ಸರಕಾರಿ ಸೇವೆಯಾಗಿ ಪರಿಗಣಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಅಂಗನವಾಡಿ ಕಾರ್ಯಕರ್ತೆಯರು… ಇದು ಎರಡನೇ ಪ್ರಕರಣ…
ಸರಕಾರಿ ಸೇವೆಯಾಗಿ ಪರಿಗಣಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಅಂಗನವಾಡಿ ಕಾರ್ಯಕರ್ತೆಯರು…
ಇದು ಎರಡನೇ ಪ್ರಕರಣ…
ತಮ್ಮ ಸೇವೆಯನ್ನು ಸರಕಾರಿ ಸೇವೆಯನ್ನಾಗಿ ಪರಿಗಣಿಸಬೇಕು ಎಂದು ಕೋರಿ ಅಂಗನವಾಡಿ ಕಾರ್ಯಕರ್ತೆಯರು ಹೈಕೋರ್ಟ್ ಮೆಟ್ಟಿಲು ಏರಿರುವ ಮತ್ತೊಂದು ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಐರಿನ್ ಡಿಸಾ ಹಾಗೂ ಇತರೆ 99 ಜನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಆರ್ ನಟರಾಜ್ ಅವರ ಪೀಠ ಬುಧವಾರ ವಿಚಾರಣೆಗೆ ಅಂಗೀಕರಿಸಿತು.
ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯ ಪೀಠ ವಿಚಾರಣೆಯನ್ನು ಮುಂದೂಟಿತು.
ಕಳೆದ 25 ವರ್ಷಕ್ಕೂ ಹೆಚ್ಚು ಅವಧಿಯಿಂದ
ಕೇಂದ್ರ ಸರ್ಕಾರ ಪ್ರಾಯೋಜಿತ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಾಗಿ ಸೇವೆ ಸಲ್ಲಿಸುತ್ತಿದ್ದೇವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ಸೇರಿ 11,500/-, ಸಹಾಯಕಿಗೆ 7,500/- ರು. ಗೌರವಧನ ನೀಡುತ್ತಿವೆ.
ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಾ, ಸೇವೆ ಕಾಯಮಾತಿಗಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಸರಕಾರಗಳು ಮನವಿಯನ್ನು ಪುರಸ್ಕರಿಸಿಲ್ಲ.
ಈಚೆಗೆ ಗುಜರಾತ್ ಹೈಕೋರ್ಟ್, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸೇವೆಯನ್ನು ಸರಕಾರಿ ನೌಕರರ ಸೇವೆಯನ್ನಾಗಿ ಪರಿಗಣಿಸಬೇಕು ಎಂದು ಕೇಂದ್ರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನವನ್ನು ನೀಡಿದೆ.
ಸರಕಾರಿ ನೌಕರರು ಮಾಡುವ ಕೆಲಸಗಳಿಗಿಂತಲೂ ಹೆಚ್ಚು ಕೆಲಸಗಳನ್ನು ತಾವು ಮಾಡುತ್ತಿದ್ದರು ತಾನೇ ನಿಗದಿಪಡಿಸಿರುವ ಕನಿಷ್ಠ ಕೂಲಿಗಿಂತಲೂ ಕಡಿಮೆ ಮೊತ್ತದ ಗೌರವ ಧನ ನೀಡುತ್ತಿದೆ. ಇದು ತುಂಬಾ ಶೋಷಣೆಯ ಕ್ರಮ.
ಸರಕಾರಿ ನೌಕರ ಸೇವೆಯ ವ್ಯಾಪ್ತಿಯಲ್ಲಿ ತಮ್ಮ ಸೇವೆಯನ್ನು ಸೇರಿಸುವಂತೆ
ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದಾವಾ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅರ್ಜಿದಾರ ಅಂಗನವಾಡಿ ಕಾರ್ಯಕರ್ತರ ಪರವಾಗಿ ನ್ಯಾಯವಾದಿ ಶಂಕರ್ ಭಟ್ ಅವರು ವಕಾಲತ್ತು ವಹಿಸಿದ್ದಾರೆ.
ಇದಕ್ಕೂ ಮುನ್ನ ಶೃಂಗೇರಿಯ ರಮಾದೇವಿ, ಉಡುಪಿ ಜಿಲ್ಲೆಯ ಫಿಲೋಮಿನ ಫರ್ನಾಂಡಿಸ್, ಚಿಕ್ಕಮಗಳೂರಿನ ಮಂಜುಳಾ, ದಾವಣಗೆರೆಯ ಉಮಾ, ಶೋಭಾ ಹಾಗೂ ಇತರರು ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.