ರೈತ-ಕಾರ್ಮಿಕ-ಶ್ರಮಿಕ ಕುಟುಂಬದಿಂದ ಬಂದು ಕಾರ್ಪೊರೇಟ್ ಕಷ್ಟಗಳಿಗೆ ಮಿಡಿಯುತ್ತಿದ್ದೇವೆ: ಕೆ.ವಿ.ಪ್ರಭಾಕರ್ ಬೇಸರ**ಶಿವಮೊಗ್ಗ ಜನಪರ ಚಳವಳಿಗಳ ತವರೂರು: ಕೆವಿಪಿ*

*ರೈತ-ಕಾರ್ಮಿಕ-ಶ್ರಮಿಕ ಕುಟುಂಬದಿಂದ ಬಂದು ಕಾರ್ಪೊರೇಟ್ ಕಷ್ಟಗಳಿಗೆ ಮಿಡಿಯುತ್ತಿದ್ದೇವೆ: ಕೆ.ವಿ.ಪ್ರಭಾಕರ್ ಬೇಸರ*

*ಶಿವಮೊಗ್ಗ ಜನಪರ ಚಳವಳಿಗಳ ತವರೂರು: ಕೆವಿಪಿ*

ಶಿವಮೊಗ್ಗ ಜು 27: ಇವತ್ತಿನ ಪತ್ರಕರ್ತರೆಲ್ಲರೂ ಬಹುತೇಕ ರೈತ-ಕಾರ್ಮಿಕ-ಶ್ರಮಿಕ ಕುಟುಂಬದಿಂದ ಬಂದವರು. ಆದರೆ ಇವರೆಲ್ಲಾ ತಮ್ಮ ಶ್ರಮಿಕ‌ ಸಮುದಾಯಗಳನ್ನು ಮರೆತು ಕಾರ್ಪೊರೇಟ್ ಕಷ್ಟಗಳಿಗೆ ಮಿಡಿಯುವಂತಾಗಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.

ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ‌ ಮಾತನಾಡಿದರು.

ಇವತ್ತಿನ ಪತ್ರಕರ್ತರಿಗೆ, ಮಾಧ್ಯಮಗಳಿಗೆ ಕಾರ್ಪೋರೇಟ್ ಜಗತ್ತಿನ ಸಮಸ್ಯೆಗಳೇ ದೊಡ್ಡದಾಗಿ ಕಾಣುತ್ತಿವೆ. ನಾವೆಲ್ಲಾ ರೈತರ, ಕಾರ್ಮಿಕರ ಮತ್ತು ಶ್ರಮಿಕರ ಮಕ್ಕಳು. ನಮ್ಮ ಸಮುದಾಯಗಳು ಏನೆಲ್ಲಾ ಸಂಕಷ್ಟಗಳನ್ನು ಎದುರಿಸುತ್ತಿವೆ ಎನ್ನುವುದು ನಮಗೆ ಮುಖ್ಯವಾಗುತ್ತಿಲ್ಲ. ನಮ್ಮ ಬೇರುಗಳನ್ನು, ನಮ್ಮ ಹಿನ್ನೆಲೆಯನ್ನು ಮರೆತಿರುವುದೇ ಇದಕ್ಕೆ ಕಾರಣ ಎಂದರು.

ಶಿವಮೊಗ್ಗ ಚಳವಳಿಗಳ ತವರೂರು. ಸಮಾಜವಾದಿ, ಗೇಣಿ ಹೋರಾಟ, ರೈತ-ದಲಿತ ಹೋರಾಟಗಳ ಜೊತೆಗೆ ಪತ್ರಿಕಾ ಚಳವಳಿಗೂ ಹೆಸರಾದ ಜಿಲ್ಲೆ ಎನ್ನುತ್ತಾ ಪತ್ರಿಕೋದ್ಯಮಕ್ಕೆ ಲಂಕೇಶ್ ಅವರ ಕೊಡುಗೆಗಳನ್ನು ಉಲ್ಲೇಖಿಸಿದರು.

ಸರ್ಕಾರ ಪತ್ರಕರ್ತ ಸಮುದಾಯದ ಸಮಸ್ಯೆಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ಪಂದಿಸುತ್ತಿದೆ ಎಂದು ತಿಳಿಸಿದ ಅವರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳು ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.‌

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಋಷಿಕೇಶ್ ಬಹುದ್ದೂರ್ ದೇಸಾಯಿ ವಿಶೇಷ ಉಪನ್ಯಾಸ ನೀಡಿದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಸಿ.ಎಸ್, ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮದನ್ ಗೌಡರು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.‌