ಸಂಗೀತ ರವಿರಾಜ್ ಅಂಕಣ; ಸೃಷ್ಟಿಯ ಕಲೆಗೆ ದೃಷ್ಟಿಯ ಬೊಟ್ಟು
‘ದೃಷ್ಟಿಯಂತೆ ಸೃಷ್ಟಿ ‘ ಇದು ನನ್ನ ಅಚ್ಚುಮೆಚ್ಚಿನ ಉಕ್ತಿ.ಹಲವು ಆಯಾಮಗಳಿಂದ ನೋಡಿದರು ಈ ಉಕ್ತಿಗೆ ಅದೆಷ್ಟೋ ವಿಶ್ಲೇಷಣೆಗಳನ್ನು ಕೊಡಬಹುದು. ಪ್ರಕೃತಿ ಸೃಷ್ಟಿಸಿದ ಬೃಹತ್ ಮರವೊಂದರಲ್ಲಿ ನೋಡುಗರಿಗೆ ಹಲವಾರು ವಿಧದ ಭಾವನೆಗಳನ್ನು ಸ್ಫುರಿಸುವ ಕಲೆಗಾರಿಕೆಯಿರಬಹುದು. ನಾವು ಮೆಚ್ಚುವ ವ್ಯಕ್ತಿಗಳು ಹೇಗಿದ್ದರೂ ನಮಗೆ ಸರ್ವ ರೀತಿಯಲ್ಲಿ ಇಷ್ಟವಾಗುತ್ತಾರೆ.ಇವೆಲ್ಲವು ಇರುವುದು ನಮ್ಮ ದೃಷ್ಟಿಯಲ್ಲಿ ಅಂದರೆ ಮನಸ್ಸಿನ ಭಾವನೆಯಲ್ಲಿ ಹೊರತು ಸೃಷ್ಟಿಯಲ್ಲಲ್ಲ. ಸೃಷ್ಟಿಯ ವೈಚಿತ್ರ್ಯವೇ ಹೀಗೆ….ಅನುರೂಪವಾದದನ್ನಿ ಸೃಷ್ಟಿಸುತ್ತಾ ಹೋಗುವುದು. ಮರ ,ಸ್ತ್ರೀ ,ಆಕಾಶ ,ಹೂವು ಇತ್ಯಾದಿಗಳ ಸೃಷ್ಟಿಕರ್ತನಿಗೆ ನಂತರದ ದೃಷ್ಟಿಯ ಬಗ್ಗೆ ಖಂಡಿತಾ ಚಿಂತೆಯಿಲ್ಲ! ಆದರೆ ಮನುಷ್ಯ ನಿರ್ಮಿಸುವ ಎಲ್ಲಾ ಸೃಷ್ಟಿಗಳಿಗೆ ದೃಷ್ಟಿಯೊಂದಿಗೆ ‘ ದೃಷ್ಟಿಯಾಗುವುದು ‘ ಎಂಬೊಂದು ಅನುರೂಪವಾದ ವಿಚಾರವಿದೆ. ಈ ನಂಬಿಕೆ ಎಲ್ಲರನ್ನು ಚಿಂತಿಸುವಂತೆ ಮಾಡಿದರೂ ಅಳವಡಿಸಿಕೊಳ್ಳುವುದರಲ್ಲಿ ಯಾರು ಹಿಂದೆ ಬಿದ್ದಿಲ್ಲ.ಮಗುವಿಗೆ ದೃಷ್ಟಿ ಆಗಿದೆ,ತೋಟಕೆ ದೃಷ್ಟಿ, ಹೊಸಮನೆಗೆ ದೃಷ್ಟಿ,ಅವನಿಗೆ ದೃಷ್ಟಿಗೆ ಹೀಗೆ ಆಗಿದೆ ಹೀಗೆ ಸಾಗುವ ದೃಷ್ಟಿಯ ವಿಚಾರಗಳನ್ನು ಕೇಳದವರು ಯಾರು ಇಲ್ಲ. ಮಗುವಿನ ವಿಷಯದಲ್ಲಿ ಇದು ಬಲು ಜೋರಾಗಿಯೇ ಬೆಳೆದುಕೊಂಡು ಬಿಟ್ಟಿದೆ ಮತ್ತು ಎಲ್ಲರಲ್ಲೂ ಹಾಸುಹೊಕ್ಕಾಗಿದೆ. ಈ ದೃಷ್ಟಿಯ ಪಟ್ಟಿ ತುಂಬಾ ಉದ್ದವು ಇದೆ.ಇದರೊಂದಿಗೆ ಮಕ್ಕಳು ಎಲ್ಲಾದರು ಹೋಗಿ ಬಂದಾಗ ಹಾದಿ ಕಣ್ಣು ಬೀದಿ ಕಣ್ಣು ಎಲ್ಲ ತೊಲಗಲಿ ಎಂಬ ಉವಾಚದೊಂದಿಗೆ ಉರಿಗೆ ಕೆಲವು ಪದಾರ್ಥಗಳನ್ನು ಸೇರಿಸಿ ಹಾಕಿ ಬಿಡುವುದು ಸಾಮಾನ್ಯ. ಅಲ್ಲಿ ಸಿಡಿಮಿಡಿ ಜೋರಾಗಿದ್ದರೆ ದೃಷ್ಟಿ ಬಲವಾಗಿ ಬಿದ್ದಿತು ಈಗ ತೊಲಗಿತು ಎಂದುಬಿಡುವುದು ಇನ್ನೂ ಸಾಮಾನ್ಯ. ಇನ್ನು ಕೆಲವೊಮ್ಮೆ ಎಲ್ಲ ಬೆರಳುಗಳಿಂದ ಒಟ್ಟಿಗೆ ಚಿಟಿಕೆ ಮುರಿದು ದೃಷ್ಟಿ ತುಂಬಾ ಆಗಿತ್ತು ಈಗ ಹೋಯಿತು ಅಂತ ನಿರಾಳವಾಗುತ್ತೇವೆ. ಹೆಚ್ಚಿನ ಮನುಷ್ಯ ರ ಕೈಯಲ್ಲಿ, ಕಾಲಲ್ಲಿ, ಇತರರಲ್ಲಿ ಹೀಗೆ ದೃಷ್ಟಿ ನೂಲು ಎಂಬುದೊಂದು ಇರುತ್ತದೆ. ಪ್ರಾಣಿಗಳಿಗು ಮನುಷ್ಯರು ಹೀಗೆ ಕಟ್ಟಿಬಿಡುತ್ತಾರೆ.ಬೆಳ್ಳಗಿನ ಹುಡುಗಿಗೆ ಅವಳಮ್ಮ ಗಲ್ಲಕ್ಕೊಂದು ಕಾಡಿಗೆಯ ಬೊಟ್ಟಿಟ್ಟು ದೃಷ್ಟಿಯಾಗದಿರಲಿ ಎನ್ನುತ್ತಾಳೆ.ಹುಡುಗಿ ಚೆನ್ನಾಗಿದ್ದಾಳೆ ಎಂದವಳನ್ನು ನೋಡಿದರೆ ಆ ದೃಷ್ಟಿ ಆ ಕಪ್ಪು ಬೊಟ್ಟೊಳಗೆ ಇಂಗಿ ಹೋಗಲಿ ಅಂತ ಅರ್ಥವಿರಬೇಕೋ ಏನೋ ನಾ ಕಾಣೆ. ಇವೆಲ್ಲಾ ಮನುಷ್ಯರಿಗಾದರೆ ಸೊಂಪಾಗಿ ಬೆಳೆದ ತೋಟಕ್ಕೆ, ಅಂದವಾಗಿ ಕಟ್ಟುವ ಮನೆಗೆ ದೃಷ್ಟಿಯಾಗದಿರಲಿ ಅಂತ ಏನೇನೋ ಮಾಡುತಾರೆ.ಕಣ್ತುಂಬುವ ಹಸಿರು ಗದ್ದೆಯ ನಡುವೆ ‘ಬೆರ್ಚಪ್ಪ’ ಅಂದರೆ ಬೆದರು ಬೊಂಬೆಯನ್ನು ನಿಲ್ಲಿಸಿಬಿಡುತ್ತಾರೆ.ಬೆರ್ಚಪ್ಪ ಅಂದರೆ ಹೆದರಿಸುವ ರೂಪದಲ್ಲಿ ಮಾನವ ನಿರ್ಮಿತ ಮನುಷ್ಯಾಕೃತಿ. ಈ ಮಾನವಾಕೃತಿಯ ತಲೆಯ ಭಾಗಕ್ಕೆ ಮಡಕೆಯನ್ನು ನಿಲ್ಲಿಸುತ್ತಾರೆ. ಮಡಕೆಗೆ ದೊಡ್ಡ ಮೀಸೆಯ, ದೊಡ್ಡ ಕಣ್ಣಿನ ಚಿತ್ರ ಬರೆದುಬಿಡುತ್ತಾರೆ. ಹಳೆಯ ಅಂಗಿಯೊಳಗೆ ಹರಕು ಬಟ್ಟೆ ತುಂಬಿಸಿ,ಹರಿದ ಪ್ಯಾಂಟ್ ಕಟ್ಟಿ ಉದ್ದನೆಯ ಕೋಲೊಳಗೆ ಈ ಮನುಷ್ಯನನ್ನು ನೆಟ್ಟಗೆ ನಿಲ್ಲಿಸಿ ಬಿಡುತ್ತಾರೆ. ಸುಂದರವಾದ ಗದ್ದೆಯನ್ನು ನೋಡಿ ಕಣ್ತುಂಬಿಕೊಂಡು ದೃಷ್ಟಿಯಾಗುವ ಬದಲಾಗಿ ಈತನನ್ನು ನೋಡಿ ಹೆದರಿಕೊಳ್ಳಲಿ ಎಂಬ ಭಾವದಲ್ಲಿ ನಿಲ್ಲಿಸುತ್ತಾರೆ. ಅಲ್ಲದೆ ಪ್ರಾಣಿಪಕ್ಷಿಗಳು ಈತನನ್ನು ನೋಡಿ ಮನುಷ್ಯನಿರಬೇಕು ಎಂದು ಭಾವಿಸಿ ತರಬೇತನ್ನು ತಿನ್ನಲು ಬರುವುದಿಲ್ಲ ಎಂಬ ವಿಚಾರವು ಸರಿ. ಆದರೆ ಈ ಮನುಷ್ಯ ಪ್ರತಿದಿನವು ಒಂದೇ ತೆರನಾಗಿ ಒಂದೇ ಜಾಗದಲ್ಲಿ ನಿಂತಿರುತ್ತಾನೆ ಎಂದು ಪ್ರಾಣಿ ಪಕ್ಷಿಗಳಿಗೆ ತಿಳಿಯದೆ ಇರುತ್ತದೆಯೇ? ಈ ಬೆರ್ಚಪ್ಪನ ಮೇಲೆಯೇ ಹಕ್ಕಿಗಳು ಕುಳಿತಿರುವುದನ್ನು ನೀವೆಲ್ಲಾ ಗಮನಿಸಿರಬಹುದು. ಉತ್ತರಕರ್ನಾಟಕದ ಬಯಲುಸೀಮೆಯ ಎಲ್ಲ ಬೆಳೆಗಳ ಮಧ್ಯ ಬೆರ್ಚಪ್ಪಗಳನ್ನು ನಿಲ್ಲಿಸಿರುವುದನ್ನು ಪ್ರವಾಸ ಹೋದಾಗ ಗಮನಿಸಿದ್ದಿರಬಹುದು.ಎಲ್ಲ ಸ್ಥಳಗಳಲ್ಲಿಯು ಬೆರ್ಚಪ್ಪಗಳೇ ಇರುತ್ತವೆ ಹೊರತು ಬೆರ್ಚಮ್ಮಗಳು ಇರುವುದಿಲ್ಲ!
ಹುಟ್ಟೂರಲ್ಲಿ ನಾವು ಮನೆ ಕಟ್ಟಲು ಪ್ರಾರಂಭಿಸಿದಾಗ ನನ್ನ ತಂದೆ ಸಿಮೆಂಟ್ ನಿಂದ ತಯಾರಿಸಿದ ಭೀಕರವಾದ ರಾಕ್ಷಸಾಕೃತಿಯ ಮುಖವನ್ನು ತಂದಿರಿಸಿದರು.ಆ ಬೀಭತ್ಸ ಮುಖವನ್ನು ಮನೆ ಮೇಲೇಳುತ್ತಿದ್ದಂತೆ ಅದರ ಜಾಗವನ್ನು ಎಲ್ಲರಿಗೂ ಕಾಣುವಂತೆ ಬದಲು ಮಾಡುತಿದ್ದರು.ಉದ್ದನೆ ದಪ್ಪ ಮೀಸೆ, ಕೆಂಪಗಿನ ನಾಲಗೆ,ದೊಡ್ಡ ಕಣ್ಣು ಯಾರನ್ನು ಹೆದರಿಸುವಂತಿತ್ತು.ಹೊಸ ಮನೆಗಳನ್ನು ಕಟ್ಟುವ ಇತರ ಕಡೆಗಳಲ್ಲಿ ಬೆರ್ಚಪ್ಪನನ್ನು ಮಾಡಿ ನಿಲ್ಲಿಸಿರುವುದನ್ನು ನಾನು ನೋಡಿದ್ದೇನೆ. ಬಹುಶಃ ಅಪ್ಪನಿಗೆ ಈ ಬೆರ್ಚಪ್ಪ ಮಾಡಿ ನಿಲ್ಲಿಸುವ ತೊಂದರೆಯನ್ನು ಯಾಕೆ ತೆಗೆದುಕೊಳ್ಳಬೇಕು ಹೇಗಿದ್ದರೂ ಅಂಗಡಿಯಲ್ಲಿ ಬೆರ್ಚಪ್ಪನ ಕೆಲಸ ಪೂರೈಸಲು ಬೇಕಾ ಭಯಾನಕಗಳು ಸಿಗುತ್ತವಲ್ಲ ಎಂದೆನಿಸಿ ಅಂಗಡಿಯಿಂದಲೇ ಕೊಂಡು ತಂದಿದ್ದಾರೆ. ನಾನದನ್ನು ನೋಡಿದ ದಿನವೇ ಇದನ್ನು ಯಾಕೆ ಇಡುತ್ತಾರೆ ಅಂತ ಕೇಳಿದ ನೆನಪು.ಆಗ ಅಲ್ಲಿಯೆ ಇದ್ದ ನನ್ನ ಅಜ್ಜಿ ಹೊಸ ಮನೆಗೆ ಕಣ್ಣು ಮುಟ್ಟಬಾರದು ಅದಕ್ಕೆ ಎಂದಿದ್ದರು. ಕಣ್ಣು ಮುಟ್ಟುವುದು ಎಂದರು ದೃಷ್ಟಿ ಆಗುವುದು ಎಂದೇ ಅರ್ಥ. ಹೇಗೆ ದೃಷ್ಟಿ ಆಗುತ್ತದೆ ಯಾಕೆ ದೃಷ್ಟಿ ಆಗುತ್ತದೆ ಎಂಬುದು ನನ್ನ ಮನಸ್ಸಿಗೆ ಹೊಳೆದರು ಕೇಳದೆ ಸುಮ್ಮನಾಗಿದ್ದೆ.ಎಲ್ಲ ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಬಿಡಿಸಿ ಹೇಳುತ್ತಿದ್ದ ತಂದೆ ಇದಕ್ಕೇನು ಹೇಳಲಿಲ್ಲ ನಾನು ಕೇಳಲಿಲ್ಲ. ಬೆಳೆಗಳು ಇರುವಲ್ಲಿ ಬೆರ್ಚಪ್ಪ. ಮಾಡಿಟ್ಟುಕೊಂಡು ಇರುವುದಕ್ಕೆ ದೃಷ್ಟಿ ಆಗದಂತೆ ಅಂತ ಹೇಳಿದರು,ಪ್ರಾಣಿ ಪಕ್ಷಿಗಳು ಭಯಭೀತರಾಗಿ ಓಡಲಿ ಎಂಬ ಕಾರಣವು ಇರಬಹುದು.ಆದರೆ ಹೊಸ ಮನೆ ಕಟ್ಟುವಾಗ ಮಾಡಿ ಇಡುವ ಬೆರ್ಚಪ್ಪನಿಗೆ ಏನನ್ನಬೇಕು? ಕಳ್ಳಕಾಕರು ಬರದಿರದಂತೆ ಅಂತ ಹೇಳಿದರು ಯಾವ ಕಳ್ಳರು ಅದನ್ನು ನೋಡಿ ಬರದಿರಲು ಸಾಧ್ಯವಿಲ್ಲ! ಇನ್ನು ದೃಷ್ಟಿಗೆಂದು ತರಕಾರಿ ತೋಟದಲ್ಲಿ ಒಂಟಿ ಚಪ್ಪಲಿಯನ್ನು ಕಟ್ಟಿ ಇಟ್ಟಿರುತ್ತಾರೆ. ಇನ್ನು ಕೆಲವು ಕಡೆ ಪೊರಕೆಯನ್ನು ಕಟ್ಟುತ್ತಾರೆ. ಜನರ ಇಂತಹ ನಂಬಿಕೆಗಳು ಅವರ ಭಾವಕ್ಕೆ ತಕ್ಕಂತೆ ನಡೆಯುತ್ತದೆ.
ಅವರವರ ನಂಬಿಕೆ ಅವರವರಿಗೆ ಎಂಬಂತೆ ಜನರು ಅಂದಿನಿಂದ ಇಂದಿನವರೆಗೆ ಇದನ್ನು ಪಾಲಿಸುತ್ತಾ ಬಂದಿದ್ದಾರೆ. ನಂಬಿ ಕೆಟ್ಟವರಿಲ್ಲ ಎಂಬ ದಾಸರ ವಾಣಿಯಂತೆ ಈ ನಂಬಿಕೆಯಿಂದ ಮಾಡಿದವರಿಗು ಉಳಿದವರಿಗು ಏನು ಕೆಡುಕಿಲ್ಲ ಎಂದು ಭಾವಿಸುವುದೇ ಒಳಿತು.ಇದನ್ನು ಅಲ್ಲಗಳೆಯಲು ನಾವು ಪಾತ್ರರಲ್ಲ.ಅರಳು ಹುರಿದಂತೆ ಮಾತನಾಡುತ್ತಾ, ಪಾದರಸದಂತೆ ಓಡಾಡುತ್ತಿದ್ದ ಹುಡುಗಿಗೆ ಹಠಾತ್ತನೆ ಹುಷಾರಿಲ್ಲ ತಪ್ಪಿದರೆ ತಾಯಿಗೆ ಗಾಬರಿಯಾಗುತ್ತದೆ. ಔಷಧಿ ಕೊಡಿಸುವುದರೊಂದಿಗೆ ದಡಬಡನೆ ಓಡಾಡಿ ಆಕೆಗೆ ತಿಳಿದ ರೀತಿಯಲ್ಲಿ ದೃಷ್ಟಿ ತೆಗೆದುಬಿಡುತ್ತಾಳೆ.ಹುಡುಗಿ ಹುಷಾರಾಗುವ ಮೊದಲೇ ನನ್ನ ನಂಬಿಕೆ ಈಡೇರಿಸಿಕೊಂಡೆ ಎಂಬ ನಿರುಮ್ಮಳತೆ ತಾಯಿಗಿರುತ್ತದೆ.ಹಾಲು ಬಣ್ಣದ ದುಂಡು ಮುಖದ ಚೆಲುವೆಗೆ ಕಾಡಿಗೆಯ ಚುಕ್ಕೆಯೊಂದನ್ನು ಕಂಡೂ ಕಾಣದಂತೆ ದೃಷ್ಟಿಯಾಗದಿರಲಿ ಎನ್ನುತ್ತಾ ಹಾಕಿ ಕಳುಹಿಸುತ್ತಾಳೆ ತಾಯಿ.ಈ ನಂಬಿಕೆಯ ಹಿಂದೆ ಅಗಾಧವಾದ ನೆಮ್ಮದಿಯು ಇರಬಹುದು ಅಲ್ಲವೇ? ಜೀವನದಲ್ಲಿ ನೆಮ್ಮದಿಯೇ ಮುಖ್ಯವಾಗಿರುವಾಗ ಇಂಥ ನಂಬಿಕೆಗಳನ್ನು ಅಲ್ಲ ಗಳೆಯುವುದು ಯಾಕಲ್ಲವೇ ?ನಂಬಿಕೆಗಳಿಂದ ಮನಸ್ಸಿಗೆ ಹಿತವಿದೆ ಸಮಾಧಾನವಿದೆ ಎಂದ ಮೇಲೆ ಇಂತಹ ನಂಬಿಕೆಗಳಿಗೆ ಇಂಬು ಕೊಡುವುದರಲ್ಲು ಏನು ತಪ್ಪಿಲ್ಲ. ದೃಷ್ಟಿಗೆ ಸೃಷ್ಟಿಗೆ ಅದರ ಕನವರಿಕೆಗಳಿಗೆ ನಂಬಿಕೆಯು ನೆಮ್ಮದಿಯನ್ನು ನೀಡುವುದಾದರೆ,ನಾವು ನಂಬುವುದಕ್ಕೆ ನೆಮ್ಮದಿಯ ಕಾರಣವನ್ನು ನೀಡಬಹುದು ಅಲ್ಲವೇ?
– –ಸಂಗೀತರವಿರಾಜ್,ಹೊಸೂರು ಚೆಂಬು
ವಿಳಾಸ :
ಸಂಗೀತ ರವಿರಾಜ್
ಬಾಲಂಬಿ ಅಂಚೆ
, ಚೆಂಬು ಗ್ರಾಮ,
. ಮಡಿಕೇರಿ ತಾ ೫೭೪೨೩೪