ರೈತರ ಸಂಕಷ್ಟ ಆಲಿಸಲು ಅ.12ರಂದು ನಿಖಿಲ್ ಕುಮಾರಸ್ವಾಮಿ ಭೇಟಿ; ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್

ರೈತರ ಸಂಕಷ್ಟ ಆಲಿಸಲು ಅ.12ರಂದು ನಿಖಿಲ್ ಕುಮಾರಸ್ವಾಮಿ ಭೇಟಿ

ಶಿವಮೊಗ್ಗ: ಮಳೆ ಕೊರತೆಯಿಂದ ಬೆಳೆ ನಷ್ಟದ ಭೀತಿ ಎದುರಿಸುತ್ತಿರುವ ರೈತರ ಸಂಕಷ್ಟವನ್ನು ಅರಿಯಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಅ.12ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಆಯನೂರಿನಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ಮಧ್ಯಾಹ್ನ ಭದ್ರಾವತಿಯಲ್ಲಿ ಸಭೆ ಆಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳು ಸರಿಯಾಗಿ ಫಸಲು ನೀಡುತ್ತಿಲ್ಲ. ನೀರಿನ ಕೊರತೆಯಿಂದ ಮೆಕ್ಕೆಜೋಳದ ತೆನೆಗಳು ಒಣಗುತ್ತಿವೆ. ರೈತರು ಸಂಕಷ್ಟ ಎದುರಿಸುತ್ತಿದ್ದು, ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ರಾಜಕೀಯಕ್ಕೆ ಬರಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದರು.

ಜೆಡಿಎಸ್ ಮುಖಂಡೆ ಎಸ್.ವಿ. ರಾಜಮ್ಮ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅರಣ್ಯ ನಾಶದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ಹೇಗೆ ಬರುತ್ತದೆ, ರೈತರ ಏಳಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಅರಣ್ಯವನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಪುಷ್ಪಾವತಿ, ಹೊನ್ನಮ್ಮ, ಶೈಲಾ ನಾಗರಾಜ, ಉಷಾ ನಾಯ್ಕ್ ಇದ್ದರು.