ಹತ್ತು ಚುನಾವಣೆ ಎದುರಿಸಿದ್ದೇನೆ; ಈಗಲೂ ಹಣ, ಹೆಂಡ ಹಂಚದೇ ಗೆಲ್ಲುತ್ತೇನೆ- ಆಯನೂರು  

ಹತ್ತು ಚುನಾವಣೆ ಎದುರಿಸಿದ್ದೇನೆ;
ಈಗಲೂ ಹಣ, ಹೆಂಡ ಹಂಚದೇ ಗೆಲ್ಲುತ್ತೇನೆ- ಆಯನೂರು
ಹಣ ಹೆಂಡ ಜಾತಿ ಧರ್ಮದ ಮೇಲೆ ಮತಕೇಳುವುದಿಲ್ಲ. ಪದವೀಧರರ ಮತ್ತು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿದ್ದನ್ನೇ ಮುಂದಿಟ್ಟುಕೊಂಡು ಮತ ಕೇಳುವೆ ನನ್ನ ಗೆಲುವು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡಿ ಬಂದಿದ್ದೇನೆ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸವಿದೆ. ನನ್ನ ಹೋರಾಟವನ್ನು ಅವರು ಗುರುತಿಸಿದ್ದಾರೆ. ಈಗಾಗಲೇ ನೌಕರರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ಹೋರಾಟದ ಹಿನ್ನಲೆಯಲ್ಲಿಯೇ ಮತ ಕೇಳುತ್ತೇನೆ ಎಂದರು.
ನೌಕರರ ಸಮಸ್ಯೆಗಳು ನನಗೆ ಗೊತ್ತಿವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಬಡ್ತಿ ವರ್ಗಾವಣೆ ಸಮಸ್ಯೆಗಳಿವೆ. ಪೊಲೀಸರ ಸಮಸ್ಯೆಗಳ ಬಗ್ಗೆಯೂ ನನಗೆ ಅರಿವಿದೆ. ಅತಿಥಿ ಉಪನ್ಯಾಸಕರ ಕಷ್ಟಗಳ ಅರಿವು ಕೂಡ ಅನುದಾನಿತ ಶಾಲಾ ಕಾಲೇಜುಗಳ ಸಮಸ್ಯೆಗಳು ಗೊತಿದೆ.೭ನೇ ವೇತನ ಆಯೋಗ ಪೂರ್ಣಾವಾಗಿ ಜಾರಿಯಾಗಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಖಂಡಿತ ಬಗೆಹರಿಸುತ್ತೇನೆ ಎಂದರು.
ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿಭಟ್ ಅವರ ಸ್ಪರ್ಧೆ ನಿಮಗ ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನು ಇಲ್ಲ ಭಟ್‌ರು ಅವರ ಮತಗಳನ್ನು ಅವರು ತೆಗೆದುಕೊಳ್ಳುತ್ತಾರೆ. ಯಾರ ಸ್ಪರ್ಧೆಯೂ ನನಗೆ ತೊಂದರೆ ಕೊಡುವುದಿಲ್ಲ. ಬಿಜೆಪಿಯಲ್ಲಿ ಟಿಕೇಟ್ ವಂಚಿತರೆಲ್ಲ ಇದ್ದಕ್ಕಿದ್ದಂತೆ ರಾಷ್ಟ್ರಭಕ್ತರಾಗುತ್ತಾರೆ. ಈಶ್ವರಪ್ಪನವರು ಅವರನ್ನು ಬೆಂಬಲಿಸಿರುವುದು ಸಹಜವಾಗಿದೆ.ಅವರ ಸ್ಪರ್ಧೆಯಿಂದ ನನಗೆ ಯಾವ ರೀತಿಯ ಲಾಭ-ನಷ್ಟ ಆಗುವುದಿಲ್ಲ ಎಂದರು.
ನಾನು ಈಗಾಗಲೇ ೧೦ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದ್ದೇನೆ. ಎಲ್ಲಿಯೂ ವಾಮ ಮಾರ್ಗದ ಮೂಲಕ ಚುನಾವಣೆ ಮಾಡುವುದಿಲ್ಲ. ಹಣ ಖರ್ಚು ಮಾಡುವವರು ಮಾಡಲಿ ನನಗೆ ಆ ಬಗ್ಗೆ ಚಿಂತೆ ಇಲ್ಲ. ನನ್ನ ಹೋರಾಟವೇ ನನಗೆ ಸ್ಪೂರ್ತಿ ಮತ್ತು ಗೆಲುವು ತಂದುಕೊಡುತ್ತದೆ ಎಂದ ಅವರು, ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ದೋಷವಿದೆ. ಮತದಾರರ ಪಟ್ಟಿಯಲ್ಲೂ ಕೂಡ ದೋಷವಿದೆ. ಇದೆಲ್ಲ ಸರಿಯಾಗಬೇಕಾಗಿದೆ ಎಂದರು.