ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್​ ಧೂಳಿಪಟ, ಇತಿಹಾಸ ನಿರ್ಮಿಸಿದ ಮೈತ್ರಿ ಅಭ್ಯರ್ಥಿ*

*​ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್​ ಧೂಳಿಪಟ, ಇತಿಹಾಸ ನಿರ್ಮಿಸಿದ ಮೈತ್ರಿ ಅಭ್ಯರ್ಥಿ*

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್​ ಹೀನಾಯ ಸೋಲನುಭವಿಸಿದೆ. ಬಿಜೆಪಿ, ಜೆಡಿಎಸ್​​ ಮೈತ್ರಿ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಮೈಸೂರು ಲೋಕಸಭೆ ಬೆನ್ನಲ್ಲೇ ಇದೀಗ ದಕ್ಷಿಣ ಶಿಕ್ಷಕರ ಚುನಾವಣೆಯಲ್ಲೂ ಸಿದ್ದರಾಮಯ್ಯಗೆ ತೀವ್ರ ಮುಖಭಂಗವಾಗಿದೆ.

ತೀವ್ರ ಕುತೂಹಲ ಮೂಡಿಸಿದ್ದ ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ (South Teachers Constituency Election Result) ಪ್ರಕಟವಾಗಿದ್ದು, ಜೆಡಿಎಸ್​- ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿರುದ್ಧ ವಿವೇಕಾನಂದ ಅವರು ಬರೋಬ್ಬರಿ 4622 ಮತಗಳ ಭಾರೀ ಅಂತರಿಂದ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆದ್ದ ವಿವೇಕಾನಂದ ಹೊಸ ದಾಖಲೆ ಬರೆದಿದ್ದಾರೆ.

ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಒಟ್ಟು 10823 ಮತಗಳು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6201 ಮತಗಳು ಸಿಕ್ಕಿವೆ. ಇನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು 84 ಮತಗಳನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ವಿವೇಕಾನಂದ ಬರೋಬ್ಬರಿ 4622 ಮತಗಳ ಭಾರೀ ಅಂತರಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ.