ಕವಿಸಾಲು
01
ಪ್ರಜ್ವಲ್ ಈಗ ಶಿಶ್ನಗೊಂಚಲಿನ ಬೇತಾಳ!’
‘ಪ್ರಜ್ವಲ್ ಈಗ ಶಿಶ್ನಗೊಂಚಲಿನ ಬೇತಾಳ!’
ಸೆಕ್ಷುವಲ್ ಕೌನ್ಸೆಲಿಂಗ್ ಕ್ಲಾಸಿನಲ್ಲಿ ಲೈಂಗಿಕ ತಜ್ಞರಾದ ವಿಶ್ವರೂಪಾಚಾರ್ಯರು ಒಂದು ಪ್ರಶ್ನೆಯನ್ನು ಕೇಳಿದ್ದರು; ಮನುಷ್ಯರ ದೇಹದಲ್ಲಿರುವ ಪ್ರಮುಖ ಲೈಂಗಿಕ ಅಂಗ ಯಾವುದು? ಗಂಡಸರಲ್ಲಾದರೆ ಶಿಶ್ನ ಮತ್ತು ಹೆಣ್ಣಿನಲ್ಲಾದರೆ ಯೋನಿ ಎಂದು ನಾವೆಲ್ಲಾ ಉತ್ತರಿಸಿದ್ದೆವು. ಆದರೆ ಅವರು ನಿಮ್ಮ ಉತ್ತರ ಪೂರ್ತಿ ನಿಜವಲ್ಲ. ಲೈಂಗಿಕ ಬಯಕೆಯ ಕೇಂದ್ರ ಬಿಂದು ಮಿದುಳು ಎಂದು ಹೇಳಿ ಅದನ್ನು ವಿವರಿಸುತ್ತಾ ಹೋದ್ರು. ನಿಜ, ಲೈಂಗಿಕ ಅಭೀಪ್ಸೆ ಮನಸಿನ ನಿಯಂತ್ರಣವನ್ನೂ ಮೀರಿ ಮಿದುಳಿನ ಸಂಕೇತವನ್ನು ಗ್ರಹಿಸಿ ಪ್ರಚೋದನೆಗೆ ಒಳಗಾಗುತ್ತದೆ. ಅಂತಹ ಮಿದುಳೆಂಬ ಲೈಂಗಿಕ ಪ್ರಚೋದಕ ಅಂಗದಲ್ಲೇ ನ್ಯೂನತೆ ಉಂಟಾದಲ್ಲಿ ಏನಾಗುತ್ತದೆ? ಪ್ರಜ್ವಲನಂತಹ ವಿಕೃತಕಾಮಿಗಳು ಹುಟ್ಟಿಕೊಳ್ಳುತ್ತಾರೆ. ಅಂತವರಿಗೆ ಎಲ್ಲಾ ಮಹಿಳೆಯರು ಲೈಂಗಿಕ ಸರಕಾಗಿಯೇ ಕಾಣಿಸುತ್ತಾರೆ.
ಲೈಂಗಿಕ ಮಡಿವಂತರು ನನ್ನ ಈ ಲೇಖನವನ್ನು ಓದಬೇಡಿ ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ.
ಮನುಷ್ಯನ ಮೂಲ ಪ್ರವೃತ್ತಿಗಳಲ್ಲೊಂದಾದ ಲೈಂಗಿಕತೆಯ ಬಗ್ಗೆ ನಮ್ಮ ಸಮಾಜದಲ್ಲಿರುವ ಮಡಿವಂತಿಕೆಯ ಕಾರಣದಿಂದಾಗಿ ಅದು ಅದುಮಿದಷ್ಟು ವಿಕಾರ ರೂಪದಲ್ಲಿ ಪ್ರಕಟಗೊಳ್ಳುತ್ತಲೇ ಇದೆ. ಹಾಗೆ ಪ್ರಕಟಗೊಂಡಾಗ ಅದು ಹಗರಣಗಳಾಗಿ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತದೆ.
ಬಹುಶಃ 2000ನೇ ಇಸವಿಯಲ್ಲಿರಬೇಕು. ಅಂದರೆ ಇಂದಿಗೆ 24 ವರ್ಷಗಳ ಹಿಂದೆ ಪ್ರಿಯಾಂಕ ಮಾಸಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಸಿದ್ಧ ಲೈಂಗಿಕ ತಜ್ಞರಾದ ಪದ್ಮಿನಿ ಪ್ರಸಾದ್ ಮತ್ತು ವಿನೋದ್ ಛಬ್ಬಿಯವರನ್ನು ಸಂದರ್ಶನ ಮಾಡಿ ಒಂದು ಕವರ್ ಸ್ಟೋರಿ ಬರೆದಿದ್ದೆ. ಆಗ ಅವರೇನೂ ಈಗಿನಷ್ಟು ಪ್ರಸಿದ್ಧಿ ಹೊಂದಿರಲಿಲ್ಲ. ಲೈಂಗಿಕ ಸಮಸ್ಯೆಗಳ ಪರಿಹಾರಕ್ಕೆ ಜನರು ಅಟ್ಟದ ಮೇಲಿನ ತಜ್ಞರನ್ನು ಕದ್ದುಮುಚ್ಚಿ ಭೇಟಿ ಮಾಡುತ್ತಿದ್ದ ಕಾಲ ಅದು. ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್ ಇತ್ಯಾದಿಗಳು ಆಗಷ್ಟೇ ಪರಿಚಯವಾಗುತ್ತಿದ್ದವು. ಹಾಗಾಗಿ ಸೆಕ್ಸಲಾಜಿಸ್ಟ್ ಎಂಬ ವಿಶೇಷ ಪರಿಣಿತಿ ಹೊಂದಿದ ಡಾಕ್ಟರ್ಸ್ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಕನ್ನಡದ ಮಟ್ಟಿಗೆ ತೊಂಬತ್ತರ ದಶಕದ ಸುಪ್ರಸಿದ್ಧ ಮಾಸಿಕಗಳಾದ ‘ಸುರತಿ’ ಮತ್ತು ʼರತಿ ವಿಜ್ಞಾನ’ ಗಳೇ ಕುತೂಹಲಿಗಳ ಲೈಂಗಿಕ ಸಮಸ್ಯೆಗಳ ಕೈಪಿಡಿಯಾಗಿತ್ತು.
ತೊಂಬತ್ತರ ದಶಕದಲ್ಲಿ ನಾನು ಸುರತಿಯ ಸೋದರ ಪತ್ರಿಕೆಯಾದ ‘ಮನ್ವಂತರ’ದಲ್ಲಿ ಸಬ್ ಎಡಿಟರ್ ಆಗಿದ್ದೆ. ಆಗ ಈಮೈಲ್ ಎಂಬುದು ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಓದುಗರಿಂದ ಬರುವ ಎಲ್ಲಾ ಲೇಖನಗಳು, ಪತ್ರಗಳು ನನ್ನ ಟೇಬಲ್ ಗೆ ಬರುತ್ತಿದ್ದವು. ಮ್ಯಾಗಝಿನ್ ಬೇರೆ ಬೇರೆಯಾಗಿದ್ದರೂ ವಿಳಾಸ ಒಂದೇ ಆಗಿರುವ ಕಾರಣ ಸುರತಿಗೆ ಬರುವ ಕೆಲವು ಪತ್ರಗಳನ್ನು ನಾನೂ ಓದುವ ಸಂದರ್ಭ ಬರುತ್ತಿತ್ತು. ಅದರಲ್ಲಿ ಓದುಗರಿಗೆ ಬಹು ಜನಪ್ರಿಯವಾಗಿದ್ದದ್ದು ‘ಮೊದಲ ಅನುಭವ’ ಮತ್ತು ಇಣುಕು ಕಾಮಕ್ಕೆ ಸಂಬಂಧಿಸಿದ ಇನ್ನೊಂದು ವೇದಿಕೆ [ಅದರ ಹೆಸರು ಮರೆತುಹೋಗಿದೆ] ಇದು ಲೈಂಗಿಕ ಕುತೂಹಲ, ಹಗಲುಗನಸು, ವಾಂಛೆಗಳ ಮಿಶ್ರಣದ ಕಲ್ಪನಾ ಬರಹವಾಗಿರುತ್ತಿತ್ತು. ನನ್ನೂರಿನ ಸಭ್ಯ ಯುವಕನೊಬ್ಬ ಬರೆದ ಪತ್ರವೊಂದನ್ನು ನಾನು ಓದಿದ್ದೆ. ಊರಿಗೆ ಹೋದಾಗ ಅವನ ಮುಖ ನೋಡಿದಾಗಲೆಲ್ಲ ನಂಗೆ ನಗು ಉಕ್ಕುಕ್ಕಿ ಬರುತ್ತಿತ್ತು!
ನಂತರದಲ್ಲಿ ಜನರಲ್ಲಿರುವ ಲೈಂಗಿಕ ಮೌಢ್ಯವನ್ನು ನೋಡಿ ಅರೋಗ್ಯಕರ ಲೈಂಗಿಕ ಬದುಕಿನ ಕುರಿತಾದ ಒಂದು ಬ್ಲಾಗ್ ಕೂಡಾ ಆರಂಭಿಸಿದ್ದೆ!
ಅಂದಿನ ದಿನಗಳ ಇಣುಕು ಕಾಮವೇ ಇಂದು ಸೋಷಿಯಲ್ ಮೀಡಿಯಾಗಳಲ್ಲಿ ‘ನಮಗೂ ಪೆನ್ ಡ್ರೈವ್ ಕಳಿಸಿ ನೋಡೋಣ’ ಎಂದು ಕೇಳುವವರ ಮನಸ್ಥಿತಿ. ಇವರ ಆಕ್ಕತಂಗಿಯರು, ಅಮ್ಮ-ಚಿಕ್ಕಮ್ಮಂದಿರು, ಅತ್ತಿಗೆ ನಾದಿನಿಯರು ಈ ಪೆನ್ ಡ್ರೈವ್ ನಲ್ಲಿ ಇದ್ದಿದ್ದರೆ ಆಗ ಇವರೆಲ್ಲಾ ಹೀಗೆ ಕ್ಷುಲಕವಾಗಿ, ಅಶ್ಲೀಲವಾಗಿ ಮಾತಾಡುತ್ತಿದ್ದರೆ? ಬಯಸಿದರೆ ಎಲ್ಲಾ ರೀತಿಯ ಅಶ್ಲೀಲ ವಿಡಿಯೋಗಳೂ ಇವತ್ತು ಬೆರಳ ತುದಿಯಲ್ಲಿವೆ. ಆದರೂ ಕದ್ದುಮುಚ್ಚಿ ಇನ್ನೊಬ್ಬರ ಬೆಡ್ರೂಂಗೆ ಇಣುಕುವ ಜೊಲ್ಲು ಬುರುಕತನ ಮಾತ್ರ ಹಾಗೇ ಇದೆ.
ಇದೆಲ್ಲದರ ಹಿನ್ನೆಲೆಯಲ್ಲಿ ಪ್ರಜ್ವಲ ರೇವಣ್ಣನದು ಎನ್ನಲಾದ ಪೆನ್ ಡ್ರೈವ್ ನಲ್ಲಿರುವ ಕೆಲವು ದೃಶ್ಯಗಳನ್ನು ನೋಡಿ ಬರೆಯುತ್ತಿದ್ದೇನೆ. ಆತ ಒಬ್ಬ ವಿಕೃತ ಕಾಮಿ, ಮಾನಸಿಕ ಅಸ್ವಸ್ಥ. ಆತನ ದೃಷ್ಟಿಯಲ್ಲಿ ಹೆಣ್ಣು ಅಂದರೆ ಒಂದು ಸೆಕ್ಸ್ ಆಟಿಕೆ. ಅವಳಿಗೂ ಮನಸ್ಸಿದೆ, ಸಂವೇದನೆಗಳಿವೆ, ಮಾನಪಮಾನಗಳ ಭಯ ಇದೆ ಎಂಬುದು ಅವನ ಅರಿವಿಗೇ ಬಂದಿಲ್ಲ. ಅದೊಂದು ಕಾಮಬೆಂತರ.
ಬಹಳ ಜನ ಹೇಳುತ್ತಾರೆ- ಆ ಹೆಣ್ಣುಮಕ್ಕಳೆಲ್ಲಾ ಒಪ್ಪಿ ಅವನ ಬಳಿ ಹೋಗಿದ್ದಾರೆ. ಪರಸ್ಪರ ಸಮ್ಮತಿಯ ಸೆಕ್ಸ್ ನಡೆಸಿದ್ದಾರೆ ಅಂತ. ನಾನು ಅವರೆಲ್ಲರಿಗೂ ಹೇಳುವುದಿಷ್ಟೇ; ನೀವು ಕೇವಲ ಲೈಂಗಿಕ ದೃಶ್ಯಗಳನ್ನು ಮಾತ್ರ ನೋಡಿದ್ದೀರಿ, ಅಲ್ಲಿನ ವಿವರಗಳನ್ನು ಗ್ರಹಿಸಲು ಅಸಮರ್ಥರಾದಿರಿ. ಮನೆಗೆಲಸದವರಿಂದ ಹಿಡಿದು ಸರ್ಕಾರದ ಅಧಿಕಾರಿಗಳವರೆಗೆ ಅವನ ಜಾಲದಲ್ಲಿ ಸಿಲುಕಿ ಕೊಂಡವರಿದ್ದಾರೆ. ಮೊದಲನೆಯದಾಗಿ ನೀವು ಹೇಳುವ ಹಾಗೆ ಅದು ಸಮ್ಮತಿಯ ಸೆಕ್ಸೇ ಆಗಿದ್ದಲ್ಲಿ ಅವರು ತಮ್ಮ ಸಮವಸ್ತ್ರಗಳನ್ನು ಕಳಚಿಟ್ಟು ಬರುತ್ತಿದ್ದರು. ಫೋನ್ ಸ್ವಿಚ್ಚಾಫ್ ಮಾಡುತ್ತಿದ್ದರು. ಕೆಲವರಾದರೂ ಮಂಗಳಸೂತ್ರವನ್ನು ತೆಗೆದಿಟ್ಟು ಬರುತ್ತಿದ್ದರು.
ಆ ಗಂಡಸು ಯಾರು? ಅತ್ಯಂತ ಪ್ರಭಾವಶಾಲಿ ಸ್ಥಾನದಲ್ಲಿರುವಾತ. ಜನಪ್ರತಿನಿಧಿ, ಹಾಲಿ ಸಂಸತ್ ಸದಸ್ಯ. ಟ್ರಾನ್ಸ್‌ಫರ್, ಬಿಲ್ ಬಿಡುಗಡೆ, ತಮ್ಮವರಿಗೊಂದು ಕೆಲಸ ಹೀಗೆ ಏನೋ ಒಂದು ಸಹಾಯಕ್ಕಾಗಿ ಆ ಮಹಿಳೆಯರು ಅವನಲ್ಲಿಗೆ ಹೋಗಿರಬಹುದು. ಅಥವಾ ಅವರ ಕುಟುಂಬದವರೇ ಅವರನ್ನು ಕಳುಹಿಸಿರ ಬಹುದು. ಆ ಕಾಮಪಿಶಾಚಿ ಸಹಾಯಕ್ಕೆ ಪ್ರತಿಯಾಗಿ ಅವರನ್ನೇ ಬಳಸಿಕೊಳ್ಳುವ ಬಲೆ ಹಣೆದಿರಬಹುದು. ಒತ್ತಡ ಹಾಕಿರಬಹುದು. ಆ ಹೆಣ್ಣುಮಕ್ಕಳು ಅವನ ಕೋರಿಕೆಯನ್ನು ನಿರಾಕರಿಸಲಾರದ ಸ್ಥಿತಿಯಲ್ಲಿದ್ದಿರಬಹುದು. ಆತನ ಕುಟುಂಬ ಆ ಜಿಲ್ಲೆ ಮಾತ್ರವಲ್ಲ ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿಯಾದುದು. ಅಜ್ಜ ಮಾಜಿ ಪ್ರಧಾನ ಮಂತ್ರಿ. ಅಪ್ಪ ಮಾಜಿ ಸಚಿವ ಹಾಗೂ ಹಾಲಿ ಶಾಸಕ. ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ. ಹಾಗಿರುವಾಗ ಕೆಲ ಮಹಿಳೆಯರು ಅಸಹಾಯಕತೆಯಿಂದ ‘ ಈ ಕ್ಷಣದಲ್ಲಿ ಈ ದೇಹ ನನ್ನದಲ್ಲ’ ಅಂದುಕೊಂಡು ತಮ್ಮನ್ನು ಒಪ್ಪಿಸಿ ಕೊಂಡಿರಬಹುದು.
ಆದರೆ ಗಮನಿಸಿ; ಆ ಗಂಡಸು ನಿರ್ಲಜ್ಜೆಯಿಂದ ಸಾವಧಾನವಾಗಿ ಎಲ್ಲವನ್ನೂ ವಿಡಿಯೋ ಮಾಡಿಕೊಂಡಿದ್ದಾನೆ. ಹಾಗೆ ವಿಡಿಯೋ ಮಾಡಿಕೊಳ್ಳುವಾಗ ಎಲ್ಲಿಯೂ ತನ್ನ ಚಹರೆಯನ್ನು ಬಿಟ್ಟು ಕೊಟ್ಟಿಲ್ಲ. ಸಮಚಿತ್ತದ ಯಾವ ಮನುಷ್ಯನೂ ಇಷ್ಟೊಂದು ಸಂಖ್ಯೆಯಲ್ಲಿ ತನ್ನ ಕಾಮದಾಟದ ವಿಡಿಯೋ ಮಾಡಿ ಸಂಗ್ರಹಿಸಿ ಕೊಳ್ಳಲಾರ. ತನ್ನ ಅಜ್ಜಿಯ ವಯಸ್ಸಿನ ಮಹಿಳೆಯನ್ನು ಬೆತ್ತಲೆ ಮಾಡುವಾಗ ಅವಳ ಅಂಗಾಂಗಗಳನ್ನು ಮುಟ್ಟುವಾಗ ಅವನ ಮನಸ್ಥಿತಿ ಹೇಗಿತ್ತು? ಅದನ್ನು ಮನಶಾಸ್ತ್ರಜ್ಞರು ವಿಶ್ಲೇಷಣೆ ಮಾಡಬೇಕು.
ಆತ ತನ್ನ ಸಂಪರ್ಕಕ್ಕೆ ಬಂದ ಯಾವ ಹೆಣ್ಣು ಜೀವವನ್ನೂ ಬಿಟ್ಟಿಲ್ಲ. ಹದಿಹರೆಯದ ಹುಡುಗಿಯರಿಂದ ಹಿಡಿದು ಮೆನೋಪಾಸ್ ಹಂತ ದಾಟಿದ ಮುದುಕಿಯವರೆಗೆ ಎಲ್ಲರನ್ನೂ ನಿರ್ಲಜ್ಜೆಯಿಂದ ಬಳಸಿ ಕೊಂಡಿದ್ದಾನೆ. ನಾವು ಪ್ರೈಮರಿ ಶಾಲೆಯಲ್ಲಿ ನೋಟ್ಸ್ ಬರೆದುಕೊಳ್ಳುವಾಗ ‘ಹಾಗಾದರೆ’ ಎಂಬುದಕ್ಕೆ ಮೇಲೆ ಎರಡು ಚುಕ್ಕಿ ಕೆಳಗೆ ಒಂದು ಚುಕ್ಕಿ ಹಾಕಿಕೊಳ್ಳುತ್ತಿದ್ದೆವು. ಅದನ್ನು ಸೇರಿಸಿದರೆ ತ್ರಿಕೋನಾಕೃತಿ ಆಗುತ್ತಿತ್ತು. ಈ ಕಾಮಬೆಂತರನಿಗೆ ತ್ರಿಕೋನಾಕೃತಿಯ ವ್ಯಸನ.
ಆತನ ಈ ತೆವಲು ಅವನ ಕುಟುಂಬದವರಿಗೆ ಗೊತ್ತಿತ್ತೇ? ಖಂಡಿತವಾಗಿಯೂ ಗೊತ್ತಿತ್ತು. ಎಪ್ರಿಲ್ 22 ರಂದು ಲೈಂಗಿಕ ದೌರ್ಜನ್ಯ ಪ್ರಕರಣ ಬಹಿರಂಗಗೊಂಡ ಮೇಲೆ ಸ್ವತ: ಅವರ ತಂದೆ ಎಚ್.ಡಿ. ರೇವಣ್ಣ ಅವರೇ ಪ್ರೆಸ್ ಮುಂದೆ ಹೇಳಿದ್ದಾರೆ; ‘ಇದು ಹಳೆಯ ವಿಡಿಯೋ’ ಅಂತ. ಸ್ವತಃ ಆತನ ಚಿಕ್ಕಪ್ಪ ಕುಮಾರಸ್ವಾಮಿಯವರೇ ಹೇಳಿಕೆ ನೀಡಿದ್ದಾರೆ; ‘ರೇವಣ್ಣನ ಕುಟುಂಬವೇ ಬೇರೆ ನಮ್ಮ ಕುಟುಂಬವೇ ಬೇರೆʼ ಅಂತ.
ಸ್ವತಃ ಪ್ರಜ್ವಲ ರೇವಣ್ಣನಿಗೂ ತನ್ನ ವಿಕೃತ ಕಾಮಕೇಳಿ ಬಹಿರಂಗಗೊಳ್ಳುವ ಭಯ ಇತ್ತು. ಹಾಗಾಗಿಯೇ ಮಾಧ್ಯಮಗಳು ಇದನ್ನು ಪ್ರಸಾರ ಮಾಡದಂತೆ ಮೊದಲೇ ತಡೆಯಾಜ್ಞೆಯನ್ನು ತರಿಸಿಕೊಂಡಿದ್ದ.
ಲೈಂಗಿಕ ಹಗರಣದಲ್ಲಿ ಗಂಡೊಬ್ಬ ಸಿಲುಕಿಕೊಂಡರೆ ಗಂಡಾಳ್ವಿಕೆಯ ಸಮಾಜ ಅವನನ್ನು ರಸಿಕ ಎಂದು ಗುರುತಿಸುತ್ತದೆ. ಅದವನ ಸಾಮರ್ಥ್ಯ ಎಂದು ಮೆಚ್ಚುಗೆಯ ಮಾತನ್ನು ಆಡುತ್ತದೆ. ಅವನು ತಾನು ಗಂಡೆಂಬ ಸೊಕ್ಕಿನಲ್ಲಿ ಸಮಾಜದಲ್ಲಿ ಎದೆಯುಬ್ಬಿಸಿ ನಡೆಯುತ್ತಾನೆ.ಲೇಖಕರೊಬ್ಬರು ಪ್ರಜ್ವಲನನ್ನು ಹೆಡ್ಡ, ಅಮಾಯಕ ಎಂದೂ ಕರೆದುಬಿಟ್ಟರು, ಆದರೆ ಹೆಣ್ಣೊಬ್ಬಳು ಸಿಲುಕಿಕೊಂಡರೆ ಅವಳನ್ನು ಕುಲಟೆ, ಜಾರಿಣಿ ಎಂದು ಜರೆಯುತ್ತದೆ.
ವಿಡಿಯೋ ಮಾಡಿಕೊಂಡವನು, ಅದನ್ನು ಕಾಪಿ ಮಾಡಿ ಇನ್ನೊಬ್ಬರಿಗೆ ಹಸ್ತಾಂತರಿಸಿದವನು ಯಾರೆಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಿದೆ. ಪ್ರಜ್ವಲ್, ಕಾರ್ತಿಕ್ ಮತ್ತು ದೇವರಾಜೇಗೌಡ- ಪೆನ್ ಡ್ರೈವ್ ಪ್ರಕರಣದ ತಾಯಿಬೇರು. ಈ ಮೂವರನ್ನು ‘ಸರಿಯಾಗಿ’ ವಿಚಾರಣೆ ಮಾಡಬೇಕು. ಆಗ ಪೆನ್ ಡ್ರೈವ್ ಅನ್ನು ನೂರಾರು ಸಂಖ್ಯೆಯಲ್ಲಿ ಕಾಪಿ ಮಾಡಿ ಹಂಚಿದವರು ಯಾರು ಎಂಬುದು ಗೊತ್ತಾಗುತ್ತದೆ.. ಹಾಗೆ ಕಾಪಿ ಮಾಡಿ ಹಂಚಿದವರ ಎದೆಯಲ್ಲಿ ಮಹಿಳೆಯರ ಬಗ್ಗೆ ಲವಲೇಶವೂ ಪ್ರೀತಿ ಗೌರವ ಇದ್ದಂತಿಲ್ಲ.. ಇದ್ದಿದ್ದರೆ ಆಸಹಾಯಕ ಮಹಿಳೆಯರ ಮುಖಗಳನ್ನಾದರೂ ಬ್ಲರ್ ಮಾಡುತ್ತಿದ್ದರು. ಅದನ್ನು ಹಂಚಿದವರಿಗೆ ಮತ್ತು ಅವರ ಬೆನ್ನ ಹಿಂದೆ ನಿಂತು ಹಂಚಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಅವರು ಕೂಡಾ ಅತ್ಯಾಚಾರಿಗಳೇ. ಇನ್ನು ಮುಂದೆ ಆ ಮಹಿಳೆಯರು ಸಮಾಜದಲ್ಲಿ, ತಮ್ಮ ಬಂಧು ಬಾಂಧವರ ನಡುವೆ ಮುಖ್ಯವಾಗಿ ತಂತಮ್ಮ ಗಂಡಂದಿರು, ಮಕ್ಕಳ ಮುಂದೆ ಮುಖವೆತ್ತಿ ಹೇಗೆ ನಿಲ್ಲಲು ಸಾಧ್ಯ? ಅವರದಿನ್ನು ಸತ್ತ ಹೆಣದ ಬದುಕು ಎಂಬುದು ಜನಸಾಮಾನ್ಯರ ತಿಳುವಳಿಕೆ. ಆದರೆ, ಹಾಗಾಗದಂತೆ ನಾಗರೀಕ ಸಮಾಜ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತು ತನ್ನ ಜವಾಬ್ದಾರಿ ನಿರ್ವಹಿಸಬೇಕಿದೆ.
ನಮ್ಮ ಹಿಂದು ಪುರಾಣ ಪಾತ್ರವಾದ ದೇವೇಂದ್ರನಿಗೆ ಸಹಸ್ರಾಕ್ಷನೆಂಬ ಇನ್ನೊಂದು ಹೆಸರಿದೆ. ತನ್ನ ಪತ್ನಿ ಅಹಲ್ಯೆಯನ್ನು ಮೋಸದಿಂದ ಅನುಭವಿಸಿದ್ದಕ್ಕೆ ಗೌತಮ ಋಷಿ ‘ನೀನು ಯಾವ ಅಂಗವನ್ನು ಮೋಹಿಸಿ ಈ ನೀಚ ಕೃತ್ಯವನ್ನು ಎಸಗಿದೆಯೋ ಅದೇ ಅಂಗ ನಿನ್ನ ಇಡೀ ಮೈಯ್ಯನ್ನು ಅವರಿಸಿಕೊಳ್ಳಲಿ’ ಎಂದು ಶಾಪವಿತ್ತ. ತಕ್ಷಣವೇ ದೇವೇಂದ್ರ ಮೈಯಿಡೀ ಯೋನಿಗಳು ಹುಟ್ಟಿಕೊಂಡವು. ಅದನ್ನು ನೋಡಿ ಅವನಿಗೇ ಅಸಹ್ಯವೆನಿಸಿ ಸೂರ್ಯದೇವನ ಮೊರೆ ಹೋದ. ಸೂರ್ಯ ಶಾಪದ ತೀವ್ರತೆಯನ್ನು ಡೈಲ್ಯೂಟ್ ಮಾಡಿ, ಆ ಯೋನಿಗಳು ಅನ್ಯರಿಗೆ ಕಣ್ಣುಗಳಂತೆ ಭಾಸವಾಗುವ ವರವನ್ನು ಕರುಣಿಸಿದ. ಆದರೆ ದೇವೇಂದ್ರನಿಗೆ ಅವು ಯೋನಿಗಳೇ.
ಈಗ ಪ್ರಜ್ವಲ್ ರೇವಣ್ಣ ಆಧುನಿಕ ದೇವೇಂದ್ರನಾಗಿದ್ದಾನೆ. ಅವನಿಗೆ ಹೆಣ್ಣು ಅಂದ್ರೆ ಬರಿಯ ಲೈಂಗಿಕ ಅಂಗಗಳೇ. ಅವನೊಬ್ಬ ಭೋಗಲಾಲಸಿ, ಲಂಪಟ. ಕಾಮ ಬೇತಾಳ. ಆ ಬೇತಾಳನಿಗೆ ತಲೆಯ ಭಾಗದಲ್ಲಿ ದೊಡ್ಡದೊಂದು ಎಕ್ಸರೆ ಕಣ್ಣು, ಕೆಳಗಡೆ ಜೊಲ್ಲು ಸುರಿಯುತ್ತಿರುವ ಬಾಯಿ. ದೇಹದ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಇಳಿಬಿದ್ದಿರುವ ಶಿಶ್ನಗಳು.
ನಾನು ಚಿತ್ರಕಾರಳಲ್ಲ, ಆಗಿದ್ದರೆ ಆಧುನಿಕ ದೇವೇಂದ್ರನ ಚಿತ್ರ ಬರೆದು ಅಮರತ್ವವನ್ನು ಕೊಡುತ್ತಿದ್ದೆ!
ಈಗ ಆ ಪೆನ್ ಡ್ರೈವ್ ರಾಜಕಾರಣಿಗಳಿಗೆ ಮತ್ತು ಮೀಡಿಯಾಗಳಿಗೆ ಅಕ್ಷಯ ಪಾತ್ರೆ ಆಗಿದೆ.ಆ ಹೆಣ್ಣುಮಕ್ಕಳನ್ನೇ ದಾಳವಾಗಿಸಿಕೊಂಡು ತಂತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ತಮಗೂ ಆ ಕುಟುಂಬಕ್ಕೂ ಸಂಬಂಧವಿಲ್ಲ ಎಂದಿದ್ದ ಕುಮಾರಸ್ವಾಮಿಯವರು ಏನೇನೋ ಮಾತಾಡುತ್ತಿದ್ದಾರೆ. ತಮ್ಮ ಪಕ್ಷದ ಬೆಂಬಲಿತ ಸಂಸತ್ ಅಭ್ಯರ್ಥಿಯ ಬಗ್ಗೆ ಮಾತಾಡಲೇ ಬೇಕಾಗಿದ್ದ ಬಿಜೆಪಿ ಬಾಯಿಗೆ ಬೀಗ ಹಾಕಿಕೊಂಡಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ತೆಗೆದ ತಮ್ಮ ಪಕ್ಷದ ಬ್ರಿಜ್ ಭೂಷಣ್ ಸಿಂಗ್ ಮಗನಿಗೇ ಟಿಕೇಟ್ ಕೊಟ್ಟ ಪಕ್ಷಕ್ಕೆ ಆ ನೈತಿಕತೆ ಇದೆಯೇ? ಇನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ರಕ್ಷಣಾತ್ಮಕ ಆಟ ಆಡುತ್ತಿದೆ. ಇಂತವರಿಂದ ಮಹಿಳೆಯರಿಗೆ ರಕ್ಷಣೆ, ನ್ಯಾಯ ಸಿಗಲು ಸಾಧ್ಯವೇ?
ಆ ಕಾಮ ಬೇತಾಳನನ್ನು ಈಗ ಯಾರು ಹೊರಬೇಕು? ಅವನನ್ನು ಬೆಂಬಲಿಸುತ್ತಿರುವ ಬಿಜೆಪಿ ಪಕ್ಷವೇ? ಅವನ ಮಾತೃ ಪಕ್ಷವಾದ ಜಾತ್ಯತೀತ ಜನತಾದಳವೇ? ಅಥವಾ ಒಳಗೊಳಗೆ ಅವನ ಬಗ್ಗೆ ಮೃದು ಧೋರಣೆ ತೋರುತ್ತಿರುವ ಆಡಳಿತಾರೂಢ ಪಕ್ಷವೇ?
ಪ್ರಭುತ್ವಕ್ಕೆ ಮಾತೃ ಹೃದಯವಿರಬೇಕು. ಈಗ ಮುಖ್ಯಮಂತ್ರಿಗಳು ಹಾಸನಕ್ಕೆ ಭೇಟಿ ನೀಡಬೇಕು. ಸಂತ್ರಸ್ತೆಯರಿಗೆ ಸಾಂತ್ವನ ಮತ್ತು ಧೈರ್ಯ ತುಂಬಬೇಕು. ಇದು ಅಂತಿಂಥ ಹಗರಣವಲ್ಲ. ಅಂತಾರಾಷ್ಟ್ರೀಯ ಗಮನ ಸೆಳೆದ ಲೈಂಗಿಕ ಹಗರಣ ಎಂಬುದು ಎಲ್ಲರಿಗೂ ನೆನಪಿರಬೇಕು.
ನಮಗೆ ರಾಜಕೀಯದ ಯಾವ ಕೆಸರೆರಚಾಟವೂ ಬೇಕಾಗಿಲ್ಲ. ನಮ್ಮ ಬೇಡಿಕೆ ಇಷ್ಟೇ. ವಿದೇಶಕ್ಕೆ ಓಡಿ ಹೋಗಿರುವ ಪ್ರಜ್ವಲ ರೇವಣ್ಣ ಸ್ವದೇಶಕ್ಕೆ ಬಂದು ಎಸ್ ಐ ಟಿ ಎದುರು ವಿಚಾರಣೆಗೆ ಹಾಜರಾಗಬೇಕು. ಆತನಿಗೆ ರಾಜತಾಂತ್ರಿಕ ಪಾಸ್ಪೋರ್ಟ್ ಇರುವ ಕಾರಣ ಆತನನ್ನು ಭಾರತಕ್ಕೆ ಕರೆತರುವ ಹೊಣೆಗಾರಿಕೆ ಕೇಂದ್ರ ಸರಕಾರದ್ದು. ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಸರಕಾರವು ಮಾತೃಶಕ್ತಿಯ ಪರವಾಗಿದೆ ಎಂದು ಕೇಂದ್ರ ಗೃಹ ಸಚಿವರೇ ಹೇಳಿದ್ದಾರೆ. ಅವರು ತಮ್ಮ ಪಕ್ಷದ ಅಭ್ಯರ್ಥಿಯ ಮೇಲಿರುವ ಕಳಂಕವನ್ನು ತೊಡೆದು ಕೊಳ್ಳಲ್ಲಿಕ್ಕಾದರೂ ಪ್ರಜ್ವಲನನ್ನು ಸ್ವದೇಶಕ್ಕೆ ಕರೆಸಿಕೊಂಡು ವಿಚಾರಣೆಗೆ ಒಳಪಡಿಸ ಬೇಕಾಗಿದೆ.
ನಿಷ್ಪಕ್ಷಪಾತವಾದ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕಾದ್ದು ರಾಜ್ಯ ಸರಕಾರದ ಹೊಣೆ. ಸ್ತ್ರೀ ಶಕ್ತಿಯ ವರ್ಧನೆಗೆ ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಹಾಗಾಗಿ ನಮಗೇ ಓಟು ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಡಿನ ಮಹಿಳೆಯರಿಗೆ ಪತ್ರ ಬರೆದಿದ್ದರು. ಈಗ ಅದೇ ಮಹಿಳೆಯರ ಮಾನ ಬೀದಿಗೆ ಬಿದ್ದಿದೆ. ಅದನ್ನು ಕಾಪಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಹೆಗಲ ಮೇಲಿದೆ.
ಉಷಾಕಟ್ಟೆಮನೆ, ಬಂಡಿಹೊಳೆ
[ಪತ್ರಕರ್ತರಾಗಿ, ಬರಹಗಾರರಾಗಿ ಗುರುತಿಸಿಕೊಂಡು ಈಗ ಪೂರ್ಣ ಪ್ರಮಾಣದ ಕೃಷಿಕರಾಗಿದ್ದಾರೆ.]
( ಲೇಖನ ಕೃಪೆ- ಕನ್ನಡ ಪ್ಲಾನೆಟ್)