ನಬಾರ್ಡ್ ನಿಂದ 195.73 ಕೋಟಿ ಅನುದಾನಕ್ಕೆ ಮನವಿ; ಎಂಎಡಿಬಿ ಅಧ್ಯಕ್ಷ- ಆರ್.ಎಂ.ಮಂಜುನಾಥ ಗೌಡ

ನಬಾರ್ಡ್ ನಿಂದ 195.73 ಕೋಟಿ ಅನುದಾನಕ್ಕೆ ಮನವಿ;
  • ಎಂಎಡಿಬಿ ಅಧ್ಯಕ್ಷ- ಆರ್.ಎಂ.ಮಂಜುನಾಥ ಗೌಡ
ಶಿವಮೊಗ್ಗ;  ನಬಾರ್ಡ್‌ನಿಂದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ 195.73 ಕೋಟಿ ರೂ.ಗಳ ಸಾಲದ ಮೂಲಕ ಅನುದಾನ ನೀಡುವಂತೆ ಸರ್ಕಾರದ ಮೂಲಕ ಮನವಿ ಮಾಡಲಾಗಿದೆ ಎಂದು ಎಂಎಡಿಬಿಯ ನೂತನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಎಡಿಬಿ ಎಂಬುವುದು ಒಂದು ವಿಸ್ತಾರವಾದ ಕ್ಷೇತ್ರವಾಗಿದೆ. ಇಲ್ಲಿ 12 ಸಂಸದರು, 65 ವಿಧಾನಸಭಾ ಸದಸ್ಯರು, 21 ವಿಧಾನಪರಿಷತ್ ಸದಸ್ಯರು, 13 ಜಿ.ಪಂ. ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, 10 ನಾಮನಿರ್ದೇಶಿತ ಸದಸ್ಯರು, ಮಂಡಳಿ ಕಾರ್ಯದರ್ಶಿ ಸೇರಿದಂತೆ ಒಟ್ಟು 135 ಸದಸ್ಯರಿರುತ್ತಾರೆ. 13 ಜಿಲ್ಲೆಗಳಲ್ಲಿ ಇದು ವಿಸ್ತಾರವಾಗಿದ್ದು, 74 ತಾಲ್ಲೂಕುಗಳು, 65 ವಿಧಾನಸಭಾ ಕ್ಷೇತ್ರಗಳು, 21 ವಿಧಾನಪರಿಷತ್ ಸದಸ್ಯರು ಈ ಮಂಡಳಿಯಲ್ಲಿ ಬರುತ್ತಾರೆ ಎಂದರು.
ನನಗೆ ಬಹಳ ದೊಡ್ಡ ಜವಬ್ದಾರಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ನೀಡಿದ್ದಾರೆ. 40 ಕೋಟಿ ಅನುದಾನವನ್ನು ನಮ್ಮ ನಿಗಮಕ್ಕೆ ಬಜೆಟ್‌ನಲ್ಲಿ ತೆಗೆದಿಟ್ಟಿದ್ದಾರೆ. ಈ ಹಣದಲ್ಲಿ ಮಲೆನಾಡಿಗೆ ಪೂರಕ ಕೆಲಸಗಳನ್ನು ನಾವು ಮಾಡಬೇಕಾಗಿದೆ ಎಂದರು.
ರಸ್ತೆ, ಶಾಲ ಕಟ್ಟಡ, ಕುಡಿಯುವ ನೀರಿನ ಘಟಕಗಳು , ಚೆಕ್ ಡ್ಯಾಂ ಹಿಂಗು ಗುಂಡಿಗಳು, ಕಾಲ ಸಂಕ, ತೂಗು ಸೇತುವೆ ಇನ್ನಿತರೆ ಸೇತುವೆಗಳಿಗಾಗಿ ಈ ಹಣವನ್ನು ಬಳಸಿಕೊಳ್ಳಬೇಕಾಗಿದೆ. ದಿವಂಗತ ಬಂಗಾರಪ್ಪನವರು 1991ರಲ್ಲಿ ಈ ಮಂಡಳಿಯನ್ನು ರಚಿಸಿ ಚೆನ್ನಾಗಿ ನಡೆಯುತ್ತಿದ್ದ ಮಂಡಳಿ ಆರ್ಥಿಕ ಮುಂಗಟ್ಟನ್ನು ಎದುರಿಸಿದ್ದು, ಈಗಲೂ ಹಾಗೆಯೇ ಇದೆ. ಇದನ್ನು ಸರಿಪಡಿಸಿಕೊಂಡು ಅತ್ಯುತ್ತಮ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.
ಈ ಎಲ್ಲಾ ಹಿನ್ನಲೆಯಲ್ಲಿ ನಬಾರ್ಡ್‌ನಿಂದ ನಾವು ಸಾಲವನ್ನು ಬಯಸಿದ್ದೇವೆ. ನಬಾರ್ಡ್‌ನ ಕೆಲಸ ಕೂಡ ಗ್ರಾಮೀಣಾಭಿವೃದ್ಧಿಯೇ ಆಗಿದೆ. ಹಾಗಾಗಿ, ಸರ್ಕಾರದ ಮೂಲಕ ನಾವು ಈ ಮೊತ್ತ ಕೇಳಿದ್ದೇವೆ. ಅನುದಾನದ ರೂಪದಲ್ಲಿಯೂ ಕೂಡ ಇದನ್ನು ನೀಡಬಹುದು. ಹಾಗಾಗಿ 195 ಕೋಟಿ ನೀಡಿದರೆ, ಬಹಳಷ್ಟು ಕೆಲಸಗಳನ್ನು ಮಾಡಲು ಸಾಧ್ಯ ಎಂದರು.
ಮಲೆನಾಡಿನಲ್ಲಿ ಬೃಹತ್ ತೂಗು ಸೇತುವೆ ಹಾಗಬೇಕಾಗಿದೆ. ಇದಕ್ಕಾಗಿ 115 ಕೋಟಿ ವೆಚ್ಚವಾಗಬಹುದು. 40 ಸಣ್ಣ ಸಣ್ಣ ತೂಗು ಸೇತುವೆಗಳು ನಿರ್ಮಾಣ ವಾಗಬೇಕಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಬೇಕಾಗಿದೆ. ಸುಮಾರು 40 ಕೋಟಿ ವೆಚ್ಚದಲ್ಲಿ ಕಾಲು ಸಂಕಗಳ ನಿರ್ಮಾಣವಾಗಬೇಕಾಗಿದೆ. ಹೀಗೆ  ಪ್ರಥಮ ಆದ್ಯತೆಯಾಗಿದೆ ಕಾಲು ಸಂಕ, ತೂಗು ಸೇತುವೆ, ರಸ್ತೆ, ಚೆಕ್ ಡ್ಯಾಂ ಇವುಗಳಿಗೆ ಹಣವನ್ನು ವಿನಿಯೋಗಿಸಲಾಗುವುದು ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯನ್ನು ಹೊಸ ರೀತಿಯಲ್ಲಿ ನಿರ್ಮಾಣ ಮಾಡಬೇಕೆಂಬ ಉದ್ದೇಶ ನಮಗಿದೆ. ಸರ್ಕಾರದ ಅನುದಾನದ ಜೊತೆಜೊತೆಗೆ ಬೇರೆ ಬೇರೆ ಹಣದ ಮೂಲಗಳನ್ನು ನಾವು ಹುಡುಕಬೇಕಾಗಿದೆ. ಗಣಿಗಾರಿಕೆಯಿಂದ ಬರುವ ರಾಯಲ್ಟಿ ಹಣವನ್ನು ಎಂಎಡಿಬಿಗೂ ನೀಡಿದರೆ ಗಣಿಗಾರಿಕೆಯಿಂದ ಹಾಳಾದ ಪ್ರದೇಶಗಳನ್ನು ಪುನರ್ ಮಾಡಬಹುದಾಗಿದೆ. ಅವಕಾಶಗಳು ಇವೆ, ನಾವು ಅದನ್ನು ಉಪಯೋಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾನು ಪ್ರಯತ್ನ ಪಡುತ್ತೇನೆ. ಅಭಿವೃದ್ಧಿ ಮಂಡಳಿಗೆ ಹೊಸತನ ನೀಡಲು ಉತ್ಸುಕನಾಗಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ, ಅಧಿಕಾರಿ ಹನುಮನಾಯ್ಕ, ಪ್ರಮುಖರಾದ ರಮೇಶ್ ಶಂಕರಘಟ್ಟ, ಎಂ.ಶ್ರೀಕಾಂತ್, ಎಸ್.ಕೆ.ಮರಿಯಪ್ಪ ಇದ್ದರು.