ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;* *ಮೋದಿ ಗ್ಯಾರಂಟಿಯಿಂದ ಬಡವರ ಹೊಟ್ಟೆ ಹಸಿವು ತುಂಬಿಲ್ಲ* *ಗೀತಾ ಶಿವರಾಜ್ ಕುಮಾರ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ* *ಪ್ರಚಾರದ ಡಿಜಿಟಲ್ ಬೋರ್ಡ್ ಗಳಿಂದಲೇ ಸೋಲಲಿದ್ದಾರೆ ಬಿ.ವೈ.ರಾಘವೇಂದ್ರ*

*ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;*

*ಮೋದಿ ಗ್ಯಾರಂಟಿಯಿಂದ ಬಡವರ ಹೊಟ್ಟೆ ಹಸಿವು ತುಂಬಿಲ್ಲ*

*ಗೀತಾ ಶಿವರಾಜ್ ಕುಮಾರ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ*

*ಪ್ರಚಾರದ ಡಿಜಿಟಲ್ ಬೋರ್ಡ್ ಗಳಿಂದಲೇ ಸೋಲಲಿದ್ದಾರೆ ಬಿ.ವೈ.ರಾಘವೇಂದ್ರ*
ಶಿವಮೊಗ್ಗ;
ಮೋದಿ ಗ್ಯಾರಂಟಿಯಿಂದ ಬಡವರ ಹಸಿದ ಹೊಟ್ಟೆಗಳು ತುಂಬಿಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬುದು ಈಗ ಸಾಬೀತಾಗಿದೆ. ಹಾಲಿ ಸಂಸದ ಬಿ.ವೈ.ರಾಘವೇಂದ್ರ ಮೊದಲ ಬಾರಿ ಸ್ಪರ್ಧಿಸಿದಾಗ ಏನು ಕಡೆದು ಕಟ್ಟೆ ಹಾಕಿದ್ದರು? ಈಗ ವಿಮಾನ, ಹೈವೇ ಅಂತೆಲ್ಲ ಹೇಳಿಕೊಂಡು ಡಿಜಿಟಲ್ ಬ್ಯಾನರ್ ಗಳನ್ನು ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಅದೇ ಅವರ ಸೋಲಿಗೆ ಕಾರಣವಾಗಲಿದೆ. ಅತಿ ಹೆಚ್ಚು ಮತಗಳ ಅಂತರದಿಂದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಗೆಲ್ಲುವುದು ಖಚಿತ
– ಹೀಗೆಂದು, ಪುಂಖಾನುಪುಂಖವಾಗಿ ಬಿಜೆಪಿಗೆ ಗುಮ್ಮುತ್ತಾ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ, ಆ ಪಂಚ ಗ್ಯಾರಂಟಿಗಳು ಜನರ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ಹೇಳುತ್ತಾ ಹೋದವರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪರವರು.

ತಮ್ಮ ಶಿವಮೊಗ್ಗದ ಕಲ್ಲಹಳ್ಳಿ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ ರವರನ್ನು ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಿಗೆಲ್ಲ ಅಭಿನಂದನೆ ಸಲ್ಲಿಸಿದರು.

ಒಮ್ಮೆ ಜೆಡಿಎಸ್ ನಿಂದಲೇ ಗೀತಕ್ಕ ಅಭ್ಯರ್ಥಿಯಾಗಿದ್ದರು. ಸೀಮಿತ ಅವಧಿ ಮತ್ತು ಸೀಮಿತ ಕಾರ್ಯಕರ್ತರಿದ್ದರೂ ಸ್ಪರ್ಧೆ ಒಡ್ಡಿದ್ದರು. ಕಳೆದ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ಜೆಡಿಎಸ್ ನಿಂದ ನಾನೇ ಅಭ್ಯರ್ಥಿಯಾಗಿದ್ದೆ. ಈಗನಿಸುತ್ತಿದೆ, ಆಗಲೇ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿದ್ದರೆ ಗೆಲುವು ಸುಲಭವಿತ್ತು ಎಂದು. ಈಗ ಕಾಂಗ್ರೆಸ್ ನಿಂದ ಗೀತಕ್ಕ ಅಭ್ಯರ್ಥಿಯಾಗಿದ್ದಾರೆ. ಗೆಲುವಿನ ಬಗ್ಗೆ ಅನುಮಾನಗಳೇ ಬೇಡ ಎಂದು ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.

ಈಗ ಕಾಂಗ್ರೆಸ್ ಗೆ ಒಳ್ಳೆ ವಾತಾವರಣವಿದೆ. ಪಂಚ ಗ್ಯಾರಂಟಿಗಳು ಎಲ್ಲರ ಮನೆಗಳನ್ನೂ ತಲುಪಿವೆ. ಅವರೆಲ್ಲ ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿಯುವುದು ನಿಶ್ಚಿತ. ಈಗಿನ ಸಂಸದರು ಮೋದಿ ಹೆಸರಲ್ಲಿ ಕಳೆದ ಬಾರಿ ಗೆದ್ದರು. ಈಗಲೂ ಅವರಿಗೆ ಧ್ವನಿ ಇಲ್ಲ.ಹಾಗಾಗಿ, ಮತ್ತೆ ಮೋದಿ ಅನಿವಾರ್ಯವಾಗಿದ್ದಾರೆ. ಮೋದಿ ಗ್ಯಾರಂಟಿಗಳಿಂದ ಏನೂ ಪ್ರಯೋಜನವಿಲ್ಲ ಎಂದರು.

ಮೋದಿ ಗ್ಯಾರಂಟಿಗಳು ಬರ್ಬಾದ್ ಮಾಡಿವೆ. ರೈತರ ಹೋರಾಟಕ್ಕೆ ಟಿಯರ್ ಗ್ಯಾಸ್ ಬಿಡಲಾಗುತ್ತದೆ. ರಾಜ್ಯದ ರೈತರಿಗೆ ಕೇಂದ್ರ ಏನು ಅನುಕೂಲ ಮಾಡಿಕೊಟ್ಟಿಲ್ಲ. ಬಿಜೆಪಿ ಕೈಯಲ್ಲಿ ಜನರಿಗಾಗಿ ಏನೂ ಇಲ್ಲ. ಶಿವಮೊಗ್ಗದ ರಾಗಿಗುಡ್ಡ ಕೋಮು ಪ್ರಕರಣದಲ್ಲಿ ಅವರ ಬೇಳೆ ಬೇಯಲಿಲ್ಲ. ರಾಮನನ್ನು ಬೀದಿಗೆ ತಂದು ನೋಡಿದರೂ ಪ್ರಯೋಜನವಾಗಿಲ್ಲ. ಹೈವೇ, ಏರ್ ಪೋರ್ಟ್, ಜಲಜೀವನ ಮಿಷನ್ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ದುಡ್ಡಿದೆ. ಅದು ಸಂಸದ ರಾಘವೇಂದ್ರರ ಸಾಧನೆಯಲ್ಲ. ಹತ್ತು ವರ್ಷ ಸಂಸತ್ತಿನಲ್ಲಿದ್ದರೂ ಮಲೆನಾಡಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಹೋಗಿಲ್ಲ ಎಂದು ಮಧು ಬಂಗಾರಪ್ಪ ಕಿಚಾಯಿಸಿದರು.

ಗೀತಾ ಶಿವರಾಜ್ ಕುಮಾರ್ ರವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನ ಕಾಂಗ್ರೆಸ್ ಶಾಸಕರ ಬಲವಿದೆ. ಸ್ಪರ್ಧಿಸಿದ್ದ ಅಭ್ಯರ್ಥಿಗಳೂ ಕೆಲಸ ಮಾಡಲಿದ್ದಾರೆ. ಪಕ್ಷ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದರು.

ಹಬ್ಬದ ರೀತಿಯಲ್ಲಿ ಈ ಲೋಕಸಭಾ ಚುನಾವಣೆ ನಡೆಸಲಿದ್ದೇವೆ. ಸುಮಾರು 13 ವರ್ಷಗಳಿಂದ ಕಳೆದುಕೊಂಡಿರುವ ಸಂಸತ್ ಸ್ಥಾನವನ್ನು ಈಗ ಮತ್ತೆ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಎಂದು ಹೇಳಿದ ಮಧು ಬಂಗಾರಪ್ಪ, ಸಮೀಕ್ಷೆಗಳು ನಂಬಲರ್ಹವಲ್ಲ. ಅವು ವಿಧಾನ ಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ವಿರುದ್ಧ ಸರ್ವೆ ವರದಿ ನೀಡಿದ್ದವು. ಆದರೆ, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿರುವುದು ನಿಮ್ಮ ಕಣ್ಣ ಮುಂದೆಯೇ ಇದೆ ಎಂದರು.

ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿರುವುದರಿಂ ಸ್ವತಃ ಜೆಡಿಎಸ್ ಮತ್ತು ಬಿಜೆಪಿಗೇ ಹೊಡೆತ. ಬಿಜೆಪಿಯವರಿಗೆ ಸಂವಿಧಾನವೇ ದೊಡ್ಡ ಹೊಡೆತ ನೀಡುತ್ತಿದೆ. ಹುಚ್ಚರಿಗೂ ಬುದ್ದಿ ಕಲಿಸುತ್ತೆ. ಗೀತಕ್ಕ ಸಮಾಜ ಸೇವೆಯಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಅವರಿಗೆ ಶಿವಮೊಗ್ಗ ಕ್ಷೇತ್ರದ ಬಗ್ಗೆ ಬಹಳ ದೊಡ್ಡ ಕನಸುಗಳಿವೆ. ಬಿಜೆಪಿಗೆ ಈ ಬಾರಿ ಖಂಡಿತ ಮೆಜಾರಿಟಿ ಬರಲ್ಲ. ಮೋದಿ ಏನೋ ಹೇಳಿದ ಕೂಡಲೇ ಬಡವರ ಹೊಟ್ಟೆಗೆ ಅನ್ನ ಬೀಳಲ್ಲ. ಅನ್ನ ಕೊಡುವ ಸರ್ಕಾರ ನಮ್ಮದು ಎಂದು ಮಧು ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಬಾಂಬ್ ಘಟನೆ ಸ್ವತಃ ಕೇಂದ್ರ ಸರ್ಕಾರದ ವೈಫಲ್ಯ.ಆದರೆ, ಬಿಜೆಪಿಯವರು ಅದರಲ್ಲೂ ರಾಜಕಾರಣ ಮಾಡುತ್ತಿದೆ. ಅವರ ಯೋಗ್ಯತೆ ತೋರಿಸುವುದಕ್ಕೆ ಮಣಿಪುರ ಘಟನೆಗಳೇ ಸಾಕು ಎಂದು ಕಿಡಿ ಕಾರಿದರು.

ಸುದ್ದಿಗೋಷ್ಠಿಯಲ್ಲಿ ಎಂ ಎ ಡಿ ಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಹೆಚ್.ಸಿ.ಯೋಗೇಶ್, ಎಸ್.ಕೆ.ಮರಿಯಪ್ಪ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್,ವಿಜಯ್ ಕುಮಾರ್,ರವಿಕುಮಾರ್, ರಮೇಶ್ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಮುಹೀಬ್,ರವಿಕುಮಾರ್ ಸೇರಿದಂತೆ ಹಲವರಿದ್ದರು.