ಆರ್.ಟಿ.ವಿಠ್ಠಲಮೂರ್ತಿ; ಕುಮಾರಣ್ಣನ ಲೇಟೆಸ್ಟು ಚಿಂತೆ ದೇವೇಗೌಡ-ಯಡಿಯೂರಪ್ಪ ಜಂಟಿ ಯಾತ್ರೆ ಈಶ್ವರಪ್ಪಾಕೂ ಛೋಡ್ ದೋ ಸಿದ್ದು ಕೈಲಿದೆ ಸೀಕ್ರೆಟ್ ರಿಪೋರ್ಟ್

ಕುಮಾರಣ್ಣನ ಲೇಟೆಸ್ಟು
ಚಿಂತೆ

ಕಳೆದ ವಾರ ಚೆನ್ನೈಗೆ ಹೋಗುವ ಮೊದಲು ತಮ್ಮ ಅತ್ಯಾಪ್ಯರೊಬ್ಬರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಚಿಂತೆ ಶುರುವಾಗಿದೆ.ಭೇಟಿಯ ಸಂದರ್ಭದಲ್ಲಿ ಈ ಆಪ್ತರು ಹೇಳಿದ ಮಾತೇ ಅವರ ಚಿಂತೆಗೆ ಕಾರಣ.
ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ತಾವು ಮಾಡಿಕೊಂಡ ಮೈತ್ರಿ ಕುಮಾರಸ್ವಾಮಿ ಅವರಿಗೆ ಕಿರಿಕಿರಿ ಮಾಡಿಲ್ಲ.ಬದಲಿಗೆ ಬಿಜೆಪಿ ಜತೆಗಿನ ಮೈತ್ರಿಯ ಫಲವಾಗಿ ಜೆಡಿಎಸ್ ಗೆ ಹಾಸನ,ಮಂಡ್ಯ,ಕೋಲಾರ ಲೋಕಸಭಾ ಕ್ಷೇತ್ರಗಳು ಸಿಕ್ಕಿವೆ.ಉಳಿದಂತೆ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರಿಗೆ ಟಿಕೆಟ್ ಕೊಟ್ಟಿರುವ ಬಿಜೆಪಿ ಈಗಾಗಲೇ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕ್ಯಾಂಡಿಡೇಟ್ ಅಂತ ಘೋಷಿಸಿದೆ.
ಇನ್ನು ಜೆಡಿಎಸ್ ಗೆ ಸಿಕ್ಕ ಸೀಟುಗಳ ಪೈಕಿ ಹಾಸನದಲ್ಲಿ ಪಜ್ವಲ್ ರೇವಣ್ಣ,ಕೋಲಾರದಲ್ಲಿ ಮಲ್ಲೇಶ್ ಬಾಬು ಮತ್ತು ಮಂಡ್ಯದಲ್ಲಿ ಖುದ್ದು ಕುಮಾರಸ್ವಾಮಿ ಅವರೇ ಫೀಲ್ಡಿಗಳಿಯುವುದು ನಿಶ್ಚಿತವಾಗಿದೆ.
ಹೀಗೆ ಪಕ್ಷದ ಕ್ಯಾಂಡಿಡೇಟುಗಳ ಪಟ್ಟಿ ನಿಕ್ಕಿಯಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿರುವ ತಮ್ಮ ಪರಮಾಪ್ತರೊಬ್ಬರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಿಲುವುಗಳ ಬಗ್ಗೆ ಮಾತನಾಡುತ್ತಾ:ಬ್ರದರ್,ಈ ಬಗ್ಗೆ ನಿಮಗೇನು ಅನ್ನಿಸುತ್ತದೆ ಅಂತ ಕೇಳಲು ಬಂದಿದ್ದೇನೆ.ನೀವು ಯಾವುದನ್ನೂ ಮುಚ್ಚಿಟ್ಟುಕೊಳ್ಳುವವರಲ್ಲ.ಹೀಗಾಗಿ ನನಗೆ ನಿಮ್ಮ ಒಪೀನಿಯನ್ ಬೇಕು ಎಂದಿದ್ದಾರೆ.
ಹೀಗೆ ಕುಮಾರಸ್ವಾಮಿ ಅವರಾಡಿದ ಮಾತು ಕೇಳಿದ ಆ ಆಪ್ತರು:ಸಾರ್,ನಮ್ಮ ಪಟ್ಟಿ ಬಹುತೇಕ ಚೆನ್ನಾಗಿದೆ.ಆದರೆ ಕರ್ನಾಟಕದಲ್ಲಿ ಜೆಡಿಎಸ್ ಉಳಿವಿನ ದೃಷ್ಟಿಯಿಂದ ಒಂದು ಮಾತು ಹೇಳುತ್ತೇನೆ.ಅದೆಂದರೆ,ನೀವು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಡಿ.ಬದಲಿಗೆ ನಿಮ್ಮ ಮಗ ನಿಖಿಲ್ ಅವರನ್ನು ಕಣಕ್ಕಿಳಿಸಿ ಅಂತ ನೇರವಾಗಿ ಹೇಳಿದ್ದಾರೆ.
ಹೀಗೆ ಅವರಾಡಿದ ಮಾತು ಕೇಳಿ ವಿಸ್ಮಿತರಾದ ಕುಮಾರಸ್ವಾಮಿ:ಇಲ್ಲ ಬ್ರದರ್,ಮಂಡ್ಯದಿಂದ ನೀವು ಸ್ಪರ್ಧಿಸಿದರೆ ಗೆಲ್ಲುತ್ತೀರಿ.ಹಾಗೆಂಬ ರಿಪೋರ್ಟು ನನ್ನ ಬಳಿ ಇದೆ ಅಂತ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಹೇಳಿದ್ದಾರೆ.ಹೀಗಿರುವಾಗ ನಾನು ಸ್ಪರ್ಧಿಸದಿದ್ದರೆ ತಪ್ಪಾಗುವುದಿಲ್ಲವೇ?ಅಂತ ಕೇಳಿದ್ದಾರೆ.
ಅದಕ್ಕೆ ಆ ಆಪ್ತರು,ಸಾರ್ ಮಂಡ್ಯದಲ್ಲಿ ನೀವು ನಿಂತರೂ ಗೆಲ್ಲುತ್ತೀರಿ.ನಿಖಿಲ್ ಸ್ಪರ್ಧಿಸಿದರೂ ಗೆಲ್ಲುತ್ತಾರೆ.ಕಳೆದ ಚುನಾವಣೆಯ ಪಿಚ್ಚರು ಬೇರೆ ಇತ್ತು.ಆದರೆ ಈ ಸಲ ಹಾಗಿಲ್ಲ.ಸ್ಟ್ರೈಟ್ ಫೈಟು ಇರುವುದರಿಂದ ಕಾಂಗ್ರೆಸ್ಸಿನ ಸ್ಟಾರ್ ಚಂದ್ರು ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಕ್ಯಾಂಡಿಡೇಟು ಗೆಲ್ಲುವುದು ಸುಲಭ.ಆದರೆ ನೀವು ಸ್ಪರ್ಧಿಸಿ ಗೆದ್ದ ಮೇಲೆ ಇಲ್ಲಿ ಪಕ್ಷದ ಪರಿಸ್ಥಿತಿ ಏನು?ಅನ್ನುವುದು ನನ್ನ ಆತಂಕ ಎಂದಿದ್ದಾರೆ.
ಹಾಗೆಯೇ ಮುಂದುವರಿದು:ನೀವು ಮಂಡ್ಯದಲ್ಲಿ ಗೆದ್ದು ಪಾರ್ಲಿಮೆಂಟಿಗೆ ಹೋದಿರಿ ಅಂದುಕೊಳ್ಳಿ.ಇಲ್ಲೇನಾಗುತ್ತದೆ?ನೀವು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತೊರೆಯಬೇಕಾಗುತ್ತದೆ.ನೀವು ತೊರೆಯುವ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧಿಸಲಿ ಎಂಬುದು ನಮ್ಮ ಆಸೆಯಾಗಿರಬಹುದು.ಆದರೆ ಇವತ್ತು ನಮ್ಮ ಜತೆಗಿರುವ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಸಹಜವಾಗಿಯೇ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನನಗೆ ಬೇಕು ಎನ್ನುತ್ತಾರೆ.ಬಿಟ್ಟುಕೊಟ್ಟಿರಿ ಎಂದುಕೊಳ್ಳಿ.ಸಹಜವಾಗಿಯೇ ಜಿಲ್ಲೆಯ ಮೇಲೆ ನಮ್ಮ ಪಕ್ಷಕ್ಕಿರುವ ಕಂಟ್ರೋಲು ಹೋಗುತ್ತದೆ.ಈಗಾಗಲೇ ಒಂದು ಕಡೆಯಿಂದ ರಾಮನಗರ ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಡಿಕೆ ಬ್ರದರ್ಸ್ ಹವಣಿಸುತ್ತಿದ್ದಾರೆ.ಅದೇ ಕಾಲದಲ್ಲಿ ನಾವು ಬಿಜೆಪಿಗೆ ಜಾಗ ಬಿಟ್ಟುಕೊಟ್ಟರೆ ಎರಡೂ ಪಕ್ಷಗಳು ಸೇರಿ ಜಿಲ್ಲೆಯ ರಾಜಕಾರಣವನ್ನು ಕಂಟ್ರೋಲಿಗೆ ತೆಗೆದುಕೊಳ್ಳುತ್ತವೆ.
ಒಂದು ವೇಳೆ ಮಂಡ್ಯದಲ್ಲಿ ನೀವು ಸ್ಪರ್ಧಿಸಿ ಗೆದ್ದ ನಂತರ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲ್ಲ,ಅಲ್ಲಿ ನಿಖಿಲ್ ಸ್ಪರ್ಧಿಸಲಿ ಅಂತ ನೀವು ಪಟ್ಟು ಹಿಡಿದಿರಿ ಎಂದುಕೊಳ್ಳಿ.ಆಗ ಯೋಗೀಶ್ವರ್ ಕಾಂಗ್ರೆಸ್ ಕಡೆ ಹೋಗುತ್ತಾರೆ.ಅಷ್ಟೇ ಅಲ್ಲ,ತಮಗಿರುವ ಮೂಲ ಶಕ್ತಿಯ ಜತೆ ಕಾಂಗ್ರೆಸ್ ಜತೆಗಿರುವ ಅಹಿಂದ ಮತಗಳನ್ನು ಕನ್ ಸಾಲಿಡೇಟ್ ಮಾಡಿಕೊಂಡು ಗೆಲ್ಲುತ್ತಾರೆ.ಹಾಗಾದರೂ ನಮಗೆ ಡೇಂಜರು.ಹೀಗಾಗಿ ನೀವು ಮಂಡ್ಯದ ಕ್ಯಾಂಡಿಡೇಟ್ ಆಗುವ ಬದಲು ಇಲ್ಲೇ ಇರಿ,ನಿಖಿಲ್ ಅವರನ್ನು ಕ್ಯಾಂಡಿಡೇಟು ಮಾಡಿ.ಇದನ್ನು ಮತ್ತೆ ಮತ್ತೆ ಏಕೆ ಹೇಳುತ್ತಿದ್ದೇನೆಂದರೆ ನಮ್ಮೆಲ್ಲರ ಭವಿಷ್ಯ ನಿಮ್ಮ ಮೇಲೆ ಕೇಂದ್ರೀಕೃತವಾಗಿದೆ.ಈ ಭರವಸೆಯ ಕೇಂದ್ರ ದುರ್ಬಲವಾದರೆ ನಾವು ಅತಂತ್ರರಾಗುತ್ತೇವೆ ಎಂದಿದ್ದಾರೆ.
ಯಾವಾಗ ಆ ಆಪ್ತರು ಈ ಮಾತುಗಳನ್ನಾಡಿದರೋ?ಇದಾದ ನಂತರ ಕುಮಾರಸ್ವಾಮಿ ಅವರಿಗೆ ಚಿಂತೆ ಶುರುವಾಗಿದೆ.

ದೇವೇಗೌಡ-ಯಡಿಯೂರಪ್ಪ ಜಂಟಿ ಯಾತ್ರೆ
———————
ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ವಿಜಯಯಾತ್ರೆ ಆರಂಭಿಸಲು ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೇಗೌಡ ಮತ್ತು ಬಿಜೆಪಿ ಸುಪ್ರಿಮೋ ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಅವರ ಈ ನಿರ್ಧಾರದ ಹಿಂದೆ ಕೆಲಸ‌ ಮಾಡಿರುವುದು ಹೆಚ್.ಡಿ.ರೇವಣ್ಣ ಅವರ ‘ಲೆಮನ್ ಸ್ಟ್ರಾಟಜಿ’.
ಅಂದ ಹಾಗೆ ಹಾಸನ ಲೋಕಸಭಾ ಕ್ಷೇತ್ರದ ಕಣಕ್ಕಿಳಿಯಲಿರುವ ಪುತ್ರ ಪ್ರಜ್ವಲ್ ಅವರ ಜತೆ ಕಳೆದ ವಾರ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದ ಹೆಚ್.ಡಿ.ರೇವಣ್ಣ ಅವರು:ಸಾರ್,ಪ್ರಜ್ವಲ್ ಗೆಲ್ಲಲು ನಿಮ್ಮ ಆಶೀರ್ವಾದ ಇರಬೇಕು.ಹೀಗಾಗಿ ನಾಮಪತ್ರ ಸಲ್ಲಿಕೆಯ ದಿನ ನೀವು ಮತ್ತು ದೇವೇಗೌಡರು ಹಾಸನದಲ್ಲಿರಬೇಕು.ನೀವಿಬ್ಬರು ಒಟ್ಟಿಗಿದ್ದರೆ ಬರೀ ಹಾಸನ ಮಾತ್ರವಲ್ಲ,ಇಡೀ ರಾಜ್ಯಕ್ಕೇ ಒಂದು ಪವರ್ ಫುಲ್ ಮೆಸೇಜು ಹೋಗುತ್ತದೆ ಎಂದಿದ್ದಾರೆ.
ಹೀಗೆ ಯಡಿಯೂರಪ್ಪನವರು ಹಾಸನಕ್ಕೆ ಬಂದರೆ ಲಿಂಗಾಯತರು ಸಾಲಿಡ್ಡಾಗಿರುವ ಅರಸೀಕೆರೆ,ಬೇಲೂರು,ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜ್ವಲ್ ಗೆಲುವಿಗೆ ಬೇಕಾದ ಟಾನಿಕ್ಕು ಸಿಗುತ್ತದೆ ಎಂಬುದು ರೇವಣ್ಣ ಅವರ ದೂರಾಲೋಚನೆ.ಅದೇ ರೀತಿ ಹಾಸನದಲ್ಲಿ ಮೈತ್ರಿಗೆ ಕಿರಿಕಿರಿ ಮಾಡುತ್ತಿರುವ ಮಾಜಿ ಶಾಸಕ ಪ್ರೀತಮ್ ಗೌಡ ಅವರನ್ನು ಸುಮ್ಮನಿರಿಸಿದಂತಾಗುತ್ತದೆ ಎಂಬುದು ಅವರ ಮತ್ತೊಂದು ಲೆಕ್ಕಾಚಾರ.
ಅದೇನೇ ಇರಲಿ,ಆದರೆ ಒಟ್ಟಿನಲ್ಲಿ ತಾವು ಮತ್ತು ದೇವೇಗೌಡರು ಒಟ್ಟಿಗೆ ಕಾಣಿಸಿಕೊಂಡರೆ ಆಗಬಹುದಾದ ಪ್ರಯೋಜನಗಳ ಬಗ್ಗೆ ಲೆಕ್ಕ ಹಾಕಿದ ಯಡಿಯೂರಪ್ಪ,ಸಧ್ಯದಲ್ಲೇ ಗೌಡರ ಜತೆಗೂಡಿ ಹೆಲಿಕಾಪ್ಟರಿನಲ್ಲಿ ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಿದ್ದಾರೆ.
ವಯಸ್ಸಿನ ಕಾರಣದಿಂದಾಗಿ ಗಣಗಣ ಅಲೆದಾಡುವುದು ಕಷ್ಟವಾದ್ದರಿಂದ ದಿನಕ್ಕೆ ಎರಡು ಜಿಲ್ಲೆಗಳಂತೆ,ಒಟ್ಟು ಹದಿನಾಲ್ಕು ಇಲ್ಲವೇ ಹದಿನೈದು ದಿನ ‘ಹೆಲಿ ಕ್ಯಾಂಪೇನ್’ಮಾಡುವುದು ಯಡಿಯೂರಪ್ಪ ಅವರ ಸಧ್ಯದ ತೀರ್ಮಾನ.

ಈಶ್ವರಪ್ಪಾಕೋ
ಛೋಡ್ ದೋ
———————————
ಇನ್ನು ಶಿವಮೊಗ್ಗದ ಕಣದಲ್ಲಿ ಬಂಡಾಯವೆದ್ದಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಜತೆ ಸಂಧಾನ ಬೇಕಿಲ್ಲ ಅಂತ ಬಿಜೆಪಿ ವರಿಷ್ಟರು ಹೇಳಿದ್ದಾರಂತೆ.ಇದಕ್ಕೆ ಯಡಿಯೂರಪ್ಪ ಅವರು ಕಳಿಸಿದ ರಿಪೋರ್ಟೇ ಕಾರಣ.
ಅಂದ ಹಾಗೆ ಈಶ್ವರಪ್ಪ ಅವರ ಬಂಡಾಯದಿಂದ ಯಡಿಯೂರಪ್ಪ‌ ಕಿರಿ ಕಿರಿ ಮಾಡಿಕೊಂಡಿದ್ದು,ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ತೊಂದರೆಯಾಗಬಹುದು ಅಂತ ಭಾವಿಸಿದ್ದೆಲ್ಲ ನಿಜವೇ.ಆದರೆ ಎರಡು ದಿನಗಳ ಹಿಂದೆ ಶಿವಮೊಗ್ಗದಿಂದ ಬಂದ ರಿಪೋರ್ಟು ಯಡಿಯೂರಪ್ಪ ಅವರ ಮುಖದಲ್ಲಿ ಹರ್ಷ ಮೂಡಿಸಿದೆ.
ಮೂಲಗಳ ಪ್ರಕಾರ,ಈಶ್ವರಪ್ಪ ಅವರು ಚುನಾವಣೆಯ ಕಣಕ್ಕಿಳಿದರೂ ಕುರುಬರ ಪಾಕೀಟಿನಿಂದ ಹೆಚ್ಚು ಮತಗಳನ್ನು ನಿರೀಕ್ಷಿಸುತ್ತಿದ್ದಾರೆ.ಆದರೆ ಬೇಸಿಕಲಿ ಕುರುಬರ ವೋಟ್ ಬ್ಯಾಂಕು ಸಿದ್ಧರಾಮಯ್ಯ ಅವರ ಜತೆ ನಿಲ್ಲುತ್ತಾ ಬಂದಿದೆ.ಈ ಸಲ ಅದು ಈಶ್ವರಪ್ಪ ಅವರಿಗೆ ಸಾಲಿಡ್ಡು ಬೆಂಬಲ ನೀಡಿದರೆ ಅದರಿಂದ ಕಾಂಗ್ರೆಸ್ ಕ್ಯಾಂಡಿಡೇಟ್‌ ಗೀತಾ ಶಿವರಾಜಕುಮಾರ್ ನಷ್ಟ ಅನುಭವಿಸುತ್ತಾರೆ.ಹೀಗೆ ಅವರು ಅನುಭವಿಸುವ ನಷ್ಟದಿಂದ ಬಿಜೆಪಿ ಕ್ಯಾಂಡಿಡೇಟ್ ರಾಘವೇಂದ್ರ ಅವರಿಗೆ ಲಾಭವಾಗುತ್ತದೆ.
ಇದೇ ರೀತಿ ಒಂದು ಲಕ್ಷದಷ್ಟಿರುವ ಬ್ರಾಹ್ಮಣ ಮತಗಳ ಪೈಕಿ ಗಣನೀಯ ಪ್ರಮಾಣದ ಮತಗಳು ತಮಗೆ ಬರುತ್ತವೆ.ಯಾಕೆಂದರೆ ನಾನು ಸಂಘಪರಿವಾರದ ಕಟ್ಟಾಳು ಅಂತ ಈಶ್ವರಪ್ಪ ಲೆಕ್ಕ ಹಾಕಿದ್ದಾರೆ.
ಆದರೆ ಈಶ್ವರಪ್ಪ ಅವರ ಮೇಲಿನ ಪ್ರೀತಿಗಾಗಿ ಮತ ಹಾಕಿದರೆ ಕಾಂಗ್ರೆಸ್ಸಿನ ಗೀತಾ ಶಿವರಾಜಕುಮಾರ್ ಅವರಿಗೆ ಅನುಕೂಲವಾಗುತ್ತದೆ.ಹೀಗಾಗಿ ಅವರು ಗೆಲ್ಲುವುದಕ್ಕಿಂತ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕು.ಅದಾಗಬೇಕು ಎಂದರೆ ನಾವು ರಾಘವೇಂದ್ರ ಅವರಿಗೆ ಮತ ಕೊಡಬೇಕು ಎಂಬುದು ಬಹುತೇಕ ಬ್ರಾಹ್ಮಣ ಮತದಾರರ ಲೆಕ್ಕಾಚಾರ.
ಹೀಗಾಗಿ ಬ್ರಾಹ್ಮಣ ಮತ ಬ್ಯಾಂಕಿನ ವಿಷಯ ಬಂದರೂ ಈಶ್ವರಪ್ಪ ಅವರಿಗೆ ಅಗುವ ಲಾಭ ಅಷ್ಟರಲ್ಲೇ ಇದೆ.ಉಳಿದಂತೆ ಮರಾಠ,ವಿಶ್ವಕರ್ಮ ಸೇರಿದಂತೆ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕುಗಳೇನಿವೆ?ಅವು ಕೂಡಾ ಈಶ್ವರಪ್ಪ ಅವರ ಜತೆ ನಿಲ್ಲುವುದಿಲ್ಲ.
ಹೀಗಾಗಿ ಕಾಂಗ್ರೆಸ್ಸಿನ ಗೀತಾ ಶಿವರಾಜ್ ಕುಮಾರ್ ಅವರ ಗಳಿಕೆ ಹೆಚ್ಚಾದರೂ ರಾಘವೇಂದ್ರ ನಿರಾಯಾಸವಾಗಿ ಗೆಲ್ಲುತ್ತಾರೆ ಎಂಬುದು ಯಡಿಯೂರಪ್ಪ‌ ಕೈಲಿರುವ ರಿಪೋರ್ಟು.
ಯಾವಾಗ ಪರ್ಸನಲ್ ಗ್ಯಾಂಗಿನ ಈ ರಿಪೋರ್ಟು ತಮ್ಮ ಕೈ ಸೇರಿತೋ?ಅದನ್ನೇ ಅವರು ವರಿಷ್ಟರಿಗೆ ಕಳಿಸಿದ್ದಾರೆ.ರಿಪೋರ್ಟು ನೋಡಿದ ವರಿಷ್ಟರು ಕೂಡಾ,ಈಶ್ವರಪ್ಪಾಕೋ ಛೋಡ್ ದೋ ಅಂದಿದ್ದಾರಂತೆ.
ಅಲ್ಲಿಗೆ ಈಶ್ವರಪ್ಪ ಜತೆಗಿನ ಬಿಜೆಪಿ ಸಂಧಾನದ ಕತೆ ಕ್ಲೋಸಾಗಿದೆ.ಅದೇ ರೀತಿ ದಿನ‌ಕಳೆದಂತೆ ಈಶ್ವರಪ್ಪ ಅವರ ಘರ್ಜನೆಯೂ ಜೋರಾಗುತ್ತಾ ಶಿವಮೊಗ್ಗ ಹೈ ವೋಲ್ಟೇಜ್‌ ಕ್ಷೇತ್ರವಾಗುವುದು ಪಕ್ಕಾ ಆಗಿದೆ.

ಸಿದ್ದು ಕೈಲಿದೆ ಸೀಕ್ರೆಟ್
ರಿಪೋರ್ಟು
——————————
ಈ ಮಧ್ಯೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಲೇಟೆಸ್ಟು ಸರ್ವೆ ರಿಪೋರ್ಟು ಸಿಎಂ ಸಿದ್ದರಾಮಯ್ಯ ಅವರ ಕೈ ತಲುಪಿದೆ.ಅದರ ಪ್ರಕಾರ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹದಿನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗಳಿಸಲಿದೆ.
ಅಂದ ಹಾಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಪ್ಯಾಟರ್ನು ಬೇರೆ ಬೇರೆಯಾದರೂ ಒಂದು ವಿಶೇಷ ಅಂಶ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದೆ ಅಂತ ಈ ರಿಪೋರ್ಟು ಹೇಳಿದೆ.ಅದೆಂದರೆ ಸಿದ್ಧರಾಮಯ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು.
ಈ ಯೋಜನೆಯ ಲಾಭ ಪಡೆದ ಫಲಾನುಭವಿಗಳು,ಅದರಲ್ಲೂ ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡಲಿದ್ದಾರೆ.
ಪರಿಣಾಮ?ಲೋಕಸಭಾ ಚುನಾವಣೆಯಲ್ಲಿ ಅಹಿಂದ ವರ್ಗದ ಮತಗಳು ಕನ್ ಸಾಲಿಡೇಟ್ ಆಗುವುದರ ಜತೆ ಜಾತ್ಯಾತೀತವಾಗಿ ಮಹಿಳೆಯರ ಬಲ ಕಾಂಗ್ರೆಸ್ಸಿಗೆ ದಕ್ಕಲಿದೆ.
ಹಾಗೆಂಬ ರಿಪೋರ್ಟು ಯಾವಾಗ ತಮ್ಮ ಕೈ ಸೇರಿತೋ?ಅವತ್ತಿನಿಂದ ಸಿದ್ಧರಾಮಯ್ಯ ಫುಲ್ಲು ಕಾನ್ ಫೆಡೆಂಟ್ ಆಗಿದ್ದಾರೆ.

 

*ಆರ್.ಟಿ.ವಿಠ್ಠಲಮೂರ್ತಿ*