ಪುತ್ತೂರು ನರಸಿಂಹ ನಾಯಕ್ ಹಾಗೂ ಎನ್.ಎಸ್. ಪ್ರಸಾದ್ ಸಾರಥ್ಯ* ಮಾಹಿತಿ ನೀಡಿದ ಗಾಯಕಿ ಸುರೇಖಾ ಹೆಗಡೆ ———————————————– ಮಾ. 15 ಹಾಗೂ 16 ರಂದು “ಧ್ವನಿ ಸಂಸ್ಕರಣ ಮತ್ತು ಸುಗಮ ಸಂಗೀತ ಕಲಿಕಾ ಶಿಬಿರ :

*ಪುತ್ತೂರು ನರಸಿಂಹ ನಾಯಕ್ ಹಾಗೂ ಎನ್.ಎಸ್. ಪ್ರಸಾದ್ ಸಾರಥ್ಯ*

ಮಾಹಿತಿ ನೀಡಿದ ಗಾಯಕಿ ಸುರೇಖಾ ಹೆಗಡೆ
———————————————–
ಮಾ. 15 ಹಾಗೂ 16 ರಂದು “ಧ್ವನಿ ಸಂಸ್ಕರಣ ಮತ್ತು ಸುಗಮ ಸಂಗೀತ ಕಲಿಕಾ ಶಿಬಿರ :

ಶಿವಮೊಗ್ಗ : ನಗರದ ಪ್ರಸಿದ್ಧ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ ಮಾರ್ಚ್ 15 ರ ಶನಿವಾರ ಮತ್ತು 16 ರ ಭಾನುವಾರ ನಗರದ ಆರ್.ಟಿ.ಓ. ಕಛೇರಿ ರಸ್ತೆಯ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಧ್ವನಿ ಸಂಸ್ಕರಣ, ಸಂಗೀತದ ವಿಧಾನಶಾಸ್ತ್ರ ಹಾಗೂ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ, ಗಾಯಕಿ ಶ್ರೀಮತಿ ಸುರೇಖಾ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕ ಮಾಂತ್ರಿಕ, ಸಂಗೀತ ನಿರ್ದೇಶಕ ಪುತ್ತೂರು ನರಸಿಂಹ ನಾಯಕ್ ಹಾಗೂ ಸಂಗೀತ ಸಂಯೋಜಕ, ವ್ಯವಸ್ಥಾಪಕ ಮೆಂಡೋಲಿನ್ ಎನ್.ಎಸ್. ಪ್ರಸಾದ್ ರವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದು , ಈ ಇಬ್ಬರು ದಿಗ್ಗಜರ ಸಾರಥ್ಯದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಶಿಬಿರವು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ನಡೆಯಲಿದ್ದು, ಸಂಗೀತವನ್ನು ಕಲಿಯುವ ಉತ್ಸಾಹ ಇರುವ 15 ರಿಂದ 40 ವರ್ಷದೊಳಗಿನ ಶಿವಮೊಗ್ಗ ಜಿಲ್ಲೆಯಲ್ಲಿರುವ ಯುವ ಪೀಳಿಗೆ ಇದರ ಸಂಪೂರ್ಣ ಪ್ರಯೋಜನ ಪಡೆದು ಕೊಳ್ಳಬೇಕೆಂದು ಸುರೇಖಾ ಹೆಗಡೆ ಕೋರಿದ್ದಾರೆ.

ಶಿಬಿರದಲ್ಲಿ ಭಾಗವಹಿಸಲು ನಿಗದಿತ ಶುಲ್ಕವಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9980315679,
9481662308 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.

– ಮುರುಳೀಧರ್ ಹೆಚ್ ಸಿ
ಪತ್ರಕರ್ತರು, ಶಿವಮೊಗ್ಗ.
——————————————————————
ಶ್ರೀ ಪುತ್ತೂರು ನರಸಿಂಹ ನಾಯಕ್ :

ಸುಮಾರು 50 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ತೊಡಗಿಸಿಕೊಂಡಿರುವ ನಾಯಕ್ ರವರು, ಆಕಾಶವಾಣಿ ಮತ್ತು ದೂರದರ್ಶನ ‘ಎ’ ಗ್ರೇಡ್ ಕಲಾವಿದರಾಗಿದ್ದಾರೆ. ಇವರು ನಾಡಿನಾದ್ಯಂತ, ದೇಶದಾದ್ಯಂತ ಹಾಗೂ ಅಮೆರಿಕಾ ಸೇರಿದಂತೆ ಸಾಕಷ್ಟು ಹೊರದೇಶದಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು, ಕಾರ್ಯಗಾರವನ್ನು ನಡೆಸುತ್ತಾ ಇಂದಿಗೂ ಬಹಳ ಬೇಡಿಕೆಯಲ್ಲಿ ಇದ್ದಾರೆ.

ದಾಸರ ಪದಗಳ 108 ಕ್ಕೂ ಹೆಚ್ಚಿನ ಆಲ್ಬಂಗಳಲ್ಲಿ ಹಾಡಿ, ಸಂಗೀತ ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದ್ದು, ಕನ್ನಡ, ಹಿಂದಿ, ಮರಾಠಿ, ತುಳು ಹೀಗೆ ಸಾಕಷ್ಟು ಭಾಷೆಗಳಲ್ಲಿ ಹಾಡಿದ್ದಾರೆ. ಎಲ್ಲ ಹಿರಿಯ ಸಿನಿಮಾ ಸಂಗೀತ ನಿರ್ದೇಶಕರ ಅಡಿಯಲ್ಲಿ ಹಾಡಿದ ಇವರಿಗೆ “ಗಾಯಕರ ನಾಯಕ” ಎನ್ನುವ ಬಿರುದಾಂಕಿತವಿದೆ.

ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಿಂದ “ವಿಜಯ ದುಂದುಭಿ ಪ್ರಶಸ್ತಿ”, “ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ”, “ರಾಜ್ಯೋತ್ಸವ ಪ್ರಶಸ್ತಿ”, “ಕರ್ನಾಟಕ ಸಂಗೀತ ನೃತ್ಯ ಜೀವಮಾನ ಸಾಧನೆ ಪ್ರಶಸ್ತಿ”, “ಹರಿದಾಸ ಸಂಗೀತ ರತ್ನ” ಪ್ರಶಸ್ತಿಯನ್ನು ಪುತ್ತೂರು ನರಸಿಂಹನಾಯಕ್ ಪಡೆದಿದ್ದಾರೆ.
——————————————————————
ಶ್ರೀ “ಮೆಂಡೋಲಿನ್” ಎನ್. ಎಸ್. ಪ್ರಸಾದ್ :

ಸಂಗೀತ ನಿರ್ದೇಶಕರಾಗಿ, ವ್ಯವಸ್ಥಾಪಕರಾಗಿ, ನಲವತ್ತು ವರ್ಷಗಳಿಂದ “ಮೆಂಡೋಲಿನ್” ವಾದನದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿ ಹೊಂದಿರುವ ಇವರು, ನಾಡಿನ ಎಲ್ಲಾ ಗಾಯಕ-ಗಾಯಕರಿಗೆ ವಾದ್ಯ ಸಹಕಾರ ನೀಡಿದ್ದಾರೆ. ಸಂಗೀತದ ಮೇರು ಪರ್ವತ ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ ಮುಂತಾದವರೊಂದಿಗೆ ಕೆಲಸ ಮಾಡಿದ ಅನುಭವವಿರುವ ಇವರು, ಸಾಕಷ್ಟು ಚಲನಚಿತ್ರ, ಟಿವಿ ಧಾರಾವಾಹಿಗಳಿಗೂ ಕೆಲಸ ಮಾಡಿದ್ದಾರೆ. ಸಿ. ಅಶ್ವಥ್ ರವರ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ರಾಗಶ್ರೀ ಸಂಗೀತ ಅಕಾಡೆಮಿ ಮೂಲಕ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದಾರೆ. ಎನ್.ಎಸ್. ಪ್ರಸಾದ್ ರವರು ಸ್ವರ ಮಂದಾರ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಮೆಂಡೋಲಿನ್ ಮಯೂರ ಪ್ರಶಸ್ತಿಯನ್ನು ಪಡೆದಿದ್ದಾರೆ.
——————————————————————
ಶ್ರೀಮತಿ ಸುರೇಖಾ ಹೆಗಡೆ :

ಕಳೆದ 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ನಾಡು, ದೇಶ ಹಾಗೂ ಹೊರದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಕಳೆದ 8 ವರ್ಷಗಳಿಂದ ಸಂಗೀತ್ ಸಮರ್ಪಣ್ ಟ್ರಸ್ಟ್ ಮೂಲಕ ಹೊಸತನದಿಂದ ಕೂಡಿದ ಕಾರ್ಯಕ್ರಮಗಳು, ಶಿಬಿರ ಮುಂತಾದವುಗಳ ಮೂಲಕ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸುರೇಖಾ ಹೆಗಡೆಯವರು ಆಕಾಶವಾಣಿ, ದೂರದರ್ಶನದ ‘ಎ’ ಗ್ರೇಡ್ ಕಲಾವಿದೆಯಾಗಿದ್ದಾರೆ.