದ್ದೇನೆ. ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವಂತೆ ಅವರೆಲ್ಲರೂ ಸಲಹೆ ನೀಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದು ಆರ್‌ಎಸ್‌ಎಸ್. ಆರ್‌ಎಸ್‌ಎಸ್‌ನ ಪ್ರಮುಖರು ಬಂದು ಬಿಜೆಪಿಗೆ ಸೇರುವಂತೆ ಹೇಳಿದ್ದರು. ಅದರಂತೆ 50 ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಹಿಂದೆ ನನಗೆ ಟಿಕೆಟ್ ಏಕೆ ನೀಡಲಿಲ್ಲ ಎಂಬುದು ಗೊತ್ತಿಲ್ಲ. ಆದರೆ ಈ ಬಾರಿ ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಗೆ ನಿಂತು ಗೆದ್ದು ಬನ್ನಿ. ಯಾರ್ಯಾರೋ ಹೇಳಿದರು ಎಂದು ಹೋಗಿ, ಕಳೆದ ಬಾರಿಯಂತೆ ಆಗುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎಂದರು.
ಅದರಂತೆ ಯಾರಾದರೂ ಭರವಸೆ ನೀಡಿದರೆ ಖಂಡಿತ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ ಅವರು, “ಬಿಜೆಪಿಗೆ ಸೇರಿಸಿಕೊಳ್ಳದಿದ್ದರೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ನಾನೇ ಬಿಜೆಪಿಗೆ ಹೋಗುತ್ತೇನೆ” ಎಂದು ಹೇಳಿದರು.


