ಸಚಿವ ಸಂಪುಟಕ್ಕೆ ಆಗಲಿದೆ ಭರ್ಜರಿ ಸರ್ಜರಿ? ನಾಳೆ ಸಿಎಂ, ಡಿಸಿಎಂ ದೆಹಲಿ ಪ್ರವಾಸ ನಿಕ್ಕಿ ಯಾವ ಸಚಿವ ಕಳೆದುಕೊಳ್ಳಲಿದ್ದಾರೆ ಹುದ್ದೆ?
ಸಚಿವ ಸಂಪುಟಕ್ಕೆ ಆಗಲಿದೆ ಭರ್ಜರಿ ಸರ್ಜರಿ? ನಾಳೆ ಸಿಎಂ, ಡಿಸಿಎಂ ದೆಹಲಿ ಪ್ರವಾಸ ನಿಕ್ಕಿ
ಯಾವ ಸಚಿವ ಕಳೆದುಕೊಳ್ಳಲಿದ್ದಾರೆ ಹುದ್ದೆ?
ಕೊನೆಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲು ಮುಂದಾಗಿದೆಯೇ? ಇಂಥದ್ದೊಂದು ಪ್ರಶ್ನೆ ಇದೀಗ ಉದ್ಭವಿಸಿದೆ. ಇದಕ್ಕೆ ಕಾರಣ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಹೈಕಮಾಂಡ್ ಭೇಟಿಗೆ ದೆಹಲಿಗೆ ಹೊರಟಿರುವುದು. ಆರೇಳು ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ, ಹಗರಣಗಳ ಆರೋಪದ ನಂತರ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟಕ್ಕೆ ಸರ್ಜರಿ ಆಗುವ ಸುಳಿವು ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ. ನಂತರ ಸಂಪುಟ ಬದಲಾವಣೆ ಅಥವಾ ಕೆಲವು ಸಚಿವರ ಖಾತೆ ಅದಲು ಬದಲು ಮಾಡುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎನ್ನಲಾಗಿದೆ.
ಸಚಿವರ ಖಾತೆ ಅದಲು ಬದಲು ಮಾಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಕೆಲವು ಹಿರಿಯ ಸಚಿವರಿಂದಲೂ ಖಾತೆ ಬದಲಾವಣೆಗೆ ಸಲಹೆ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಬಿ. ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಖಾತೆ ಕೂಡ ಸದ್ಯ ಸಿಎಂ ಬಳಿಯೇ ಇದೆ. ಇದಲ್ಲದೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆಯನ್ನು ಬೇರೊಬ್ಬ ಸಚಿವರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪರಿಣಾಮಕಾರಿಯಾಗಿ ಖಾತೆ ನಿಭಾಯಿಸದವರಿಗೆ ಕೊಕ್
ಲೋಕಸಭೆ ಚುನಾವಣೆ ಫಲಿತಾಂಶವನ್ನೂ ಗಮನದಲ್ಲಿ ಇಟ್ಟುಕೊಂಡು ಖಾತೆ ಬದಲಾವಣೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಕಳೆದೊಂದು ವರ್ಷಗಳಿಂದ ಪರಿಣಾಮಕಾರಿಯಾಗಿ ಖಾತೆ ನಿಭಾಯಿಸದವರಿಗೆ ಬದಲಾವಣೆ ಮೂಲಕ ಚುರುಕು ಮುಟ್ಟಿಸಲು ಪಕ್ಷ ತೀರ್ಮಾನಿಸಿದೆ. ಸುಮಾರು ಆರೇಳು ಮಂದಿ ಸಚಿವರ ಖಾತೆಗಳ ಅದಲು ಬದಲು ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಜತೆಗೆ, ಕೆಪಿಸಿಸಿ ಪುನರ್ರಚನೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಪಿಸಿಸಿ ಸಾರಥ್ಯ ಬದಲಾವಣೆ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಮಧ್ಯೆ, ಕೆಪಿಸಿಸಿ ನೂತನ ಅಧ್ಯಕ್ಷರಾಗಲು ಹಲವರು ಪ್ರಭಾವ ಬಳಸುತ್ತಿದ್ದಾರೆ. ಏನೇ ಇದ್ದರೂ ಹೈಕಮಾಂಡ್ ಭೇಟಿಯ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ. ಆಡಳಿತವನ್ನು ಕಪ್ಪು ಚುಕ್ಕೆ ಇಲ್ಲದಂತೆ ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುವಂತೆ ಹೈಕಮಾಂಡ್ ಸಲಹೆ ನೀಡುವ ಸಾಧ್ಯತೆ ಇದೆ.
ದೆಹಲಿಗೆ ಹೋಗುತ್ತೇವೆ: ಸಿದ್ದರಾಮಯ್ಯ
ನಾನು ಹಾಗೂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದೇವೆ. ಪಕ್ಷ ಹಾಗೂ ಸರ್ಕಾರದ ವಿಚಾರವಾಗಿ ಚರ್ಚೆ ನಡೆಸುತ್ತೇವೆ ಎಂದು ದೆಹಲಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂಬಂಧ ಮೈಸೂರಿಗೆ ತೆರಳಿರುವ ಅವರು, ದೆಹಲಿ ಭೇಟಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೆಲವು ಸಚಿವರ ತಲೆದಂಡವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ನಂತರ ಅಷ್ಟೊಂದು ರಾಜಕೀಯ ಬೆಳವಣಿಗೆಗಳು ನಡೆದಿರಲಿಲ್ಲ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ನೀಡಬೇಕಾಯಿತು. ಅದಾದ ನಂತರ ಮುಡಾ ಸೇರಿದಂತೆ ಸಾಲು ಹಗರಣಗಳ ಆರೋಪ ಕಾಂಗ್ರೆಸ್ ಸರ್ಕಾರದ ಮೇಲೆ ಕೇಳಿಬಂದಿರುವುದು ಹೈಕಮಾಂಡ್ ಅನ್ನು ಮುಜುಗರಕ್ಕೀಡು ಮಾಡಿದೆ ಎನ್ನಲಾಗಿದೆ.