ಶಿವಮೊಗ್ಗ ನ್ಯಾಯಾಲಯದಲ್ಲಿ ಗೀತಕ್ಕ- ಶಿವಣ್ಣ ಪ್ರಚಾರ- ಅಪ್ಪ ಬಂಗಾರಪ್ಪರ ಕಾರಣದಿಂದ ವಕೀಲ ವೃತ್ತಿ ಬಗ್ಗೆ ಅಪಾರ ಗೌರವ; ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ ನ್ಯಾಯಾಲಯದಲ್ಲಿ ಗೀತಕ್ಕ- ಶಿವಣ್ಣ ಪ್ರಚಾರ-
ಅಪ್ಪ ಬಂಗಾರಪ್ಪರ ಕಾರಣದಿಂದ ವಕೀಲ ವೃತ್ತಿ ಬಗ್ಗೆ ಅಪಾರ ಗೌರವ; ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ:’ವಕೀಲರಾಗಿದ್ದ ತಂದೆ ಬಂಗಾರಪ್ಪ ಅವರು ಜನ ಸಾಮಾನ್ಯರ ಸೇವೆ ಮಾಡಲು ರಾಜಕೀಯದಲ್ಲಿ ತೊಡಗಿಸಿಕೊಂಡರು. ಆದ್ದರಿಂದ, ನನಗೆ ವಕೀಲ ವೃತ್ತಿಯ ಬಗ್ಗೆ ಅಗಾಧವಾದ ಗೌರವವಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ಸೈಕಲ್ ಏರಿ ವಕೀಲ ಕಚೇರಿಗೆ ಓಡಾಡುತ್ತಿದ್ದರು. ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿ ಆಗಿ ಜನರಿಗೆ ಸೇವೆ ಸಲ್ಲಿಸುವ ಮೂಲಕ ದಾರಿ ದೀಪವಾದರು ಎಂದರು.
ತಂದೆಯ ಹಾದಿಯಲ್ಲಿ ಸಾಗಲು ಗೀತಾಕ್ಕ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ, ನೀವೇ ಬಂಗಾರಪ್ಪ ಎಂದು ಭಾವಿಸಿ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಗೀತಾಕ್ಕ ಹೆಣ್ಣು ಮಗಳಾಗಿರಬಹುದು. ಆದರೆ, ಅವರು ತಂದೆ ಬಂಗಾರಪ್ಪ ಅವರ ತದ್ರೂಪಿ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಬಂಗಾರಪ್ಪ ಅವರಲ್ಲಿದ್ದ ಎಲ್ಲಾ ಗುಣಗಳಿವೆ. ನಟ ಶಿವರಾಜಕುಮಾರ ಅವರು ರಾಜಕೀಯದಲ್ಲಿ ಇಲ್ಲ. ಆದರೆ, ಗೀತಕ್ಕ ಜನರ ಸೇವೆ ಮಾಡಬೇಕು ಎಂಬ ಆಶಯ ಹೊಂದಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಸಮಾಜದ ಆಮೂಲಾಗ್ರ ವಿಕಾಸದ ಬಗ್ಗೆ ಚಿಂತಿಸಿ, ಜನರಿಗಾಗಿ ಸೂಕ್ತ ಯೋಜನೆ ಅನುಷ್ಠಾನಗೊಳಿಸಿದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರಿಗೆ ಸಲ್ಲುತ್ತದೆ. ಈ ಕ್ಷಣಕ್ಕೆ ಇಲ್ಲಿನ ವಕೀಲರನ್ನು ನೋಡುತ್ತಿದ್ದರೆ, ನನ್ನ ತಂದೆ ನೆನಪಾಗುತ್ತಾರೆ. ತಂದೆಯ ಜತೆ ಕಳೆದ ದಿನಗಳು ನೆನಪಾಗುತ್ತವೆ ಎಂದರು.
ದುರ್ಬಲ ಹಾಗೂ ಹಿಂದುಳಿದವರ ಪರ ಹಲವು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರಿಗೆ ಸಲ್ಲುತ್ತದೆ. ಅದೇ, ಹಾದಿಯಲ್ಲಿ ಸಾಗಲು ನನಗೆ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.
ನಟ ಶಿವರಾಜಕುಮಾರ ಮಾತನಾಡಿ, ಸೀನಿಮಾದಲ್ಲಿ ವಕೀಲನಾಗಿ ಕೆಲಸ ಮಾಡಿದ್ದೇನೆ. ನೈಜ್ಯ ಜೀವನದಲ್ಲಿ ಅದು ಸಾಧ್ಯವಾಗಿಲ್ಲ. ಪತ್ನಿ ಗೀತಾಗೆ ಸಾಮಾಜಿಕ ಕಾರ್ಯಗಳಲ್ಲಿ ಒಲವು ಹೆಚ್ಚು. ಆದ್ದರಿಂದ, ಜನರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಸೇರಿ ವಕೀಲ ಸಂಘದ ಪದಾಧಿಕಾರಿಗಳು ಇದ್ದರು.
ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಭದ್ರಾವತಿ ತಾಲ್ಲೂಕಿನ ಮಾಚೇನಹಳ್ಳಿಯ ಶಾಹಿ ಎಕ್ಸ್ ಪರ್ಟ್ ಪ್ರೈವೇಟ್ ಲಿಮಿಟೆಡ್ (ಶಾಹಿ ಗ್ರಾರ್ಮೆಂಟ್ಸ್) ಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಪಿಎಲ್ ಡಿ ಬ್ಯಾಂಕ್ ವಿಜಯ್ ಕುಮಾರ್ ಸಂತೇಕಡೂರು, ಭೋವಿ ನಿಗಮ ಅಧ್ಯಕ್ಷ ರವಿಕುಮಾರ್ ಇದ್ದರು.