ಆಯನೂರು ಮಂಜುನಾಥ್ ಅವರಿಗೆ ನಾಳೆ ಹುಟ್ಟು ಹಬ್ಬ ಸಂಭ್ರಮ ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ, ಅರ್ಥಪೂರ್ಣ ಆಚರಣೆ
ಆಯನೂರು ಮಂಜುನಾಥ್ ಅವರಿಗೆ ನಾಳೆ ಹುಟ್ಟು ಹಬ್ಬ ಸಂಭ್ರಮ
ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ, ಅರ್ಥಪೂರ್ಣ ಆಚರಣೆ

ಶಿವಮೊಗ್ಗ : ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನ.14 ರಂದು ನಾಳೆ ನಗರದಲ್ಲಿ ಆಯನೂರು ಮಂಜುನಾಥ್ ಅವರ ಅಭಿಮಾನಿ ಬಳಗದಿಂದ ವಿವಿಧ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯನೂರು ಮಂಜುನಾಥ್ ಅವರ ಅಭಿಮಾನಿ ಬಳಗದ ಸಂಚಾಲಕ ಹಾಗೂ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ವಿವರ ನೀಡಿದ ಅವರು, ಬೆಳಗ್ಗೆ 9 ಗಂಟೆಗೆ ದುರ್ಗಿಗುಡಿ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಆ ಬಳಿಕ 11.30ಕ್ಕೆ ಪಾರ್ಕ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಆಯನೂರು ಮಂಜುನಾಥ್ ಅವರ ಹುಟ್ಟು ಹಬ್ಬದ ಆಚರಣೆಯ ಸಭಾ ಕಾರ್ಯಕ್ರಮ ನಡೆಯಲಿದೆ, ಆನಂತರ 12.30ಕ್ಕೆ ಶಾರದಾ ದೇವಿ ಅಂಧರ ವಿಕಾಸ ಶಾಲೆಯ ಮಕ್ಕಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.
ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ನಗರದ ಮಿಷನ್ ಕಾಂಪೌಂಡ್ ನಲ್ಲಿರುವ ಆಯನೂರು ಮಂಜುನಾಥ್ ಅವರ ನಿವಾಸದಲ್ಲಿ ಅಭಿಮಾನಿ ಬಳಗವು ಸೇರಿ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ಹುಟ್ಟು ಹಬ್ಬದ ಆಚರಣೆಯ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಆಯನೂರು ಮಂಜುನಾಥ್ ಅವರ ರಾಜಕೀಯ ಬದುಕಿನ ಕುರಿತು ಗಣ್ಯರು ಮಾತನಾಡಲಿದ್ದಾರೆ. ಆ ನಂತರ ಭೋಜನ ವ್ಯವಸ್ಥೆಯಿದೆ ಎಂದು ಅವರು ವಿವರಿಸಿದರು.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ಸೇರಿ ನಾಲ್ಕು ಸದನಗಳಿಗೆ ಆಯ್ಕೆಯಾಗಿ ಅಲ್ಲಿ ಸೇವೆ ಸಲ್ಲಿಸಿರುವ ಆಯನೂರು ಮಂಜುನಾಥ್ ಅವರದ್ದು ವಿಶೇಷ ರಾಜಕಾರಣ. ಜಿಲ್ಲೆಯ ಮಟ್ಟಿಗೆ ಈ ರೀತಿ ನಾಲ್ಕು ಸದನಗಳಿಗೆ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರವಾವರು ಅವರೇ ಮೊದಲು. ಆಮೂಲಕವೇ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು, ಸದಾ ಜನಪರ, ಕಾರ್ಮಿಕರ ಪರ, ರೈತರ ಪರ ರಾಜಕಾರಣ ಮಾಡಿದವರು. ಹಾಗಾಗಿಯೇ ಈ ಬಾರಿಯ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
1955 ರಲ್ಲಿ ಹುಟ್ಟಿದ ಆಯನೂರು ಮಂಜುನಾಥ್ ಅವರು 1977 ರಲ್ಲಿ ವಿದ್ಯಾರ್ಥಿ ಸಂಘಟನೆಯ ಮೂಲಕ ಸಾರ್ಜನಿಕ ಕ್ಷೇತ್ರಕ್ಕೆ ಕಾಲಿಟ್ಟರು. ಆಮೂಲಕವೇ ತುರ್ತು ಪರಿಸ್ಥಿತಿ ವಿರುದ್ದ ಪ್ರತಿಭಟನೆ ನಡೆಸಿ ಜೈಲು ವಾಸ ಅನುಭವಿಸಿ ಬಂದರು.ಮುಂದೆ 1994 ರಲ್ಲಿ ಹೊಸನಗರ ( ಈಗ ಅದು ಸಾಗರ -ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಿಕೆಯಾಗಿದೆ) ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದು, ಮೊದಲ ಬಾರಿಗೆ ವಿಧಾನಸೌಧಕ್ಕೆ ಪ್ರವೇಶಿಸಿದರು. ಸಕ್ರಿಯ ರಾಜಕಾರಣವನ್ನು ಅವರು ಅಲ್ಲಿಂದ ಶುರು ಮಾಡಿದರು. 1988 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅವರು, ಆಗ ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಬಂಗಾರಪ್ಪ ಅವರನ್ನು ಸೋಲಿಸಿ, ಸಂಸತ್ತಿಗೆ ಕಾಲಿಟ್ಟರು. ಅಲ್ಲಿಂದ 2010 ರಲ್ಲಿ ರಾಜ್ಯಸಭಾ ಸದಸ್ಯರಾಗಿ, 2018 ಕ್ಕೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಅಲ್ಲಿಯೂ ಸೇವೆ ಸಲ್ಲಿಸಿದ್ದು ಅವರ ರಾಜಕೀಯ ಬದುಕಿನ ವಿಶೇಷ ಅನುಭವವೇ ಹೌದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಮುಖಂಡರಾದ ಲಕ್ಷ್ಮಣಪ್ಪ, ಹಿರಣ್ಣಯ್ಯ, ಶಿ.ಜು. ಪಾಶಾ, ಪದ್ಮನಾಭ್, ಕೃಷ್ಣ, ಎಸ್.ಬಿ. ಪಾಟೀಲ್, ಲೋಕೇಶ್, ಆಯನೂರು ಸಂತೋಷ್, ಬೋಜರಾಜ್, ರಾಘವೇಂದ್ರ ಇದ್ದರು.
———————-
ಅಧಿಕಾರ ಇರಲಿ, ಬಿಡಲಿ ತಮ್ಮ ವಾಕ್ಚಾತುರ್ಯ, ಎಲ್ಲರೊಂದಿಗೂ ಬೆರೆಯುವ ಸರಳ ಸಜ್ಜನಿಕೆಯ ಸ್ವಭಾವ, ರಾಜಕಾರಣದ ಆಚೆ ಎಲ್ಲ ಪಕ್ಷದ ನಾಯಕರ ಜತೆಗೂ ಸ್ನೇಹ ಗುಣದೊಂದಿಗೆ ಇರುವ ವಿಶೇಷ ವ್ಯಕ್ತಿತ್ವದ ಕಾರಣಕ್ಕೆ ಎಲ್ಲರ ಪ್ರೀತಿಗೂ ಪಾತ್ರರಾಗಿರುವ ಆಯನೂರು ಮಂಜುನಾಥ್ ಅವರು ಎಲ್ಲರ ನಡುವೆಯೂ ಆಯನೂರು ಮಂಜಣ್ಣ ಎಂದೇ ಖ್ಯಾತಿ. ಅವರ ಹುಟ್ಟಹುಬ್ಬವನ್ನು ಅರ್ಥಪೂರ್ಣವಾಗಿಸುವ ಉದ್ದೇಶದಿಂದ ನಾವು ನಾಳೆ ವಿವಿಧ ಕಾರ್ಯಕ್ರಮ ಆಯೋಜಿಸಿದ್ದೇವೆ.
– *ಧೀರರಾಜ್ ಹೊನ್ನವಿಲೆ, ಅಭಿಮಾನ ಬಳಗದ ಸಂಚಾಲಕ ಹಾಗೂ ಪಾಲಿಕೆ ಮಾಜಿ ಸದಸ್ಯ*
…………………….


