*ಕು. ಚುಕ್ಕಿ ಎಂ. ಬ್ಯಾಣದಗೆ 2026-27ನೇ ರಾಜ್ಯ ಕಲಾ ಶ್ರೀ ಪ್ರಶಸ್ತಿ*
*ಕು. ಚುಕ್ಕಿ ಎಂ. ಬ್ಯಾಣದಗೆ 2026-27ನೇ ರಾಜ್ಯ ಕಲಾ ಶ್ರೀ ಪ್ರಶಸ್ತಿ*

ಕೋಡೂರು : ಇಲ್ಲಿನ ಬ್ಲಾಸಮ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು. ಚುಕ್ಕಿ ಎಂ. ಬ್ಯಾಣದ 2026-27ನೇ ಸಾಲಿನ ಕಲಾ ಶ್ರೀ ಪ್ರಶಸ್ತಿಗೆ ಆಯ್ಕೆ ಆಗಿದ್ದಾಳೆ.
ಕರ್ನಾಟಕ ಸರ್ಕಾರ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರು ಮತ್ತು ವಿಕಲಚೇತನ ಇಲಾಖೆಗಳು ಜಂಟಿಯಾಗಿ ಜವಾಹರ ಬಾಲ ಭವನ ಸೊಸೈಟಿ ಬೆಂಗಳೂರು ಇವರ ಸಹಯೋಗದಲ್ಲಿ ನವೆಂಬರ್ 24ಮತ್ತು 25ರಂದು ಬೆಂಗಳೂರು ಬಾಲ ಭವನದಲ್ಲಿ ನಡೆದ ಕಲಾ ಶ್ರೀ ಶಿಬಿರ 2026-27ರಲ್ಲಿ ಶಿವಮೊಗ್ಗ ಜಿಲ್ಲೆ ಪ್ರತಿನಿಧಿಸಿ ಸೃಜನಾತ್ಮಕ ಕಲೆ ಪ್ರದರ್ಶನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಸಕ್ತ ಸಾಲಿನ ಕಲಾ ಶ್ರೀ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದಾಳೆ.
ನವೆಂಬರ್ 14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಶಿವಮೊಗ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಬಾಲ ಭವನ ಸಮಿತಿ ಶಿವಮೊಗ್ಗ ಜಂಟಿಯಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಳು.
ಬೆಂಗಳೂರು ಬಾಲ ಭವನದಲ್ಲಿ ನಿನ್ನೆ ನಡೆದ ಸ್ಪರ್ಧೆಯಲ್ಲಿ ಲವ – ಕುಶ ಯಕ್ಷಗಾನ ಪ್ರಸಂಗದ ಪೂರ್ವಮ್ ರಾಮಮ್ ಪದ್ಯವನ್ನು ಮೂರು ನಿಮಿಷಗಳಲ್ಲಿ ಅಭಿನಯಿಸಿ ಪ್ರಥಮ ಸ್ಥಾನದೊಂದಿಗೆ ಕಲಾ ಶ್ರೀ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ನಿನ್ನೆ ಸಂಜೆ ಬೆಂಗಳೂರು ಬಾಲ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಬಿ. ಆರ್ ನಾಯ್ಡು ಹಾಗೂ ಆಡಳಿತಾಧಿಕಾರಿ ಧನಲಕ್ಷ್ಮೀ ಸಾಂಕೇತಿಕವಾಗಿ ಪ್ರಶಸ್ತಿ ವಿತರಿಸಿ, ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಮತ್ತು ಸಂಬಂಧ ಪಟ್ಟ ಸಚಿವರು, ಶಾಸಕರ ಸಮ್ಮುಖದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಸುವುದಾಗಿ ಹೇಳಿದರು.
ಪ್ರಶಸ್ತಿ ವಿಜೇತ ಕು. ಚುಕ್ಕಿ ಎಂ. ಬ್ಯಾಣದ ಅವರನ್ನು ಶ್ರೀ ವ್ಯಾಸ ಮಹರ್ಷಿ ಗುರುಕುಲ ಆಶ್ರಮದ ಪರಮ ಪೂಜ್ಯ ಶ್ರೀ ಕುಮಾರ ದೇವರು ಹಾಗೂ ಆಶ್ರಮ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಮತ್ತು ಬ್ಲಾಸಮ್ ಅಕಾಡೆಮಿಯ ಅಧ್ಯಕ್ಷ ಬಿ. ಜಿ. ಚಂದ್ರ ಮೌಳಿ, ಆಡಳಿತ ಮುಖ್ಯಸ್ಥ ಮಂಜುನಾಥ್ ಎಸ್. ಬ್ಯಾಣದ ಮತ್ತು ಆಡಳಿತ ಮಂಡಳಿ ಹಾಗೂ ಶಿಕ್ಷಕ, ಸಿಬ್ಬಂದಿ ವರ್ಗ ಅಭಿನಂದಿಸಿದೆ.


