*ಎಫ್‌ಸಿಐ ಗೋದಾಮಿನ ಹುಳು-ನುಸಿಯಿಂದ ನಿವಾಸಿಗಳಿಗೆ ಆರೋಗ್ಯ ಕಿರಿಕಿರಿ: ವೈ.ಹೆಚ್.ನಾಗರಾಜ್ ಆಕ್ರೋಶ*
*ಎಫ್‌ಸಿಐ ಗೋದಾಮಿನ ಹುಳು-ನುಸಿಯಿಂದ ನಿವಾಸಿಗಳಿಗೆ ಆರೋಗ್ಯ ಕಿರಿಕಿರಿ: ವೈ.ಹೆಚ್.ನಾಗರಾಜ್ ಆಕ್ರೋಶ*
ಶಿವಮೊಗ್ಗ: ಶಿವಮೊಗ್ಗದ ಅಲ್ಕೋಳ ಬಳಿ ಇರುವ ಎಫ್‌ಸಿಐ ಗೋದಾಮಿನಲ್ಲಿ ಸಂಗ್ರಹವಾಗಿರುವ ಅಕ್ಕಿಯಿಂದ ಹುಳು, ಹುಪ್ಪಟೆ, ನುಸಿಗಳು ಹೊರಬಂದು ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ಕಿರಿಕಿರಿ ಹಾಗೂ ಆರೋಗ್ಯ ಸಮಸ್ಯೆ ಉಂಟುಮಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋದಾಮಿನಲ್ಲಿ ಬೂಸು ಹಿಡಿದ ಅಕ್ಕಿಯಿಂದ ಹೊರಬರುತ್ತಿರುವ ಸಾವಿರಾರು ಹುಳುಗಳು ನೇರವಾಗಿ ಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಅಡುಗೆ ಮನೆ, ನೀರು, ಆಹಾರ ಪದಾರ್ಥಗಳಿಗೆ ಹುಳುಗಳು ಸೇರುತ್ತಿದ್ದು, ದುರ್ವಾಸನೆ ಹಾಗೂ ಚರ್ಮದ ಖಾಯಿಲೆ, ಉಸಿರಾಟದ ತೊಂದರೆಯಿಂದ ನಿವಾಸಿಗಳು ಬೇಸತ್ತಿದ್ದಾರೆ. ಈ ಬಗ್ಗೆ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
*ಬಡವರ ಹೊಟ್ಟೆ ತುಂಬಬೇಕಾದ ಅನ್ನವನ್ನು ಅಧಿಕಾರಿಗಳು ಹಾಳು ಮಾಡುತ್ತಿದ್ದಾರೆ. ಒಂದೆಡೆ ಬಡವರು ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯ ಗೋದಾಮಿನಲ್ಲೇ ಕೊಳೆಯುತ್ತಿದೆ. ಇದು ಬಡವರ ಹಸಿವಿನ ಮೇಲೆ ಮಾಡುತ್ತಿರುವ ದ್ರೋಹವಾಗಿದೆ.*
ಈ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೊಳೆತ ಅಕ್ಕಿಯನ್ನು ಕೂಡಲೇ ವಿಲೇವಾರಿ ಮಾಡಬೇಕು. ಗೋದಾಮುಗಳನ್ನು ಜನವಸತಿ ಪ್ರದೇಶದಿಂದ ದೂರ ಸ್ಥಳಾಂತರಿಸಬೇಕು, ಇಲ್ಲವೇ ವೈಜ್ಞಾನಿಕವಾಗಿ ಔಷಧಿ ಸಿಂಪಡಿಸಿ ಹುಳು-ನುಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈಗ ತೊಂದರೆಗೀಡಾಗಿರುವ ನಿವಾಸಿಗಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಈ ವಿಚಾರದಲ್ಲಿ ಸಂಸದರ ಪಾತ್ರ ಬಹಳ ಮುಖ್ಯವಾಗಿದೆ ಎಂದು ವೈ.ಹೆಚ್.ನಾಗರಾಜ್ ಆಗ್ರಹಿಸಿದ್ದಾರೆ.


