ಹುಷಾರ್…ಕಿಡಿಗೇಡಿಗಳೇ…ಹುಷಾರ್… ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆ ಇದೆ! ಪೊಲೀಸ್ ಪ್ರಕಟಣೆಯಲ್ಲೇನಿದೆ?

ಹುಷಾರ್…ಕಿಡಿಗೇಡಿಗಳೇ…ಹುಷಾರ್…
ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆ ಇದೆ!

ಪೊಲೀಸ್ ಪ್ರಕಟಣೆಯಲ್ಲೇನಿದೆ?

ಶಿವಮೊಗ್ಗದಲ್ಲೀಗ ಚೆನ್ನಮ್ಮ ಪಡೆ ಸದ್ದು ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವವರ ವಿರುದ್ಧ ಸಮರ ಸಾರಲಿರುವ ಈ ಚೆನ್ನಮ್ಮ ಪಡೆ ಈ ಹಿಂದೆ ಓಬವ್ವ ಪಡೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಚೆನ್ನವ್ವ ಪಡೆ ಆಗಿ ಗಮನ ಸೆಳೆಯಲಿದೆ.

ಶಿವಮೊಗ್ಗದಲ್ಲಿ ಕಿಡಿಗೇಡಿ ಕೃತ್ಯಗಳಿಗೆ ಕಡಿವಾಣ ಹಾಕಲೆಂದೇ ಈ ಚೆನ್ನಮ್ಮ ಪಡೆ ರೂಪಿಸಲಾಗಿದೆ. ಈ ಪಡೆಯಲ್ಲಿ ನುರಿತ ಮಹಿಳಾ ಪೊಲೀಸ್ ಸಿಬ್ಬಂದಿ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡಲಿದೆ.

ಕರಾಟೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ತರಬೇತಿ ಪಡೆದಿರುವ ಒಟ್ಟು 12 ಸಿಬ್ಬಂದಿಗಳು ಈ ಚೆನ್ನಮ್ಮ ಪಡೆಯಲ್ಲಿದ್ದಾರೆ. ಪಿಎಸ್ ಐ, ಎ‌ಎಸ್ ಐ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಚೆನ್ನಮ್ಮನ ಹೆಸರಲ್ಲಿ ಕೆಲಸ ಆರಂಭಿಸಿದ್ದಾರೆ.

ವಿಶೇಷವಾಗಿ ಶಾಲಾ ಕಾಲೇಜುಗಳು, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಚೆನ್ನಮ್ಮ ಪಡೆ ಕಾವಲಿಗೆ ನಿಲ್ಲಲಿದೆ. ಚುಡಾಯಿಸುವ, ಹಿಂಸಿಸುವ, ಹಿಂಬಾಲಿಸುವ, ವ್ಹೀಲಿಂಗ್ ಮಾಡುವ ಹುಡುಗರ ಪಾಲಿಗೆ ಈ ಚೆನ್ನಮ್ಮ ಪಡೆ ನರಕದ ಬಾಗಿಲು ತೆರೆಯಲಿದೆ.

ತೊಂದರೆಗೊಳಗಾದವರು 112/9480803349/08182261413/9480800947 ಸಂಪರ್ಕಿಸಬಹುದು.

*ಪೊಲೀಸ್ ಪ್ರಕಟಣೆಯಲ್ಲೇನಿದೆ?*

ಶಿವಮೊಗ್ಗ ಜಿಲ್ಲೆಯಲ್ಲಿ *ವಿಧ್ಯಾರ್ಥಿನಿಯರ ರಕ್ಷಣೆಗಾಗಿ,* ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಮಹಿಳೆ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ಮಾಡುವ, ಅಸಭ್ಯವಾಗಿ ವರ್ತಿಸುವವರ ವಿರುದ್ಧ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ *ಸಮುದಾಯದತ್ತ ಪೊಲೀಸ್ ನ ಭಾಗವಾಗಿ ಚೆನ್ನಮ್ಮ ಪಡೆಯನ್ನು* ರಚಿಸಲಾಗಿರುತ್ತದೆ.

ಈ ದಿನ ದಿನಾಂಕಃ 27-05-2024 ರಂದು ಬೆಳಗ್ಗೆ *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು, ಶಿವಮೊಗ್ಗ ನಗರದ *ಕಮಲಾ ನೆಹರು ಸ್ಮಾಕರ, ರಾಷ್ಟ್ರೀಯ ಮಹಿಳಾ ಕಾಲೇಜು, ಶಿವಮೊಗ್ಗದಲ್ಲಿ* ಚೆನ್ನಮ್ಮ ಪಡೆಗೆ ಚಾಲನೆ ನೀಡಿ, ವಿಧ್ಯಾರ್ಥಿಗಳನ್ನು ಉದ್ದೇಶಿಸಿ, ಈ ಕೆಳಕಂಡಂತೆ ಮಾತನಾಡಿದರು.

1) ವಿಧ್ಯಾರ್ಥಿನಿಯರ ಜೀವನವನ್ನು ರೂಪಿಸುವಲ್ಲಿ ಮತ್ತು *ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣವೇ* ಪ್ರಮುಖ ಸಾಧನವಾಗಿರುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ *ಸ್ವಾವಲಂಬನೆ* ಸಾಧಿಸಲು ಸಾಧ್ಯವಿರುತ್ತದೆ.

2) ವಿಧ್ಯಾರ್ಥಿ ಜೀವನದಲ್ಲಿ ಯಾವುದೋ ಸಣ್ಣ ಪುಟ್ಟ ಸಮಸ್ಯೆ / ಕಿರಿಕಿರಿಗಳಿಂದಾಗಿ ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆಯಾದಾಗ, ಅವರು ತಮ್ಮ *ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಅಲ್ಲಿಗೇ ನಿಲ್ಲಿಸುವ* ಸಾಧ್ಯತೆ ಇರುತ್ತದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಮತ್ತು ಅವರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ *ಆಧ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ.* ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು, *ಹೆಣ್ಣು ಮಕ್ಕಳ ರಕ್ಷಣೆಯ ನಿಟ್ಟಿನಲ್ಲಿ, ಸಮುದಾಯದತ್ತ ಪೊಲೀಸ್ ನ ಒಂದು ಭಾಗವಾಗಿ ಚೆನ್ನಮ್ಮ ಪಡೆಯನ್ನು* ರಚಿಸಲಾಗಿರುತ್ತದೆ.

3) ಚೆನ್ನಮ್ಮ ಪಡೆಯನ್ನು ವಿಧ್ಯಾರ್ಥಿನಿಯರ *ಸುರಕ್ಷತೆ ಮತ್ತು ರಕ್ಷಣೆಯ ಉದ್ದೇಶದಿಂದ* ರಚಿಸಿದ್ದು, ಚೆನ್ನಮ್ಮ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪ್ರಮುಖವಾಗಿ ಶಾಲಾ ಕಾಲೇಜುಗಳು *ಬೆಳಗ್ಗೆ ಆರಂಭವಾಗುವ ಮತ್ತು ಮುಕ್ತಾಯವಾಗುವ ಸಮಯದಲ್ಲಿ* ಶಾಲಾ ಕಾಲೇಜುಗಳ ಹತ್ತಿರ, ವಿಧ್ಯಾರ್ಥಿನಿಯರ ಹಾಸ್ಟೆಲ್ ಗಳ ಹತ್ತಿರ, ಪಾರ್ಕ್ ಗಳ ಬಳಿ ಮತ್ತು ಬಸ್ ಸ್ಟಾಂಡ್ ಗಳಲ್ಲಿ *ಗಸ್ತು ಮಾಡಲಿದ್ದು,* ಈ ವೇಳೆ ಅನಾವಶ್ಯಕವಾಗಿ ಸೇರಿರುವ ಗುಂಪುಗಳು, ಅಸಭ್ಯವಾಗಿ ವರ್ತಿಸುವವರು, ಸಮಾಘಾತುಕ ಚಟುವಟಿಕೆಗಳನ್ನು ಮಾಡುವವರು ಹಾಗೂ ಕೀಟಲೆ ಮಾಡುವವರ *ಮೇಲೆ ನಿಗಾವಹಿಸಲಿದ್ದು,* ಯಾರಾದರೂ ತೊಂದರೆಯನ್ನು ಕೊಡುವುದು ಕಂಡುಬಂದಲ್ಲಿ ಅಂತಹವರ *ವಿರುದ್ದ ಕೂಡಲೇ ಕಾನೂನು ರೀತಿಯ ಕ್ರಮವನ್ನು* ಕೈಗೊಳ್ಳಲಿದ್ದಾರೆ.

4) ಚೆನ್ನಮ್ಮ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು *ಮಫ್ತಿಯಲ್ಲಿಯೂ ಸಹಾ* ಬಸ್ಸ್ಟಾಂಡ್, ಶಾಲಾ ಕಾಲೇಜುಗಳ ಹತ್ತಿರ, ಪಾರ್ಕ್ ಗಳ ಹತ್ತಿರ ಗಸ್ತಿಗೆ ನೇಮಕ ಮಾಡಲಿದ್ದು, ಇವರು ಮಫ್ತಿಯಲ್ಲಿ ಗಸ್ತು ಮಾಡಿ, ಯಾರಾದರೂ ಹೆಣ್ಣು ಮಕ್ಕಳಿಗೆ ತೊಂದರೆಯನ್ನು ಕೊಡುವವರು ಕಂಡುಬಂದಲ್ಲಿ, ಅಂತಹವರ ವಿರುದ್ದ *ಕೂಡಲೇ ಕಾನೂನು ರೀತ್ಯ ಕ್ರಮವನ್ನು* ಕೈಗೊಳ್ಳಲಿದ್ದಾರೆ.

5) ಚೆನ್ನಮ್ಮ ಪಡೆಯ ಅಧಿಕಾರಿ ಸಿಬ್ಬಂಧಿಗಳು ಕಾಲೇಜುಗಳಿಗೆ *ಭೇಟಿ ನೀಡಿ, ವಿಧ್ಯಾರ್ಥಿನಿಯರಿಗೆ* ಮಹಿಳಾ ಮತ್ತು ಮಕ್ಕಳ ಕಾನೂನಿನ ಬಗ್ಗೆ ಹಾಗೂ ಕಾನೂನಿನಲ್ಲಿ ಅವರಿಗಿರುವ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಇದರೊಂದಿಗೆ ಯಾವುದೇ ತುರ್ತು ಸಂದರ್ಭದಲ್ಲಿ *ಸ್ವಯಂ ರಕ್ಷಣೆಗಾಗಿ, ಕರಾಟೆ/ ಬೇಸಿಕ್ ಸೆಲ್ಫ್ ಡಿಫೆನ್ಸ್ ಟೆಕ್ನಿಕ್ ಗಳ ಬಗ್ಗೆ ತರಬೇತಿಯನ್ನು* ಸಹಾ ನೀಡಲಿದ್ದಾರೆ. ಇದರಿಂದಾಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.

6) ಸಮಸ್ಯೆಗಳ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ, *ಸಮಸ್ಯೆಯ ಮೂಲದಲ್ಲಿಯೇ ನೀವು ಪೊಲೀಸ್ ಇಲಾಖೆಗೆ ಮಾಹಿತಿ* ನೀಡಿದ್ದಲ್ಲಿ, ಆ ತೊಂದರೆಯನ್ನು ಬುಡದಿಂದಲೇ ಬಗೆಹರಿಸಲು ಸಾಧ್ಯವಿರುತ್ತದೆ. ಇದರಿಂದ ಮುಂದೆ *ಸಮಸ್ಯೆ ದೊಡ್ಡದಾಗದಂತೆ ತಡೆಯಲು* ಸಾಧ್ಯವಿರುತ್ತದೆ ಹಾಗೂ ವಿಧ್ಯಾರ್ಥಿನಿಯರು ಯಾವುದೇ ಸಮಸ್ಯೆಯ ಸಂದರ್ಭಗಳಲ್ಲಿ, ಯಾರಾದರೂ ನಿಮ್ಮನ್ನು ಹಿಂಬಾಲಿಸಲು ಕಂಡುಬಂದಲ್ಲಿ, ಈವ್ ಟೀಸಿಂಗ್ ಮಾಡಿದ್ದಲ್ಲಿ ಮತ್ತು ಕೀಟಲೆ ಮಾಡುವುದು ಕಂಡುಬಂದರೆ ಕೂಡಲೇ *ಯಾವುದೇ ಸಂಕೋಚ ಅಥವಾ ಭಯ ಇಲ್ಲದೇ ಪೊಲೀಸ್ ಇಲಾಖೆಗೆ ಮಾಹಿತಿಯನ್ನು* ನೀಡಿದ್ದಲ್ಲಿ, ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.

*ವಿಧ್ಯಾರ್ಥಿನಿಯರ ರಕ್ಷಣೆಗಾಗಿ ಚೆನ್ನಮ್ಮ ಪಡೆ ಯಾವುದೇ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ*

ಈ ಸಂದರ್ಭದಲ್ಲಿ, *ಶ್ರೀ ರಾಘವೇಂದ್ರ,* ಕಮಲಾ ನೆಹರು ಸ್ಮಾಕರ, ರಾಷ್ಟ್ರೀಯ ಮಹಿಳಾ ಕಾಲೇಜಿನ ಪ್ರಾಂಶುಪಾಲರು, *ಶ್ರೀ ವೆಂಕಟೇಶ್,* ಕಸ್ತೂರ್ ಬಾ ಮಹಿಳಾ ಕಾಲೇಜಿನ ಪ್ರಾಂಶುಪಾಲರು, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *ಶ್ರೀ ಕಾರ್ಯಪ್ಪ ಎ ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, *ಶ್ರೀ ಪ್ರಕಾಶ್,* ಪೊಲೀಸ್ ಉಪಾಧಿಕ್ಷಕರು,ಡಿಎಆರ್, ಶಿವಮೊಗ್ಗ, *ಶ್ರೀ ಬಾಬು ಆಂಜನಪ್ಪ,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, *ಶ್ರೀ ಸುರೇಶ್ ಎಂ,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಕಾಲೇಜಿನ ಪ್ರಾಧ್ಯಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.