ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ಡಾ.ರಾಜ್ ಗಾಯನ HORRIBLE ಅಂದವರು ಯಾರು?
ಡಾ.ರಾಜ್ ಗಾಯನ HORRIBLE ಅಂದವರು ಯಾರು?
ಶ್ರೇಷ್ಠತೆಯೇ ವ್ಯಸನವಾದರೆ ಎಂಥ ಮಾತುಗಳು ಉದುರುತ್ತವೆ ಎಂಬುದಕ್ಕೆ ಈ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಟೆಕ್ಕಿ ಸಂಜಯ್ ನಾಗ್ ಉದಾಹರಣೆ. ಡಾ. ರಾಜ್ಕುಮಾರ್ ಗಾಯನವನ್ನೇ ಭಯಾನಕ (Horrible) ಅಂದವನ ಮನಸ್ಥಿತಿ ಅದೆಷ್ಟು ಕುಲಗೆಟ್ಟು ಹೋಗಿರಬೇಕು.
ಮನುಷ್ಯನ ಮನಸ್ಸಿನೊಳಗೆ ಅಸೂಯೆ, ಹೊಟ್ಟೆಕಿಚ್ಚೆಂಬ ಹಾವೊಂದು ಮುದುಡಿ ಮಲಗಿಯೇ ಇರುತ್ತದೆ. ಆಗಾಗ ಭುಸ್ ಭುಸ್ ಎನ್ನುತ್ತಾ ಅಸೂಯೆಯನ್ನು ಹೊರಹಾಕುತ್ತಿರುತ್ತದೆ. ಯಾವಾಗ, ಹೊಟ್ಟೆಕಿಚ್ಚು ಅಸಹಿಸಲಾಧ್ಯವಾಗುತ್ತದೋ, ಏನೇನೂ ಇಲ್ಲದ ಅವರಿಗೆ, ಅದು ಹೇಗೆ ಅಷ್ಟೆಲ್ಲ ದಕ್ಕಿತು? ಎಂಬ ಅಸೂಯೆ ಹೆಚ್ಚುತ್ತದೋ ಆಗ ಹಾವು ಹೆಡೆ ಬಿಚ್ಚಿ, ವಿಷಕಕ್ಕುತ್ತದೆ.
ತಕ್ಷಣವೇ ಜನರು ಗದರಿಸಿದರೆ ಬಾಲಮುದುರಿ ಬಿಲ ಸೇರಿಕೊಳ್ಳುತ್ತದೆ. ಈ ಸಂಜಯ್ ನಾಗ್ ಸಹ ಇಂಥದ್ದೇ ಹಾವಿನ ಗುಂಪಿಗೆ ಸೇರಿದವನು. ಇತ್ತೀಚಿಗೆ ಬಹಳಷ್ಟು ಮಂದಿಗೆ ದಿಢೀರನೆ ಪ್ರಚಾರಕ್ಕೆ ಬರುವ, ಚರ್ಚೆಗೀಡಾಗುವ ಗೀಳು. ಬಹುಶಃ ಇವನೂ ಅಂಥದ್ದೇ ಸಾಹಸಕ್ಕೆ ಕೈ ಹಾಕಿದ ಅನ್ಸತ್ತೆ. ಆದ್ರೆ, ತಾನು ಯಾರ ವಿರುದ್ಧ ಮಾತನಾಡುತ್ತಿದ್ದೇನೆ ಎಂಬುದು ಗೊತ್ತಿಲ್ಲದವನೇನಲ್ಲ ? ಯಾಕಂದ್ರೆ, ಡಾ.ರಾಜ್ಕುಮಾರ್ ಮರೆತು ಹೋಗುವ ವ್ಯಕ್ತಿಯಲ್ಲ, ವ್ಯಕ್ತಿತ್ವವಲ್ಲ. ಅದೊಂದು ಧ್ರುವತಾರೆ.
ಕೇವಲ ಮೂರನೇ ಕ್ಲಾಸ್ ಓದಿದ, ಸ್ವರ-ತಾಳ-ಜ್ಞಾನವೇ ಗೊತ್ತಿಲ್ಲದೇ, ಶಾಸ್ತ್ರೀಯ ಸಂಗೀತದ ಕಲಿಕೆಯೂ ಇಲ್ಲದೇ ಹಾಡುವುದಿದೆಯಲ್ಲ, ಅದು ಭಯಾನಕವೇ? ಕರ್ಕಶವೇ ? ಶಾಸ್ತ್ರೀಯ ಸಂಗೀತ ಕಲಿತ ಈ ಎಳೆನಿಂಬೆಕಾಯಿಗೆ, ಸಂಗೀತ ಒಲಿಯುವುದು ಭಕ್ತಿಗೆ, ಪ್ರೇಮಕ್ಕೆ, ವಿನಯವಂತಿಗೆ ಎಂಬುದರ ಕನಿಷ್ಟ ಜ್ಞಾನವಿಲ್ಲ. ಸಂಗೀತ ಯಾರಪ್ಪನ ಸ್ವತ್ತೂ ಅಲ್ಲ, ಅದಕ್ಕೆ ಡಾ. ರಾಜ್ ಉದಾಹರಣೆ.
ಸಾಕ್ಷಾತ್ ಸಂಗೀತ ಸರಸ್ವತಿ ಒಲಿದವರು ಮಾತ್ರ ಡಾ.ರಾಜ್ಕುಮಾರ್ ಆಗುತ್ತಾರೆ, ಹಾಡುತ್ತಾರೆ, ಅಭಿನಯಿಸುತ್ತಾರೆ, ಕಲೆಯನ್ನೇ ರಕ್ತ ಮಾಡಿಕೊಳ್ಳುತ್ತಾರೆ. ಮೂರನೇ ಕ್ಲಾಸ್ಗೆ ಓದು ನಿಲ್ಲಿಸಿದ ಡಾ.ರಾಜ್ಗೆ ಮಂತ್ರೋಚ್ಚಾರಣೆ, ಸಂಸ್ಕೃತ ಶ್ಲೋಕಗಳ ಸ್ಪಷ್ಟ ಉಚ್ಚಾರಣೆ, ರಾಗ-ಸ್ವರ, ತಾಳ- ಸ್ವರ ಜ್ಞಾನ…ಹೇಗೆ ಸಾಧ್ಯ ?
ಡಾ.ರಾಜ್ ದನಿಯಲ್ಲಿ ಮಾಣಿಕ್ಯ ವೀಣಾ ಮುಫಲಾಲಯಂತೀಂ..ಕೇಳ್ತಿದ್ರೆ ಕಾಳಿ ಒಲಿದಿದ್ದಳು ಅನ್ನಿಸದೇ ? ರಾಘವೇಂದ್ರ ಸ್ವಾಮಿ ಪಾತ್ರಧಾರಿಯಾಗಿ ಅವರ ಮಂತ್ರೋಚ್ಚಾರಕ್ಕೆ ರಾಯರೇ ಮೆಚ್ಚಿದರಲ್ಲವೇ? ನಾದಮಯ ಈ ಲೋಕವೆಲ್ಲ…ಎಂಬ ದನಿಗೆ ಇಡೀ ಪ್ರಕೃತಿ ತಲೆದೂಗಲಿಲ್ಲವೇ ? ಕಬ್ಬಿಣದ ಕಡಲೆಯಂಥ ಸಂಸ್ಕೃತ ಡಾ.ರಾಜ್ ದನಿಯಲ್ಲಿ ಕರಗಿ, ಕಬ್ಬಿನರಸದಂತೆ ಸಿಹಿಯಾಗಿ, ಕೇಳುವ ಕಿವಿಗಳನ್ನು ಮರಳು ಮಾಡಿ, ತಲೆದೂಗುವಂತೆ ಮಾಡಿತು? ಸಂಗೀತಾಭ್ಯಾಸವೇ ಇಲ್ಲದೇ ಸಾಹಿತ್ಯ, ಸಂಗೀತಕ್ಕೆ ಜೀವ ತುಂಬುವುದು ಸಾಧ್ಯವಾಯ್ತು? ಸಿನಿಮಾ ಹಾಡುಗಳು, ಭಕ್ತಿ ಗೀತೆಗಳು, ದಾಸರ ಕೀರ್ತನೆಗಳು.. ಒಂದೇ ಎರಡೇ ಅವರು ಹಾಡಿದ್ದು.
ಇಂಥ ಗಾನ ಗಂಧರ್ವನ ದನಿಯನ್ನು ಭಯಾನಕ ಎಂದವನು ಮಾಡಿದ್ದು, ಆಕಾಶಕ್ಕೆ ಉಗುಳುವ ಪ್ರಯತ್ನ.. ಅದು ಕೊನೆಗೆ ಇವನ ಮುಖಕ್ಕೆ ಅಪ್ಪಳಿಸಿತು.
ಸುಮ್ನೆ ಟ್ವೀಟ್ ಮಾಡಿ, ಆಮೇಲೆ ಎಸ್ಕೇಪ್ ಆಗಿ ಮತ್ತೆ ಬಂದು ಕ್ಷಮೆಯಾಚಿಸಿ.. ಇದೆಲ್ಲ ನಾಟಕ ಬೇಕಿತ್ತಾ ? ಕೇಳಬೇಕಿರುವುದು ರಾಜ್ ಅಭಿಮಾನಿ ದೇವರ ಕ್ಷಮೆಯನ್ನಲ್ಲ , ನೀನೂ ಆರಾಧಿಸುವ ಸಂಗೀತ ಸರಸ್ವತಿಯನ್ನು. ಅವಳಾದರೂ ಕ್ಷಮಿಸುತ್ತಾಳಾ ? No Way.
ಯಾಕಂದ್ರೆ ಇವನು ಅವಮಾನಿಸಿದ್ದು ರಾಜ್ ರನ್ನಲ್ಲ, ಸಂಗೀತ ಸರಸ್ವತಿಯನ್ನು..!!