ಡೆಂಗ್ಯು ನಿಯಂತ್ರಣಕ್ಕೆ ಆರೋಗ್ಯ ಅಧಿಕಾರಿಗಳಿಗೆ ಡಿಸಿ ಸೂಚನೆ*

*ಡೆಂಗ್ಯು ನಿಯಂತ್ರಣಕ್ಕೆ ಆರೋಗ್ಯ ಅಧಿಕಾರಿಗಳಿಗೆ ಡಿಸಿ ಸೂಚನೆ*
ಶಿವಮೊಗ್ಗ;
ಡೆಂಗ್ಯು ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳ ಬೇಕು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ತಂಬಾಕು ನಿಯಂತ್ರಣಕ್ಕೆ ನಿಗವಹಿಸಿ ಎಂದು ಅಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ದಿನೇದಿನೆ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿವೆ, ಪ್ರತಿಯೊಬ್ಬ ಆರೋಗ್ಯ ಅಧಿಕಾರಿಗಳು ಡೆಂಗ್ಯು ನಿಯಂತ್ರಣ ಕ್ರಮಕ್ಕೆ ಆದ್ಯತೆ ನೀಡಿ ಕೆಲಸ ನಿರ್ವಹಿಸಬೆಕು ಎಂದರು.
ಗ್ರಾಮೀಣ ಮಟ್ಟದ ಅಧಿಕಾರಿಗಳಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಡೆಂಗ್ಯು ನಿಯಂತ್ರಣ ಕ್ರಮಗಳ ತರಬೇತಿಯನ್ನು ನೀಡಿ, ಇದು ಪ್ರತಿಯೊಂದು ಗ್ರಾಮಗಳನ್ನು ತಲುಪಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮಾಡಬೇಕು,
ಮಾನ್ಸೂನ್ ಇರುವ ಕಾರಣ ಮುಂದಿನ ದಿನಗಳಲ್ಲಿ ಸೊಳ್ಳೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು, ತೋಟಗಳಲ್ಲಿ ಮತ್ತು ಕೃಷಿ ಭೂಮಿಯಲ್ಲಿ ಬಿದ್ದಿರುವ ತ್ಯಾಜ್ಯಾಗಳಲ್ಲಿ ನೀರು ಶೇಕರಣೆ ಆಗದಂತೆ ವಿಲೆವಾರಿ ಮಾಡಿಸಿ. ಸಾರ್ವಜನಿಕ ತೊಟ್ಟಿ, ತೆರೆದ ಟ್ಯಾಂಕ್‍ಗಳು ಮತ್ತು ಚರಂಡಿಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಲಾರ್ವಹಾರಿ ಮೀನುಗಳಾದ ಗಪ್ಪಿ, ಗ್ಯಾಂಬೂಸಿಯ ಮೀನುಗಳನ್ನು ಕೆರೆ,ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಬಿಡಬೇಕು. ಗಪ್ಪಿ, ಗ್ಯಾಂಬೂಸಿಯ ಮೀನುಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ನೀಡುವಂತೆ ಸೂಚಿಸಿದರು. ಮನೆಗಳಲ್ಲಿ ತೊಟ್ಟಿ, ಡ್ರಮ್‍ಗಳನ್ನು ವಾರಕ್ಕೆ 2 ಬಾರಿ ಸ್ವಚ್ಚಗೊಳಿಸುವುದು, ಟೈರುಗಳು ಮತ್ತು ವಾಹನದ ಅನುಪಯುಕ್ತ ಬಿಡಿ ಭಾಗಳನ್ನು ಸೂಕ್ತ ಸ್ಥಳದಲ್ಲಿ ಶೇಖರಣೆ ಮಾಡುವುದು, ಆಸ್ಪತ್ರೆ, ಶಾಲೆ ಮತ್ತು ಮನೆಯ ಸುತ್ತ ಮುತ್ತ ಘನ ತ್ಯಾಜ್ಯದಲ್ಲಿ ಮಳೆನೀರು ಸಂಗ್ರಹವಾಗದಂತೆ ತಡೆಗಟ್ಟಲು ನಿಯಮಿತ ವಿಲೇವಾರಿ ಮಾಡುವುದು. ಇದರಿಂದ ಸೊಳ್ಳೆ ಉತ್ಪತ್ತಿ ಕಡಿಮೆ ಮಾಡುವುದರಿಂದ ತಡೆಯಬಹುದು. ಈ ಕ್ರಮಗಳನ್ನು ಪ್ರತಿಯೊಬ್ಬರು ಮಾಡುವ ಹಾಗೆ ನೋಡಿಕೊಳ್ಳ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಹೆರಿಗೆ ಆಸ್ಪತ್ರೇಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಬೇಕು, ಕೋವಿಡ್-19 ಮತ್ತು ಕೆ.ಎಫ್.ಡಿ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ನಾಯಿ ಕಡಿತದಿಂದ ರೇಬಿಸ್ ಬಗ್ಗೆ ಬರುವ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಮಾಹಿತಿ ನೀಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್‍ಗಳು ಸರಿಯಾಗಿ ಕ್ರಮವಹಿಸುವಂತೆ ಸೂಚಿಸಿದರು.
ತಂಬಾಕು ನಿಯಂತ್ರಣಕ್ಕೆ ಸೂಕ್ತವಾದ ಕ್ರಮ ತೆಗೆದುಕೋಳ್ಳಿ, ಘೋಷಣೆ ಮತ್ತು ಪ್ರತಿಜ್ಞೆ ಮೂಲಕ ಹೆಚ್ಚು ಅರಿವು ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಕಡ್ಡಾಯವಾಗಿ ತಡೆಯಿರಿ. ಯಾವುದೆ ಹುಕ್ಕ ಬಾರ್ ಇದ್ದರು ಅದನ್ನು ಶೀಘ್ರವೇ ಮುಚ್ಚಿಸುವಂತೆ ಆದೇಶ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿಯಾದ ದಾಸೆ ಗೌಡ , ಡಿ.ಹೆಚ್.ಓ ಡಾ. ನಟರಾಜ್, ಆರ್.ಸಿ.ಹೆಚ್.ಓ ಡಾ. ನಾಗರಾಜ್ ನಾಯ್ಕ್, ಮಲೇರಿಯಾ ಆಫಿಸರ್ ಡಾ. ಗುಡದಪ್ಪ, ಎಲ್ಲಾ ತಾಲ್ಲೂಕು ಮಟ್ಟದ ಟಿ.ಹೆಚ್.ಓ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಮೆಗ್ಗಾನ್ ಬೊಧನಾ ಆಸ್ಪತ್ರ ಶಿವಮೊಗ್ಗ ಅಧಿಕಾರಿಗಳು ಮತ್ತು ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.