ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ ರಾಜ್ಯಮಟ್ಟದ ವಿಜೇತರಿಗೆ ₹30 ಸಾವಿರ ಬಹುಮಾನ
ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ
ರಾಜ್ಯಮಟ್ಟದ ವಿಜೇತರಿಗೆ ₹30 ಸಾವಿರ ಬಹುಮಾನ
ಶಿವಮೊಗ್ಗ: ಶಿವಮೊಗ್ಗ ದಸರಾ–2026ರ ಅಂಗವಾಗಿ ಅ.11ರಂದು ಸಂಜೆ 6ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದೇಹದಾರ್ಡ್ಯ ಪಟುಗಳ ಜಿಲ್ಲಾ ಸಂಘದ ಸಹಕಾರ್ಯದರ್ಶಿ ಬಿ. ಎಸ್. ವಿಕ್ರಮ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಯ ಪ್ರಾಯೋಜಕತ್ವದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ಶಿವಮೊಗ್ಗ ಜಿಲ್ಲಾ ದೇಹದಾರ್ಡ್ಯ ಪಟುಗಳ ಸಂಘದ ಸಹಯೋಗದಲ್ಲಿ ಯುವದಸರಾ–2026ರ ಪ್ರಯುಕ್ತ ಸ್ಪರ್ಧೆ ನಡೆಯಲಿದೆ ಎಂದರು.
ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯ ವಿಜೇತರಿಗೆ ₹30 ಸಾವಿರ, ರನ್ನರ್‌ಅಪ್‌ಗೆ ₹15 ಸಾವಿರ ಹಾಗೂ ಉತ್ತಮ ದೇಹದಾರ್ಡ್ಯ ಪ್ರದರ್ಶಕರಿಗೆ ₹5 ಸಾವಿರ ನಗದು ಬಹುಮಾನ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.
ತೂಕದ ವಿಭಾಗ: ರಾಜ್ಯಮಟ್ಟದ ಸ್ಪರ್ಧೆಯು 55, 60, 65, 70, 75, 80, 85 ಮತ್ತು 90 ಕೆ.ಜಿ. ಸೇರಿದಂತೆ ಎಂಟು ತೂಕದ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ₹5 ಸಾವಿರ, ದ್ವಿತೀಯ ಸ್ಥಾನಕ್ಕೆ ₹4 ಸಾವಿರ, ತೃತೀಯ ಸ್ಥಾನಕ್ಕೆ ₹3 ಸಾವಿರ, ನಾಲ್ಕನೇ ಸ್ಥಾನಕ್ಕೆ ₹2 ಸಾವಿರ ಹಾಗೂ ಐದನೇ ಸ್ಥಾನಕ್ಕೆ ₹1 ಸಾವಿರ ನಗದು ಬಹುಮಾನದೊಂದಿಗೆ ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು ಎಂದರು.
ಕಾರ್ಯದರ್ಶಿ ಬಿ. ಯೋಗೀಶ್ ಮಾತನಾಡಿ, ಜಿಲ್ಲಾಮಟ್ಟದ ದೇಹದಾಂಡ್ಯ ಸ್ಪರ್ಧೆಯ ವಿಜೇತರಿಗೆ ₹10 ಸಾವಿರ ಹಾಗೂ ರನ್ನರ್‌ಅಪ್‌ಗೆ ₹8 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.
ತೂಕದ ವಿಭಾಗ: ಈ ಸ್ಪರ್ಧೆಯು 55, 60, 65, 70, 75 ಮತ್ತು 80 ಕೆ.ಜಿ. ಸೇರಿದಂತೆ ಆರು ತೂಕದ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ₹3 ಸಾವಿರ, ದ್ವಿತೀಯ ಸ್ಥಾನಕ್ಕೆ ₹2,500 ಹಾಗೂ ತೃತೀಯ ಸ್ಥಾನಕ್ಕೆ ₹2 ಸಾವಿರ ನಗದು ಬಹುಮಾನ ಪರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದವರಿಗೆ ಪಾರಿತೋಷಕ ಹಾಗೂ ಪ್ರಶಸ್ತಿಪತ್ರ ವಿತರಿಸಲಾಗುವುದು ಎಂದರು.
ತೂಕ ಪರಿಶೀಲನೆ: ಸ್ಪರ್ಧಿಗಳ ದೇಹದ ತೂಕ ಪರಿಶೀಲನೆಯು ಅ.11ರಂದು ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳುವವರು ಶಿವಮೊಗ್ಗ ಜಿಲ್ಲಾ ದೇಹದಾರ್ಡ್ಯ ಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೀಶ್ ಬಿ. (ಮೊ. 9972369129) ಅಥವಾ ಯುವದಸರಾ ಕಾರ್ಯದರ್ಶಿ, ಕಿರಿಯ ಅಭಿಯಂತರ ಶಿವಕುಮಾರ್ (ಮೊ. 7676375417) ಅವರನ್ನು ಸಂಪರ್ಕಿಸಬಹುದು ಎಂದರು.
ಗೌರವ ಅಧ್ಯಕ್ಷ ಶಿವಬಸಪ್ಪ, ಉಪಾಧ್ಯಕ್ಷ ಆರ್. ಶರವಣ, ಖಜಾಂಚಿ ಪ್ರಶಾಂತ್, ನಿರ್ದೇಶಕರಾದ ವಿನಯ್, ಮನ್ಸೂರ್, ಆನಂದ ರಾವ್, ಸುರೇಶ್ ಕುಮಾರ್, ಪರಶುರಾಮ್ ಇದ್ದರು.


