ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ ಭೂ ಹಕ್ಕು ಕಲ್ಪಿಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ

ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ

ಭೂ ಹಕ್ಕು ಕಲ್ಪಿಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ

ಶಿವಮೊಗ್ಗ: ‘ರೈತರಿಗೆ ಭೂ ಹಕ್ಕು ನೀಡುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ. ಹಿಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ (ತಂದೆ) ಅವರು ಕೂಡ ರೈತರಿಗೆ ನೆರಳಾಗಿದ್ದರು. ಅದೇ ಹಾದಿಯಲ್ಲಿ ಗೀತಕ್ಕ ಸಾಗುತ್ತಾರೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.

ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಗಾಜನೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಸುಳ್ಳಿನ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಇದರಿಂದ, ಬಂಗಾರಪ್ಪ ಅವರ ಮಾದರಿ ಕೆಲಸಗಳಿಗೆ ಮಸಿ ಬಳಿಯುತ್ತಿದ್ದಾರೆ’ ಎಂದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಆದರೆ, ಬಿಜೆಪಿಯವರು ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಯ ಲೇಬಲ್ ಅಂಟಿಸಲು ಸಂಚು ಮಾಡುತ್ತಿದ್ದಾರೆ. ಈ ಸಂಚನ್ನು ಹತ್ತಿಕ್ಕಲು ಗೀತಕ್ಕ ಅವರಿಗೆ ಮತ ನೀಡಿ ಹರಸಬೇಕಿದೆ’ ಎಂದರು.

ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನುಡಿದಂತೆ ನಡೆದಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅಲ್ಲದೆ, ಹಿಂದೆ ಅವರ ಆಡಳಿತದಲ್ಲಿ ಸುಮಾರು ₹72,000 ಕೋಟಿ ಕೃಷಿ ಸಾಲವನ್ನು ಮನ್ನಾ ಮಾಡಿದ್ದರು ಎಂದರು.

ಮುಂದುವರೆದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಅದೇ ರೀತಿ ಹಿರಿಯರ ಮಾರ್ಗದರ್ಶನದಲ್ಲಿ ನಾನು ಜನರಿಗೆ ನೆರವಾಗುತ್ತೇನೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ಹಾಗೂ ನಾಡು ಕಂಡ ಶ್ರೇಷ್ಠ ಚಿತ್ರ ನಟ ರಾಜ್ ಕುಮಾರ್ ಅವರ ಸೊಸೆ ಆಗಿದ್ದಾರೆ. ಆದ್ದರಿಂದ, ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕೇಳುತ್ತಿರುವುದು ನಮ್ಮ ಸೌಭಾಗ್ಯ ಎಂದರು.

ಗಾಜನೂರು ಭಾಗದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ನಡೆದಿವೆ. ಬಿಜೆಪಿ ಪಕ್ಷದ ನಾಯಕರು ಇಲ್ಲಿ ರಸ್ತೆಗೆ ಜೆಲ್ಲಿ ಕಲ್ಲು ಕೂಡ ಹಾಕಿಲ್ಲ. ಅದೇ ರೀತಿ, ಇಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಜೀವ ತಂಬಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಬೆಂಬಲಿಸಬೇಕಿದೆ ಎಂದರು.

ಮಲೆನಾಡು ಅಭಿವೃದ್ಧಿ ಪ್ರದೇಶ ನಿಗಮ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಗಾಜನೂರು ಭಾಗಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರಿಗೆ ಸಲ್ಲುತ್ತಿದ್ದ ಗೌರವ, ಗೀತಾ ಶಿವರಾಜಕುಮಾರ್ ಅವರಿಗೂ ಸಲ್ಲಬೇಕು. ಆದ್ದರಿಂದ, ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.

ಇದೇ ವೇಳೆ, ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ತೀರ್ಥಹಳ್ಳಿ ರಸ್ತೆಯ ಕಾನಿ ಹಳ್ಳಿ ಗ್ರಾಮದ ಚೌಡಮ್ಮ ದೇವಿಗೆ ಪೂಜೆ ಸಲ್ಲಿಸಿ, ಬೈಕ್ ರ್ಯಾಲಿ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದರು.

ಬೈಕ್ ರ್ಯಾಲಿ ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚಾಲನೆ ನೀಡಿದರು. ರ್ಯಾಲಿಯಲ್ಲಿ ೩೦೦ ಕ್ಕೂ ಹೆಚ್ಚು ಬೈಕ್ ಹಾಗೂ 500 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ತೀರ್ಥಹಳ್ಳಿ ತಾಲ್ಲೂಕಿನ ಸಿಂಗನ ಬಿದರೆ, ಮಂಡಗದ್ದೆ, ತದೂರು, ಬೆಜವಳ್ಳಿ, ಕನ್ನಂಗಿ, ಹಣಗೆರೆ ಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಲಾಯಿತು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಕಿಮ್ಮನೆ ರತ್ನಾಕರ್, ದುಗ್ಗಪ್ಪ ಗೌಡ, ಮುಡುಬ ರಾಘವೇಂದ್ರ, ರಮೇಶ್ ಶೆಟ್ಟಿ ಶಂಕರಘಟ್ಟ, ವಿಜಯ್ ಕುಮಾರ್ ಸಂತೇಕಡೂರು, ಗಣೇಶ ಗಾಜನೂರು, ನವಿನ್, ಸುಷ್ಮಾ ಇದ್ದರು.