ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಏನಂದ್ರು?; ಸದ್ಯದಲ್ಲೇ ಪ್ರೆಸ್ ಟ್ರಸ್ಟ್ ವಾರ್ಷಿಕ ಪ್ರಶಸ್ತಿ ಪ್ರಕಟ ಮಾ.5 ರಿಂದ ಪತ್ರಿಕಾಗೋಷ್ಠಿ ನಡೆಸುವ ಬಾಡಿಗೆ 1500₹ ಗಳಿಗೆ ಇಳಿಕೆ ಇಲ್ಲಿ ಯಾರೂ ಸರ್ವಾಧಿಕಾರಿ ಇಲ್ಲ- ಎಲ್ಲರೂ ಸಮಾನರು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲಾ ಪಾರದರ್ಶಕ ವಾಗಿದೆ 

ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಏನಂದ್ರು?;

ಸದ್ಯದಲ್ಲೇ ಪ್ರೆಸ್ ಟ್ರಸ್ಟ್ ವಾರ್ಷಿಕ ಪ್ರಶಸ್ತಿ ಪ್ರಕಟ

ಮಾ.5 ರಿಂದ ಪತ್ರಿಕಾಗೋಷ್ಠಿ ನಡೆಸುವ ಬಾಡಿಗೆ 1500₹ ಗಳಿಗೆ ಇಳಿಕೆ

ಇಲ್ಲಿ ಯಾರೂ ಸರ್ವಾಧಿಕಾರಿ ಇಲ್ಲ- ಎಲ್ಲರೂ ಸಮಾನರು

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲಾ ಪಾರದರ್ಶಕ ವಾಗಿದೆ

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲಾ ಪಾರದರ್ಶಕ ವಾಗಿದೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್.ಎನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ನಡೆಯುತ್ತಿರುವ ಪತ್ರಿಕಾ ಭವನದ ಕುರಿತು ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನೂ ನೀಡಿದ್ದಾರೆ. ಹಲವು ಬಾರಿ ಸುಳ್ಳನ್ನೇ ಹೇಳುತ್ತಿರುವ ಕಾರಣ ಸಾರ್ವಜನಿಕರಲ್ಲಿ ಗೊಂದಲ ನಿರ್ಮಾಣವಾಗಬಾರದು ಎಂದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ದಿನಾಂಕ 28-5-2009 ರಂದು ಟ್ರಸ್ಟ್‌ ಕಾಯಿದೆ ಅಡಿಯಲ್ಲಿ ನೋಂದಣಿಯಾಗಿದೆ. ಇದು ರದ್ದು ಮಾಡಲಾಗದ ಟ್ರಸ್ಟ್‌ ಆಗಿರುತ್ತದೆ. 2009 ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಿವಮೊಗ್ಗದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿಂದ ಅರ್ಜಿ ಸಲ್ಲಿಸಲಾಗಿತ್ತು. ಅವರ ಆದೇಶದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ನಿವೇಶನವನ್ನು ಮಂಜೂರು ಮಾಡಲಾಗಿತ್ತು. 8-7-2009ರಂದು ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ಗೆ ನಿವೇಶನ ನೀಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯದಂತೆ ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್‌ ವಿಭಾಗದಿಂದ ನಿವೇಶನ ಮಂಜೂರು ಮಾಡಲಾಗಿತ್ತು.

ನಿವೇಶನ ಮಂಜೂರಾದ ಬಳಿಕ ಪತ್ರಿಕಾ ಭವನ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಯಡಿಯೂರಪ್ಪ, ಮಾನ್ಯ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಮತ್ತು ಇತರೆ ಜನಪ್ರತಿನಿಧಿಗಳ ಅನುದಾನದಲ್ಲಿ ನೆರವು ಪಡೆಯಲಾಗಿತ್ತು. ಈ ಎಲ್ಲಾ ಅನುದಾನವು ಜಿಲ್ಲಾಧಿಕಾರಿಗಳ ಹೆಡ್‌ ಮೂಲಕವೇ ವಿನಿಯೋಗವಾಗಿದ್ದು, ಸರ್ಕಾರದ ನೋಂದಾಯಿತ ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡದ ಆಧುನೀಕರಣ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗಿತ್ತು. ಪತ್ರಿಕಾಭವನದ ಕಟ್ಟಡಕ್ಕೆ ಸಾರ್ವಜನಿಕರಿಂದ ಯಾವುದೇ ಹಣಕಾಸು, ವಂತಿಕೆಯನ್ನು ನಾವು ಸಂಗ್ರಹ ಮಾಡಿರುವುದಿಲ್ಲ.

ಕಳೆದ ಮೇ ತಿಂಗಳ ತನಕ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಲು ಒಂದು ಸಾವಿರ ರೂ. ದರ ನಿಗದಿ ಮಾಡಲಾಗಿತ್ತು. ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳು, ಅಂಗವಿಕಲ ಸಂಘಟನೆಗೆ ಉಚಿತವಾಗಿ, ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದ ಸಂಘಟನೆಗಳಿಗೆ ರಿಯಾಯಿತಿ ದರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ಕೆಲವು ತಿಂಗಳಿಂದ ಹವಾನಿಯಂತ್ರಿತ ಸಭಾಂಗಣವಾದ ಮೇಲೆ ಪತ್ರಿಕಾಗೋಷ್ಠಿಗೆ ದರದಲ್ಲಿ ಕೊಂಚ ಹೆಚ್ಚಳ ಮಾಡಲಾಗಿದೆ. ಭವನದ ಮೊದಲ ಮಹಡಿಯಲ್ಲಿರುವ ಸಭಾಂಗಣವನ್ನು ಪತ್ರಕರ್ತರ ಕುಟುಂಬಗಳ ಕಾರ್ಯಕ್ರಮಕ್ಕೆ ಉಚಿತವಾಗಿ ಮತ್ತು ಇತರೆ ವರ್ಗದವರಿಗೆ 2 ಸಾವಿರ ನಿರ್ವಹಣಾ ವೆಚ್ಚ ಪಡೆಯಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ಅಪರೂಪಕ್ಕೊಮ್ಮೆ ಮಾತ್ರ ನಡೆಯುವುದು ಪತ್ರಕರ್ತರಿಗೆ ತಿಳಿದ ವಿಚಾರವಾಗಿದೆ.

ಪತ್ರಿಕಾಗೋಷ್ಠಿಯಿಂದ ಬರುವ ಹಣವನ್ನು ಪತ್ರಕರ್ತರಿಗೆ ಊಟ, ತಿಂಡಿ, ಕಾಫಿ, ವಿದ್ಯುತ್‌ ಬಿಲ್‌, ಇಂಟರ್ನೆಟ್‌, ಸಿಬ್ಬಂದಿ ವೇತನ, ಸ್ವಚ್ಛತೆಗೆ ಬಳಸಿಕೊಳ್ಳಲಾಗುತ್ತದೆ. ಮಾತ್ರವಲ್ಲದೆ, ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ, ಆರೋಗ್ಯ ತಪಾಸಣೆ, ಪ್ರತಿಭಾ ಪುರಸ್ಕಾರ, ಸಂವಾದ, ತರಬೇತಿ, ಚರ್ಚೆ, ಪತ್ರಕರ್ತರಿಗೆ ಪುನರ್‌ಮನನ ಶಿಬಿರ, ಉಪನ್ಯಾಸ, ವಿಚಾರ ಸಂಕಿರಣ, ಅಧ್ಯಯನ ಪ್ರವಾಸ, ಇತ್ಯಾದಿ ನಡೆಸಲಾಗುತ್ತದೆ.

ಹಣಕಾಸು ನಿರ್ವಹಣೆ:

ಪತ್ರಿಕಾ ಭವನಕ್ಕೆ ಬರುವ ಎಲ್ಲಾ ಹಣಕಾಸಿನ ವಹಿವಾಟು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಯ ಮೂಲಕವೇ ನಡೆಯುತ್ತಿದೆ. ಯಾರದೇ ವ್ಯಕ್ತಿ ಅಥವಾ ಅನ್ಯ ಸಂಸ್ಥೆಯ ಹೆಸರಲ್ಲಿ ಪತ್ರಿಕಾ ಭವನದ ಹಣ ವ್ಯಯವಾಗುವುದಿಲ್ಲ. ಇಲ್ಲಿನ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು, ಇಲ್ಲಿಯಾವುದೇ ಅವ್ಯವಹಾರಗಳು ನಡೆದಿಲ್ಲ ಮತ್ತು ಅದಕ್ಕೆ ಅವಕಾಶ ಇರುವುದಿಲ್ಲ ಎಂದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ,
ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಲ್ಲಿ ಸಾಂವಿಧಾನಿಕ ರೀತಿಯಲ್ಲಿ ರಚನೆಯಾಗಿರುವ ಆಡಳಿತ ಮಂಡಳಿಯಿದೆ. ಟ್ರಸ್ಟ್‌ನ ಬೈಲಾದಂತೆ ಆಯ್ಕೆಯಾಗಿರುವ ಟ್ರಸ್ಟಿಗಳು, ವಿಶೇಷ ಆಹ್ವಾನಿತರು ಇದ್ದಾರೆ. ಶಿವಮೊಗ್ಗ ನಗರದಲ್ಲಿ ಕಾರ್ಯನಿರ್ವಹಿಸುವ ರಾಜ್ಯ ಮಟ್ಟದ ಪತ್ರಿಕೆ, ಸುದ್ದಿ ವಾಹಿನಿಗಳು, ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಪ್ರತಿ ನಿಧಿಗಳು ಸೇರಿದಂತೆ ಎಲ್ಲರನ್ನೂ ಒಳಗೊಂಡ ಆಡಳಿತ ಮಂಡಳಿಯಿದೆ ಎಂದರು.

ಪತ್ರಿಕಾ ಭವನ ರಾಜ್ಯದಲ್ಲಿಯೇ ಮಾದರಿಯಾಗಿದ್ದು, ಇಲ್ಲಿ ಮಾಧ್ಯಮಕ್ಕೆ ಸಂಬಂಧಿತ ಚಟುವಟಿಕೆಗಳು ನಿತ್ಯವೂ ನಡೆಯುತ್ತವೆ. ಪತ್ರಿಕಾಗೋಷ್ಟಿಗಳನ್ನು ಒಂದೇ ಕಡೆ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ರಾಜಕೀಯ ಪಕ್ಷ ಮತ್ತ ಸಂಘಸಂಸ್ಥೆಗಳವರು, ಸಾರ್ವಜನಿಕರು ಇಲ್ಲಿ ಪತ್ರಿಕಾ ಗೋಷ್ಠಿ ನಡೆಸುವುದು ಮಾತ್ರವಲ್ಲದೆ, ಪತ್ರಿಕಾ ಹೇಳಿಕೆಗಳನ್ನು ಇಲ್ಲಿಗೆ ಬಂದು ನೀಡುತ್ತಾರೆ.

ಪತ್ರಿಕಾ ಭವನದಲ್ಲಿ ಸರಕಾರದಿಂದ ಮಾನ್ಯತೆ ಪಡೆದ ಪತ್ರಿಕೆಗಳು, ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗುತ್ತಿದೆ. ಮಾನ್ಯತೆ ಪಡೆಯದ ಮತ್ತು ಪತ್ರಿಕೆಗಳನ್ನೇ ಹೊರತರದ ಯಾರಿಗೂ ಇಲ್ಲಿ ಅವಕಾಶ ಕೊಡುತ್ತಿಲ್ಲ. ಪತ್ರಕರ್ತರಿಂದ ಪತ್ರಕರ್ತರಿಗಾಗಿ ಬಳಕೆಯಾಗುತ್ತಿರುವ ಪತ್ರಿಕಾ ಭವನದಲ್ಲಿ ನಕಲಿ ಅಧ್ಯಕ್ಷರಿದ್ದಾರೆ. ಹಣ ಅಪವ್ಯಯವಾಗುತ್ತಿದೆ.

ಜಿಲ್ಲಾಧಿಕಾರಿಗಳು ಭವನವನ್ನು ವಶಕ್ಕೆ ಪಡೆಯಬೇಕೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪತ್ರಿಕಾ ಭವನದ ನಿರ್ವಹಣೆ, ಮೀಟಿಂಗ್‌, ಆಡಿಟಿಂಗ್‌ ಎಲ್ಲವೂ ಕ್ರಮವಾಗಿ ನಡೆಯುತ್ತಿದೆ. ನೈಜ ಮತ್ತು ಸಕ್ರಿಯ ಪತ್ರಕರ್ತರು ಪತ್ರಿಕಾ ಭವನದ ಸೌಲಭ್ಯವನ್ನು ನಿತ್ಯವೂ ಬಳಸಿಕೊಳ್ಳುತ್ತಿದ್ದಾರೆ. ಭವನದ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಚೇರಿಯೂ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಪತ್ರಿಕಾ ಭವನದ ಮೇಲೆ ಇಲ್ಲದ ಆರೋಪ ಮಾಡುವವರ ವಿರುದ್ಧ ಕಾನೂನು ಹೋರಾಟವನ್ನು ಶಿವಮೊಗ್ಗ ಪ್ರೆಸ್ಟ್‌ ನಡೆಸಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವ್ಯಕ್ತಿಗಳು ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಯಾರೂ ನಂಬ ಬಾರದು. ಶಿವಮೊಗ್ಗ ನಗರದ ಪತ್ರಕರ್ತರ ವೃತ್ತಿಪರ ಚಟುವಟಿಕೆಗಳಿಗೆ ನಿತ್ಯವೂ ಬಳಕೆಯಾಗುತ್ತಿರುವ ಭವನದ ಮೇಲೆ ನಡೆಯುತ್ತಿರುವ ದುರುದ್ದೇಶ ಪೂರ್ವಕವಾದ ಆರೋಪಗಳನ್ನು ಟ್ರಸ್ಟ್‌ ಸಾರಾ ಸಗಟಾಗಿ ತಿರಸ್ಕರಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಖಜಾಂಚಿ
ಜೇಸುದಾಸ ಸಹಕಾರ್ಯದರ್ಶಿ
ಗಿರೀಶ್ ಉಮ್ರಾಯ್, ಗೋಪಾಲ ಯಡಗೆರೆ, ರಾಮಚಂದ್ರ ಗುಣಾರಿ, ಜಿ.ಪದ್ಮನಾಭ, ಕೆ.ತಿಮ್ಮಪ್ಪ, ಹೊನ್ನಾಳಿ ಚಂದ್ರಶೇಖರ್, ಸಂತೋಷ್ ಕಾಚಿನಕಟ್ಟೆ, ಗಜೇಂದ್ರ ಸ್ವಾಮಿ, ಪಿ.ಸಿ.ನಾಗರಾಜ್, ಆರಗರವಿ, ವಿ.ಸಿ.ಪ್ರಸನ್ನ, ಗೋ.ವಾ.ಮೋಹನಕೃಷ್ಣ, ಕಿರಣ್ ಕುಮಾರ್, ಎಂ.ನಾಗರಾಜ್, ಉಪಸ್ಥಿತರಿದ್ದರು.