ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು? ರೇಣುಕಾಚಾರ್ಯ ವಿರುದ್ಧ ಕಿಡಿ
ಚಕ್ರವ್ಯೂಹದಿಂದ ಪಾರಾದರಾ
ಸಿಎಂ ಸಿದ್ದು?
ರೇಣುಕಾಚಾರ್ಯ ವಿರುದ್ಧ ಕಿಡಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಏಕತೆಯ ಮಂತ್ರ ಭೋಧಿಸಿ ಹೋದರು.
ಅಂದ ಹಾಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಖರ್ಗೆಯವರು ಇದೇ ಮೊದಲ ಬಾರಿ ಏಕತೆಯ ಮಂತ್ರ ಭೋಧಿಸಿಲ್ಲ.ಬದಲಿಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತಳಮಳವೆದ್ದಾಗಲೆಲ್ಲ ಅದೇ ಕೆಲಸ ಮಾಡಿದ್ದಾರೆ.
ಹಾಗಂತ ರಾಜಕೀಯ ಬೆಳವಣಿಗೆಗಳ ಮಧ್ಯೆ ಖರ್ಗೆಯವರಿಗೆ ಸಿಎಂ ಆಗುವ ಆಸೆ ಇಲ್ಲವೆಂದಲ್ಲ.ವಾಸ್ತವವಾಗಿ ಕರ್ನಾಟಕದ ಸಿಎಂ ಆಗಲು ಅವರು ಸತತವಾಗಿ ಪ್ರಯತ್ನಿಸಿದ್ದಾರೆ.ಆದರೆ ಸನ್ನಿವೇಶಗಳು ಕೈಗೆ ಬಂದ ತುತ್ತು ಅವರ ಬಾಯಿಗೆಟುಕದಂತೆ ಮಾಡಿವೆ.
ಈ ಬಗ್ಗೆ ಅವರಿಗೆ ಹಳಹಳಿಕೆ ಇಲ್ಲವೆಂದಲ್ಲ,ಇವತ್ತು ಕಷ್ಟ ಹೇಳಿಕೊಳ್ಳಲು ರಾಜ್ಯ ಕಾಂಗ್ರೆಸ್ ನ ಯಾವುದೇ ನಾಯಕರು ತಮ್ಮ ಬಳಿ ಬರಲಿ,ಅವರ ಬಳಿ ತಮಗೆ ಸಿಎಂ ಹುದ್ದೆ ಎಷ್ಟು ಬಾರಿ ಮತ್ತು ಹೇಗೆ ತಪ್ಪಿತು ಅನ್ನುವುದನ್ನು ಅವರು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.
ಇಂತಹ ಖರ್ಗೆಯವರ ಬಳಿ ಸಿದ್ದರಾಮಯ್ಯ ಕ್ಯಾಂಪಿನವರು ಹೋಗಿ ಒಂದು ಬಗೆಯ ಆಸೆ ಹುಟ್ಟಿಸಿದರೆ,ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಯಾಂಪಿನವರು ಹೋಗಿ ಮತ್ತೊಂದು ಬಗೆಯ ಆಸೆ ಬಿತ್ತಿ ಬಂದಿದ್ದಾರೆ.
ಅಂದ ಹಾಗೆ ಇತ್ತೀಚೆಗೆ ಖರ್ಗೆಯವರನ್ನು ಭೇಟಿ ಮಾಡಿದ್ದ ಸಿದ್ದು ಕ್ಯಾಂಪಿನ ಪ್ರಮುಖರಾದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಅವರು ಮೂರು ವಿಷಯಗಳನ್ನು ಸ್ಪಷ್ಟವಾಗಿ ಹೇಳಿ ಬಂದಿದ್ದರು.
ಅದೆಂದರೆ,ಸಿದ್ದು ಸಿಎಂ ಹುದ್ದೆಯಿಂದ ಇಳಿಯಬಾರದು.ಇಳಿಯುವುದೇ ಆದರೆ ಅವರ ಜಾಗಕ್ಕೆ ನೀವು ಬರಬೇಕು.ಒಂದು ವೇಳೆ ಇದು ಸಾಧ್ಯವಾಗದೆ ಡಿಕೆಶಿ ಹೆಸರು ಮುನ್ನೆಲೆಗೆ ಬಂದರೆ ನಾವು ಪಕ್ಷ ತೊರೆಯುತ್ತೇವೆ ಎಂಬುದು ಈ ನಾಯಕರ ಮಾತು.
ಇದೇ ರೀತಿ ಡಿಕೆಶಿ ಕ್ಯಾಂಪಿನವರು ಖರ್ಗೆಯವರ ಮುಂದೆ ಎರಡು ಪ್ರಪೋಸಲ್ಲುಗಳನ್ನು ಮಂಡಿಸಿ ಬಂದಿದ್ದಾರೆ.
ಅದೆಂದರೆ,ಅಧಿಕಾರ ಹಂಚಿಕೆ ಒಪ್ಪಂದದ ಅನುಸಾರ ಸಿಎಂ ಸಿದ್ಧರಾಮಯ್ಯ ಕೆಳಗಿಳಿದು ಡಿಕೆಶಿ ಸಿಎಂ ಆಗಲಿ.ಅದೇ ರೀತಿ ಡಿಕೆಶಿ ತೆರವು ಮಾಡುವ ಡಿಸಿಎಂ ಹುದ್ದೆಗೆ ನಿಮ್ಮ ಪುತ್ರರಾಗಿ ಪ್ರಿಯಾಂಕ್ ಖರ್ಗೆ ಬರಲಿ ಎಂಬುದು.
ಇವತ್ತು ತಾವು ಸಿಎಂ ಆಗುವ,ಇಲ್ಲವೇ ತಮ್ಮ ಪುತ್ರ,ಗ್ರಾಮೀಣಾಭಿವೃದ್ಧಿ ಸಚಿವ ಪ್ತಿಯಾಂಕ್ ಖರ್ಗೆ ಡಿಸಿಎಂ ಆಗುವ ಪ್ರಪೋಸಲ್ಲು ಖರ್ಗೆಯವರಿಗೆ ಇಷ್ಟವೇನೋ ಆಗಿದೆ.
ಆದರೆ ಹಾಗಂತ ಅವಸರಕ್ಕೆ ಬಿದ್ದು ಆಟ ಕೆಡಿಸಿಕೊಳ್ಳುವ ಇಚ್ಚೆ ಅವರಿಗಿಲ್ಲ.
ಸಾಲದೆಂಬಂತೆ ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕಿರುವ ಕರ್ನಾಟಕ,ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಎಂಬ ಸೇನಾ ನೆಲೆಗಳನ್ನು ಕಳೆದುಕೊಂಡರೆ ಆಗುವ ಅಪಾಯವೇನು?ಎಂಬುದು ಖರ್ಗೆಯವರಿಗೆ ಗೊತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಇಂಪ್ಲಿಮೆಂಟ್ ಮಾಡಲು ಹೋದರೆ ರಾಜಸ್ತಾನದಲ್ಲಿ ಈ ಹಿಂದೆ ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ಮಧ್ಯೆ ಏನಾಯಿತು?ಛತ್ತೀಸ್ ಘಡದಲ್ಲಿ ಭೂಪೇಶ್ ಸಿಂಗ್ ಭಗೇಲಾ ಮತ್ತು ಟಿ.ಎ.ಸಿಂಗ್ ದೇವ್ ನಡುವಣ ಕದನ ಏನಾಯಿತು?ಅಂತ ಖರ್ಗೆಯವರಿಗೆ ಗೊತ್ತು.
ನಿರ್ದಿಷ್ಟ ಅವಧಿಯ ನಂತರ ಸಚಿನ್ ಪೈಲಟ್ ಗೆ ಅಧಿಕಾರ ಬಿಟ್ಟುಕೊಡಿ ಅಂತ ರಾಜಸ್ತಾನದ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಹೇಳಿದರೆ ಅವರು ಬಿಲ್ ಕುಲ್ ಒಪ್ಪಲಿಲ್ಲ.ಪರಿಣಾಮವಾಗಿ ಲಾಂಗ್ರೆಸ್ ಹೈಕಮಾಂಡ್ ಗೆ ಮುಖಭಂಗವಾಯಿತು.
ಇದೇ ರೀತಿ ಕೆಲವೇ ಕಾಲದ ಹಿಂದೆ ಡಿಸಿಎಂ ಸಿಂಗ್ ದೇವ್ ಅವರಿಗೆ ಸಿಎಂಗಿರಿ ಬಿಟ್ಟುಕೊಡಿ ಎಂದರೆ ಭಘೇಲಾ ತಿರುಗೇಟು ಹೊಡೆದಿದ್ದರು.
ಹೀಗಾಗಿ ಕೆಲ ದಿನಗಳ ಹಿಂದೆ ಪಕ್ಷದ ವರಿಷ್ಟರ ಸಭೆ ನಡೆದಾಗ ಕರ್ನಾಟಕದ ರಾಜಕೀಯ ಸನ್ನಿವೇಶಗಳ ಬಗ್ಗೆ ಚರ್ಚೆಯಾಗಿದೆ.
ಆಗೆಲ್ಲ ನೇರವಾಗಿ ಮಾತನಾಡಿದ ಕೆಲ ನಾಯಕರು ರಾಜಸ್ತಾನ,ಛತ್ತೀಸ್ ಘಡದ ಎಪಿಸೋಡುಗಳನ್ನು ನೆನಪಿಸಿದ್ದಾರೆ.ಅಷ್ಟೇ ಅಲ್ಲ,ನಾಳೆ ಅಧಿಕಾರ ಬಿಟ್ಟುಕೊಡಿ ಅಂತ ಸಿಎಂ ಸಿದ್ಧರಾಮಯ್ಯನವರಿಗೆ ಹೇಳಿದರೆ,ಅವರು ಅಶೋಕ್ ಗೆಹ್ಲೋಟ್,ಬಘೇಲಾ ಅವರ ತರ ತಿರುಗಿ ಬೀಳಬಹುದು.ಎಷ್ಟೇ ಆದರೂ ಅವರು ಮಾಸ್ ಲೀಡರ್.ಹೀಗಾಗಿ ಅಧಿಕಾರ ಬಿಟ್ಟುಕೊಡಿ ಅಂತ ಅವರಿಗೆ ಹೇಳುವುದು ಕಷ್ಟ.
ಹಾಗೊಂದು ವೇಳೆ ಅವರು ತಯಾರಿದ್ದರೂ ಅವರ ಜತೆಗಿರುವವರು ಸುಮ್ಮನಿರುವುದಿಲ್ಲ.ಒಂದು ವೇಳೆ ಅವರು ತಿರುಗಿ ಬಿದ್ದರೆ ಕ್ರಮ ತೆಗೆದುಕೊಳ್ಳುವ ಸ್ಥಿತಿಯಲ್ಲ ನಾವೂ ಇಲ್ಲ.ಹೀಗಾಗಿ ಅಧಿಕಾರ ಬಿಟ್ಟುಕೊಡಿ ಅಂತ ಸಿದ್ಧರಾಮಯ್ಯ ಅವರಿಗೆ ಹೇಳುವುದು ತುಂಬ ದುಬಾರಿಯಾಗಬಹುದು ಎಂದಿದ್ದಾರೆ.
ಯಾವಾಗ ಅವರು ಇಂತಹ ಆತಂಕ ವ್ಯಕ್ತಪಡಿಸಿದರೋ?ಅದನ್ನೇ ಮನಸ್ಸಿನಲ್ಲಿಟ್ಟುಕಡ ಮಲ್ಲಿಕಾರ್ಜುನ ಖರ್ಗೆ ಮೊನ್ನೆ ಕರ್ನಾಟಕಕ್ಕೆ ಬಂದು ಏಕತೆಯ ಮಂತ್ರ ಭೋಧಿಸಿ ಹೋಗಿದ್ದಾರೆ.
ಚಕ್ರವ್ಯೂಹದಿಂದ ಸಿದ್ದು
ಪಾರು?
———–
ಇನ್ನು ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ತಾವು ಸಿಲುಕಿಕೊಂಡ ಚಕ್ರವ್ಯೂಹದ ಬಗ್ಗೆ ನೋವು ತೋಡಿಕೊಳ್ಳುವ ಕಾಲಕ್ಜೆ ಸರಿಯಾಗಿ,ಕರ್ನಾಟಕದ ಸಿಎಂ ಸಿದ್ಧರಾಮಯ್ಯ ತಾವು ಸಿಲುಕಿಕೊಂಡ ಚಕ್ರವ್ಯೂಹದಿಂದ ಪಾರಾಗುವ ಭರವಸೆ ತೋರಿಸಿದ್ದಾರೆ.
ಅಂದ ಹಾಗೆ ರಾಜ್ಯ ಸರ್ಕಾರಗಳ ಗ್ಯಾರಂಟಿ ಯೋಜನೆಗಳೇ ಈ ಚಕ್ರವ್ಯೂಹ.
ಮೊನ್ನೆ ಸಂದರ್ಶನವೊಂದರಲ್ಲಿ ಮಾತನಾಡಿದ ರೇವಂತರೆಡ್ಡಿ ಅವರು ಬಹಿರಂಗವಾಗಿಯೇ ತಾವು ಸಿಲುಕಿಕೊಂಡ ಚಕ್ರವ್ಯೂಹದ ಬಗ್ಗೆ ನೋವು ತೋಡಿಕೊಂಡಿದ್ದರು.
ಇವತ್ತು ತೆಲಂಗಾಣ ಸರ್ಕಾರ ತನ್ನ ಆದಾಯದ ಪೈಕಿ ದೊಡ್ಡ ಪಾಲನ್ನು ಸರ್ಕಾರಿ ನೌಕರರ ವೇತನ,ಪಿಂಚಣಿಗೆ ಮತ್ತು ಸರ್ಕಾರ ಮಾಡಿದ ಸಾಲದ ಮರುಪಾವತಿಗೆ ಕೊಡುತ್ತಿದೆ.ಉಳಿದ ಸ್ವಲ್ಪ ಹಣ ಅಭಿವೃದ್ಧಿ ಕೆಲಸಕ್ಕೆ ಸಾಲುತ್ತಿಲ್ಲ ಅನ್ನುತ್ತಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಒಳ್ಳೆಯದು ಎಂಬ ಇಂಗಿತ ವ್ಯಕ್ತಪಡಿಸಿದರು.
ಹೀಗೆ ಅವರು ತಮ್ಮ ಸಂಕಟ ತೋಡಿಕೊಳ್ಳುವ ಕಾಲಕ್ಕೆ ಸರಿಯಾಗಿ ಇತ್ತ ತಮ್ಮ ಹದಿನಾರನೇ ಬಜೆಟ್ ಮಂಡಿಸಿದ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಚಕ್ರವ್ಯೂಹದಿಂದ ಬಚಾವಾಗುವ ಕುರುಹು ತೋರಿಸಿದ್ದಾರೆ.
ಅಂದ ಹಾಗೆ ಗ್ಯಾರಂಟಿ ಯೋಜನೆಗಳೆಂಬ ಚಕ್ರವ್ಯೂಹದಿಂದ ತುಂಬ ಸಂಕಟಕ್ಕೊಳಗಾದವರು ರಾಜ್ಯದ ಶಾಸಕರು.
ಗ್ಯಾರಂಟಿ ಯೋಜನೆಗಳ ಕಾರಣದಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗದೆ ಹೋಗಿದ್ದರಿಂದ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಬಂಡಾಯದ ಮನ:ಸ್ಥಿತಿಗೆ ಬಂದಿದ್ದರು.
ಹಾಗಂತಲೇ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಪ್ರತಿ ಶಾಸಕಾಂಗ ಸಭೆಯಲ್ಲೂ ಗುರುಗುಡುತ್ತಿದ್ದ ಶಾಸಕರು,ಹಲವು ಮಂತ್ರಿಗಳ ಮೇಲೂ ಎರಗುತ್ತಿದ್ದರು.
ಸಾಲದೆಂಬಂತೆ ಬಹುತೇಕ ಮಂದಿ ಗೋವಾದ ಮುಖ್ಯಮಂತ್ರಿ,ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಅವರ ಲಿಂಕು ಸಾಧಿಸಿ:ಸೂಕ್ತ ಕಾಲದಲ್ಲಿ ನಾವು ನಿಮ್ಮೊಂದಿಗೆ ಬರಲು ಸಿದ್ಧ ಎಂದಿದ್ದರು.
ಹೀಗೆ ರಾಜ್ಯ ಕಾಂಗ್ರೆಸ್ ನ ಬಹುತೇಕ ಶಾಸಕರು ತಮ್ಮ ಜತೆ ಕೈ ಜೋಡಿಸಿದ್ದರಿಂದ ದಿಲ್ಲಿಯ ಬಿಜೆಪಿ ನಾಯಕರು ಕರ್ನಾಟಕ ಸರ್ಕಾರವನ್ನು ಉರುಳಿಸುವ ಕನಸು ಕಾಣುತ್ತಿದ್ದರು.
ಅವರ ಈ ಕನಸಿಗೆ ರಾಜ್ಯ ಬಿಜೆಪಿಯಲ್ಲಿನ ಅನೈಕ್ಯತೆ ಅಡ್ಡಿಯಾಗಿದ್ದು ಒಂದು ಕಡೆಯಾದರೆ,ಮತ್ತೊಂದು ಕಡೆ ಈ ಬಾರಿಯ ಬಜೆಟ್ ಮೂಲಕ ಸಿದ್ಧರಾಮಯ್ಯ ಭರ್ಜರಿ ಹೊಡೆತ ಕೊಟ್ಟಿದ್ದಾರೆ.
ಅರ್ಥಾತ್,ಈ ಬಾರಿಯ ಬಜೆಟ್ ನಲ್ಲಿ ರಾಜಧಾನಿ ಬೆಂಗಳೂರಿಗೆ ಎಂಟು ಸಾವಿರ ಕೋಟಿ ರೂಪಾಯಿ ಕೊಟ್ಟಿರುವ ಸಿದ್ದರಾಮಯ್ಯ,ಹೆಚ್ಚುವರಿ ಬಜೆಟ್ ಮೂಲಕ ರಾಜ್ಯದ ಪ್ರತಿಯೊಬ್ಬ ಶಾಸಕರಿಗೂ ನಲವತ್ತರಿಂದ ಐವತ್ತು ಕೋಟಿ ರೂ ಅನುದಾನ ಕೊಡಲು ಸಜ್ಜಾಗಿದ್ದಾರೆ.
ಹೀಗೆ ಮಾಡುವ ಮೂಲಕ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹಣ ಹರಿದಾಡುವಂತೆ ಮಾಡಲಿರುವ ಸಿದ್ಧರಾ’ಮಯ್ಯ ಎಲ್ಲ ಕ್ಷೇತ್ರಗಳ ಶಾಸಕರಲ್ಲಿ ನೆಮ್ಮದಿ ಮೂಡಿಸಿದ್ದಾರೆ.
ಅಂದ ಹಾಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಹಣ ಬಿಡುಗಡೆಯಾಗುವುದು ಎಂದರೆ,ಅ ಮೂಲಕ ಶಾಸಕರ ಶಕ್ತಿ ಹೆಚ್ಚಿಸುವುದೆಂದೇ ಅರ್ಥ.
ಹೀಗೆ ಪರದಾಡುತ್ತಿದ್ದ ತಮಗೆ ಸಿದ್ಧರಾಮಯ್ಯ ದುಡ್ಡು ಕೊಟ್ಟರೆ ಶಾಸಕರ ಅಸಮಾಧಾನ ತೊಲಗುತ್ತದೆ.ಅಷ್ಟೇ ಅಲ್ಲ.ಶಾಸಕರ ಕೈ ಬಲಪಡಿಸಲು ಸಿದ್ಧರಾಮಯ್ಯ ಮುಂದಾಗಿದ್ದಾರೆ ಎಂದರೆ ಗ್ಯಾರಂಟಿಗಳ ಚಕ್ರವ್ಯೂಹದಿಂದ ಅವರು ಪಾರಾಗುವ ಲಕ್ಷಣ ತೋರಿದ್ದಾರೆ ಎಂದೇ ಅರ್ಥ.
ರೇಣುಕಾಚಾರ್ಯ ವಿರುದ್ಧ ಕಿಡಿ
————-
ಈ ಮಧ್ಯೆ ಮಾಜಿ ಸಚಿವ,ಯಡಿಯೂರಪ್ಪ ಬ್ರಿಗೇಡ್ ನ ಸೇನಾನಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಷೋಕಾಸ್ ನೋಟೀಸ್ ಕೊಡಲು ಪಕ್ಷದ ವರಿಷ್ಟರು ನಿರ್ಧರಿಸಿದ್ದಾರಂತೆ.
ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಯತ್ನಾಳ್ ಗ್ಯಾಂಗು ಹೋರಾಟ ನಡೆಸಿತಲ್ಲ?ಈ ಹೋರಾಟಕ್ಕೀಗ ಹೈಕಮಾಂಡ್ ಬ್ರೇಕ್ ಹಾಕಿದೆ.
ಇದಕ್ಕೆ ಪೂರಕವಾಗಿ ಯತ್ನಾಳ್ ಅವರಿಗೆ ಷೋಕಾಸ್ ನೋಟೀಸ್ ನೀಡಿರುವ ಬಿಜೆಪಿ ವರಿಷ್ಟರು:ರಾಜ್ಯಾಧ್ಯಕ್ಷ ಹುದ್ದೆಯ ವಿಚಾರದಲ್ಲಿ ಇನ್ನೊಂದು ತಿಂಗಳು ಯಾರೂ ಚಕಾರವೆತ್ತಬೇಡಿ ಅಂತ ಸೂಚಿಸಿದ್ದರು.
ವಿಜಯೇಂದ್ರ ಅವರೇ ಪಕ್ಷಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೋ?ಅಥವಾ ಬೇರೆಯವರು ಈ ಜಾಗಕ್ಕೆ ಬಂದು ಕೂರಬೇಕೋ ಎಂಬುದನ್ನು ನಿರ್ಧರಿಸಲು ನಾವೇ ಸರ್ವೆ ಮಾಡಿ ರಿಪೋರ್ಟು ತರಿಸಿಕೊಳ್ಳುತ್ತೇವೆ.ಆ ರಿಪೋರ್ಟು ಯಾರ ಪರವಾಗಿದೆಯೋ?ಅವರೇ ಪಕ್ಷವನ್ನು ಮುನ್ನಡೆಸುತ್ತಾರೆ.ಅಲ್ಲಿಯವರೆಗೆ ಯಾರೂ ಗೊಂದಲ ಸೃಷ್ಟಿಸಬೇಡಿ ಅಂತ ಅಮಿತ್ ಷಾ ಅವರೇ ಸಿಗ್ನಲ್ಲು ನೀಡಿದ್ದರು.
ಆದರೆ ಇಷ್ಟಾದ ನಂತರವೂ ವಿಜಯೇಂದ್ರ ಅವರ ಪರವಾಗಿ,ಯತ್ನಾಳ್ ಗ್ಯಾಂಗಿನ ವಿರುದ್ದ ರೇಣುಕಾಚಾರ್ಯ ಅಬ್ಬರಿಸುತ್ತಿರುವ ರೀತಿ ಬಿಜೆಪಿ ವರಿಷ್ಟರ ಸಿಟ್ಟಿಗೆ ಕಾರಣವಾಗಿದೆ.
ಸಾಲದೆಂಬಂತೆ ಯತ್ನಾಳ್ ಗ್ಯಾಂಗು ವರಿಷ್ಟರಿಗೆ ಮೆಸೇಜು ರವಾನಿಸಿ:ರೇಣುಕಾಚಾರ್ಯ ಇಷ್ಟೆಲ್ಲ ಕೂಗಾಡುತ್ತಿದ್ದಾರೆ.ಅವರ ಕೂಗಾಟಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಸಪೋರ್ಟು ಇದೆ.ಆದರೆ ಇದನ್ನೆಲ್ಲ ಪರಿಗಣಿಸದ ನೀವು ಯತ್ನಾಳ್ ಅವರಿಗೆ ಮಾತ್ರ ನೋಟೀಸು ಕೊಟ್ಟಿದ್ದೀರಿ.ಇದ್ಯಾವ ನ್ಯಾಯ?ಅಂತ ಕೇಳಿದೆ.
ಯಾವಾಗ ಅದು ಈ ಧರ್ಮಸೂಕ್ಷ್ಮದ ಮಾತನಾಡಿತೋ?ಇದಾದ ನಂತರ ವರಿಷ್ಟರು ರೇಣುಕಾಚಾರ್ಯ ವಿರುದ್ಧ ಕೆಂಗಣ್ಣು ಬೀರಿದ್ದಾರೆ.ಮತ್ತಿದರ ಪರಿಣಾಮವಾಗಿ ಯತ್ನಾಳ್ ತರವೇ ರೇಣುಕಾಚಾರ್ಯ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲು ಸಜ್ಜಾಗಿದ್ದಾರೆ.
ಲಾಸ್ಟ್ ಸಿಪ್
————
ಇನ್ನು ಬೆಂಗಳೂರಿನ ಕೆ.ಆರ್.ಪುರಂ ನ ಕಾಂಗ್ರೆಸ್ ಕ್ಯಾಂಡಿಡೇಟ್ ಒಬ್ಬರು ರಾಜಧಾನಿಯ ಪವರ್ ಫುಲ್ ನಾಯಕರೊಬ್ಬರ ಬಳಿ ಹೋಗಿದ್ದರಂತೆ.
ಹೀಗೆ ಹೋದವರು ಸ್ಥಳೀಯ ಶಾಸಕ,ಬಿಜೆಪಿಯ ಭೈರತಿ ಬಸವರಾಜು ಅವರ ವಿರುದ್ದ ದೂರು ನೀಡಿದ್ದಾರೆ.
‘ಸಾರ್,ಭೈರತಿ ಬಸವರಾಜು ಅವರ ಹೊಡೆತಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ಸುಸ್ತಾಗಿ ಹೋಗಿದ್ದಾರೆ.ನೀವು ಏನಾದರೂ ಮಾಡಿ ಅವರ ನೆಟ್ಟು-ಬೋಲ್ಟು ಟೈಟು ಮಾಡಬೇಕು.ಇಲ್ಲದಿದ್ದರೆ ಮುಂದಿನ ಚುನಾವಣೆಯ ಹೊತ್ತಿಗೆ ನಾವು ಮೇಲೆದ್ದು ನಿಲ್ಲುವುದು ಕಷ್ಟ’ ಎಂದಾಗ ರಾಜಧಾನಿಯ ಪವರ್ ಫುಲ್ ನಾಯಕರು:’ಏನೇ ಇರಲಿ,ನೀವು ಭೈರತಿ ಬಸವರಾಜು ಅವರ ಜತೆ ಹೊಂದಿಕೊಂಡು ಹೋಗಿ’ ಎಂದಿದ್ದಾರೆ.
ಪವರ್ ಫುಲ್ ನಾಯಕರ ಈ ಮಾತು ಕೇಳಿ ಸ್ಥಳೀಯ ನಾಯಕರು ದಂಗು ಬಡಿದು ನಿಂತರೆ,ಮಾತು ಮುಂದುವರಿಸಿದ ಪವರ್ ಫುಲ್ ನಾಯಕರು:’ನಾಳೆ ಸಿಎಂ ಆಗಲು ನನಗೆ ಶಾಸಕರ ಬೆಂಬಲ ಕಡಿಮೆಯಾದರೆ ಭೈರತಿ ಬಸವರಾಜು ನನ್ನ ಜತೆ ನಿಲ್ಲುತ್ತಾರೆ.ಹೀಗಿರುವಾಗ ಅವರೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ ಹೋಗಿ’ಎಂದಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ