ಜೆನ್‌ ಜಿ ಪ್ರತಿರೋಧದ “ಡಾರ್ಲಿಂಗ್‌” ನೇಹಾ ಬೋರಾ – ಗಿರೀಶ್ ಕೋಟೆ

ಜೆನ್‌ ಜಿ ಪ್ರತಿರೋಧದ “ಡಾರ್ಲಿಂಗ್‌” ನೇಹಾ ಬೋರಾ

– ಗಿರೀಶ್ ಕೋಟೆ

ಇದು ಈ ಕ್ಷಣದ ಸತ್ಯ.
ದೇಶದಲ್ಲಿ ನಡೆಯುತ್ತಿರುವ ಜೆನ್‌ ಜಿ ಪ್ರತಿರೋಧದ ಡಾರ್ಲಿಂಗ್‌ ಆಗಿದ್ದಾರೆ ನೇಹಾ ಬೋರಾ. ಸದ್ಯದ ಮಟ್ಟಿಗೆ National ಕ್ರಷ್‌ ಕೂಡ ಈಕೆಯೇ.

ಇಡಿ ದೇಶದ ಜೆನ್‌ ಜಿ ಸಮುದಾಯ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಪ್ರಭಲ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಲು ಬಿಜೆಪಿ ಬೆಂಬಲಿಗರೇ ಹಗಲೂ ರಾತ್ರಿ ಯತ್ನಿಸುತ್ತಿರುವಂತಿದೆ.

ಜೆನ್‌ ಜಿ ಸಮುದಾಯದ ಚಳವಳಿಯ ಬಗೆಗೆ, ಇದರ ಮುಂಚೂಣಿಯಲ್ಲಿರುವವರ ಬಗೆಗೆ ತಮ್ಮ ತಮ್ಮ ಸಾಮಾಜಿಕ ತಾಣಗಳಲ್ಲಿ ಪೋಣಿಸುತ್ತಿರುವ ಕಲ್ಪನಾತೀತ ಬೈಗುಳ ಮತ್ತು ಅಪಪ್ರಚಾರಗಳೇ ಇದಕ್ಕೆ ಸಾಕ್ಷಿ.

ಇದಕ್ಕೆ ತಕ್ಕಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಗೋಡೆಬರಹ ಮಾಡಿದವರ ಮೇಲೆ ಕೊಲೆಯತ್ನದ ಪ್ರಕರಣ ದಾಖಲಾಗುವುದು, ಪ್ರತಿಭಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತೆಯರ ಮೇಲೆ ಅತ್ಯಾಚಾರ ಆರೋಪದ ದೂರು ಬಂದರೂ ಎಫ್‌ಐಆರ್‌ ದಾಖಲಾಗದಿರುವ ಸಂಗತಿಗಳು ಬಿಜೆಪಿ ಬೆಂಬಲಿಗರ ಅಪಪ್ರಚಾರಕ್ಕೆ ಇಳುವರಿ ಸಿಗದಂತೆ ಮಾಡಿಟ್ಟಿವೆ.

ಹೀಗಾಗಿ ತರಹೇವಾರಿ ಕತೆಗಳನ್ನು ಮೀರಿ ಜೆನ್‌ ಜಿ ಸಮುದಾಯ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಈ ಪ್ರಭಾವದ ಕೇಂದ್ರಬಿಂದು ನೇಹಾ ಬೋರಾ ಆಗಿರುವುದು ಈ ಕ್ಷಣದ ವಾಸ್ತವ. ಈ ಪ್ರಭಾವ ಯಾವ ಮಟ್ಟದ್ದು ಎನ್ನುವುದನ್ನು ಈ ಹೋರಾಟದ ಪರಿಣಾಮದಲ್ಲಿ ಕಾಣಬಹುದು.

ಅರ್ಧ ಶತಮಾನ ಪತ್ರಿಕಾ ವೃತ್ತಿಯಲ್ಲಿ ಕಳೆದ ಮಾಧ್ಯಮ ದಿಗ್ಗಜರೂ ಯಾರನ್ನು ಪ್ರಶ್ನಿಸಲು ಹೆದರುತ್ತಿದ್ದರೋ ಅವರನ್ನು ಗೇಲಿ ಮಾಡಬಹುದು, ಯಾವುದನ್ನು ವಿರೋಧಿಸಲು ಭಯ ಪಡುತ್ತಿದ್ದರೋ ಅದನ್ನು ಅಪಹಾಸ್ಯ ಮಾಡಬಹುದು. ಮಾಡಿ ದಕ್ಕಿಸಿಕೊಳ್ಳಬಹುದು ಎನ್ನುವುದನ್ನು ಈ ಹೊತ್ತಿನ ಜೆನ್‌ ಜಿ ಹೋರಾಟ ಸಾಬೀತುಪಡಿಸಿದೆ. ಈ ಪರಿಣಾಮದ ಒಂದು ಗುಣಾತ್ಮಕ ಚೈತನ್ಯದ ಸಂಕೇತವಾಗಿದ್ದಾರೆ ನೇಹಾ ಬೋರಾ.

29 ವರ್ಷದ ವರ್ಷದ ನೇಹಾ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷೆ.

ಪರೀಕ್ಷಾ ಅಕ್ರಮಗಳ ವಿರುದ್ಧದ ಜಂತರ್‌ ಮಂತರ್‌ ಹೋರಾಟ, ಜಾರ್ಖಂಡ್‌ನ ವಿದ್ಯಾರ್ಥಿ ಪ್ರತಿಭಟನೆ ಬಳಿಕ ಈಗ ದೆಹಲಿಯಲ್ಲಿ ನಡೆಯುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಪದಚ್ಯುತಿ ಚಳವಳಿಯಲ್ಲಿ ನೇಹಾ ಅವರು ಪ್ರತಿಭಟನಾ ಪರಂಪರೆಯ ಹೊಸ ಭಾಷೆಯಾಗಿ ದೇಶದ ಯುವ ಜನತೆಗೆ ಮಾತ್ರವಲ್ಲ ಕೇಂದ್ರ ಸರ್ಕಾರಕ್ಕೂ ಕಾಣಿಸುತ್ತಿದ್ದಾರೆ, ಕೇಳಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಏನು ಗೊತ್ತಾ? ಪರೀಕ್ಷಾ ಅಕ್ರಮದ ಕಾರಣಕ್ಕೆ ನಡೆದ ಜೆನ್‌ ಜಿ ಹೋರಾಟ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಬರೆಸಿಕೊಂಡಿತು. ಬಳಿಕ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ಮುಖಂಡರ ಜೊತೆ ಅಧಿಕೃತ ಮಾತುಕತೆಗೆ ಮುಂದಾಯಿತು. ಮಾತುಕತೆಗೆ ಬರುವವರಲ್ಲಿ ನೇಹಾ ಬೋರಾ ಇರಬಾರದು ಎನ್ನುವ ಷರತ್ತು ಇತ್ತು. ಈ ಷರತ್ತಿಗೆ ಒಪ್ಪಿಕೊಂಡ ಕಾಂಕ್ರೋಚ್‌ ಪಾರ್ಟಿ ನಾಯಕರು ನೇಹಾ ಅವರನ್ನು ಕೈ ಬಿಟ್ಟು ತಾವಷ್ಟೆ ಮಾತುಕತೆಗೆ ತೆರಳಿದ್ದರು. ಇದು ನೇಹಾ ಅವರ ಪ್ರಭಾವ.

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಹೊಣೆಗಾರಿಕೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸೋನಂ ವಾಂಗ್‌ಚುಕ್‌ ಮತ್ತು ಇತರ ವಿದ್ಯಾರ್ಥಿ ನಾಯಕರೊಂದಿಗೆ ನೇಹಾ 23 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ 7.5 ಕೆಜಿ ತೂಕ ಇಳಿಸಿಕೊಂಡು ಸಣಕಲಾದರು.

ಈ ಉಪವಾಸ ಸತ್ಯಾಗ್ರಹದ ವೇಳೆ ಸೋನಂ ವಾಂಗ್‌ ಚುಕ್‌ ಅವರನ್ನು ಮತ್ತೋರ್ವ ಅಣ್ಣಾ ಹಜಾರೆ ಎನ್ನುವ ಅನುಮಾನದಲ್ಲಿ, ಎಚ್ಚರದಲ್ಲಿ ನೋಡುವವರು ಹೆಚ್ಚಾದರು. ಆದರೆ ನೇಹಾ ಬೋರಾ ಅವರ ದಿಟ್ಟತನ, ಸ್ಪಷ್ಟತೆಯ ಬಗ್ಗೆ ಅನುಮಾನಗಳು ವ್ಯಕ್ತ ಆಗಲಿಲ್ಲ. ಕೇಂದ್ರ ಸರ್ಕಾರದ ಅಧಿಕೃತ ಮಾತುಕತೆಯಿಂದ ಹೊರಗಿಡಲಾಗಿದ್ದ ನೇಹಾ ಬೋರಾ ಜೆನ್‌ ಜಿ ಹೋರಾಟದ ಅಂತರಾಳಕ್ಕೆ ಅಧಿಕೃತವಾಗಿ ಇಳಿದಿರುವಂತೆ ಕಾಣುತ್ತಿದ್ದಾರೆ.

ತನ್ನ ತಂದೆ ತಾಯಿ ಇಬ್ಬರೂ ಅಪ್ಪಟ ಬೆಜೆಪಿ ಬೆಂಬಲಿಗರು ಎಂದು ಸ್ವತಂ ಹೇಳಿಕೊಂಡಿದ್ದ ನೇಹಾ ಅವರು 23ದಿನಗಳ ಉಪವಾಸದಲ್ಲಿ ಮಲಗಿದ್ದರು. ಸಹಪಾಠಿಯೊಬ್ಬರು ಬಂದು “ಒಬ್ಬ ಮಹಿಳೆ ಬಂದಿದ್ದಾರೆ. ಅವರು ತಾವು ನಿಮ್ಮ ತಾಯಿ ಎಂದು ಹೇಳುತ್ತಿದ್ದಾರೆ” ಎಂದರು. ನೇಹಾ ಮೊದಲು ನಂಬಲೇ ಇಲ್ಲ. ಜೋತು ಬಿದ್ದಿದ್ದ ಕನ್ನಡಕವನ್ನು ಕಣ್ಣಿಗೆ ಏರಿಸಿಕೊಂಡು ನೋಡಿದಾಗ ನಿಜವಾಗಿಯೂ ಅವರ ತಾಯಿಯೇ ಬಂದು ನಿಂತಿದ್ದರು. ಪ್ರತಿಬಾರಿಯಂತೆ ಈ ಬಾರಿ ಅವರು ಮಗಳನ್ನು ಬಯ್ಯಲಿಲ್ಲ.

ತಾಯಿ ಅಲ್ಲಿ ಪ್ರತಿಭಟನೆಯ ವಾತಾವರಣವನ್ನು ನೋಡಿದರು. ಮುಂದಿನ ದಿನ ನಡೆದ ಲಾಠಿಚಾರ್ಜ್, ಗಾಯಗೊಂಡ ವಿದ್ಯಾರ್ಥಿಗಳನ್ನು ಕಣ್ಣಾರೆ ಕಂಡರು. ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದಾಗ, ತಾಯಿಯೇ ನೇಹಾಗೆ ಫೋನ್ ಮಾಡಿ “ನಿಮ್ಮ ಸಹಚರರಿಗೆ ಅಭಿನಂದನೆ ಹೇಳು” ಎಂದು ಹೇಳಿದರು.

ತಾಯಿಯಲ್ಲಿನ ಈ ಬದಲಾವಣೆಯನ್ನು ನೇಹಾ, ತಮ್ಮ ಹೋರಾಟದ ಅತ್ಯಂತ ವೈಯಕ್ತಿಕ ಗೆಲುವುಗಳಲ್ಲಿ ಒಂದು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಜೆನ್‌ ಜಿ ಚಳವಳಿ ದೇಶದ ಇತರ ಪೋಷಕರಲ್ಲಿ ತಂದ ಬದಲಾವಣೆ ಕೊನೆಗೆ ತಮ್ಮದೇ ಮನೆಯಲ್ಲೂ ಸಂಭವಿಸಿತು ಎಂದು ಖುಷಿಪಟ್ಟರು.

ಉಪವಾಸದಲ್ಲಿ ಕಂಡ ಬಡಕಲು ನೇಹಾ ಪೊಲೀಸ್‌ ಬ್ಯಾರಿಕೇಡ್‌ಗಳನ್ನು, ಪೈಲ್ವಾನ್‌ಗಳಂತಿರುವ ಪೊಲೀಸ್‌ ಸಿಬ್ಬಂದಿಯ ಚಕ್ರವ್ಯೂಹದೊಳಗೆ ಪ್ರವೇಶಿಸುವ ವಿಡಿಯೊಗಳು ಕೋಟಿಗಟ್ಟಲೆ ವೀಕ್ಷಣೆ ಪಡೆಯುತ್ತಿವೆ. ಲಾಠಿ ಏಟು ತಿಂದ ತನ್ನ ಬಗ್ಗೆ ಸುತ್ತಲಿದ್ದ ವಿದ್ಯಾರ್ಥಿಗಳು ಕಣ್ಣಲ್ಲಿ ನೀರು ತುಂಬಿಕೊಂಡರೆ, ಮರುಕ್ಷಣವೇ ಕಾವ್ಯ ಮತ್ತು ಹಾಸ್ಯದ ಮೂಲಕ ಇಡೀ ವಾತಾವರಣವನ್ನು ಬದಲಾಯಿಸಿ ಎಲ್ಲರನ್ನೂ ತನ್ನ ವ್ಯಂಗ್ಯದ ಮೂಲಕ ನಗಿಸುತ್ತಾರೆ.

ತೋಳಿಗೆ ಜೋತು ಬಿದ್ದ ಬ್ಯಾಗನ್ನು ಪಕ್ಕಕ್ಕಿಟ್ಟು ಟಪಾಂಗುಚಿ ಸ್ಟೆಪ್ಸ್‌ ಹಾಕುತ್ತಾ ಹೋರಾಟದ ಹಾಡುಗಳಿಗೆ ಜೀವ ತುಂಬುತ್ತಾರೆ. ಚಳವಳಿಗಾರರ ಮೇಲಿನ ಅಸಾಧ್ಯ ದೌರ್ಜನ್ಯ ಕಂಡಾಗಿ ಜ್ವಾಲಾಮುಖಿಯಂತೆ ಕೋಪಗೊಳ್ಳುತ್ತಾರೆ.

ಒಂದು ದಿನ ಜಂತರ್‌ ಮಂತರ್‌ನಲ್ಲಿ ನೇಹಾ ಹಲವು ವಿಭಿನ್ನ ಹೋರಾಟಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಕರೆತಂದರು. ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ಯುವಕರು, ಪೊಲೀಸ್ ದೌರ್ಜನ್ಯ ಎದುರಿಸಿದವರು, ಶಿಕ್ಷಣ ವ್ಯವಸ್ಥೆಯ ವಿರುದ್ಧ ಮಾತನಾಡುತ್ತಿರುವ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿ ಹೋರಾಟಗಾರರು ಎಲ್ಲರನ್ನೂ ಒಂದೇ ಕಡೆ ಸೇರಿಸಿ ಆಕೆ ಒಂದು ಮಾತು ಹೇಳಿದರು. ನಮ್ಮ ನಿಮ್ಮ ಹೋರಾಟದ ಮೂಲ ಮತ್ತು ನೋವಿನ ಮೂಲ ಒಂದೇ ಆಗಿದೆ. ಹೀಗಾಗಿ ನಮ್ಮ ಹೋರಾಟದ ಧಾರೆಗಳು ಬೇರೆ ಬೇರೆ ಆದರೂ ನಮ್ಮಗಳ ನೋವಿನ ಮೂಲ ಒಂದೇ ಆಗಿರುವಂತೆ ಹೋರಾಟವೂ ಒಂದೇ ಆಗಿದೆ ಎಂದರು.

ಈ ಸ್ಪಷ್ಟತೆ ನೇಹಾ ಅವರ ಪ್ರಭುದ್ಧತೆಗೆ ಕನ್ನಡಿ ಹಿಡಿದಂತಿದೆ ಎಂದು ಹಳೆ ಸ್ಕೂಲಿನ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್‌ ನಲ್ಲಿ ಅಕ್ರಮ ನೇಮಕಾತಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ನೇಹಾ ಅವರ ಮುಖಕ್ಕೆ ತಲೆಗೆ ಮಸಿ ಎರಚಿದರು. ಮಸಿ ಎರಚಿದವರು ತಮ್ಮ ಸಾಹಸಕ್ಕೆ ಖುಷಿ ಪಡುವ ಮುನ್ನವೇ “ನಾನು ಈ ಮಸಿಯನ್ನು ಹೆಮ್ಮೆಯಿಂದ ಧರಿಸುತ್ತೇನೆ. ಇದೇ ಮಸಿಯಿಂದ ಭವಿಷ್ಯ ಬರೆಯುತ್ತೇನೆ” ಎನ್ನುವ ಅವರ ಮಾತು ಮಸಿ ಪಂಡಿತರ ನೆಮ್ಮದಿ ಕೆಡಿಸಿದ್ದರ ಬಗ್ಗೆಯೇ ನೂರಾರು ಮಂದಿ ವಿಡಿಯೊಗಳನ್ನು ಮಾಡಿದ್ದಾರೆ.

ಹಸಿವಿನಿಂದ ನಿತ್ರಾಣಗೊಂಡು ನೆಲಕಚ್ಚಿದಂತೆ ಕುಳಿತಿದ್ದ ನೇಹಾ ಬೋರಾ ಅವರ ದಿಕ್ಕಿಗೆ ರಾಶಿ ರಾಶಿ ಪೊಲೀಸರು ಧಾವಿಸುತ್ತಿದ್ದಂತೆ ಚಕ್ಕನೆ ಎದ್ದು ಮೈಕ್‌ ಹಿಡಿದು ಹಾಡು, ಭಾಷಣಕ್ಕೆ ಇಳಿಯುವ ಈಕೆ ಭಾರತದ ವಿದ್ಯಾರ್ಥಿ ಚಳವಳಿಗಳ ಇತಿಹಾಸಕ್ಕೆ ಹೊಸ ಭಾಷೆ ರೂಪಿಸಿದ್ದಾರೆ. ಮೀಮ್‌, ವ್ಯಂಗ್ಯ, ವಿಡಿಯೊ, ಹಾಸ್ಯ ಮತ್ತು ವೈಯಕ್ತಿಕ ಕಥನ, ಹಾಡು, ನೃತ್ಯದ ಹೊಸ ಪ್ರತಿಭಟನಾ ಭಾಷೆಯ ವ್ಯಾಕರಣವಾಗಿ ನೇಹಾ ಕಾಣುತ್ತಿದ್ದಾರೆ.

ಇದನ್ನೇ “ದ ಕ್ಷಿಂಟ್‌ʼ” ಮಾಧ್ಯಮ ನೇಹಾ ಅವರ ಬಗ್ಗೆ ಬರೆಯುತ್ತಾ, “ಚಳವಳಿಯನ್ನು ಮತ್ತು ಹೋರಾಟವನ್ನು ಕೇವಲ ಕೋಪದಿಂದಲ್ಲ, ಧೈರ್ಯ, ಕಲ್ಪನೆ, ಹಾಸ್ಯ ಮತ್ತು ಸ್ನೇಹದಿಂದಲೂ ನಡೆಸಬಹುದು ಎಂಬುದನ್ನು ತೋರಿಸುತ್ತಿರುವ ಯುವ ನಾಯಕಿ.” ಎಂದು ಬಣ್ಣಿಸಿದೆ.