ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಕೃತಜ್ಞತಾ ಸಭೆ’ಗೀತಕ್ಕ ಸೋಲಿನ ಹೊಣೆ ನನ್ನದು: ಮಧುಬಂಗಾರಪ್ಪ/ಗೀತಾ ರಾಜಕೀಯಕ್ಕೆ ಬಂದಿದ್ದು ತಪ್ಪ? ಶಿವಣ್ಣ ಪ್ರಶ್ನೆ/ಶಕ್ತಿ ಧಾಮ ನಿರ್ಮಿಸುವೆ: ಗೀತಾ ಶಿವರಾಜಕುಮಾರ್

ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಕೃತಜ್ಞತಾ ಸಭೆ’

ಗೀತಕ್ಕ ಸೋಲಿನ ಹೊಣೆ ನನ್ನದು: ಮಧುಬಂಗಾರಪ್ಪ

ಶಿವಮೊಗ್ಗ: ‘ಗೀತಾ ಶಿವರಾಜಕುಮಾರ ಅವರ ಸೋಲಿನ ಹೊಣೆ ನನ್ನದು. ಆದರೆ, ಇಲ್ಲಿ ಗೀತಕ್ಕ ೫.೩೦ ಲಕ್ಷ ಮತ ಪಡೆದು ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ. ಇದು ಖಂಡಿತ ಸೋಲಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧುಬಂಗಾರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಆರ್ಯ ಈಡಿಗ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ‘ಕೃತಜ್ಞತಾ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಆಯ್ಕೆಗೆ ಬೆಲೆ ಕೊಡಬೇಕು. ಅವರ ಅಭಿಪ್ರಾಯವನ್ನು ಗೌರವಿಸಬೇಕು. ಆದ್ದರಿಂದ, ಈ ಸೋಲು ಮುಂದಿನ ಬದಲಾವಣೆಗೆ ಸ್ಪೂರ್ತಿ ಆಗಲಿದೆ. ಮತ ನೀಡಿ ಹರಸಿದ ಎಲ್ಲಾ ಮತದಾರರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ಆಂತರಿಕವಾಗಿ ಸೋತಿದೆ ಎಂದರು.

ಗೀತಾ ಶಿವರಾಜಕುಮಾರ ಅವರು ಕ್ಷೇತ್ರದಲ್ಲಿ ಸೋತಿರಬಹುದು. ಆದರೆ, ಜನರ ಮನಸ್ಸು ಗೆದ್ದಿದ್ದಾರೆ. ಚುನಾವಣೆಯಲ್ಲಿ ೫.೩೦ ಲಕ್ಷ ಮತ ಪಡೆಯುವ ಮೂಲಕ ಕ್ಷೇತ್ರದ ಮತದಾರರ ಹೃದಯ ಗೆ‍ದ್ದಿದ್ದೇವೆ. ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬಿ ಬಡವರ ಹಸಿವು ನೀಗಿಸುತ್ತಿದೆ. ಆದರೆ, ಜನರು ಗೀತಕ್ಕ ಅವರ ಕೈ ಹಿಡಿಯಲಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದರು.

ಬಿಜೆಪಿ ವಾಮ ಮಾರ್ಗ ಅನುಸರಿಸಿ ಅಧಿಕಾರಕ್ಕೆ ಬಂದಿದೆ. ಅದೇ ಕಾರಣಕ್ಕೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮಾಡಿದ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡಿದೆ. ಇದರಿಂದ, ಜನರೂ ಸಹ ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿದೆ. ವಾಮ ಮಾರ್ಗದಿಂದ ಆಡಳಿತಕ್ಕೆ ಬಂದ ಬಿಜೆಪಿಗೆ ಜನರು ಪಾಠ ಕಲಿಸಲಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಚುನಾವಣೆ ಪೂರ್ವ ಕ್ಷೇತ್ರದ ಎಲ್ಲಾ ಭಾಗದಲ್ಲಿ ಸಂಚರಿಸಿ, ಜನರಿಗೆ ಹತ್ತಿರ ಆಗಿದ್ದೇವೆ. ಇದು ದಣಿವಲ್ಲ. ಕ್ಷೇತ್ರದ ಜನರನ್ನು ಸಂಪರ್ಕಿಸಲು ಸಿಕ್ಕ ಅವಕಾಶ. ಇದರಿಂದ ಜನ ೫.೩೦ ಲಕ್ಷಗಳ ಮತ ನೀಡಿ, ಆಶೀರ್ವದಿಸಿದ್ದಾರೆ‌. ಇದಕ್ಕೆ ಸಹಕರಿಸಿದ ಎಲ್ಲಾ ಮತದಾರರು ಹಾಗೂ ಕಾರ್ಯಕಕೂತರಿಗೆ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಸೋಲು ಗೆಲುವನ್ನು ಸಮನಾಂತರವಾಗಿ ಸ್ವೀಕರಿಸಬೇಕು. ಇಲ್ಲಿ ಸೋಲಿಗೆ ಎದೆಗುಂದಕೂಡದು. ಇದು ನನ್ನ ಅನುಭವದ ಮಾತು. ಆದ್ದರಿಂದ ಸೋಲಿಗೆ ಕಾರಣಗಳನ್ನು ಕಂಡುಕೊಂಡು, ಜನ ಸಾಮಾನ್ಯರಿಗೆ ಹತ್ತಿರವಾಗಿ ಸೇವೆ ಸಲ್ಲಿಸಬೇಕು ಎಂದರು.

ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಿರುವುದು ಕುರ್ಚಿ ಮಾತ್ರ, ಕುರ್ಚಿಯ ಕಾಲು ಬೇರೆಯವರ ಬಳಿ ಇದೆ. ಕಾಂಗ್ರೆಸ್ ಸೈಂದ್ಧಾಂತಿಕ ನಿಲುವನ್ನು ತೆಗೆದುಕೊಂಡಿದೆ. ಇಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತಳಿಂದ ದೇಶಕ್ಕೆ ಭವಿಷ್ಯ ಇಲ್ಲ. ಬಿಜೆಪಿಯವರು ಸಂವಿಧಾನ ಬದಲಿಸುವ ಚಿಂತನೆ ನಡೆಸುತ್ತಿದ್ದಾರೆ. ನರೇಂದ್ರ ಮೋದಿ ಅವರು, ಸಂವಿಧಾನಕ್ಕೆ ನಮಸ್ಕರಿಸುವುದು ನಾಟಕ ಮಾತ್ರ. ಅದ್ದರಿಂದ, ದೇಶದ ಜನರು ಎಚ್ಚರಗೊಳ್ಳಬೇಕು. ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಸ್ಥಾನ ಪಡೆಯಬೇಕಿದೆ. ಇಲ್ಲವಾದರೆ, ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳಲಿದೆ. ಆದ್ದರಿಂದ, ಕಾರ್ಯಕರ್ತರು ಸಜ್ಜಾಗಬೇಕು ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಗೌರವಯುತ ಸೋಲಾಗಿದೆ. ಈ ಸೋಲು ರಾಜಕೀಯದ ಅಂತ್ಯ ಖಂಡಿತ ಅಲ್ಲ. ದೇಶದಲ್ಲಿ ೪೦೦ ಸ್ಥಾನ ಪಡೆಯುತ್ತೇನೆ ಎನ್ನುತ್ತಿದ್ದ ಬಿಜೆಪಿ ಬಹುಮತ ಕೂಡ ಕಗಳಿಸಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದರು.‌ ಆದರೆ, ಆ ಕ್ಷೇತ್ರದಲ್ಲಿ ಶ್ರೀ ರಾಮನೇ ಬಿಜೆಪಿಯನ್ನು ಸೋಲಿಸಿದನು. ಆದ್ದರಿಂದ, ಬಿಜೆಪಿಯ ಅಂತ್ಯಕ್ಕೆ ಆರಂಭಗೊಂಡಿದೆ ಎಂದರು.

ದೇಶದಲ್ಲಿ ಆದಷ್ಟು ಬೇಗ ಬಿಜೆಪಿ ಸರ್ಕಾರ ಕುಸಿದು ಬೀಳಲಿದೆ. ಮುಂದಿನ ಎರಡು ವರ್ಷದಲ್ಲಿ ಮತ್ತೊಂದು ಚುನಾವಣೆ ಎದುರಿಸಲಿದ್ದೇವೆ. ಅದ್ದರಿಂದ, ಇದಕ್ಕೆ ಸಿದ್ಧತೆ ಅಗತ್ಯ. ಲೋಕಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರನನ್ನು ದ್ವೇಷಿಸುವುದಿಲ್ಲ. ಈ ಸೋಲನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್,ಎಸ್.ರವಿಕುಮಾರ್, ಬಲ್ಕೀಸ್ ಭಾನು, ಆರ್.ಎಂ.ಮಂಜುನಾಥ ಗೌಡ, ಎಚ್.ಸಿ.ಯೋಗೀಶ್, ನಾಗರಾಜ್ ಗೌಡ, ಎಂ.ಶ್ರೀಕಾಂತ್, ಬಿ.ಕೆ.ಮೋಹನ್, ಜಿ.ಪಲ್ಲವಿ, ಎನ್.ರಮೇಶ್,ಜಿ.ಡಿ.ಮಂಜುನಾಥ, ಎಸ್‌.ಕೆ.ಮರಿಯಪ್ಪ, ಚಂದ್ರಭೂಪಾಲ್, ಅನಿತಾ ಕುಮಾರಿ, ಮುಡುಬ ರಾಘವೇಂದ್ರ ಸೇರಿ ಕಾರ್ಯಕರ್ತರು ಇದ್ದರು.

ಶಕ್ತಿ ಧಾಮ ನಿರ್ಮಿಸುವೆ: ಗೀತಾ ಶಿವರಾಜಕುಮಾರ

ಶಿವಮೊಗ್ಗದಲ್ಲಿ ಶಕ್ತಿಧಾಮ ನಿರ್ಮಾಣ ಮಾಡುತ್ತೇವೆ. ಶೋಷಿತ ವರ್ಗಗಳಿಗೆ ನೆರಳಾಗಿರುತ್ತೇವೆ. ಅದೇ ರೀತಿ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ‌. ಜಿಲ್ಲೆಯಲ್ಲಿ ಮನೆ ಇಲ್ಲ ಎನ್ನುವ ಆರೋಪ ನಮ್ಮ ಮೇಲಿದೆ‌. ಇದಕ್ಕೆ ಉತ್ತರವಾಗಿ ಖಂಡಿತ ಮನೆ ನಿರ್ಮಾಣ ಮಾಡುತ್ತೇವೆ. ಕ್ಷೇತ್ರಕ್ಕೆ ಸಾಮಾಜಿಕ ಕೊಡುಗೆ ನೀಡಲು ಹೆಚ್ಚಿನ ಶ್ರಮ ಹಾಕುತ್ತೇವೆ- ಗೀತಾ ಶಿವರಾಜಕುಮಾರ, ಪರಾಜಿತ ಅಭ್ಯರ್ಥಿ.

ಗೀತಾ ರಾಜಕೀಯಕ್ಕೆ ಬಂದಿದ್ದು ತಪ್ಪ? ಶಿವಣ್ಣ ಪ್ರಶ್ನೆ

ಚುನಾವಣೆಯಲ್ಲಿ ಪತ್ನಿ ಗೀತಾ ಪರ ಕಾರ್ಯಕರ್ತನಾಗಿ ಪ್ರಚಾರ ಮಾಡಿದ್ದೇನೆ. ಕೆಲವರು ನಾಟಕ ಎಂದು ಬಿಂಬಿಸುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುವ ಅನಿವಾರ್ಯತೆ ಇಲ್ಲ. ನಿಜ ಜೀವನದಲ್ಲಿ ನಾಟಕ ಮಾಡಿ ಅಭ್ಯಾಸ ನಮಗಿಲ್ಲ. ಕೂಲಿ ಕೆಲಸ ಮಾಡಿ, ಬೇಕಾದರೂ ಹೆಂಡತಿ ಮಕ್ಕಳನ್ನು ಸಾಕುತ್ತೇನೆ. ಆದರೆ, ನಾನು ಹೆದರುವುದಿಲ್ಲ‌. ೫೦ ದಿನ ಕ್ಷೇತ್ರದ ಜನರೊಂದಿಗೆ ಹೆಜ್ಜೆ ಹಾಕಿದ್ದೇನೆ. ಈ ಬಗ್ಗೆ ಕುಸಿ ಇದೆ. ಗೀತಾಗೆ ರಾಜಕೀಯಕ್ಕೆ ಕಳುಹಿಸಿದ್ದು, ತಪ್ಪ? ಪ್ರತಿಯೊಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಆದರೆ, ಕೆಲವರ ಟೀಕೆಗಳಿಂದ ಬೇಸರವಾಗಿದೆ.

– ಶಿವರಾಜಕುಮಾರ, ನಟ