ಶಿವಮೊಗ್ಗ- ಸಾಗರ ರೈಲ್ವೆ ನಿಲ್ದಾಣಗಳಿಗೆ ರಾಮ ಮನೋಹರ ಲೋಹಿಯಾ ಹೆಸರಿಡಿ**ಕೇಂದ್ರ ರೈಲ್ವೇ ಸಚಿವ ಸೋಮಣ್ಣರಿಗೆ ಪತ್ರ*

*ಶಿವಮೊಗ್ಗ- ಸಾಗರ ರೈಲ್ವೆ ನಿಲ್ದಾಣಗಳಿಗೆ ರಾಮ ಮನೋಹರ ಲೋಹಿಯಾ ಹೆಸರಿಡಿ*

*ಕೇಂದ್ರ ರೈಲ್ವೇ ಸಚಿವ ಸೋಮಣ್ಣರಿಗೆ ಪತ್ರ*

ಶಿವಮೊಗ್ಗ ಮತ್ತು ಸಾಗರ ರೈಲ್ವೇ ನಿಲ್ದಾಣಗಳಿಗೆ ಡಾ.ರಾಮ ಮನೋಹರ ಲೋಹಿಯಾ ಹೆಸರಿಡಬೇಕೆಂದು ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಪ್ರಧಾನ ಟ್ರಸ್ಟಿ ಪ್ರೊ.ರವಿವರ್ಮ ಕುಮಾರ್ ಕೇಂದ್ರ ರೈಲ್ವೆ ಮಂತ್ರಿ ವಿ.ಸೋಮಣ್ಣರಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಸಮಾಜವಾದಿ ಚಳುವಳಿಯ ರೂವಾರಿಯೂ ಮಹಾತ್ಮ ಗಾಂಧೀಜಿಯವರ ನಿಕಟವರ್ತಿಯೂ ಆಗಿದ್ದ ಲೋಹಿಯಾ, ಉಳುವವನೇ ಭೂ ಒಡೆಯ ಚಳುವಳಿಯನ್ನೂ ಹುಟ್ಟು ಹಾಕಿದವರು. ಇದರ ಆಧಾರದ ಮೇಲೆಯೇ ಕಾಗೋಡು ಸತ್ಯಾಗ್ರಹ ದಂತಹ ದೊಡ್ಡ ಚಳುವಳಿ ಶಿವಮೊಗ್ಗದಲ್ಲಿ ಆರಂಭವಾಗಿದ್ದು.
ಡಿ.ದೇವರಾಜ್ ಅರಸರು ಲೋಹಿಯಾರ ಆ ಕನಸನ್ನು ನನಸು ಮಾಡಿದ್ದು 1974ರ ಮಾರ್ಚ್ 1 ರಂದು.5 ಲಕ್ಷಕ್ಕೂ ಹೆಚ್ಚು ಜನ ಭೂ ಉಳುಮೆದಾರರು ರಾತ್ರೋ ರಾತ್ರಿ ಆ ಭೂಮಿಗಳ ಮಾಲೀಕರಾಗಿದ್ದು ಈಗ ಇತಿಹಾಸ.
ಆ ನಂತರ ಅದರ ಉಪಯೋಗ ದಕ್ಕಿದ್ದು 15 ಲಕ್ಷಕ್ಕೂ ಹೆಚ್ಚಿನ ಕೃಷಿ ಕಾರ್ಮಿಕರಿಗೆ.

ಇದೇ ಲೋಹಿಯಾ 1951ರ ಜೂನ್ 13 ಇದೇ ಸಾಗರದಲ್ಲಿ ಚಳುವಳಿಯ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದರು.

ಸಮಾನತೆಗಾಗಿ, ಸಮಾಜದ ಉದ್ಧಾರಕ್ಕಾಗಿ ಚಳುವಳಿಗಳನ್ನು ರೂಪಿಸುತ್ತಾ ರಾಜಕಾರಣದಲ್ಲೂ ಬಿರುಗಾಳಿ ಮೂಡಿಸುತ್ತಾ ಶಿವಮೊಗ್ಗ, ಸಾಗರದ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದ ಡಾ.ರಾಮ ಮನೋಹರ ಲೋಹಿಯಾರವರ ಹೆಸರನ್ನು ಶಿವಮೊಗ್ಗ ಮತ್ತು ಸಾಗರದ ರೈಲ್ವೇ ನಿಲ್ದಾಣಗಳಿಗೆ ಇಡಬೇಕೆಂದು ಒತ್ತಾಯಿಸಿದ್ದಾರೆ.